ಅಂದು ವಿಷ್ಣುವರ್ಧನ್ ರಾಜ್ಯಪ್ರಶಸ್ತಿ ನಿರಾಕರಿಸಿದ್ದು ಯಾಕೆ? ನಿರ್ದೇಶಕ ಎಸ್. ನಾರಾಯಣ್ ಮೆಲುಕು
2019ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಅತ್ಯುತ್ತಮ ನಟ ಪ್ರಶಸ್ತಿಗೆ ಕಿಚ್ಚ ಸುದೀಪ್ ಪಾತ್ರರಾಗಿದ್ದಾರೆ. 'ಪೈಲ್ವಾನ್' ಚಿತ್ರದ ನಟನೆ ಮೆಚ್ಚಿ ತೀರ್ಪುಗಾರರು ಆಯ್ಕೆ ಮಾಡಿದ್ದರು. ಆದರೆ ನಟ ಸುದೀಪ್ ನಯವಾಗಿಯೇ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ.
ಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ನಟ ಸುದೀಪ್ ಮೊದಲಿಗೆ ರಾಜ್ಯ ಸರ್ಕಾರ ಹಾಗೂ ತೀರ್ಪುಗಾರರಿಗೆ ಧನ್ಯವಾದ ತಿಳಿಸಿದ್ದಾರೆ. ನನ್ನನ್ನು ಪ್ರಶಸ್ತಿಗೆ ಗುರುತಿಸಿದ್ದೆ ದೊಡ್ಡ ಬಹುಮಾನ. ಈ ಗೌರವಕ್ಕೆ ಪಾತ್ರರಾಗುವಂತಹ ಕಲಾವಿದರು ಚಿತ್ರರಂಗದಲ್ಲಿದ್ದಾರೆ. ಅವರಿಗೆ ಈ ಗೌರವ ಸಿಗಬೇಕು ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ತುಮಕೂರು ವಿವಿ ಕೊಡಲು ಮುಂದಾಗಿದ್ದ ಗೌರವ ಡಾಕ್ಟರೇಟ್ ಅನ್ನು ಕೂಡ ಕಿಚ್ಚ ನಿರಾಕರಿಸಿದ್ದರು.

ದಶಕಗಳ ಹಿಂದೆ ಸಾಹಸಸಿಂಹ ವಿಷ್ಣುವರ್ಧನ್ ಕೂಡ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಮೊದಲಿಗೆ ವಿಷ್ಣುವರ್ಧನ್ ಅವರಿಗೆ ಪ್ರಶಸ್ತಿ ಎಂದು ತಿಳಿಸಿದ್ದರು. ಬಳಿಕ ಪಟ್ಟಿ ಘೋಷಣೆ ಆದಾಗ ಇಬ್ಬರಿಗೆ ಪ್ರಶಸ್ತಿ ಎಂದು ಗೊತ್ತಾಗಿ ಇದಕ್ಕೆ ದಾದಾ ಬೇಸರ ವ್ಯಕ್ತಪಡಿಸಿದ್ದರು ಎಂದು ನಿರ್ದೇಶಕ ಎಸ್. ನಾರಾಯಣ್ ಫಿಲ್ಮಿಬೀಟ್‌ಗೆ ಪ್ರತಿಕ್ರಿಯಿಸಿದ್ದಾರೆ.
ಅದು 1998 ಹಾಗೂ 99ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ. ಆ ವರ್ಷ 'ವೀರಪ್ಪ ನಾಯ್ಕ' ಚಿತ್ರದ ನಟನೆಗಾಗಿ ವಿಷ್ಣುವರ್ಧನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಘೋಷಣೆ ಆಗಿತ್ತು. ಜೊತೆಗೆ 'ಹೂಮಳೆ' ಚಿತ್ರದ ನಟನೆಗಾಗಿ ರಮೇಶ್ ಅರವಿಂದ್ ಅವರಿಗೂ ಪ್ರಶಸ್ತಿ ನೀಡಲು ತೀರ್ಪುಗಾರರು ಮುಂದಾಗಿದ್ದರು. ಇದು ದಾದಾಗೆ ಇರಿಸು ಮುರಿಸು ತಂದಿತ್ತು. ಒಂದೇ ಪ್ರಶಸ್ತಿಯನ್ನು ಇಬ್ಬರಿಗೆ ಹಂಚಿದ್ದನ್ನು ವಿರೋಧಿಸಿದ್ದರು. ಸದ್ಯ ಕಿಚ್ಚ ಸುದೀಪ್ ರಾಜ್ಯಪ್ರಶಸ್ತಿ ಪಡೆಯಲು ನಿರಾಕರಿಸುತ್ತಿದ್ದಂತೆ ಕೆಲವರು ಅಂದಿನ ಘಟನೆ ನೆನಪು ಮಾಡಿಕೊಂಡಿದ್ದಾರೆ.
ರಾಷ್ಟ್ರಪ್ರಶಸ್ತಿಯನ್ನು ನೀಡುವಾಗಲೂ ಕೆಲವೊಮ್ಮೆ ಅತ್ಯುತ್ತಮ ನಟ ಅಥವಾ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಇಬ್ಬರಿಗೆ ನೀಡುವ ಪರಿಪಾಠ ಇದೆ. ಅದೇ ರೀತಿ 27 ವರ್ಷಗಳ ಹಿಂದೆ ರಾಜ್ಯ ಪ್ರಶಸ್ತಿಯನ್ನು ವಿಷ್ಣು ಹಾಗೂ ರಮೇಶ್ ಅರವಿಂದ್ ಅವರಿಗೆ ನೀಡಲು ಮುಂದಾಗಿದ್ದರು. ಆ ಬಳಿಕ ಸಾಹಸಸಿಂಹನಿಗೆ ಮತ್ತೆ ರಾಜ್ಯಪ್ರಶಸ್ತಿ ಸಿಕ್ಕಿರಲಿಲ್ಲ. ಅವರ ಅಗಲಿಕೆ ಬಳಿಕ 'ಆಪ್ತರಕ್ಷಕ' ಚಿತ್ರದ ನಟನೆಗಾಗಿ ಮತ್ತೆ ಈ ಗೌರವ ಸಿಕ್ಕಿತ್ತು.

ನಿರ್ದೇಶಕ ಎಸ್. ನಾರಾಯಣ್ ಮಾತನಾಡಿ "ವೀರಪ್ಪ ನಾಯ್ಕ ಚಿತ್ರಕ್ಕೆ 3 ಪ್ರಶಸ್ತಿ ಬಂದಿತ್ತು. ಇನ್ನು ಬರಬೇಕಿತ್ತು. ಅತ್ಯುತ್ತಮ ನಟ ಪ್ರಶಸ್ತಿ ವಿಷ್ಣು ಸರ್‌ಗೆ ಸಿಕ್ಕಿತ್ತು. ಕಾಸ್ಟ್ಯೂಮ್ ಹಾಗೂ ತೀರ್ಪುಗಾರರ ಮೆಚ್ಚಿನ ಸಿನಿಮಾ ಪ್ರಶಸ್ತಿ ಘೋಷಣೆ ಆಗಿತ್ತು. ಮೊದಲಿಗೆ ನಾನು ಸಂಭ್ರಮಾಚರಣೆ ಮಾಡಿದ್ದೆವು. ಆದರೆ ಬಳಿಕ ವಿಷ್ಣ ಸರ್ ಜೊತೆ ರಮೇಶ್ ಅರವಿಂದ್ ಅವರಿಗೂ ಅತ್ಯುತ್ತಮ ನಟ ಪ್ರಶಸ್ತಿ ಎಂದಾಗ ಬೇಸರವಾಗಿತ್ತು" ಎಂದು ನೆನಪಿಸಿಕೊಂಡಿದ್ದಾರೆ.
"ಮೊದಲಿಗೆ ನಿಮಗೆ ಅತ್ಯುತ್ತಮ ನಟ ಪ್ರಶಸ್ತಿ ಎಂದು ಕರೆ ಮಾಡಿ ಹೇಳಿದ್ದರಂತೆ. ಬಳಿ ಪಟ್ಟಿಯಲ್ಲಿ ಇಬ್ಬರ ಹೆಸರು ನೋಡಿ ವಿಷ್ಣು ಸರ್‌ಗೆ ಇರಿಸುಮುರಿಸು ಆಗಿತ್ತು. ಪ್ರಶಸ್ತಿ ಕಡ್ಲೆ ಮಿಠಾಮಿ ಅಲ್ಲ ಮುರಿದು ಕೊಡುವುದಕ್ಕೆ ಎಂದಿದ್ದರು. ರಮೇಶ್ ಅರವಿಂದ್ ಅವರಿಗೆ ಕೊಟ್ಟಿದ್ದರೂ ಬೇಸರವಿಲ್ಲ. ಆದರೆ ಇಬ್ಬರಿಗೆ ಹೇಗೆ ಒಂದೇ ಪ್ರಶಸ್ತಿ ಎಂದಿದ್ದರು. ಅಂತಹ ಉತ್ತಮ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಗಲಿಲ್ಲ ಎಂದು ನಮಗೂ ಬೇಸರವಾಗಿತ್ತು" ಎಂದು ಎಸ್. ನಾರಾಯಣ್ ನೆನಪಿಸಿಕೊಂಡಿದ್ದಾರೆ.


Click it and Unblock the Notifications











