ನಿರ್ದೇಶಕ ಎಸ್ ನಾರಾಯಣ್ ಹೆಸರಿನಲ್ಲಿ ವಂಚನೆಗೆ ಯತ್ನ
ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ವಂಚನೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸೆಲೆಬ್ರಿಟಿಗಳ ಹೆಸರಲ್ಲಿ ನಕಲಿ ಪ್ರೊಫೈಲ್ ತೆರೆದು ಅಥವಾ ಹ್ಯಾಕ್ ಮಾಡಿ ಹಣ ವಸೂಲಿ ಮಾಡುವ ಗ್ಯಾಂಗ್ ಆತಂಕ ಸೃಷ್ಟಿಸಿದೆ.
ಕನ್ನಡದ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಅವರ ಹೆಸರನ್ನು ಬಳಸಿಕೊಂಡು ಮೋಸ ಮಾಡಲು ಪ್ರಯತ್ನಿಸಿರುವ ಘಟನೆ ನಡೆದಿದೆ. ಈ ಬಗ್ಗೆ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಎಸ್ ನಾರಾಯಣ್ ಪೊಲೀಸ್ ದೂರು ನೀಡಲು ಮುಂದಾಗಿದ್ದಾರೆ.
ಎಸ್ ನಾರಾಯಣ್ ಹೆಸರಿನಲ್ಲಿರುವ ಫೇಸ್‌ಬುಕ್ ಹ್ಯಾಕ್ ಆಗಿದೆ ಎಂದು ಸ್ವತಃ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ''ನನ್ನ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ನನ್ನ ಚಿತ್ರದ ಹೆಸರು ಹೇಳಿಕೊಂಡು ಬಿಸಿನೆಸ್ ಮಾಡ್ತಿದ್ದಾರೆ. ದಯವಿಟ್ಟು ನನ್ನ ಹೆಸರು ಅಥವಾ ನನ್ನ ಸಿನಿಮಾದ ಹೆಸರಿನಲ್ಲಿ ಯಾರಾದರೂ ನಿಮ್ಮನ್ನು ಸಂಪರ್ಕಿಸಿದರೆ ಜಾಗೃತರಾಗಿರಿ. ನೀವು ಮೋಸ ಹೋದರೆ ಅದಕ್ಕೆ ನಾನು ಜವಾಬ್ದಾರಿಯಾಗಿರುವುದಿಲ್ಲ. ನನ್ನ ಖಾತೆ ಹ್ಯಾಕ್ ಆಗಿರುವ ಬಗ್ಗೆ ಪೊಲೀಸ್ ದೂರು ನೀಡುತ್ತಿದ್ದೇನೆ' ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಎಸ್ ನಾರಾಯಣ್ ಫೇಸ್‌ಬುಕ್ ಖಾತೆಯಿಂದ ಹ್ಯಾಕರ್ ಸ್ನೇಹಿತರೊಬ್ಬರಿಗೆ 25 ಸಾವಿರ ರೂಪಾಯಿ ಹಣ ಸಹಾಯ ಕೇಳಿದ್ದಾರೆ. ಸ್ವಲ್ಪ ಸಮಸ್ಯೆಯಲ್ಲಿದ್ದೇನೆ, ನನ್ನ ಸ್ನೇಹಿತನಿಗೆ ಹಣ ಬೇಕಾಗಿದೆ. ನೀವು ಈಗ ಗೂಗಲ್ ಪೇ ಅಥವಾ ಫೋನ್ ಪೇ ಮಾಡಿ, ನಿಮಗೆ ಬೆಳಗ್ಗೆ ಹಿಂತಿರುಗಿಸುತ್ತೇನೆ ಎಂದು ಮೆಸೆಜ್ ಮಾಡಿದ್ದಾರೆ. ಇದು ಎಸ್ ನಾರಾಯಣ್ ಅವರ ಗಮನಕ್ಕೆ ಬಂದಿದ್ದು, ವಿಷಯ ಪೊಲೀಸ್ ಠಾಣೆ ಮೆಟ್ಟಿಲು ಏರಿದೆ.

ಎಸ್ ನಾರಾಯಣ್ ಸಿನಿಮಾ ನಿರ್ದೇಶಿಸಿ ಸುಮಾರು ನಾಲ್ಕು ವರ್ಷ ಆಗಿದೆ. 'ಪಂಟ' ಚಿತ್ರಕ್ಕೆ ಕೊನೆಯದಾಗಿ ಆಕ್ಷನ್ ಕಟ್ ಹೇಳಿದ್ದರು. ಈಗ ಡೆಡ್ಲಿ ಆದಿತ್ಯ ಜೊತೆ '5ಡಿ' ಎಂಬ ಹಾರರ್ ಚಿತ್ರ ಮಾಡ್ತಿದ್ದಾರೆ. ಈ ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇದೀಗ, 5ಡಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಬಹಳ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಅದಿತಿ ಪ್ರಭುದೇವ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
2017ರಲ್ಲಿ ನಟ ದರ್ಶನ್ ಅಭಿನಯಿಸಿದ್ದ ಚಕ್ರವರ್ತಿ ಚಿತ್ರದಲ್ಲಿ ಆದಿತ್ಯ ನಟಿಸಿದ್ದರು. ಅದಾದ ಮೇಲೆ 2021ರಲ್ಲಿ 'ಮುಂದುವರಿದ ಅಧ್ಯಾಯ' ಸಿನಿಮಾ ಬಂತು. ಈಗ ರವಿಶ್ರೀವತ್ಸ, ಮಾಸ್ಟರ್ ಹಾಗೂ ನಾನೇ ನೆಕ್ಸ್ಟ್ ಸಿಎಂ ಅಂತಹ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











