Salaar Updates: ಹೊಂಬಾಳೆ ಫಿಲ್ಮ್ಸ್ ಕನ್ನಡ ಪ್ರೇಮಕ್ಕೆ ಸವಾಲು ಹಾಕಿದ ಸಿನಿರಸಿಕರು!
ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ಡಿಸೆಂಬರ್ 22ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡಿದ್ದು ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಲಿದೆ.
ಎರಡು ಭಾಗಗಳಾಗಿ 'ಸಲಾರ್' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಮೊದಲ ಭಾಗ ರಿಲೀಸ್‌ಗೆ ಇದೀಗ ದಿನಗಣನೆ ಶುರುವಾಗಿದೆ. 'KGF' ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡಿದೆ. 'KGF' ಸರಣಿ ಬಳಿಕ ಪ್ರಶಾಂತ್ ನೀಲ್ ಜೊತೆ ಪ್ರಭಾಸ್ ಕೈ ಜೋಡಿಸಿರೋದು ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈಗಾಗಲೇ ಪ್ರಭಾಸ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿದ್ದಾರೆ. ಹಾಗಾಗಿ ಸಿನಿಮಾ ದೊಡ್ಡಮಟ್ಟದಲ್ಲೇ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಸುಳಿವು ಸಿಗುತ್ತಿದೆ.

'ಸಲಾರ್' ಚಿತ್ರದಲ್ಲಿ ಪ್ರಭಾಸ್ ಜೋಡಿಯಾಗಿ ಶ್ರುತಿ ಹಾಸನ್ ಮಿಂಚಿದ್ದಾರೆ. ಇನ್ನುಳಿದಂತೆ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಟಿನ್ನು ಆನಂದ್, ಮಧು ಗುರುಸ್ವಾಮಿ, ಝಾನ್ಸಿ, ಬ್ರಹ್ಮಾಜಿ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಸೆಪ್ಟೆಂಬರ್ 28ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಕಾರಣಾಂತರಗಳಿಂದ 3 ತಿಂಗಳು ತಡವಾಗಿ ಪ್ರೇಕ್ಷಕರ ಮುಂದೆ ಬರಲಿದೆ.
ಟ್ರೈಲರ್ ರಿಲೀಸ್ ಮಾಡೋದಕ್ಕೆ ಹೊಂಬಾಳೆ ಫಿಲ್ಮ್ಸ್ ಸಿದ್ಧತೆ ನಡೆಸಿದೆ. ಅದಕ್ಕೂ ಮುನ್ನ ಚಿತ್ರದ ವಿತರಣೆ ಹಕ್ಕುಗಳ ಮಾಹಿತಿ ಹಂಚಿಕೊಳ್ಳುತ್ತಿದೆ. ಪೃಥ್ವಿರಾಜ್ ಸುಕುಮಾರನ್ ಕೇರಳದಲ್ಲಿ ಸಿನಿಮಾ ವಿತರಣೆ ಮಾಡಲಿದ್ದಾರೆ. ರೆಡ್ ಜೈಂಟ್ ಸಂಸ್ಥೆ ತಮಿಳುನಾಡು ವಿತರಣೆ ಹಕ್ಕು ಕೊಂಡುಕೊಂಡಿದೆ. ಇನ್ನು ಕರ್ನಾಟಕದಲ್ಲಿ ಹೊಂಬಾಳೆ ಸಂಸ್ಥೆಯೇ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ಘೋಷಿಸಿದೆ. ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದೆ.
ಸಲಾರ್ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ ತೆಲುಗಿನಲ್ಲಿ ನಿರ್ಮಾಣವಾಗಿದೆ. ಟಾಲಿವುಡ್ ನಟ ಪ್ರಭಾಸ್ ಹೀರೊ ಆಗಿ ನಟಿಸಿದ್ದಾರೆ. ಹಾಗಾಗಿ ಕರ್ನಾಟಕದಲ್ಲಿ ತೆಲುಗು ವರ್ಷನ್ ದೊಡ್ಡದಾಗಿ ರಿಲೀಸ್ ಆಗುತ್ತಾ? ಎನ್ನುವ ಪ್ರಶ್ನೆ ಎದ್ದಿದೆ. ಸದ್ಯ ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳನ್ನು ಡಬ್ ಮಾಡಿ ರಿಲೀಸ್ ಮಾಡುವ ಅವಕಾಶ ಇದೆ. 'ಸಲಾರ್' ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಲಿದೆ.
ಕನ್ನಡಕ್ಕೆ ಡಬ್ ಆಗಿ 'ಸಲಾರ್' ಬಂದರೂ ಎಷ್ಟು ಶೋಗಳು ಕೊಡುತ್ತಾರೆ? ಎನ್ನುವುದು ಕೆಲವರ ಪ್ರಶ್ನೆ. ಇತ್ತೀಚೆಗೆ ಕೆಲ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಆದರೆ ನೆಪ ಮಾತ್ರಕ್ಕೆ ಡಬ್ ಮಾಡಿ ಒರಿಜಿನಲ್ ವರ್ಷನ್ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವ ಕೆಲಸ ನಡೀತಿದೆ. 'ಸಲಾರ್' ವಿಚಾರದಲ್ಲಿ ಏನಾಗುತ್ತದೆ? ಅನ್ನುವ ಕುತೂಹಲ ಮೂಡಿದೆ.
ಹೇಳಿ ಕೇಳಿ 'ಸಲಾರ್' ಕನ್ನಡಿಗರ ಸಿನಿಮಾ. ಅರ್ಥಾತ್ ಕನ್ನಡ ನಿರ್ಮಾಣ ಸಂಸ್ಥೆ, ಕನ್ನಡ ನಿರ್ದೇಶಕ, ತಂತ್ರಜ್ಞರು ಹಾಗೂ ಕೆಲ ಕಲಾವಿದರು ಕನ್ನಡದವರೇ ಆಗಿದ್ದಾರೆ. ಹಾಗಾಗಿ ಕನ್ನಡಕ್ಕೆ ಚಿತ್ರವನ್ನು ಡಬ್ ಮಾಡಿ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡಿ ಎನ್ನುವ ಆಗ್ರಹ ಹೆಚ್ಚಾಗಿದೆ. ಇತ್ತೀಚೆಗೆ 'RRR', 'ಜೈಲರ್' ಸೇರಿದಂತೆ ಕೆಲ ಸಿನಿಮಾಗಳ ಕನ್ನಡ ಡಬ್ ವರ್ಷನ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ 'ಸಲಾರ್' ಚಿತ್ರವನ್ನು ಕನ್ನಡದಲ್ಲಿ ದೊಡ್ಡದಾಗಿ ರಿಲೀಸ್ ಮಾಡಿ ಎನ್ನುವ ಬೇಡಿಕೆ ಹೆಚ್ಚಾಗುತ್ತಿದೆ. ಅಂದಹಾಗೆ ಕನ್ನಡ ವರ್ಷನ್‌ನಲ್ಲಿ ಪ್ರಭಾಸ್ ಪಾತ್ರಕ್ಕೆ ವಶಿಷ್ಠ ಸಿಂಹ ಡಬ್ ಮಾಡಿದ್ದಾರೆ.
"ಕರುನಾಡಿನಾದ್ಯಂತ ವಿತರಣೆಯ ಹೊಣೆ ನಮ್ಮದು. ಅತ್ಯಮೋಘ ಅನುಭನ ನೀಡುವ ಭರವಸೆಯೊಂದಿಗೆ ನಿಮ್ಮ ಮುಂದೆ ಬರುತ್ತಿದೆ 'ಸಲಾರ್" ಎಂದು ಪೋಸ್ಟ್ ಮಾಡಿದೆ. ಇದನ್ನು ನೋಡಿದ ಕೆಲವರು ಕನ್ನಡ ವರ್ಷನ್‌ಗೆ ಹೆಚ್ಚು ಶೋ ಕೊಡಿ. 'ಸಲಾರ್' ರಿಲೀಸ್ ದಿನ ನಿಮ್ಮ ಕನ್ನಡ ಪ್ರೇಮ ಗೊತ್ತಾಗುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತಲುಪಿಸಲು ಇದು ಒಳ್ಳೆ ಅವಕಾಶ. ಪರಭಾಷಾ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬರಬೇಕು. ಕನ್ನಡದಲ್ಲೇ ನಾವು ಪರಭಾಷೆ ಸಿನಿಮಾಗಳನ್ನು ನೋಡುವಂತಾಗಬೇಕು ಎನ್ನುತ್ತಿದ್ದಾರೆ.


Click it and Unblock the Notifications











