ಆರೋಗ್ಯ ಸಮಸ್ಯೆಯೊಂದಿಗೆ ಹೋರಾಡುತ್ತಿರುವ ನಟಿ ಸಮಂತಾ ಮಯೋಸೈಟಿಸ್ ಬ್ರಾಂಡ್ ಅಂಬಾಸಿಡರ್
ನಟಿ ಸಮಂತಾ ರುತ್ ಪ್ರಭು ಅವರು ಮಯೋಸೈಟಿಸ್‌ನ ಆಟೋಇಮ್ಯೂನ್ ಸ್ಥಿತಿಯಿಂದ ಬಳಲುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಕಳೆದ ವರ್ಷ ನವೆಂಬರ್‌ನಲ್ಲಿ, ನಟಿ ಸಮಂತಾ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದರು. ಅಂದಿನಿಂದ ನಟಿ ತಮ್ಮ ಆರೋಗ್ಯದ ಬಗ್ಗೆ ಆಗ್ಗಾಗೆ ಮಾಹಿತಿ ಹಂಚಿಕೊಳ್ಳುತ್ತಾರೆ ಮತ್ತು ಜಾಗೃತಿ ಮೂಡಿಸುತ್ತಿದ್ದಾರೆ.
ಸದ್ಯ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು ಮಯೋಸೈಟಿಸ್ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಸಮಂತಾ ಅವರನ್ನು ಮಯೋಸೈಟಿಸ್ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಈ ಸುದ್ದಿಯನ್ನು ಮಯೋಸೈಟಿಸ್ ಇಂಡಿಯಾದ ಅಧಿಕೃತ ಪುಟ ಸಮಂತಾ ಅವರ ಚಿತ್ರದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

"ಬದಲಾವಣೆಯ ಹೊಸ ಮುಖವನ್ನು ಪರಿಚಯಿಸುತ್ತಿದ್ದೇವೆ. ಸಮಂತಾ ರುತ್ ಪ್ರಭು ಅವರನ್ನು ಮಯೋಸೈಟಿಸ್ ಇಂಡಿಯಾದ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ನಾವು ಒಟ್ಟಾಗಿ ಈ ಬಗ್ಗೆ ಅರಿವು ಮೂಡಿಸಲು, ಭರವಸೆಯನ್ನು ಹುಟ್ಟುಹಾಕಲು ಮತ್ತು ಮಯೋಸೈಟಿಸ್ ವಿರುದ್ಧ ಹೋರಾಡುವವರ ಜೀವನದಲ್ಲಿ ಬದಲಾವಣೆಯನ್ನು ತರಲು ಮುಂದಾಗುತ್ತಿದ್ದೇವೆ. ಸಹಾನುಭೂತಿ ಮತ್ತು ಸಬಲೀಕರಣದ ಈ ಪ್ರಯಾಣದಲ್ಲಿ ನಮ್ಮೊಂದಿಗೆ ಜೊತೆಯಾಗಿ. ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ಡಾ ರೋಹಿತ್ ಅಗರ್ವಾಲ್ ಅವರ ಅಪಾರ ಬೆಂಬಲಕ್ಕಾಗಿ ಧನ್ಯವಾದಗಳು" ಎಂದು ಹೇಳಿದೆ.
ಮಯೋಸೈಟಿಸ್ ಎಂದರೇನು?
ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೇ ಮಯೋಸೈಟಿಸ್ ಎಂದರೆ ಸ್ವಯಂ ನಿರೋಧಕ ಸ್ಥಿತಿಯಾಗಿದ್ದು, ಈ ಕಾಯಿಲೆಯಲ್ಲಿ ಉರಿಯೂತವು ದೇಹದೊಳಗೆ ಬರಲು ಪ್ರಾರಂಭಿಸುತ್ತದೆ. ಇದರಲ್ಲಿ ರೋಗಿಯ ಸ್ನಾಯುಗಳು ತನ್ನದೇ ಆದ ಪ್ರತಿರಕ್ಷಣಾ ವ್ಯವಸ್ಥೆಯಿಂದ ದಾಳಿಗೆ ಒಳಗಾಗುತ್ತವೆ. ಊತವು ಸಾಮಾನ್ಯವಾಗಿ ಭುಜಗಳು, ತೋಳುಗಳು, ಕಾಲುಗಳು, ತೊಡೆಗಳು, ತೊಡೆಸಂದು ಮತ್ತು ಸೊಂಟದ ಸ್ನಾಯುಗಳಲ್ಲಿ ಕಂಡುಬರುತ್ತದೆ.

ಇನ್ನು, ವಿದೇಶ ಪ್ರವಾಸದಲ್ಲಿರುವ ನಟಿ ಸಮಂತಾ ನ್ಯೂಯಾರ್ಕ್‌ನಲ್ಲಿ ನಡೆದ 41ನೇ ಇಂಡಿಯನ್ ಡೇ ಪರೇಡ್‌ನಲ್ಲಿ ಭಾಗವಹಿಸಿದ್ದರು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು ತಮ್ಮ ಅಭಿಮಾನಿಗಳಿಗಾಗಿ ಫೋಟೋಗಳನ್ನು ಶೇರ್ ಮಾಡುತ್ತಲೆ ಇದ್ದಾರೆ.
ಸಮಂತಾ ಇತ್ತೀಚೆಗೆ Instagramನಲ್ಲಿ ಹಂಚಿಕೊಂಡಿರುವ ಚಿತ್ರಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ. ಕಪ್ಪು ಸೀರೆಯುಟ್ಟು ನ್ಯೂಯಾರ್ಕ್‌ನಲ್ಲಿ ಸುತ್ತಿದ್ದಾರೆ. ಬಿಂದಾಸ್ ಆಗಿ ನ್ಯೂಯಾರ್ಕ್ ರಸ್ತೆಗಳಲ್ಲಿ ಫೋಟೋಗೆ ಫೋಸ್ ಕೊಟ್ಟಿರುವ ಅವರು ಚಿತ್ರಗಳಿಗೆ ಬ್ಲಾಕ್ ಹಾರ್ಟ್ ಕೊಟ್ಟು ಶೇರ್ ಮಾಡಿದ್ದರು.
ನಟನೆಯಿಂದ ಬ್ರೇಕ್ ತೆಗೆದುಕೊಂಡ ಸಮಂತಾ
ಸಮಂತಾ ರುತ್ ಪ್ರಭು ತಮ್ಮ ಆರೋಗ್ಯದ ಕಡೆ ಗಮನ ಹರಿಸಲು ಸುಮಾರು ಆರು ತಿಂಗಳ ಕಾಲ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದಾರೆ. ನಟಿ ಶೀಘ್ರದಲ್ಲೇ ಮೈಯೋಸಿಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಮೈಯೋಸಿಟಿಸ್ ಚಿಕಿತ್ಸೆಗಾಗಿ ಅವರು ತಮ್ಮ ತಾಯಿಯೊಂದಿಗೆ ಅಮೆರಿಕಾದಲ್ಲಿ ಎರಡು ತಿಂಗಳು ಇರುತ್ತಾರೆ. ಆದರೆ, ಈ ಸುದ್ದಿಯನ್ನು ನಟಿ ಅಥವಾ ಅವರ ತಂಡ ಅಧಿಕೃತವಾಗಿ ಎಲ್ಲೂ ಹೇಳಿಲ್ಲ.


Click it and Unblock the Notifications











