ಕಾಂತಾರ ತಂಡಕ್ಕೆ 450 ವರ್ಷ ಇತಿಹಾಸವಿರುವ ಕೊಡಲಿ ಕೊಡಲು ಮುಂದಾದ ರಾಜಮನೆತನ!
ನಟ ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ 'ಕಾಂತಾರ' ಸೂಪರ್ ಹಿಟ್ ಆದ ಬಳಿಕ ಕಾಂತಾರ ಪ್ರೀಕ್ವೆಲ್ ಭಾರಿ ಕುತೂಹಲ ಮೂಡಿಸಿದೆ. ಈಗಾಗಲೇ ಚಿತ್ರಕ್ಕೆ ಅದ್ಧೂರಿಯಾಗಿ ಮುಹೂರ್ತ ನಡೆದಿದೆ. ಕಾಂತಾರದಲ್ಲಿ ತುಳುನಾಡಿನ ಆರಾಧ್ಯ ದೈವ ಪಂಜುರ್ಲಿಯನ್ನು ಮೂಲ ಕಥಾವಸ್ತುವನ್ನಾಗಿಟ್ಟು ಚಿತ್ರದ ಕಥೆಯನ್ನು ಹಣೆಯಲಾಗಿದೆ. ಆದರೆ ಮುಂಬರುವ ಕಾಂತಾರ ಪ್ರೀಕ್ವೆಲ್‌ನಲ್ಲಿ ನಿರ್ದೇಶಕ- ನಟ ರಿಷಬ್ ಶೆಟ್ಟಿ ದೈವಾರಾಧನೆಯ ಜೊತೆಗೆ ತುಳುನಾಡಿನ ಚರಿತ್ರೆಯನ್ನು ತೋರಿಸಲು ಹೊರಟಿದ್ದಾರೆ.
ತುಳುನಾಡಿನ ಚರಿತ್ರೆ ಎಂದ ಮೇಲೆ ತುಳುನಾಡಿನ ಸೃಷ್ಠಿಕರ್ತ ಪರಶುರಾಮನ ಕಥೆ ಇಲ್ಲದೇ ಹೋದಲ್ಲಿ ತುಳುನಾಡಿನ ಚರಿತ್ರೆ ಅಪೂರ್ಣವೇ. ಪರಶುರಾಮ ತನ್ನ ತಂದೆಯ ಸಾವಿಗೆ ಸೇಡು ತೀರಿಸಲು ಇಡೀ ಕ್ಷತ್ರಿಯ ವಂಶವನ್ನು ಬಲಿ ತೆಗೆಯಲು ಬಳಸಿದ್ದ ಚಂದ್ರಾಯುಧದಂತಹದೇ ಕೊಡಲಿಯೊಂದು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಚಿಪ್ಪಾರು ಅರಮನೆಯಲ್ಲಿದೆ.

ಈ ಸುಮಾರು 400 ರಿಂದ 450 ವರ್ಷ ಇತಿಹಾಸವಿರುವ ಈ ಚಂದ್ರಾಯುಧದ ಹಿಡಿಯನ್ನು ಗಂಧದ ಹುಡಿಯನ್ನು ಬಳಸಿ ಮಾಡಲಾಗಿದೆ. 450 ವರ್ಷ ಕಳೆದರೂ ಇಂದಿಗೂ ಅತ್ಯಂತ ಗಟ್ಟಿಮುಟ್ಟಾಗಿ ಇರುವ ಈ ಆಯುಧವನ್ನು ಚಿಪ್ಪಾರು ರಾಜಮನೆತನದ ಮಂದಿ ಇಂದಿಗೂ ಉಳಿಸಿಕೊಂಡಿದ್ದಾರೆ.
ಕಾಂತಾರ ಸಿನಿಮಾ ತಂಡಕ್ಕೆ ಕೊಡಲಿ ಕೊಡಲು ತಯಾರಾದ ರಾಜಮನೆತನ
ಪರಶುರಾಮ ಬಳಸಿದ್ದಾರೆ ಎನ್ನಲಾದ ಈ ಆಯುಧವನ್ನು ತುಳುನಾಡಿನ ಚರಿತ್ರೆಯ ಚಿತ್ರಕಥೆಯಿರುವ ಕಾಂತಾರ ಪ್ರೀಕ್ವೆಲ್‌ಗೆ ಕೊಡುವುದಾಗಿಗಿ ಹೇಳಿದ್ದಾರೆ. ನಿರ್ದೇಶಕ ರಿಷಬ್ ಶೆಟ್ಟಿ ಬಯಸಿದಲ್ಲಿ ಈ ಆಯುಧವನ್ನು ನೀಡಿ ಸಹಕರಿಸಲು ಚಿಪ್ಪಾರು ಮನೆತನದ ಹಿರಿಯರಾದ ತಿರುಮಲ ಬಳ್ಳಾಲ್ ಉತ್ಸುಕರಾಗಿದ್ದಾರೆ. ರಾಜ ಮನೆತನದ ಹಿರಿಯರು ಈ ಆಯುಧವನ್ನು ಕಾಡುಪ್ರಾಣಿಗಳ ಬೇಟೆಯಾಡಲು ಬಳಸುತ್ತಿದ್ದರು ಎನ್ನುವ ಮಾಹಿತಿಯನ್ನು ತಿರುಮಲ ಬಳ್ಳಾಲರು ನೀಡುತ್ತಾರೆ.
ಪ್ರಾಚೀನ ವಸ್ತುಗಳ ಸಂಗ್ರಹಗಾರರೂ ಆಗಿರುವ ತಿರುಮಲ ಬಳ್ಳಾಲರು ತಮ್ಮ ಹಿರಿಯರು ಬಳಸುತ್ತಿದ್ದ ಹಲವು ಮರದ, ಲೋಹದ ಮತ್ತು ಮಣ್ಣಿನ ಪರಿಕರಗಳನ್ನೂ ತಮ್ಮ ಸಂಗ್ರಹದಲ್ಲಿ ಜೋಡಿಸಿಟ್ಟುಕೊಂಡಿದ್ದಾರೆ. ಅಲ್ಲದೆ ಕಾಂತಾರ ಚಿತ್ರದಲ್ಲಿ ಬರುವ ಪಂಜುರ್ಲಿ ದೈವಕ್ಕೆ ಸೇರಿದಂತಹ ರಾಜಮನೆತನದ ಹಿರಿಯರ ಕಾಲದ ದೈವದ ಆಭರಣಗಳನ್ನು ಇಡುವ ಮಣ್ಣಿನ ಮಡಿಕೆಯಾಕಾರದ ವಸ್ತುಗಳೂ ಇವರ ಸಂಗ್ರಹದಲ್ಲಿದೆ. ತುಳುನಾಡಿನ ಸೊಗಡಿನ ಚಿತ್ರ ಕಾಂತಾರ ಆಗಿರುವ ಕಾರಣ ಈ ಚಿತ್ರದ ಯಶಸ್ಸಿಗೆ ತುಳುನಾಡಿದ ಪಳಿಯುಳಿಕೆಗಳ ಕೊಡುಗೆಯೂ ಬೇಕಿದೆ.

'ಕಾಂತಾರ' ಅಧ್ಯಾಯ 1
ನವೆಂಬರ್ 27 ರಂದು ಆನೆಗುಡ್ಡೆ ದೇವಸ್ಥಾನದಲ್ಲಿ ಕಾಂತಾರ ಪ್ರೀಕ್ವೆಲ್‌ಗೆ ಅದ್ಧೂರಿ ಮುಹೂರ್ತ ನಡೆದಿದ್ದು, ಹೊಂಬಾಳೆ ಫಿಲ್ಮ್ಸ್ 'ಕಾಂತಾರ' ಅಧ್ಯಾಯ 1 ಸಿನಿಮಾ ನಿರ್ಮಾಣ ಮಾಡುತ್ತಿದೆ. 'ಕಾಂತಾರ' ಅಧ್ಯಾಯ 1 ರಲ್ಲಿ 'ಕಾಂತಾರ'ಗೂ ಮುನ್ನ ಏನಾಗಿತ್ತು ಅನ್ನೋದನ್ನೇ ರಿಷಬ್ ಶೆಟ್ಟಿ ಹೇಳುವುದಕ್ಕೆ ಹೊರಟಿದ್ದಾರೆ. ಈಗಾಗಲೇ 'ಕಾಂತಾರ'ದ ಫಸ್ಟ್ ಲುಕ್ ಏಳು ಭಾಷೆಗಳಲ್ಲಿ ರಿಲೀಸ್ ಆಗಿದೆ.
'ಕಾಂತಾರ' ಅಧ್ಯಾಯ 1 ರ ಫಸ್ಟ್ ಲುಕ್ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲಿಷ್ ಸೇರಿದಂತೆ ಏಳು ಭಾಷೆಯಲ್ಲಿ ಬಿಡುಗಡೆಯಾಗಿದೆ. ಇದು ಬೆಳಕಲ್ಲ ದರ್ಶನ ಎನ್ನುತ್ತಾ ರಿಷಬ್ ಶೆಟ್ಟಿ ರಕ್ತದಲ್ಲಿ ಮುಳುಗೆದ್ದ ಶಿವನ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್‌ಗೆ ಭರ್ಜರಿ ರೆಸ್ಪಾನ್ಸ್ ಬಂದಿದೆ. ಕೆಲವೊಬ್ಬರು ಹೊಸಬರ ಜೊತೆಗೆ ಹಳೆ ತಂಡವನ್ನೇ ಕಟ್ಟಿಕೊಂಡು ಮತ್ತೊಂದು ಪ್ರಯತ್ನಕ್ಕೆ ರಿಷಬ್ ಶೆಟ್ಟಿ ಕೈ ಹಾಕಿದ್ದಾರೆ.


Click it and Unblock the Notifications











