twitter
    For Quick Alerts
    ALLOW NOTIFICATIONS  
    For Daily Alerts

    ನಾಲ್ಕಾಣೆ ಕೊಟ್ಟು ಆಗ ಸಿನಿಮಾ ನೋಡ್ತಿದ್ದ ಮಜವೇ ಬೇರೆ ಬಿಡಿ.!

    By Harshitha
    |

    ಒಂದು ಸಿನಿಮಾ ನೋಡಬೇಕು ಅಂದ್ರೆ, ಕನಿಷ್ಟ ಅಂದರೂ ಜೇಬಲ್ಲಿ 100 ರೂಪಾಯಿ ಬೇಕು. ಮನೆಮಂದಿಯೆಲ್ಲ ಸಿನಿಮಾ ನೋಡ್ತೀವಿ ಅಂತಾದರೆ, ಮಿನಿಮಂ ಸಾವಿರ ರೂಪಾಯಿ ಬೇಕು. ಅದರಲ್ಲೂ ಮಾಲ್ ಕಡೆ ಮುಖ ಮಾಡಿದರೆ, ಜೇಬು ತೂತಾಗುವುದು ಖಂಡಿತ. ಆದರೆ, ಕೆಲವೇ ಕೆಲವು ವರ್ಷಗಳ ಹಿಂದೆ ಹೀಗೆ ಇರಲಿಲ್ಲ. ವರ್ಷಗಳ ಹಿಂದೆ ಸಿನಿಮಾ ನೋಡುವ ಮಜಾ ಹೇಗಿರ್ತಿತ್ತು ಅಂತ ರುಕ್ಮಿಣಿ ಜಯರಾಮ ರಾವ್ ಎಂಬುವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಓದಿರಿ - ಸಂಪಾದಕ

    ಸ್ನೇಹಿತರೇ, ಇವತ್ತು ಯಾರೋ ಸಿನೆಮಾ ಮಂದಿರದ ಹಳೇ ಟಿಕೆಟ್ ಗಳನ್ನು ವಾಲ್ ಗೆ ಹಾಕಿದ್ದರು. ಅದರ ರೇಟ್ ಗಳನ್ನು ನೋಡಿದರೆ ನೀವು ಆಶ್ಚರ್ಯ ಪಡ್ತೀರಿ.! ತುಂಬಾ ತುಂಬಾ ಹಳೆಯ ಕಾಲದ್ದೇನಲ್ಲಾ 1970 ರಲ್ಲಿ ಕಪಾಲಿಯಲ್ಲಿ ಬಾಲ್ಕನಿ 2 ರೂ, ಸೆಕೆಂಡ್ ಕ್ಲಾಸ್ 1 20, ಗಾಂಧಿ ಕ್ಲಾಸ್ 1 ರೂ.!

    ಅಬ್ಬಾ ನಿಜಾನಾ.!? ಅಂದರೆ ನಿಜ.!

    ಈಗ ಎಲ್ಲಾ ಥಿಯೇಟರ್‌ ಗಳಲ್ಲೂ 150, 100, 80 ಇದ್ದರೆ... ಮಾಲ್ ಗಳಲ್ಲಿ - 500, 350, 250 ಇದೆ.! ಅದು ಹೇಗೆ ಸಿನಿಮಾಗಳನ್ನು ಇಷ್ಡೊಂದು ದುಡ್ಡು ಕೊಟ್ಟು ಜನ ನೋಡ್ತಾರೆ.!? ಮಾಲ್ ಹೊರಗಡೆ ವಿರಾಮದಲ್ಲಿ ಕುಡಿಯುವ ಕಾಫಿಯ ತಿಂಡಿಯ ಬೆಲೆಯಂತೂ ಮಾಲ್ ಗಿಂತಾ ಮೇಲೇ ಗಗನದಲ್ಲಿದೆ!

    Rukmini Jayarama Rao shares her experience of watching movies in tent decades ago

    ಆದರೂ ಜನ ಸಿನಿಮಾ ನೋಡ್ತಾರೆ!

    'ಮಲ್ಟಿಪ್ಲೆಕ್ಸ್'ಗಳಲ್ಲಿ ಇನ್ನೂ ಸಿಗುತ್ತಿಲ್ಲ 200 ರೂಗೆ ಸಿನಿಮಾ ಟಿಕೆಟ್'ಮಲ್ಟಿಪ್ಲೆಕ್ಸ್'ಗಳಲ್ಲಿ ಇನ್ನೂ ಸಿಗುತ್ತಿಲ್ಲ 200 ರೂಗೆ ಸಿನಿಮಾ ಟಿಕೆಟ್

    ಹಾಗಾದರೆ ನಮ್ಮ ಜನರಲ್ಲಿ ಹಣ ಹೆಚ್ಚಾಗಿದೆ ಅನ್ನಿಸೋಲ್ವೇ.? ಹೌದು ಬಡತನದ ರೇಖೆಗಿಂತ ಕೆಳಗಿರುವವರ ಜನಸಂಖ್ಯೆ ಬಹಳ ಕಡಿಮೆ.! ಇದನ್ನೆಲ್ಲಾ ನೋಡುವಾಗ ನನಗೆ ನಾವು ಸಿನಿಮಾ ನೋಡುತ್ತಿದ್ದ ದಿನಗಳ ನೆನಪು ಮನಃಪಟಲದ ಮುಂದೆ ಮೂಡುತ್ತಿದೆ.!!

    ಹಳ್ಳಿಗಳಲ್ಲಿ ಟೆಂಟ್ ಟೂರಿಂಗ್ ಟಾಕೀಸ್ ಗಳು! ನಾಳೆ ಬಿಡುಗಡೆಯಾಗುವ ಸಿನಿಮಾದ ಹ್ಯಾಂಡ್ ಬಿಲ್ ಗಳನ್ನು ಗಾಡಿಯಲ್ಲಿ ಮೈಕ್ ನಲ್ಲಿ "ವರನಟ ರಾಜ್ ಕುಮಾರ್ ನಟಿಸಿರುವ "ಬೇಡರ ಕಣ್ಣಪ್ಪ" ಮಹಾ ಜನರೇ ಬಂದು ಸಿನಿಮಾ ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ, ಪ್ರತಿದಿನವೂ ಎರಡು ಆಟಗಳು, ನಾಳೆ ಶಿವರಾತ್ರಿ ಪ್ರಯುಕ್ತ ಮಧ್ಯರಾತ್ರಿಯ ವಿಶೇಷ ಪ್ರದರ್ಶನವಿದೆ!'' ಎಂದು ಕೂಗುತ್ತಾ ನಮ್ಮ ಮನೆ ಹೊರಭಾಗದ ಗೋಡೆಗೆ ರಾಜ್ ರವರು ತಮ್ಮ ಕಣ್ಣುಕಿತ್ತಿ ಶಿವನಿಗೆ ಅಂಟಿಸುತ್ತಿರುವ ದೃಶ್ಯವಿರುವ ಪೋಸ್ಟರ್ ಅಂಟಿಸಿ ಹೋದರು! ನನಗಂತೂ ಒಳಗೆ ಬರಲು ಮನಸೇ ಇಲ್ಲಾ... ಆ ಪೋಸ್ಟರ್ ನೋಡಿ ನೋಡೀ ಅಳುತ್ತಾ ಶಿವನನ್ನು ಕಣ್ಣಿಗೆ ಹಚ್ಚಿಕೊಳ್ಳುತ್ತಾ ಅಮ್ಮ ಬೈದು ಕೂಗುವ ವರೆಗೂ ಅಲ್ಲೇ ಕ್ಯಾಂಪ್ ಹಾಕಿರುತ್ತಿದ್ದೆ.!

    'ಒಂದೇ ವಾರಕ್ಕೆ ಕಿಕ್ ಔಟ್': ಮತ್ತೆ ಕನ್ನಡ ಚಿತ್ರಗಳಿಗೆ ಕಂಟಕವಾದ ಮಲ್ಟಿಪ್ಲೆಕ್ಸ್'ಒಂದೇ ವಾರಕ್ಕೆ ಕಿಕ್ ಔಟ್': ಮತ್ತೆ ಕನ್ನಡ ಚಿತ್ರಗಳಿಗೆ ಕಂಟಕವಾದ ಮಲ್ಟಿಪ್ಲೆಕ್ಸ್

    ಅಪ್ಪ ಅಪರೂಪಕ್ಕೊಂದೊಂದು ಸಿನಿಮಾಗೆ ಕಳಸ್ತಾ ಇದ್ರು... ಸರಿ ಅಪ್ಪನಿಗೆ ದಂಬಾಲು ಬಿದ್ದು 1 ಕಾಲು ಅಂದರೆ ಒಂದು ರೂ ಇಪ್ಪತ್ತೈದು ಪೈಸೆಗೆ ನಾವು ಮನೆಯವರಿಗೆಲ್ಲಾ ಟಿಕೆಟ್. ತಮ್ಮನನ್ನು ತಂಗಿಯನ್ನು ಸೊಂಟದಲ್ಲಿ ಎತ್ಕೊಂಡು ಚಿಕ್ಕವರೆಂದು ತೋರಿಸುತ್ತಾ ಒಳ ಹೋಗುತ್ತಿದ್ದೆವು.! ನೆಲ - ನಾಲ್ಕಾಣೆ, ಬೆಂಚು -ಎಂಟಾಣೆ, ಕುರ್ಚಿ - ಹನ್ನೆರಡಾಣೆ.! ಮನೆಯಿಂದನೇ ಚಾಪೆ ಕೊಂಡೊಯ್ಯುತ್ತಿದ್ದೆವು.! ಚಾಪೆ + ಛತ್ರಿ + ಮನೆಯಲ್ಲಿಯೇ ಹುರಿದ ಬೇಯಿಸಿದ ಕಡಲೇಕಾಯಿ, ಮಸಾಲೆ ಹಚ್ಚಿದ ಮಂಡಕ್ಕಿ ಚೀಲ.!

    ಅದೆಷ್ಟು ಸಂಭ್ರಮ ಸಿನೆಮಾ ಶುರುವಾದರೆ... ಅದನ್ನು ಇಲ್ಲಿ ಬರೆಯಲು ಸಾಧ್ಯವಿಲ್ಲ! ಆ ಸಿನಿಮಾ ನಟನೆಯಲ್ಲಿ ನಿಜವನ್ನೇ ಕಾಣುತ್ತಾ... ಕಡಲೇಕಾಯಿ ಮೆಲ್ಲುತ್ತಾ ಆಗಾಗ ಸೊಳ್ಳೆ ಹೊಡೆಯುತ್ತಾ, ಆನಂದ ಅನುಭವಿಸುತ್ತಿದ್ದೆವು.. ನಾವೇ ರಾಧಾಮಾಧವರಾಗಿ.!

    ಮಾಗಡಿ ರೋಡ್ನಲ್ಲಿರುವ 'ದಿ ಸಿನಿಮಾ' ಇವತ್ತಿಂದ ಪ್ರಾರಂಭ: ಟಿಕೆಟ್ ಬೆಲೆಯೆಷ್ಟು.?ಮಾಗಡಿ ರೋಡ್ನಲ್ಲಿರುವ 'ದಿ ಸಿನಿಮಾ' ಇವತ್ತಿಂದ ಪ್ರಾರಂಭ: ಟಿಕೆಟ್ ಬೆಲೆಯೆಷ್ಟು.?

    ಅಷ್ಟರಲ್ಲಿ ಮಳೆ ಶುರುವಾಯ್ತೆಂದರೆ ಮೇಲೆ ಬಟ್ಟೆ ಟೆಂಟ್ ನೀರು ಸೋರುವುದಕ್ಕೆ ಶುರು! ರಸ್ತೆಯ ಹೊರಭಾಗದಿಂದಲೂ ನೀರು ಒಳಗೆ ಬರುತ್ತಿತ್ತು! ಆದರೂ ಛತ್ರಿ ಹಿಡಿದು ದೊಡ್ಡ ಸೂರ್ಯ ಮಾರ್ಕಿನ ಕೊಡೆ ನಾಲ್ಕು ಜನರ ತಲೆ ಅದರಲ್ಲಿ! ಕರೆಂಟ್ ಹೋಗುವ ವರೆಗೂ ನೋಡುತ್ತಿದ್ದೆವು! ಕರೆಂಟ್ ಹೋದರೆ ಅರ್ಧ ಟಿಕೆಟ್ ಹಾಗೇ ಇಟ್ಟುಕೊಂಡು ಮಾರನೇ ದಿವಸದ ಆಟಕ್ಕೆ ಹೋಗುತ್ತಿದ್ದೆವು! ನಮಗೆ ಖುಷಿಯೋ ಖುಷಿ ಮತ್ತೆ ಮೊದಲಿನಿಂದ ಸಿನೆಮಾ ನೋಡಬಹುದೆಂದು!

    ಸಾಮಾನ್ಯವಾಗಿ ಊರ ಹೊರಗಡೆ ಕೆಲವು ಬಾರಿ ಟೂರಿಂಗ್ ಟಾಕೀಸ್ ಹಾಕುತ್ತಿದ್ದರು - ಒಂದು ಬಾರಿ ನಾಗಿನ್ ಸಿನಿಮಾ ಹಾಕಿದರು - ಜನರೆಲ್ಲಾ ಸಿನಿಮಾ ಸೀರಿಯಸ್ಸಾಗಿ ನೋಡ್ತಾ ಇದೀವಿ ಆ ಪುಂಗಿಯ ನಾದಕ್ಕೆ ಆಕಡೆ ಈಕಡೆ ಇರುವ ಹಾವುಗಳೆಲ್ಲಾ ಒಂದೊಂದಾಗಿ ಟಾಕೀಸ್ ಒಳಗಡೆಗೇ ಬರೋದಕ್ಕೆ ಶುರುವಾಯ್ತು ನೋಡಿ - ಎಲ್ಲಾ ಜನ ಬಿದ್ದೆನೋ ಕೆಟ್ಟೆನೋ ಎಂದು ಹೊರಗೋಡಿದರು.! ಆ ಸಿನಿಮಾ ಒಂದು ವಾರವೂ ಓಡಲಿಲ್ಲ ತೆಗೆದೇ ಬಿಟ್ಟರು.!

    ಅಬ್ಬಾ..!!! ಆ ಆನಂದದ ರೋಮಾಂಚನ ಜೀವನದ ಸವಿಯಾದ ಮರೆಯಲಾರದ ನೆನಪು.!!! ಆ ಸಂತಸ ಈಗ ಮಾಲ್ ನಲ್ಲಿ ಒರಗಿ ಕುಳಿತು ನೋಡುವಾಗ ಸಿಗಲು ಸಾಧ್ಯವಿಲ್ಲ !!!!

    ಸ್ನೇಹಿತರೇ ಇದನ್ನೆಲ್ಲಾ ಯಾಕೆ ಬರೆದೆ ಎಂದರೇ ಇಂದು ಸಿಕ್ಕ ಇತ್ತೀಚಿನ ಅಂದರೇ 1970 ರ ಹಳೇ ಟಿಕೆಟ್ ಗಳು !!

    ನಾ ಬರೆದದ್ದೆಲ್ಲಾ 1950-55 ರ ವಿಷಯ !!

    ಈಗ ಅದೆಲ್ಲಾ ಒಂದು ನೆನಪುಗಳು ಮಾತ್ರ. ಅದರ ಸಣ್ಣ ಸಣ್ಣ ಸಂತಸದ ಕ್ಷಣಗಳನ್ನು ಹಂಚಿಕೊಂಡೆ, ಹ್ಯಂಗೇ ??

    English summary
    Rukmini Jayarama Rao has taken her Facebook account to share her experience of watching movies in tent decades ago.
    Sunday, June 3, 2018, 15:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X