ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷನಾಗಿ ಸಾಧು ಕೋಕಿಲ ನೇಮಕ; ಸಾಧು ಕಾಂಗ್ರೆಸ್‌ಗೆ ಶಕ್ತಿ ತುಂಬಲಿದ್ದಾರೆ ಎಂದ ಡಿಕೆಶಿ
ತನ್ನ ಕಾಮಿಡಿ, ಹಾಡು, ನಿರ್ದೇಶನ ಹಾಗೂ ಸಂಗೀತ ನಿರ್ದೇಶನದಿಂದ ಕನ್ನಡಿಗರ ಮನವನ್ನು ಗೆದ್ದಿರುವ ಸಾಧು ಕೋಕಿಲ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಸಾಧು ಕೋಕಿಲ ಸಹ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ವಾರದ ಹಿಂದಷ್ಟೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಭಾಗವಹಿಸಿದ್ದ ಸಾಧು ಕೋಕಿಲ ಕಾಂಗ್ರೆಸ್‌ನ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನು ಹೊಗಳಿ ಕಾಂಗ್ರೆಸ್ ಪರ ಅಬ್ಬರದ ಪ್ರಚಾರ ಮಾಡಿದ್ದರು.

ಇನ್ನು ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡಿದ್ದ ಸಾಧು ಕೋಕಿಲಗೆ ಪಕ್ಷದಲ್ಲಿ ಯಾವ ಪಟ್ಟ ಸಿಗಬಹುದು ಎಂಬ ಕುತೂಹಲವೂ ಸಹ ಸಿನಿ ರಸಿಕರಲ್ಲಿ ಹಾಗೂ ರಾಜಕೀಯದಲ್ಲಿ ಆಸಕ್ತಿ ಉಳ್ಳವರಲ್ಲಿ ಮೂಡಿತ್ತು. ಈ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದ್ದು, ಸಾಧು ಕೋಕಿಲ ಅವರನ್ನು ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇಂದು ( ಮಾರ್ಚ್ 2 ) ಡಿಕೆ ಶಿವಕುಮಾರ್ ಅವರು ಸಾಧು ಕೋಕಿಲ ಅವರಿಗೆ ಹೂಗುಚ್ಛ ನೀಡಿ ಸಾಧು ಅವರನ್ನು ಅಭಿನಂದಿಸಿ ಶುಭ ಕೋರಿದ್ದಾರೆ.
ಈ ಕುರಿತಾಗಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಡಿಕೆ ಶಿವಕುಮಾರ್ "ಕನ್ನಡದ ಖ್ಯಾತ ಸಂಗೀತ ನಿರ್ದೇಶಕರಾದ ಶ್ರೀ ಸಾಧು ಕೋಕಿಲಾ ಅವರನ್ನು ಕೆಪಿಸಿಸಿ ಸಾಂಸ್ಕೃತಿಕ ಘಟಕದ ಅಧ್ಯಕ್ಷರನ್ನಾಗಿ ಅಧಿಕೃತವಾಗಿ ಇಂದು ನೇಮಕ ಮಾಡಿ ಶುಭ ಕೋರಿದೆ. ಸಂಗೀತ, ನಿರ್ದೇಶನ, ನಟನೆಯ ಮೂಲಕ ಕನ್ನಡ ನಾಡಿನ ಮನೆಮಾತಾಗಿರುವ ಸಾಧು ಕೋಕಿಲಾ ಅವರು ಕಾಂಗ್ರೆಸ್‌ಗೆ ಇನ್ನಷ್ಟು ಶಕ್ತಿ ತುಂಬುತ್ತಾರೆ ಎನ್ನುವ ವಿಶ್ವಾಸ ನನಗಿದೆ. -ಶುಭವಾಗಲಿ" ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ಇಷ್ಟು ದಿನಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ಮೋಡಿ ಮಾಡಿದ ಸಾಧು ಕೋಕಿಲ ಇದೀಗ ರಾಜಕೀಯ ಇನ್ನಿಂಗ್ಸ್ ಆರಂಭಿಸುತ್ತಿದ್ದು, ಅವರ ಮುಂದಿನ ಪಯಣ ಹೇಗಿರಲಿದೆ ಎಂಬುದು ಅವರ ಅಭಿಮಾನಿಗಳಲ್ಲಿ ಮೂಡಿರುವ ಕುತೂಹಲವಾಗಿದೆ.


Click it and Unblock the Notifications











