ಬಿಗ್ ಸ್ಕ್ರೀನ್‌ಮೇಲೆ ಟಿಣಿಂಗ ಮಿಣಿಂಗ ಹಾಡು: ಮತ್ತೆ 100 ಚಿತ್ರ ಮಂದಿರಗಳಲ್ಲಿ ಸಲಗ ಅಬ್ಬರ!
ನಟ ದುನಿಯಾ ವಿಜಯ್ ಅಭಿನಯದ ಸಲಗ ಅದ್ದೂರಿ ಯಶಸ್ಸು ಕಂಡು ಸದ್ಯ ಗೆಲುವಿನ ನಗೆ ಬೀರಿದೆ. ಸಲಗ ಸಿನಿಮಾ ಸಾಕಷ್ಟು ನಿರೀಕ್ಷೆಯೊಂದಿಗೆ ಬಂದು ನಿರೀಕ್ಷೆಯ ಮಟ್ಟ ತಲುಪಿ ಯಶಸ್ಸು ಸಾಧಿಸಿದ ಸಿನಿಮಾ. ನಟ ದುನಿಯಾ ವಿಜಯ್ ನಿರ್ದೇಶನಕ್ಕೆ ಇಳಿದು ಅಂದುಕೊಂಡಂತೆಯೇ ಸಿನಿಮಾ ನಿರ್ದೇಶನ ಮಾಡಿ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈಗ ಚಿತ್ರದ ಹಾಡಿಗೆ ಬೇಡಿಕೆ ಹೆಚ್ಚಾಗಿದೆ. ಚಿತ್ರದ ಪ್ರೊಮೋಷನ್ ಗಾಗಿ ಚಿತ್ರ ತಂಡ ಟಿಣಿಂಗ ಮಿಣಿಂಗ ಎನ್ನುವ ಸಾಂಗ್ ಮಾಡಿದೆ. ಈ ಹಾಡು ಈಗ ಚಿತ್ರದ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ.
ಟಿಣಿಂಗ ಮಿಣಿಂಗ ಹಾಡು ಕೇವಲ ಸಿನಿಮಾದ ಪ್ರಮೋಷನ್‌ಗಾಗಿ ಮಾಡಿದ ಹಾಡು. ಚಿತ್ರ ರಿಲೀಸ್ ಆಗುವುದಕ್ಕೂ ಮೊದಲೇ ಈ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದೆಷ್ಟೋ ಜನ ಈ ಹಾಡನ್ನು ಇಷ್ಟಪಟ್ಟೆ ಸಿನಿಮಾ ನೋಡಲು ಹೋಗಿದ್ದರು. ಆದರೆ ಈ ಹಾಡು ಸಂಪೂರ್ಣವಾಗಿ ಚಿತ್ರದಲ್ಲಿ ಅಳವಡಿಸಿಲ್ಲ ಚಿತ್ರ ತಂಡ. ಆದರೆ ಈಗ ಈ ಹಾಡನ್ನು ಬಿಗ್ ಸ್ಕ್ರೀನ್ ಮೇಲೆ ನೋಡಬೇಕು ಎನ್ನುವ ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಚಿತ್ರತಂಡ ಮತ್ತೆ ಈ ಹಾಡನ್ನು ಚಿತ್ರದಲ್ಲಿ ಸೇರಿಸಿ ರಿಲೀಸ್ ಮಾಡಲು ಮುಂದಾಗಿದೆ. ಈ ಹಾಡನ್ನು ಸೇರಿಸಿದ ಬಳಿಕ 100 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಿದೆ.
ಸಲಗ ಚಿತ್ರ ದಸರಾ ಹಬ್ಬದ ಪ್ರಯುಕ್ತ ಅಕ್ಟೋಬರ್ 14ರಂದು ತೆರೆಗೆ ಬಂತು. ವಿಜಯದಶಮಿಯಂದು ತೆರೆಗೆ ಬಂದ ಸಲಗ ಚಿತ್ರ ವಿಜಯವನ್ನೇ ಸಾಧಿಸಿದೆ. ಈಗ ಟಿಣಿಂಗ ಮಿಣಿಂಗ ಹಾಡಿನ ಮೂಲಕ ಮತ್ತೊಂದು ಹೆಜ್ಜೆ ಮುಂದೆ ಇಡುತ್ತಿದೆ. ಸಲಗ ಚಿತ್ರ ರಿಲೀಸ್ ಆಗಿ ನವೆಂಬರ್ 14ಕ್ಕೆ ಒಂದು ತಿಂಗಳು ಕಳೆಯುತ್ತದೆ. ಸದ್ಯ 40 ರಿಂದ 45 ಚಿತ್ರ ಮಂದಿರಗಳಲ್ಲಿ ಸಲಗ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಇನ್ನೂ ಇದೇ ನವೆಂಬರ್ 19ರಿಂದ ಚಿತ್ರ ಮಂದಿರಗಳ ಸಂಖ್ಯೆ ದುಪ್ಪಟ್ಟು ಆಗಲಿದೆ.

ಚಿತ್ರಕ್ಕೆ ಟಿಣಿಂಗ ಮಿಣಿಂಗ ಹಾಡು ಸೇರಿದ ಬಳಿಕ ಇನ್ನೂ ನೂರಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಸಲಗ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ವರದಾನ ಆಗಿದೆ ಎಂದೇ ಹೇಳ ಬಹುದು. ವಿಶೇಷ ಅಂದರೆ ಈ ಹಾಡಿನಲ್ಲಿ ಸಿದ್ದಿ ಮಹಿಳೆಯರು ಅಭಿನಯಿಸಿದ್ದಾರೆ. ಮಾತ್ರವಲ್ಲದೆ ಈ ಹಾಡಿಗೆ ಅವರೇ ಸಾಹಿತ್ಯ ಬರೆದು ಹಾಡಿದ್ದಾರೆ. ಈಗಾಗಲೇ ಸಿದ್ಧಿ ಜನಾಂಗದ ಗಿರಿಜಾ ಸಿದ್ದಿ, ಗೀತಾ ಸಿದ್ದಿ ಸೇರಿದಂತೆ ಹಲವರು ಸಲಗ ಸಿನಿಮಾ, ದುನಿಯಾ ವಿಜಯ್ ಮತ್ತು ಸಲಗ ಚಿತ್ರದ ಹಾಡಿನ ಬಗ್ಗೆ ಮಾತನಾಡಿದ್ದಾರೆ.
ಸಲಗ ಸಿನಿಮಾ ನಟ ದುನಿಯಾ ವಿಜಯ್ ಕನಸು. ತಾವೇ ಎಣೆದ ಕಥೆಯನ್ನು ಹಾಗೆಯೇ ತೆರೆಮೇಲೆ ತಂದಿದ್ದಾರೆ. ನಿರ್ದೇಶನ ಮಾಡಬೇಕೆಂದು ವಿಜಯ್ ಪಣತೊಟ್ಟು ಈ ಸಲಗನೊಂದಿಗೆ ಬಂದಿದ್ದಾರೆ. ಸಲಗ ಚಿತ್ರದ ಮೂಲಕ ವಿಜಯ್ ಒಬ್ಬ ಉತ್ತಮ ನಿರ್ದೇಶಕ ಅಂತಲೂ ಎನಿಸಿಕೊಂಡಿದ್ದಾರೆ. ದುನಿಯಾ ವಿಜಯ್ ಕನಸಿಗೆ ಬೆನ್ನೆಲುಬಾಗಿ ನಿಂತು ಸಲಗ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್. ಈಗ ತಿಂಗಳ ಬಳಿಕ ಮತ್ತೆ ನೂರು ಸಿನಿಮಾ ಮಂದಿರಗಳಲ್ಲಿ ಸಲಗ ಅಬ್ಬರಿಸಲಿದ್ದಾನೆ. ಈ ಮೂಲಕ ಮತ್ತೊಂದು ದಾಖಲೆ ಮಾಡಲು ಸಲಗ ಚಿತ್ರ ತಂಡ ಮುಂದಾಗಿದೆ. ಇದೇ ನವೆಂಬರ್ 19ರಿಂದ ಸಲಗ ಮತ್ತೆ ನೂರಕ್ಕೂ ಹೆಚ್ಚು ಚಿತ್ರ ಮಂದಿರಗಳಿಗೆ ಎಂಟ್ರಿ ಕೊಡುತ್ತಿದೆ.


Click it and Unblock the Notifications











