'ಯುವರತ್ನ'ನಿಗಾಗಿ ಜೋಕರ್ ಆದ ನಟ ಸಾಧು ಕೋಕಿಲ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಕೊನೆಯ ಹಂತದ ಟಾಕಿ ಭಾಗ ಸೆರೆಹಿಡಿಯುತ್ತಿರುವ ಚಿತ್ರತಂಡದಿಂದ ಇಂಟ್ರಸ್ಟಿಂಗ್ ಸಂಗತಿ ಹೊರಬಿದ್ದಿದೆ. 'ಯುವರತ್ನ' ಚಿತ್ರದಲ್ಲಿ ಕಲಾವಿದರ ದಂಡೆ ಇದೆ. ಸ್ಯಾಂಡಲ್ ವುಡ್ ನ ಸಾಧು ಮಹಾರಾಜ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
'ಯುವರತ್ನ' ಚಿತ್ರದಲ್ಲಿ ಸಾಧು ಕೋಕಿಲ ವಿಭಿನ್ನ ಗೆಟಪ್ ನಲ್ಲಿ ಮಿಂಚಿದ್ದಾರೆ. ಹೌದು, ಯುವರತ್ನ ಚಿತ್ರದ ಗೆಟಪ್ ಎಂದು ಹೇಳಲಾಗುತ್ತಿರುವ ಈ ಫೋಟೋದಲ್ಲಿ ಸಾಧು ಕೋಕಿಲ ಜೋಕರ್ ಆಗಿ ಕಾಣಿಸಿಕೊಂಡಿದ್ದಾರೆ. ಬಿಳಿ ಮತ್ತು ಹಳದಿ ಬಣ್ಣದ ಕಾಸ್ಟ್ಯೂಮ್ ಧರಿಸಿ, ವಿಭಿನ್ನವಾಗಿ ಮೇಕಪ್ ಮಾಡಿಕೊಂಡು ಸೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶಿಕ್ಷಣ ಮಾಫಿಯಾ ಬಗ್ಗೆ ಇರುವ ಸಿನಿಮಾ ಇದಾಗಿದ್ದು. ಚಿತ್ರದಲ್ಲಿ ಪುನೀತ್ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪುಗೆ ನಾಯಕಿಯಾಗಿ ಸಾಯೇಷಾ ಮಿಂಚಿದ್ದಾರೆ. ಇನ್ನೂ ಉಳಿದಂತೆ ಪ್ರಕಾಶ್ ರೈ, ಸೋನು ಗೌಡ, ಡಾಲಿ ಧನಂಜಯ್, ರಾಧಿಕಾ ಶರತ್ ಕುಮಾರ್, ಅರು ಗೌಡ, ವಸಿಷ್ಠ ಸೇರಿದಂತೆ ದೊಡ್ಡ ತಾರಾಬಳಗವೆ ಚಿತ್ರದಲ್ಲಿದೆ.

ಸದ್ಯ ಟಾಕಿ ಭಾಗ ಮುಗಿಯುವ ಹಂತಕ್ಕೆ ಬಂದಿದ್ದು ಹಾಡಿನ ಚಿತ್ರೀಕರಣ ಭಾಕಿ ಇದೆ. ಸಂತೋಷ್ ಆನಂದ್ ರಾಮ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಯುವರತ್ನ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ ನಿರ್ಮಾಣ ಮಾಡುತ್ತಿದೆ. ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಶನ್ ಎರಡನೇ ಚಿತ್ರ ಇದಾಗಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಮಟ್ಟ ಹೆಚ್ಚಾಗಿದೆ.


Click it and Unblock the Notifications











