»   » ‘ಲಾ ಅಂಡ್‌ ಆರ್ಡರ್‌’ ಮೂಲಕ ಸಾಯಿ ಲಕ್ಕು ಕ್ಲಿಕ್ಕಾದೀತೆ?

‘ಲಾ ಅಂಡ್‌ ಆರ್ಡರ್‌’ ಮೂಲಕ ಸಾಯಿ ಲಕ್ಕು ಕ್ಲಿಕ್ಕಾದೀತೆ?

Posted By: Staff
Subscribe to Filmibeat Kannada

ಪೊಲೀಸ್‌ ಸ್ಟೋರಿ ಖ್ಯಾತಿಯ ಸಾಯಿಕುಮಾರ್‌ಗೆ ಏಕಾಏಕಿ ಬೇಡಿಕೆ ಕುದುರಿದೆ.
ಇನ್ನೇನು ಸಾಯಿಕುಮಾರ್‌ ಎಂಬ ನಾಯಕನ ಹೆಸರು ಇತಿಹಾಸದ ಬುಟ್ಟಿಗೆ ಸೇರಿಹೋಯಿತು ಎನ್ನುವಷ್ಟರಲ್ಲಿಯೂನಿಫಾರ್ಮ್‌ ಧೂಳು ಕೊಡವಿಕೊಂಡು ಅಟೆನ್ಷನ್‌ ಎಂದು ಸಾಯಿ ಎದ್ದು ನಿಂತಿದ್ದಾರೆ. 'ಲಾ ಅಂಡ್‌ ಆರ್ಡರ್‌" ಎಂಬ ಮಾಯಾಬಜಾರು ಜಾದುವಿದು!

ಭಾರತದಲ್ಲೇ ಅತಿದೊಡ್ಡ ಸಾಹಸ ಪ್ರಧಾನ ಸಿನಿಮಾ ಎನ್ನುವ ಹಣೆಪಟ್ಟಿಯಾಂದಿಗೆ ಬಿಡುಗಡೆಯಾಗುತ್ತಿರುವ ಲಾ ಅಂಡ್‌ ಆರ್ಡರ್‌ನಲ್ಲಿ ಸಾಯಿಕುಮಾರ್‌ ನಾಯಕ. ಈ ಸಿನಿಮಾದ ತೆಲುಗು ಡಬ್ಬಿಂಗ್‌ ಹಕ್ಕು ದಾಖಲೆಯ ಮೊತ್ತವಾದ 1.25 ಕೋಟಿ ರುಪಾಯಿಗೆ ಮಾರಾಟವಾಗಿದೆ! ಸಾಯಿ ತೆಲುಗುಬಿಡ್ಡ ಆಗಿರುವುದರಿಂದ ಈ ಮಾರಾಟದಲ್ಲಿ ಕೊಂಚ ಕ್ರೆಡಿಟ್ಟು ಅವರಿಗೂ ಸಲ್ಲುತ್ತದೆ.

ಕೋಟಿ ರಾಮು ನಿರ್ಮಾಣದ ಜನವರಿ 11 ರಂದು ಲಾ ಅಂಡ್‌ ಆರ್ಡರ್‌ ತೆರೆ ಕಾಣುತ್ತಿದೆ. ಬರಾಬರಿ 10 ಫೈಟಿಂಗ್‌ ಹೊಂದಿರುವ, ಶಿವಮಣಿ ನಿರ್ದೇಶನದ ಈ ಚಿತ್ರ ಹಾಲಿವುಡ್‌ ತಾಂತ್ರಿಕತೆಯನ್ನು ಹೊಂದಿದೆ ಎನ್ನಲಾಗುತ್ತಿದೆ. ಹಾಡಿಲ್ಲ , ಆ ಕಾರಣದಿಂದಾಗಿ ನಾಯಕಿಯೂ ಇಲ್ಲ ಎನ್ನುವುದು ಚಿತ್ರದ ಇನ್ನೊಂದು ಹೈಲೈಟ್‌. ರಾಮು-ಶಿವಮಣಿ ಜೋಡಿಯ 'ರಾಜಕೀಯ" ಕೂಡ ಸೂಪರ್‌ಹಿಟ್‌ ಅನ್ನಿಸಿಕೊಂಡಿದ್ದರಿಂದ, ಲಾ ಅಂಡ್‌ ಆರ್ಡರ್‌ ಗೆಲ್ಲುವ ಭರವಸೆಗಳು ಹೆಚ್ಚಿವೆ. ರಾಮು 'ಹಾಲಿವುಡ್‌"ನಲ್ಲಿ ಕೈಬಿಟ್ಟ ಕಾಸು ಜೇಬು ಸೇರುವ ಆಶಾಭಾವನೆ ಹೊಂದಿದ್ದಾರೆ.

ಲಾ ಅಂಡ್‌ ಆರ್ಡರ್‌ ಸಿನಿಮಾದ ಪ್ರಚಾರಕ್ಕೆ ರಾಮು ಅರ್ಧ ಕೋಟಿ ರುಪಾಯಿ ಖರ್ಚು ಮಾಡುತ್ತಿದ್ದಾರೆ. ಈಗಾಗಲೇ ಸಾಯಿ ಚಿತ್ರಗಳು, ಹೋರ್ಡಿಂಗ್‌ಗಳು ಬೆಂಗಳೂರಿನ ಮೂಲೆ ಮೂಲೆಗಳಲ್ಲಿ ಕಾಣಿಸುತ್ತಿವೆ. ಸಿನಿಮಾ ಕ್ಲಿಕ್ಕಾಯಿತೆಂದರೆ ಸಾಯಿ ಲಕ್ಕು ಖುಲಾಯಿಸಿತೆಂದೇ ಅರ್ಥ. ಅಂತೆಯೇ ಇನ್ನಷ್ಟು ಮಾರಾಮಾರಿ ಸಿನಿಮಾಗಳ ಹುಟ್ಟಿಗೆ ಈ ಸಿನಿಮಾ ಕಾರಣವಾದರೂ ಆಶ್ಚರ್ಯವಿಲ್ಲ.

ಈ ನಡುವೆ- ಲಾ ಅಂಡ್‌ ಆರ್ಡರ್‌ ತೆರೆ ಕಾಣುವ ಮೊದಲೇ ನಮ್ಮೆಜಮಾನ್ರು ಎನ್ನುವ ಸಿನಿಮಾಕ್ಕೆ ಸಾಯಿ ಆಯ್ಕೆಯಾಗಿದ್ದಾರೆ. ಶ್ರೀಧರ್‌ ನಿರ್ಮಿಸುತ್ತಿರುವ ಈ ಚಿತ್ರದ ನಿರ್ದೇಶಕರು ಮಾರ್ತಾಂಡ ಎನ್ನುವ ಚಿತ್ರ ನಿರ್ಮಾಣದ ಅನುಭವ ಹೊಂದಿರುವ ಚಲಪತಿ. ಕಥೆ, ಚಿತ್ರಕಥೆ, ಸಂಭಾಷಣೆ ಅವರದೇ. ಜನವರಿ 17 ರಿಂದ ಹಾಡುಗಳ ಧ್ವನಿ ಮುದ್ರಣ ಆರಂಭ.

ಲಾ ಅಂಡ್‌ ಆರ್ಡರ್‌ನಲ್ಲಿ ಏಕಾಂಗಿಯಾಗಿದ್ದ ಸಾಯಿಗೆ ನಮ್ಮೆಜಮಾನ್ರು ಚಿತ್ರದಲ್ಲಿ ಶ್ರುತಿ ಜೋಡಿ. ನಾಯಕಿ ಇರುವುದರಿಂದ ಸಾಯಿ ಹಾಡು ಹೇಳಲಡ್ಡಿಯಿಲ್ಲ !

English summary
Law and Order kannada film will be dubbed into Telugu

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada