»   » ಮದುವೆಯಲ್ಲೂ ‘ಸೈನಿಕ’ನ ಹೋರಾಟ

ಮದುವೆಯಲ್ಲೂ ‘ಸೈನಿಕ’ನ ಹೋರಾಟ

Posted By: Staff
Subscribe to Filmibeat Kannada

ಮೊನ್ನೆ ಮೊನ್ನೆಯಷ್ಟೇ ಕಾರ್ಗಿಲ್‌ ಯುದ್ಧದ ಗೆಲುವಿನ ನೆನಪಿನಲ್ಲಿ ರಾಷ್ಟ್ರ ವಿಜಯ್‌ ದಿವಸ್‌ ಆಚರಿಸಿದರೆ, ಕಾರ್ಗಿಲ್‌ ಯುದ್ಧದ ಸ್ಫೂರ್ತಿಯಲ್ಲಿ ಕನ್ನಡದಲ್ಲಿ ತಯಾರಾಗುತ್ತಿರುವ 'ಸೈನಿಕ" ಚಿತ್ರಕ್ಕೆ ಕುಲು ಮನಾಲಿಯಲ್ಲಿ ಮದುವೆಯ ದೃಶ್ಯವೊಂದರ ಚಿತ್ರೀಕರಣ ನಡೆಯಿತು.

ಸೈನ್ಯದ ಕಥೆಯೇ ಪ್ರಧಾನವಾಗಿರುವ ಚಿತ್ರಕ್ಕಾಗಿ, ಮಿಲಿಟರಿ ಅಧಿಕಾರಿಯ ಪುತ್ರಿಯ ಮದುವೆಯ ದೃಶ್ಯವನ್ನು ಮನಾಲಿ ದಾರಿಯಲ್ಲಿರುವ ಪಿ.ಡಬ್ಯ್ಲೂಡಿ ಗೆಸ್ಟ್‌ ಹೌಸ್‌ನಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು. ಮದುವೆಯ ಸಂದರ್ಭದಲ್ಲಿ ಭಯೋತ್ಪಾದಕರ ಆಗಮನ, ಗುಂಡಿನ ಸುರಿಮಳೆ, ಜನರನ್ನು ರಕ್ಷಿಸಲು ಸೈನಿಕರ ಹೋರಾಟ ಈ ಎಲ್ಲವೂ ಮದುವೆಯ ದೃಶ್ಯದಲ್ಲಿ ಅಡಕವಾಗಿದ್ದವು.

ಕಾಶ್ಮೀರ ಕಣಿವೆಯಲ್ಲಿ ಹಾಗೂ ದೇಶದ ಗಡಿಯಲ್ಲಿ ದಿನನಿತ್ಯ ನಡೆಯುವ ಘಟನಾವಳಿಗಳೆಲ್ಲವೂ ಸೈನಿಕ ಚಿತ್ರದಲ್ಲಿವೆ. ಅಲ್ಲದೆ ಇಲ್ಲಿನ ಸುಂದರ ಪರಿಸರದಲ್ಲಿ ಸತತ ಆರು ದಿನಗಳ ಕಾಲ ಹಾಡೊಂದರ ಚಿತ್ರೀಕರಣವೂ ನಡೆದಿದೆ ಎಂಬ ಸುದ್ದಿಯನ್ನು ಚಿತ್ರತಂಡ ಬೆಂಗಳೂರಿಗೆ ರವಾನಿಸಿದೆ.

ಸೈನಿಕ ಚಿತ್ರದ ನಾಯಕ ಯೋಗೀಶ್ವರ್‌, ನಟಿ ರಾಧಿಕಾ ವರ್ಮ, ರಾಜಯೋಗಿ ಸಂಸ್ಥೆಯ ತಂತ್ರಜ್ಞರು, ಮುಂಬೈನ 150 ಹಾಗೂ ರಾಜ್ಯದ 50 ಸಾಹಸ ಕಲಾವಿದರು ರಾಜ್ಯದಿಂದ ಸಾವಿರಾರು ಕಿ.ಮೀಟರ್‌ ದೂರದ ಕುಲು ಮನಾಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಕೊರೆಯುವ ಚಳಿಯಲ್ಲಿ ನಡುಗುತ್ತಾ, ಆಗಾಗ್ಗೆ ಸುರಿವ ಮಳೆಯಲ್ಲಿ ನೆನೆಯುತ್ತಾ, ಆಗೊಮ್ಮೆ ಈಗೊಮ್ಮೆ ಇಣುಕುವ ಸೂರ್ಯನ ಶಾಖವನ್ನು ಆನಂದದಿಂದ ಆನುಭವಿಸುತ್ತಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

ಅದ್ಧೂರಿ ತಾರಾಗಣ ಹಾಗೂ ಭಾರಿ ವೆಚ್ಚದ ಈ ಚಿತ್ರವನ್ನು ಕೆ. ಮಹೇಶ್‌ ಸುಖಧರೆ ನಿರ್ವಹಿಸುತ್ತಿದ್ದಾರೆ. ತಾರಾಗಣದಲ್ಲಿ ಯೋಗೇಶ್ವರ್‌, ಸಾಕ್ಷಿ ಶಿವಾನಂದ್‌, ಶ್ರೀವಿದ್ಯಾ, ದೊಡ್ಡಣ್ಣ, ಬಿ.ವಿ. ರಾಧಾ, ಅರವಿಂದ್‌, ಏಣಗಿ ನಟರಾಜ್‌, ಸೋನಾಲಿ, ರಾಧಿಕಾ ವರ್ಮಾ, ಎಂ.ಎನ್‌. ಸುರೇಶ್‌, ಮಾ. ಸಾಗರ್‌, ನಾಗಸಂದ್ರ ಮೊದಲಾದವರಿದ್ದಾರೆ.

English summary
Sainika shooting is in full swing

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada