ಎಸ್. ನಾರಾಯಣ್ ಜೊತೆ 'ಒಂದ್ಸಲ ಮೀಟ್ ಮಾಡೋಣ' ಎನ್ನುತ್ತಿದ್ದಾರೆ ಶ್ರೇಯಸ್
ಕಲಾಸಾಮ್ರಾಟ್ ಎಸ್. ನಾರಾಯಣ್ ನಿರ್ದೇಶನದ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಶ್ರೇಯಸ್ ಮಂಜು ನಟನೆಯ ಸಿನಿಮಾಗಳು ಕೈ ಹಿಡಿತ್ತಿಲ್ಲ. ಇದೀಗ ಇವರಿಬ್ಬರ ಕಾಂಬಿನೇಷನ್‌ನಲ್ಲಿ ವಿಭಿನ್ನ ಟೈಟಲ್ ಸಿನಿಮಾವೊಂದು ಮೂಡಿ ಬರ್ತಿದೆ. 'ಒಂದ್ಸಲ ಮೀಟ್ ಮಾಡೋಣ' ಅನ್ನೋವನ್ನು ಎಸ್. ನಾರಾಯಣ್ ಕಟ್ಟಿಕೊಡುತ್ತಿದ್ದಾರೆ.
ಚಿಕ್ಕಮಗಳೂರಿನ ಶ್ರೀದೇವಿರಮ್ಮ ದೇವಸ್ಥಾನದಲ್ಲಿ ಈ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಶ್ರೇಯಸ್ ಮಂಜು ಹಾಗೂ ತಾರಾ ಅನುರಾಧ ಕಾಣಿಸಿಕೊಂಡು ಚಿತ್ರದ ಮೊದಲ ಸನ್ನಿವೇಶಕ್ಕೆ ಸ್ಥಳೀಯ ಶಾಸಕರಾದ ಹೆಚ್. ಡಿ ತಮ್ಮಯ್ಯ ಕ್ಲಾಪ್ ಮಾಡಿದ್ದರು. ನಿರ್ಮಾಣ ಸಹಾಯಕ ಮಹದೇವ ಕ್ಯಾಮೆರಾ ಚಾಲನೆ ಮಾಡಿ ಚಿತ್ರಕ್ಕೆ ಶುಭ ಕೋರಿದ್ದಾರೆ.

'ಒಂದ್ಸಲ ಮೀಟ್ ಮಾಡೋಣ' ಪ್ರೀತಿಯ ಜರ್ನಿ ಎಂದು ನಿರ್ದೇಶಕ ಎಸ್. ನಾರಾಯಣ್ ಹೇಳಿದ್ದು ಚಿಕ್ಕಮಗಳೂರಿನಿಂದ ಚಿತ್ರೀಕರಣ ಪ್ರಾರಂಭವಾಗಿ, ಸಕಲೇಶಪುರ, ವಿರಾಜಪೇಟೆ, ಕಣ್ಣೂರು, ಮೈಸೂರು, ಬೆಂಗಳೂರು, ಬೆಳಗಾವಿ ಹಾಗೂ ಗೋವಾ ಮುಂತಾದ ಕಡೆ ನಡೆಯಲಿದೆ. ಇದೊಂದು ಟ್ರಾವೆಲಿಂಗ್ ಲವ್ ಸ್ಟೋರಿ ಎಂದು ಮಾಹಿತಿ ನೀಡಿದ್ದಾರೆ.
ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಪಿ.ತ್ಯಾಗರಾಜ್ ಅವರು ಅರ್ಪಿಸುತ್ತಿರುವ ಈ ಚಿತ್ರವನ್ನು ಕೆ.ಮಂಜು ಹಾಗೂ ರಮೇಶ್ ಯಾದವ್ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಕೆ.ಮಂಜು ಹಾಗೂ ರಮೇಶ್ ಯಾದವ್ ಅವರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮುಂದೆ ಇವರ ಕಾಂಬಿನೇಶನ್‌ನಲ್ಲಿ ಮತ್ತಷ್ಟು ಸಿನಿಮಾಗಳ ನಿರ್ಮಾಣಕ್ಕೆ ಸಿದ್ಧತೆ ನಡೀತಿದೆ.
ನಿರ್ದೇಶಕ ಎಸ್. ನಾರಾಯಣ್ 'ಒಂದ್ಸಲ ಮೀಟ್ ಮಾಡೋಣ' ಚಿತ್ರಕಥೆ, ಸಂಭಾಷಣೆ ಬರೆದು ಹಾಡುಗಳಿಗೆ ಸಾಹಿತ್ಯ ಕೂಡ ಬರೆದಿದ್ದಾರೆ. ಚಿತ್ರಕ್ಕೆ ಜಸ್ಸಿ ಗಿಫ್ಟ್ ಸಂಗೀತ ನೀಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ, ಸಂತು ನೃತ್ಯ ನಿರ್ದೇಶನ ಹಾಗೂ ಆನಂದ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಈ ಚಿತ್ರದಲ್ಲಿ ಶ್ರೇಯಸ್ ಮಂಜುಗೆ ನಾಯಕಿಯಾಗಿ ಬೃಂದಾ ಆಚಾರ್ ನಟಿಸುತ್ತಿದ್ದಾರೆ. 'ಕೌಸಲ್ಯ ಸುಪ್ರಜ ರಾಮ' ಚಿತ್ರದಲ್ಲಿ ಆಕೆಯ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ತಾರಾ ಅನುರಾಧ, ಶರತ್ ಲೋಹಿತಾಶ್ವ, ಸಾಧುಕೋಕಿಲ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ರಂಗಾಯಣ ರಘು, ಪಾವಗಡ ಮಂಜು, ಜಯರಾಮ್, ಸುಜಯ್ ಶಾಸ್ತ್ರಿ, ಗಿರಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
'ಪಡ್ಡೆಹುಲಿ' ಸಿನಿಮಾ ಮೂಲಕ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ 'ರಾಣ' ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಶ್ರೇಯಶ್ ನಟನೆಯ 'ವಿಷ್ಣುಪ್ರಿಯ' ಸಿನಿಮಾ ರಿಲೀಸ್ ಆಗಬೇಕಿದೆ. ಈ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ನಾಯಕಿಯಾಗಿ ಮಿಂಚಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಒಂದೊಳ್ಳೆ ಬ್ರೇಕ್‌ಗಾಗಿ ಶ್ರೇಯಸ್ ಕಾಯುತ್ತಿದ್ದಾರೆ. ನಿರ್ಮಾಪಕ ಕೆ. ಮಂಜು ಮಗನ ಬೆನ್ನಿಗೆ ನಿಂತಿದ್ದಾರೆ.
ಡಾ. ರಾಜ್‌ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಅಂಬರೀಶ್, ಶಿವರಾಜ್‌ಕುಮಾರ್‌ರಂತಹ ದಿಗ್ಗಜರ ಸಿನಿಮಾಗಳನ್ನು ನಿರ್ದೇಶಿಸಿದ ಎಸ್. ನಾರಾಯಣ್ ಇತ್ತೀಚೆಗೆ ಸೈಲೆಂಟ್ ಆಗಿದ್ದಾರೆ. ಸಾಲು ಸಾಲಾಗಿ ಅವರ ಸಿನಿಮಾಗಳು ಸೋಲುಂಡಿವೆ. ಇತ್ತೀಚೆಗೆ 'ಸೂರ್ಯವಂಶ' ಎನ್ನುವ ಧಾರಾವಾಹಿಗೆ ನಿರ್ದೇಶಕರು ಕೈ ಹಾಕಿದ್ದರು. ಅನಿರುದ್ಧ್ ಜತ್ಕರ್ ಇದರಲ್ಲಿ ನಟಿಸಬೇಕಿತ್ತು. 20 ಎಪಿಸೋಡ್‌ಗಳ ಚಿತ್ರೀಕರಣ ನಡೆದಿತ್ತು. ಆದರೆ ಕಾರಣಾಂತರಗಳಿಂದ ದಿಢೀರನೇ ಧಾರಾವಾಹಿ ನಿಲ್ಲಿಸಲಾಗಿತ್ತು.


Click it and Unblock the Notifications











