'ಟಾಕ್ಸಿಕ್' ಕಿಲ್ಲೇಡಿ ರುಕ್ಮಿಣಿ ಲುಕ್ ರಿವೀಲ್; ದಿಢೀರ್ ಚಿತ್ರದ ಮಹಿಳಾ ಪಾತ್ರಗಳ ಪರಿಚಯ ಯಾಕೆ?
ಯಶ್ ನಟನೆಯ 'ಟಾಕ್ಸಿಕ್' ಚಿತ್ರದಲ್ಲಿ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಮಹತ್ವ ಇದೆ. ಚಿತ್ರದಲ್ಲಿ ನಟಿಸಿರುವ ಕಿಯಾರಾ ಅದ್ವಾನಿ, ಹುಮಾ ಖುರೇಷಿ, ನಯನತಾರ, ತಾರಾ ಸುತಾರಿಯಾ ಬಳಿಕ ಇದೀಗ ರುಕ್ಮಿಣಿ ವಸಂತ್ ಲುಕ್ ಕೂಡ ಬಹಿರಂಗವಾಗಿದೆ. ಈ ಗ್ಯಾಂಗ್‌ಸ್ಟರ್ ಚಿತ್ರದಲ್ಲಿ 'ಮೆಲ್ಲಿಸ್ಸಾ' ಎಂಬ ಪಾತ್ರದಲ್ಲಿ ರುಕ್ಕು ಬಣ್ಣ ಹಚ್ಚಿದ್ದಾರೆ.
ನಟ ಯಶ್ ಹುಟ್ಟುಹಬ್ಬಕ್ಕೆ ಒಂದು ದಿನ ಬಾಕಿಯಿದೆ. 'ಟಾಕ್ಸಿಕ್' ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಅದಕ್ಕೂ ಮುನ್ನ ಚಿತ್ರದ ಪಾತ್ರಗಳನ್ನು ಒಂದೊಂದಾಗಿ ಪರಿಚಯಿಸುತ್ತಿದ್ದಾರೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕಿ ಜೊತೆ ಸೇರಿ ಯಶ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಜೊತೆ ಸೇರಿ ರಾಕಿಂಗ್ ಸ್ಟಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಬರೋಬ್ಬರಿ 4 ವರ್ಷಗಳ ಬಳಿಕ ಯಶ್ ನಟನೆಯ ಸಿನಿಮಾ ತೆರೆಗೆ ಬರುತ್ತಿದೆ. ಅದೇ ದಿನ ಬಾಲಿವುಡ್ ಸಿನಿಮಾ 'ಧುರಂಧರ್'-2 ಕೂಡ ಪ್ರೇಕ್ಷಕರ ಮುಂದೆ ಬರಲಿದೆ. ಹಾಗಾಗಿ ದೊಡ್ಡಮಟ್ಟದ ಬಾಕ್ಸಾಫೀಸ್ ಕ್ಲ್ಯಾಶ್ ನಿರೀಕ್ಷಿಸಲಾಗುತ್ತಿದೆ. 'ಟಾಕ್ಸಿಕ್' ಚಿತ್ರದ ಸ್ಟಾರ್‌ಕಾಸ್ಟ್ ಬಗ್ಗೆ ಈ ಹಿಂದೆ ಸುಳಿವು ಸಿಕ್ಕಿತ್ತು. ಆದರೆ ಅಧಿಕೃತವಾಗಿ ಚಿತ್ರತಂಡ ಮಾಹಿತಿ ನೀಡಿರಲಿಲ್ಲ. ಇದೀಗ ಫಸ್ಟ್ ಲುಕ್ ಪೋಸ್ಟರ್ ಸಮೇತ ಅಪ್‌ಡೇಟ್ ಕೊಟ್ಟಿದ್ದಾರೆ.
'ಟಾಕ್ಸಿಕ್' ಚಿತ್ರದ ಕಥೆ, ತಾರಾಗಣ, ತಂತ್ರಜ್ಞರ ಬಳಗ, ಚಿತ್ರೀಕರಣ ಎಲ್ಲದರ ಬಗ್ಗೆ ಚಿತ್ರತಂಡ ಗುಟ್ಟು ಕಾಪಾಡಿಕೊಂಡಿದೆ. ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಪ್‌ಡೇಟ್ ಕೊಡುತ್ತಿದ್ದಾರೆ. ಮೊದಲಿಗೆ ಮಹಿಳಾ ಪಾತ್ರಧಾರಿಗಳ ಲುಕ್ ರಿವೀಲ್ ಮಾಡಿ ಪಾತ್ರ ಪರಿಚಯ ಮಾಡಿಕೊಡಲಾಗಿದೆ. ಹೀಗೆ ಒಬ್ಬರ ಹಿಂದೆ ಒಬ್ಬರ ಲುಕ್ ರಿವೀಲ್ ಮಾಡಲು ಕಾರಣ ಏನು ಎನ್ನುವ ಅನುಮಾನ ಮೂಡುವುದು ಸಹಜ.
ಜನವರಿ 8ರಂದು ಯಶ್ ಹುಟ್ಟುಹಬ್ಬ. ಈ ಸಂಭ್ರಮದಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಅದರಲ್ಲಿ ಈ ಪಾತ್ರಗಳನ್ನೆಲ್ಲಾ ತೋರಿಸಲಿದ್ದಾರೆ. ಸಣ್ಣ ಸಣ್ಣ ಝಲಕ್‌ನಲ್ಲಿ ಎಲ್ಲರೂ ಬಂದು ಹೋಗುತ್ತಾರೆ. ಹಾಗಾಗಿ ಅದಕ್ಕೂ ಮುನ್ನ ಪಾತ್ರಗಳ ಪರಿಚಯ ಮಾಡಿಕೊಡಲಾಗುತ್ತಿದೆ. ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಟೀಸರ್ ಬರುವುದರಿಂದ ಎಲ್ಲರ ಗಮನ ರಾಕಿಂಗ್ ಸ್ಟಾರ್ ಪಾತ್ರದ ಮೇಲೆ ಇರುತ್ತದೆ. ಅದೇ ಕಾರಣಕ್ಕೆ ಮೊದಲಿಗೆ ಉಳಿದವರ ಮಾಹಿತಿ ಕೊಡುವ ಪ್ರಯತ್ನ ನಡೆದಿದೆ.
ಪಾರ್ಟಿಯಲ್ಲಿ ಮೆಲ್ಲಿಸ್ಸಾ ಅವತಾರದಲ್ಲಿ ರುಕ್ಮಿಣಿ ಫುಲ್ ಸ್ಲೀವ್ ಥೈಸ್ಲಿಟ್ ಗೌನ್ ಧರಿಸಿ ನಡೆದು ಬರುತ್ತಿರುವ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಸ್ಟೈಲಿಶ್ ಅವತಾರದಲ್ಲಿ ಆಕೆಯನ್ನು ನೋಡಬಹುದು. ಹಿಟ್ ಸಿನಿಮಾಗಳಲ್ಲಿ ನಟಿಸಿ ಗೆದ್ದ ರುಕ್ಮಿಣಿ ಕ್ರೇಜ್ ಸೌತ್ ಸಿನಿದುನಿಯಾದಲ್ಲಿ ಜೋರಾಗಿದೆ. 'ಕಾಂತಾರ-1' ಬಳಿಕ 'ಟಾಕ್ಸಿಕ್' ಚಿತ್ರದ ಮೆಲ್ಲಿಸ್ಸಾ ಆಗಿ ಮತ್ತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ.
ಮುಂದೆ ಪ್ರಶಾಂತ್ ನೀಲ್ ಹಾಗೂ ಜ್ಯೂ. ಎನ್‌ಟಿಆರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಣಿರತ್ನಂ ನಿರ್ದೇಶನದ ಹೊಸ ಚಿತ್ರಕ್ಕೂ ಆಯ್ಕೆ ಆಗುವ ಸುಳಿವು ಸಿಗುತ್ತಿದೆ. ಈಗಾಗಲೇ ಬಾಲಿವುಡ್ ಕೈಬೀಸಿ ಕರೆಯುತ್ತಿದೆ. ಒಂದೊಂದೇ ಅವಕಾಶಗಳು ಹುಡುಕಿ ಬರ್ತಿದೆ. 'ಟಾಕ್ಸಿಕ್' ಸಿನಿಮಾ ಬಳಿಕ ರುಕ್ಮಿಣಿ ವಸಂತ್ ಕ್ರೇಜ್ ಮತ್ತಷ್ಟು ಹೆಚ್ಚಲಿದೆ. ರವಿ ಬಸ್ರೂರು ಸಂಗೀತ, ರಾಜೀವ್ ರವಿ ಛಾಯಾಗ್ರಹಣ ಚಿತ್ರಕ್ಕಿದೆ. ಡ್ರಗ್ಸ್ ಮಾಫಿಯಾ ಕಥೆ ಚಿತ್ರದಲ್ಲಿದೆ ಎನ್ನಲಾಗ್ತಿದೆ.


Click it and Unblock the Notifications











