»   » ಕಾರ್ಗಿಲ್‌ನಿಂದ ಮಂಕಾಗಿ ಬಂದಿದ್ದ ಸೈನಿಕನಿಗೆ ಹುರುಪು ತಂದ ಸಾಕ್ಷಿ

ಕಾರ್ಗಿಲ್‌ನಿಂದ ಮಂಕಾಗಿ ಬಂದಿದ್ದ ಸೈನಿಕನಿಗೆ ಹುರುಪು ತಂದ ಸಾಕ್ಷಿ

Posted By: Staff
Subscribe to Filmibeat Kannada

ಸೈನಿಕನಿಗೆ ಮತ್ತೆ ಜೀವ ಬಂದಿದೆ!
ಕಾರ್ಗಿಲ್‌ ಹಾಗೂ ಕುಲು ಮನಾಲಿಯಲ್ಲಿ ನಾಯಕಿಯಾಂದಿಗೆ ಡ್ಯುಯೆಟ್‌ ಹಾಡಿ ಸುಸ್ತಾಗಿದ್ದ ಶಾಸಕ ಕಮ್‌ ನಾಯಕ ಯೋಗೇಶ್ವರ್‌ರ ಸೈನಿಕ ಮತ್ತೆ ಚುರುಕಾಗಿದ್ದಾನೆ. ಇನ್ನೊಂದೇ ಹಾಡು ಬಾಕಿ; ಚಿತ್ರೀಕರಣ ಮುಕ್ತಾಯ ಎಂದು ನಿರ್ಮಾಪಕರು ಘೋಷಿಸಿದ್ದಾರೆ.

ಉಳಿದಿರುವ ಹಾಡಿನ ಚಿತ್ರೀಕರಣ ಮೇಲುಕೋಟೆ ಹಾಗೂ ಮೈಸೂರಿನಲ್ಲಿ ನಡೆಯಲಿದೆ. ಮೈಸೂರು ಅರಮನೆಯ ಹೊರಾಂಗಣ ಹಾಗೂ ಬೆಂಗಳೂರಿನಲ್ಲಿನ ಎರಡು ಸ್ಟುಡಿಯೋಗಳನ್ನು ಕೂಡ ಚಿತ್ರೀಕರಣಕ್ಕೆ ಬಳಸಿಕೊಳ್ಳಲಾಗುವುದು ಎಂದು ನಿರ್ಮಾಪಕರಲ್ಲೊಬ್ಬರಾದ ಎಂ.ಚಂದ್ರಶೇಖರ್‌ ತಿಳಿಸಿದ್ದಾರೆ.

ಸಾಕ್ಷಿ ಶಿವಾನಂದ್‌ ಹಾಗೂ ಯೋಗೇಶ್ವರ್‌ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗುವರು. ಈ ಹಾಡಿಗೆ 15 ಲಕ್ಷ ರುಪಾಯಿ ತಗುಲುವ ಅಂದಾಜು ನಿರ್ಮಾಪಕರದು. ಅಂದಹಾಗೆ, ಸಿನಿಮಾ ನಿರ್ಮಾಣ ಸರಿ ಸುಮಾರು ಮೂರೂವರೆ ಕೋಟಿ ರುಪಾಯಿ ಮುಟ್ಟುತ್ತಿದೆ. ಅಲ್ಲಿಗೆ ಯೋಗೇಶ್ವರ್‌ ಕೋಟಿ ಸಿನಿಮಾದ ನಾಯಕರಾದಂತಾಯಿತು. ಸ್ಯಾಂಡಲ್‌ವುಡ್‌ ಪಾಲಿಗೆ ಸೈನಿಕ ತುಸು ದುಬಾರಿ!

ಅಂದುಕೊಂಡ ಹಾಗೆ ಜರುಗಿದ್ದರೆ 2001 ರಲ್ಲೇ ಸೈನಿಕ ತೆರೆ ಕಾಣಬೇಕಿತ್ತು . ಆದರೆ, ಅನಗತ್ಯ ಗೊಂದಲ ವಿವಾದಗಳೊಂದಿಗೆ ಸಿನಿಮಾ ನಿರ್ಮಾಣ ಗಣೇಶನ ಮದುವೆಯಂತಾಯಿತು. ನಾಯಕ ಯೋಗೇಶ್ವರ್‌ ಹಾಗೂ ನಾಯಕಿ ಸಾಕ್ಷಿ ಕೆಮರಾ ಎದುರಿಗಿಂಥ ಪತ್ರಕರ್ತರ ಎದುರೇ ಹೆಚ್ಚಾಗಿ ನಟಿಸಿದರು.

ಸಾಕ್ಷಿ ಹಾಗೂ ಶಿಕಾ ಕಣ್ಣಾಮುಚ್ಚಾಲೆ ಪ್ರಕರಣ ಕೂಡ ಸಿನಿಮಾದ ಕುರಿತು ಪ್ರೇಕ್ಷಕರ ಕುತೂಹಲ ಕೆರಳಿಸಿದರೂ, ಕುತೂಹಲವನ್ನು ಕ್ಯಾಷ್‌ ಮಾಡಿಕೊಳ್ಳುವ ವೇಗವನ್ನು ಸೈನಿಕ ಪ್ರದರ್ಶಿಸಲೇ ಇಲ್ಲ . ಈ ನಡುವೆ ಚಿತ್ರೀಕರಣ್ಕಕೆಂದು ಪತ್ರಕರ್ತರ ಹಿಂಡನ್ನು ಕಾರ್ಗಿಲ್‌ಗೆ ಕರೆದೊಯ್ದ ಯೋಗೇಶ್ವರ್‌ ಧೋರಣೆಯೂ ಟೀಕೆಗೊಳಗಾಯಿತು. ಕಾರ್ಗಿಲ್‌ನಲ್ಲಿ ಯೋಗೇಶ್ವರ್‌ ಯುದ್ಧ ಮಾಡಲಿಲ್ಲ , ಡುಯೆಟ್‌ ಹಾಡಿದರು ಎನ್ನುವ ಆರೋಪವೂ ಕೇಳಿಬಂತು.

ಭಾರತ-ಪಾಕಿಸ್ತಾನ ಗಡಿಯಲ್ಲಿ ಮತ್ತೊಮ್ಮೆ ಉದ್ವಿಗ್ನತೆ ಕಾಣಿಸಿಕೊಂಡಿರುವ ಇವತ್ತು ಸೈನಿಕ ಮತ್ತೆ ಜೀವಂತನಾಗಿದ್ದಾನೆ. ಅವನು ತೆರೆ ಕಾಣುವ ಹೊತ್ತಿಗೆ ಗಡಿಯಲ್ಲಿ ಬಿಸಿ ಉಳಿದಿರುತ್ತದೋ ಅಥವಾ ತಣ್ಣಗಾಗಿರುತ್ತದೋ ಎನ್ನುವುದು ಈಗ ಉಳಿದಿರುವ ಕುತೂಹಲ. ಈ ಬಿಸಿ-ತಂಪು ಚಿತ್ರದ ಭವಿಷ್ಯವನ್ನೂ ನಿರ್ಧರಿಸಬಹುದು!?

English summary
Sainika crosses the estimated budget : Rs 3.5 crores poured into it !

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada