ಸಲಾರ್ ಯಶಸ್ಸಿನ ಬೆನ್ನಲ್ಲೇ ಕಟೀಲು ಶ್ರೀದುರ್ಗಾಪರಮೇಶ್ವರಿ ದರ್ಶನ ಪಡೆದ ಪ್ರಭಾಸ್, ವಿಜಯ್ ಕಿರಗಂದೂರು
ಬಾಹುಬಲಿ ಎಂಬ ಸೂಪರ್ ಡೂಪರ್ ಹಿಟ್ ಸಿನಿಮಾ ನೀಡಿದ್ದ ನಟ ಪ್ರಭಾಸ್ ಬಳಿಕ ಕೊಟ್ಟ ಎಲ್ಲಾ ಸಿನಿಮಾಗಳು ಸೋಲುಕಂಡಿದ್ದವು. ಅಂತಹ ದೊಡ್ಡ ಹಿಟ್ ಯಾವುದು ನೀಡಲಿಲ್ಲ. ಇದಾದ ನಂತರ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಬಂದ 'ಸಲಾರ್' ಸಿನಿಮಾ ಸಕತ್ ಹಿಟ್ ತಂದು ಕೊಟ್ಟಿದ್ದು, ಅವರ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟವನ್ನು ಉಳಿಸಿದೆ.
ಸದ್ಯ ನಟ ಪ್ರಭಾಸ್ ಸಲಾರ್ ಸಿನಿಮಾದ ಭರ್ಜರಿ ಯಶಸ್ಸನ್ನು ಅನುಭವಿಸುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದಷ್ಟೇ ಸಲಾರ್ ತಂಡ ಈ ಅದ್ಭುತ ಗೆಲುವನ್ನು ಸಂಭ್ರಮಿಸಿತ್ತು. ಇದರ ಬೆನ್ನಲ್ಲೆ ನಟ ಟೆಂಪಲ್ ರನ್ ಮಾಡುತ್ತಿದ್ದಾರೆ. ಹೌದು... ನಟ ಪ್ರಭಾಸ್ ತಮ್ಮ ಸಲಾರ್ ನಿರ್ಮಾಪಕ ವಿಜಯ್ ಕಿರಗಂದೂರು ಜೊತೆಗೆ ದಕ್ಷಿಣ ಕನ್ನಡದ ಪ್ರಖ್ಯಾತ ದೇವಸ್ಥಾನ ಕಟೀಲು ದುರ್ಗಾಪರಮೇಶ್ವರಿ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಸಲಾರ್ ತಂಡ
ಸಲಾರ್ ಭರ್ಜರಿ ಯಶಸ್ಸಿನ ಬೆನ್ನಲ್ಲೇ ನಟ ಪ್ರಭಾಸ್ ಕರ್ನಾಟಕಕ್ಕೆ ಭೇಟಿ ನೀಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದುರ್ಗೆಯ ದರ್ಶನ ಪಡೆದಿದ್ದಾರೆ. ಹೊಂಬಾಳೆ ಫಿಲ್ಮ್ಂ ಸಂಸ್ಥೆಯ ಮಾಲೀಕ, ನಿರ್ಮಾಪಕ ವಿಜಯ್ ಕಿರಗಂದೂರು ಜೊತೆಗೆ ದೇವಾಲಯಕ್ಕೆ ಭೇಟಿ ನೀಡಿದ ನಟ ಪ್ರಭಾಸ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.
'ಸಲಾರ್' ಸಿನಿಮಾ ನಿರ್ಮಾಪಕ ವಿಜಯ್ ಕಿರಗಂದೂರು ಕಟೀಲು ದುರ್ಗಾಪರಮೇಶ್ವರಿ ಪರಮ ಭಕ್ತರಾಗಿದ್ದಾರೆ. ಹೀಗಾಗಿ ಎಲ್ಲಾ ಸಂಕಟ, ಸಂಭ್ರಮದಲ್ಲಿಯೂ ದೇವಿಯ ಸನ್ನಿಧಾನಕ್ಕೆ ಭೇಟಿ ನೀಡುತ್ತಾರೆ. ಈಗಾಗಲೇ ಹಲವು ಸಂದರ್ಭಗಳಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇದೇ ರೀತಿ ನಟ ಪ್ರಭಾಸ್ ಅವರನ್ನು ಜೊತೆಗೆ ಕರೆದುಕೊಂಡು ಬಂದಿದ್ದಾರೆ.
ಪ್ರಭಾಸ್‌ಗೆ ದುರ್ಗಾಪರಮೇಶ್ವರಿ ಫೋಟೋ ಸಲ್ಲಿಕೆ
ನಟ ಪ್ರಭಾಸ್ ಬಿಳಿ ಬಟ್ಟೆಯಲ್ಲಿ ಬಂದಿದ್ದರು. ಮುಖಕ್ಕೆ ಬಿಳಿ ಬಣ್ಣದ ಮಾಸ್ಕ್, ತಲೆಗೆ ಬಿಳಿ ಟೋಪಿ ಧರಿಸಿದ್ದ ಅವರು ಬಿಳಿ ಟೀ ಶರ್ಟ್ ಮತ್ತು ಬಿಳಿಯ ಜಾಕೆಟ್ ಧರಿಸಿದ್ದರು. ದೇವಸ್ಥಾನದಲ್ಲಿ ಓಡಾಡಿಗಿ ದೇವಿಯ ದರ್ಶನ ಪಡೆದು ಕಲ್ಲಿನ ಮೇಲೆ ಕುಳಿತು ಕೆಲ ಕಾಲ ವಿಶ್ರಾಂತಿ ಪಡೆದಿದ್ದಾರೆ. ಮುನ್ನೆಚ್ಚರಿಕೆ ನಡುವೆಯು ಹಲವು ಮಂದಿ ನಟನ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಇನ್ನು, ದೇವಸ್ಥಾನಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಜೊತೆಗೆ ಬಂದಿದ್ದ ಪ್ರಭಾಸ್ ಅವರಿಗೆ ಕಟೀಲು ಕ್ಷೇತ್ರದ ವತಿಯಿಂದ ದುರ್ಗೆಯ ಫೋಟೊ ನೀಡಿ ಗೌರವ ಸಲ್ಲಿಸಲಾಗಿದೆ. ನಟನಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಜೊತೆಗೆ ಅವರಿಗೆ ದೇವಿಯ ವಿಗ್ರಹವನ್ನು ಪ್ರಸಾದದ ರೂಪದಲ್ಲಿ ನೀಡಲಾಗಿದೆ.
ಕಲ್ಕಿ ಬಿಡುಗಡೆ ದಿನ ಫಿಕ್ಸ್
ಇನ್ನು, ಸಲಾರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತಿರುವ ಬೆನ್ನಲ್ಲೇ ಪ್ರಭಾಸ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ 'ಕಲ್ಕಿ 2898 ಎಡಿ' ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. ಈ ಹಿಂದೆ ಘೋಷಣೆ ಮಾಡಿದ್ದ ದಿನದ ಬದಲಿಗೆ ಮತ್ತೆ ನಾಲ್ಕು ತಿಂಗಳು ಮುಂದಕ್ಕೆ ಹಾಕಲಾಗಿದೆ.
ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ವೈಜ್ಞಾನಿಕ ಸಿನಿಮಾ ಕಲ್ಕಿ ಮೇ 9, 2024 ರಂದು ಬಿಡುಗೆಯಾಗಲಿದೆ. ಪ್ರೊಡಕ್ಷನ್ ಬ್ಯಾನರ್ ವೈಜಯಂತಿ ಮೂವೀಸ್ 'ಕಲ್ಕಿ 2898 ಎಡಿ' ಸಿನಿಮಾ ನಿರ್ಮಿಸುತ್ತಿದೆ. ತಮ್ಮ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಹೊಸ ರಿಲೀಸ್ ಡೇಟ್ ಘೋಷಿಸಿದೆ. ಚಿತ್ರದಲ್ಲಿ, ನಟ ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಮತ್ತು ದಿಶಾ ಪಠಾಣಿ ಕೂಡ ಇರಲಿದ್ದಾರೆ.


Click it and Unblock the Notifications











