ಯುವ ರಾಜ್‌ಕುಮಾರ್ ಮೊದಲ ಚಿತ್ರಕ್ಕೆ ಸಿಕ್ಕಳು ನಾಯಕಿ? ತಮಿಳು, ಮಲಯಾಳಂ ಅಲ್ಲ ಕನ್ನಡದ ಹುಡುಗಿನೇ!
ನಟ ಸಾರ್ವಭೌಮ ಚಿತ್ರದ ಆಡಿಯೊ ಬಿಡುಗಡೆ ಕಾರ್ಯಕ್ರಮದ ವೇದಿಕೆ ಮೇಲೆ ತನ್ನ ಚಿಕ್ಕಪ್ಪ ಪುನೀತ್ ರಾಜ್‌ಕುಮಾರ್ ಜತೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದ ಯುವ ರಾಜ್‌ಕುಮಾರ್ ಆ ದಿನವೇ ಈತ ಮುಂದೊಂದು ದಿನ ಸ್ಟಾರ್ ಆಗುವುದು ಪಕ್ಕಾ ಎಂಬ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದರು. ಅಪ್ಪು ರೀತಿಯ ಮತ್ತೊಬ್ಬ ನಟ ದೊಡ್ಮನೆಯಿಂದ ಬರಲಿದ್ದಾರೆ ಎಂದು ಸಿನಿ ರಸಿಕರು ಮಾತನಾಡಿಕೊಂಡಿದ್ದರು.
ಹೀಗೆ ವೇದಿಕೆ ಮೇಲಿನ ಒಂದು ಡಾನ್ಸ್‌ನಿಂದ ಸಂಚಲನ ಮೂಡಿಸಿದ್ದ ಯುವ ರಾಜ್‌ಕುಮಾರ್ ಆಗಮನಕ್ಕಾಗಿ ಇದೀಗ ದೊಡ್ಮನೆ ಅಭಿಮಾನಿ ಬಳಗ ಕಾದು ಕೂತಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ಬಳಿಕ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಈತನೇ ಸರಿಯಾದ ವ್ಯಕ್ತಿ ಎಂದು ಅಭಿಮಾನಿಗಳೇ ತೀರ್ಮಾನಿಸಿಬಿಟ್ಟಿದ್ದಾರೆ.

ಅಪ್ಪು ಇದ್ದಾಗಲೇ ರಣಧೀರ ಕಂಠೀರವ ಚಿತ್ರದ ಮೂಲಕ ಯುವ ರಾಜ್‌ಕುಮಾರ್ ಚಿತ್ರರಂಗಕ್ಕೆ ಎಂಟ್ರಿಯಾಗಲು ಸಿದ್ಧತೆ ನಡೆದಿತ್ತು. ಆದರೆ ಅಪ್ಪು ಅಗಲಿಕೆಯ ಬಳಿಕ ಯೋಜನೆಗಳಲ್ಲಿ ಭಾರೀ ಬದಲಾವಣೆಯಾಗಿದ್ದು, ಯುವ ರಾಜ್‌ಕುಮಾರ್ ಚಿತ್ರರಂಗದ ಪ್ರವೇಶ ಸಂತೋಷ್ ಆನಂದ್‌ರಾಮ್ ನಿರ್ದೇಶಿಸಲಿರುವ ಚಿತ್ರದ ಮೂಲಕ ಆಗಲಿದೆ.
ಹೌದು, ಅಪ್ಪುಗೆ ಎರಡು ಚಿತ್ರಗಳನ್ನು ನಿರ್ದೇಶಿಸಿ ಈ ಪೈಕಿ ಒಂದು ಇಂಡಸ್ಟ್ರಿ ಹಿಟ್ ನೀಡಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಯುವ ರಾಜ್‌ಕುಮಾರ್ ಲಾಂಚ್ ಆಗಲಿದ್ದಾರೆ ಎಂಬ ಸುದ್ದಿಯನ್ನು ಹೊಂಬಾಳೆ ಹಂಚಿಕೊಂಡಿತ್ತು. ಅಪ್ಪು ಅಭಿಮಾನಿಗಳ ಫೇವರಿಟ್ ನಿರ್ದೇಶಕ ಹಾಗೂ ಫೇವರಿಟ್ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ರಾಜ್‌ವಂಶದ ಕುಡಿ ಚಿತ್ರರಂಗಕ್ಕೆ ಲಗ್ಗೆ ಇಡುವ ವಿಷಯ ಅಭಿಮಾನಿಗಳಲ್ಲಿ ಸಂತಸ ವ್ಯಕ್ತಪಡಿಸಿದ್ದರು.
ಚಿತ್ರ ಘೋಷಣೆಯಾಗಿ ವರ್ಷ ಸಮೀಪಿಸಿದರೂ ಸಹ ಚಿತ್ರದ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದ ಚಿತ್ರತಂಡವನ್ನು ಅಭಿಮಾನಿಗಳು ಅಪ್‌ಡೇಟ್ ಕೇಳಲಾರಂಭಿಸಿದರು. ಇನ್ನು ಚಿತ್ರದ ನಾಯಕಿ ಕುರಿತಾಗಿ ಕುತೂಹಲ ಉಂಟಾಗಿತ್ತು ಹಾಗೂ ಸುದ್ದಿಯೊಂದೂ ಸಹ ಹರಿದಾಡಿತ್ತು. ಹೌದು, ಯುವ ರಾಜ್‌ಕುಮಾರ್ ಹಾಗೂ ಸಂತೋಷ್ ಆನಂದ್‌ರಾಮ್ ಕಾಂಬಿನೇಶನ್ ಚಿತ್ರಕ್ಕೆ ಮಲಯಾಳಂನ ಕಲ್ಯಾಣಿ ಪ್ರಿಯಾದರ್ಶನ್ ನಾಯಕಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಆದರೆ ಈಗ ಈ ಕುರಿತಾಗಿ ಇದೀಗ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕನ್ನಡತಿ ರುಕ್ಮಿಣಿ ವಸಂತ್ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಶ್ರೀನಿ ನಟನೆಯ ಹಾಗೂ ನಿರ್ದೇಶನದ ಬೀರ್‌ಬಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ಬೆಡಗಿ ಸದ್ಯ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಪ್ರೀತಮ್ ಗುಬ್ಬಿ ಕಾಂಬಿನೇಶನ್‌ನ ಬಾನ ದಾರಿಯಲಿ ಚಿತ್ರದಲ್ಲಿ ನಟಿಸುತ್ತಿದ್ದು, ರಕ್ಷಿತ್ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲೂ ಸಹ ನಟಿಸುತ್ತಿದ್ದಾರೆ.
ಅಷ್ಟೇ ಅಲ್ಲದೇ ಇದೇ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿರುವ ಮತ್ತೊಂದು ಚಿತ್ರ ಶ್ರೀ ಮುರಳಿ ನಟನೆಯ ಬಘೀರದಲ್ಲೂ ಸಹ ರುಕ್ಮಿಣಿ ವಸಂತ್ ನಾಯಕಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಯುವ ರಾಜ್‌ಕುಮಾರ್ ಮೊದಲ ಚಿತ್ರದ ಆಫರ್ ಅನ್ನೂ ಸಹ ರುಕ್ಮಿಣಿ ವಸಂತ್ ಒಪ್ಪಿಕೊಳ್ಳಲಿದ್ದಾರೆ ಎಂಬ ಮಾತಿದೆ. ಸದ್ಯ ಚಿತ್ರರಂಗದ ಬಾಕ್ಸ್ ಆಫೀಸ್ ಗೇಮ್‌ನಲ್ಲಿ ಅಪ್ಪು ಸ್ಥಾನವನ್ನು ತುಂಬಲು ಬರುತ್ತಿರೋ ಯುವ ರಾಜ್‌ಕುಮಾರ್ ಚೊಚ್ಚಲ ಚಿತ್ರದಲ್ಲಿ ನಟಿಸುವ ಅವಕಾಸ ಸಿಕ್ಕಿರುವುದು ರುಕ್ಮಿಣಿ ವಸಂತ್‌ಗೆ ದೊಡ್ಡ ಪ್ಲಸ್ ಪಾಯಿಂಟ್ ಎಂದೇ ಹೇಳಬಹುದು.
ಇನ್ನು ಈ ಚಿತ್ರದ ಟೀಸರ್ ಶೂಟಿಂಗ್ ಕೆಲಸಗಳು ಈಗಾಗಲೇ ಆರಂಭಗೊಂಡಿದ್ದು, ಇದೇ ಮಾರ್ಚ್ 17ರಂದು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೈಟಲ್ ಹಾಗೂ ಪುಟ್ಟದೊಂದು ಟೀಸರ್ ಅನ್ನು ಬಿಡುಗಡೆ ಮಾಡಲಿದೆ ಚಿತ್ರತಂಡ. ಇನ್ನುಳಿದಂತೆ ಚಿತ್ರದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಪುತ್ರಿ ಐಶ್ವರ್ಯ ಉಪೇಂದ್ರ ಸಹ ಈ ಚಿತ್ರದಲ್ಲಿ ನಟಿಸಲಿದ್ದು, ಯುವ ರಾಜ್‌ಕುಮಾರ್ ತಂಗಿ ಪಾತ್ರ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.


Click it and Unblock the Notifications











