ಕನ್ನಡ ಸ್ಟಾರ್ ನಟರ ವಿರುದ್ಧ ಸಾ.ರಾ.ಗೋವಿಂದು ಗರಂ
ಕನ್ನಡದ ಸ್ಟಾರ್ ನಟರ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಆಕ್ರೋಶ ಹೊರಹಾಕಿದ್ದಾರೆ. ಕನ್ನಡದ ವಿಷಯದಲ್ಲಿ ಎಲ್ಲ ಪ್ರತಿಷ್ಠೆಯನ್ನು ಬದಿಗಿಟ್ಟು ಬನ್ನಿ ಎಂದು ಆಗ್ರಹಿಸಿದ್ದಾರೆ.
ಬಂದ್ ವಿಚಾರವಾಗಿ ಮಾಧ್ಯಮಗಳ ಬಳಿ ಮಾತನಾಡಿದ ಸಾರಾ ಗೋವಿಂದು, ''ಒಂದಿಬ್ಬರಿಗಾಗಿ ನಾಡಿನ ಹಿತವನ್ನು ಬಲಿ ಕೊಡಲು ಸಾಧ್ಯವಿಲ್ಲ'' ಎಂದು ಬಂದ್‌ಗೆ ವಿರೋಧಿಸಿದ ನಟರಿಗೆ ಪರೋಕ್ಷವಾಗಿ ತಿವಿದರು.
''ಕರ್ನಾಟಕದಲ್ಲಿ ಕನ್ನಡಕ್ಕಿಂತಲೂ ದೊಡ್ಡವರು ಯಾರೂ ಇಲ್ಲ ಎಂದು ಡಾ ರಾಜ್‌ಕುಮಾರ್ ಹೇಳಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ದೊಡ್ಡದು ಹೊರತು ಯಾವ ವ್ಯಕ್ತಿಯೂ ಇಲ್ಲಿ ದೊಡ್ಡವರಲ್ಲ. ರಾಜ್‌ಕುಮಾರ್ ಅವರು ಹಾಕಿಕೊಟ್ಟಿರುವ ಭದ್ರವಾದ ಬುನಾದಿಯ ಮೇಲೆ ಎಲ್ಲ ಕಲಾವಿದರೂ ನಿಂತಿದ್ದೀರಿ. ರಾಜ್‌ಕುಮಾರ್ ಹೇಳಿರುವ ಮಾತಿನಂತೆ ನಡೆದುಕೊಳ್ಳಿ'' ಎಂದರು ಸಾರಾ ಗೋವಿಂದು.

''ಇಬ್ಬರು, ಮೂವರಿಗಾಗಿ ನಾವು ಕನ್ನಡದ ಹಿತಾಸಕ್ತಿ ಬಲಿ ಕೊಡಲು ಸಾಧ್ಯವಿಲ್ಲ. ನಾವು ಮುಂದೆಂದೋ ಬಂದ್ ಕರೆ ಕೊಟ್ಟಾಗ ಆಗ ಇನ್ನೊಬ್ಬರು ಬರುತ್ತಾರೆ ನಮಗೆ ಸಮಸ್ಯೆ ಆಗುತ್ತಿದೆ ಎನ್ನುತ್ತಾರೆ ಪ್ರತಿಬಾರಿ ಹೀಗೆ ಒಬ್ಬೊಬ್ಬರು ಸ್ವಂತ ಹಿತಾಸಕ್ತಿ ಮುಂದಿಟ್ಟುಕೊಂಡು ಬಂದರೆ ಆಗುವುದಿಲ್ಲ'' ಎಂದರು ಸಾ.ರಾ.ಗೋವಿಂದು.
ಡಿಸೆಂಬರ್ 31ರಂದು ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದವು. ಈ ಬಂದ್‌ಗೆ ಚಿತ್ರರಂಗವು ಬೆಂಬಲ ನೀಡಲಿದೆ, ಅಂದು ಎಲ್ಲ ಚಟುವಟಿಕೆ ಬಂದ್ ಆಗಲಿದೆ, ಚಿತ್ರಮಂದಿರಗಳು ಸಹ ಬಂದ್ ಆಗಿರಲಿದೆ ಎಂದು ಸಾ.ರಾ.ಗೋವಿಂದು ಸ್ವಯಂಘೋಷಿತವಾಗಿ ಹೇಳಿದ್ದರು. ಆದರೆ ಡಿಸೆಂಬರ್ 31 ಶುಕ್ರವಾರವಾಗಿದ್ದು ಮೂರು ಕನ್ನಡ ಸಿನಿಮಾಗಳು ಬಿಡುಗಡೆ ಇದ್ದ ಕಾರಣ ಕೆಲವು ನಿರ್ಮಾಪಕರು, ನಟರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನಂತರ ನಟ ಶಿವರಾಜ್ ಕುಮಾರ್, ಯಶ್, ಅಜಯ್ ರಾವ್ ಇನ್ನೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು.


Click it and Unblock the Notifications











