ಹಂಸಲೇಖ ವಿರುದ್ಧ ಆಕ್ರೋಶ ಹೊರಹಾಕಿದ ಸಮೀರ್ ಆಚಾರ್ಯ ಪತ್ನಿ ಶ್ರಾವಣಿ
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಜಾತ್ಯತೀತತೆ ಮತ್ತು ಅಸ್ಪೃಶ್ಯತೆ ಬಗ್ಗೆ ಮಾತನಾಡಿದ್ದರು. ಹಾಗೇ ದಲಿತರ ವಿಚಾರವಾಗಿಯೂ ಹಂಸಲೇಖ ಮಾತನಾಡಿದ್ದಾರೆ. ಹೀಗೆ ಮಾತನಾಡುವ ಭರದಲ್ಲಿ ಪೇಜಾವರ ಶ್ರೀಗಳ ಬಗ್ಗೆಯೂ ಕೆಲವು ಪ್ರಶ್ನೆಗಳನ್ನು ಮಾಡಿದ್ದಾರೆ. ಪ್ರಶ್ನೆ ಮಾಡುವ ಸಂದರ್ಭದಲ್ಲಿ ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗುತ್ತಾರೆ. ಆದರೆ, ಅವರ ಮನೆಯಲ್ಲಿ ಮಾಡುವ ಕೋಳಿಸಾರು, ಕುರಿ ರಕ್ತದ ಫ್ರೈ, ಲಿವರ್ ತಿನ್ನುತ್ತಾರಾ ಎಂದು ಪ್ರಶ್ನಿಸಿದ್ದರು. ಇದು ಸಾಕಷ್ಟು ವಿರೋಧಕ್ಕೂ ಕಾರಣವಾಗಿದೆ. ತದನಂತರದಲ್ಲಿ ಹಂಸಲೇಖ ಅವರು ಸಹ ಬಹಿರಂಗವಾಗಿ ಕ್ಷಮೆ ಕೇಳಿದ್ದರು.
ಹಂಸಲೇಖ ಅವರ ಈ ಹೇಳಿಕೆ ವಿರುದ್ಧ ಇದೀಗ 'ಬಿಗ್ ಬಾಸ್' ಮತ್ತು 'ರಾಜರಾಣಿ' ರಿಯಾಲಿಟಿ ಶೋ ಖ್ಯಾತಿಯ ಸಮೀರ್ ಆಚಾರ್ಯ ಪತ್ನಿ ಶ್ರಾವಣಿ ಆಕ್ರೋಶ ಹೊರಹಾಕಿದ್ದಾರೆ. ಇನ್ನೊಮ್ಮೆ ಹೀಗೆ ಮಾತನಾಡಿದರೆ ಸರಿ ಇರೋದಿಲ್ಲ ಎಂದು ಕಿಡಿಕಾರಿದ್ದಾರೆ. ಪತ್ನಿಯ ಈ ವೀಡಿಯೋವನ್ನು ಸಮೀರ್ ಆಚಾರ್ಯ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಂಸಲೇಖ ಅವರು ಶ್ರೀಗಳ ಬೃಂದಾವನದ ಬಳಿ ಹೋಗಿ ಕ್ಷಮೆ ಕೇಳಬೇಕು ಎಂದು ವೀಡಿಯೊದಲ್ಲಿ ಶ್ರಾವಣಿ ಆಗ್ರಹಿಸಿದ್ದಾರೆ.
ಹಾಗೇ ನೀವು ಹುಟ್ಟಿದ್ದು 1951ರಲ್ಲಿ ಪೇಜಾವರ ಶ್ರೀಗಳು ಹುಟ್ಟಿದ್ದು1931ರಲ್ಲಿ. ನಿಮಗೆ 18 ವರ್ಷ ತುಂಬುವ ಮೊದಲೇ ಅವರು ದಲಿತರಿದ್ದ ಜಾಗಕ್ಕೆ ಹೋಗಿ ದೀಕ್ಷೆ ಕೊಡಿಸಲು ಶುರು ಮಾಡಿದ್ದರು. ಹಾಗೇ ಮುಸ್ಲಿಮರಿಗೂ ಕೃಷ್ಣನ ಪ್ರಸಾದ ಕೊಡುತ್ತಿದ್ದರು. ಅಂತಹ ಒಬ್ಬ ಮಹಾನ್ ವ್ಯಕ್ತಿಯ ಬಗ್ಗೆ ನೀವು ಹೀಗೆ ಮಾತನಾಡಿರೋದು ಎಷ್ಟು ಸರಿ? ನಿಮ್ಮ ಘನತೆಗೆ ಇದು ಶೋಭೆಯಲ್ಲ ಎಂದಿದ್ದಾರೆ.

ನಿಮ್ಮ ಸ್ವಾರ್ಥಕ್ಕಾಗಿ ಹಾಡುಗಳನ್ನು ಬರೆದು ನೀವು ಯಶಸ್ಸು ಪಡೆದುಕೊಂಡಿದ್ದೀರ ಎಂದು ಆಕ್ರೋಶ ಹೊರಹಾಕಿರುವ ಶ್ರಾವಣಿ "ಪೇಜಾವರ ಶ್ರೀಗಳು ಯಾವತ್ತು ಹೀಗೆ ಮಾಡಿಲ್ಲಾ. ಅವರು ದೇಶದ ಜನರ ಒಳಿತಿಗಾಗಿ ಬದುಕಿದ್ದವರು. ಸರಿಗಮಪ ವೇದಿಕೆಯಲ್ಲಿ ನಿಮ್ಮನ್ನು ಮಹಾಗುರುಗಳು ಅಂತ ಕರೀತಾರೆ. ಆದರೆ ನೀವು ಹೇಳಿರುವ ಮಾತುಗಳು ಗುರು ಎನ್ನುವ ಪದಕ್ಕೆ ಗೌರವ ತಂದುಕೊಡಲ್ಲ. ಮೂರು ವರ್ಷದ ಹಿಂದೆ ನಿಮ್ಮ ಜೊತೆ ನಿಂತು ಫೊಟೋ ತೆಗೆಸಿಕೊಂಡಿದ್ವಿ. ಅದನ್ನು ಈಗ ಡಿಲೀಟ್ ಮಾಡ್ತಾ ಇದ್ದೇವೆ" ಎಂದಿದ್ದಾರೆ.

ಆಕ್ರೋಶ ಮುಂದುವರೆಸಿ ಮಾತನಾಡಿದ ಶ್ರಾವಣಿ ನಾವು ಮಾತ್ರ ಅಲ್ಲ ನಿಮ್ಮ ಈ ಹೇಳಿಕೆಗಳಿಂದ ಅದೆಷ್ಟೋ ಅಭಿಮಾನಿಗಳು ನಿಮ್ಮನ್ನು ತಿರಸ್ಕರಿಸುತ್ತಿದ್ದಾರೆ. ಹಾಗೆ ಬೇಸರ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಕೂಡ ನಿಮ್ಮ ಫೋಟೊವನ್ನು ಈಗಾಗಲೇ ಡಿಲೀಟ್ ಮಾಡಿರುತ್ತಾರೆ. ನೀವು ಈಗ ಇಂಗ್ಲೆಂಡ್ ಅಥವಾ ಬೇರೆ ದೇಶದಲ್ಲಿ ಇಲ್ಲ. ಬೆಂಗಳೂರಿನಲ್ಲಿ ಇರೋದರಿಂದ ಮೊದಲು ಹೋಗಿ ಶ್ರೀಗಳ ಬೃಂದಾವನದ ಮುಂದೆ ಕ್ಷಮೆ ಕೇಳಿ. ಇದು ನೀವು ಮಾಡಿದ ತಪ್ಪನ್ನು ಮುಚ್ಚುವುದಿಲ್ಲ" ಎಂದು ಶ್ರಾವಣಿ ವೀಡಿಯೋದಲ್ಲಿ ತಿಳಿಸಿದ್ದಾರೆ.
ಪೇಜಾವರ ಶ್ರೀಗಳ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಶ್ರಾವಣಿ ವೀಡಿಯೋ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಶ್ರಾವಣಿ ವೀಡಿಯೋಗೆ ಸಾಕಷ್ಟು ಮಂದಿ ಕಮೆಂಟ್ ಕೂಡ ಮಾಡುತ್ತಿದ್ದಾರೆ. ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದೀರ ಎಂದು ಹೇಳುತ್ತಿದ್ದಾರೆ.

ಇನ್ನು ಹಂಸಲೇಖ ಅವರು ಹೇಳಿಕೆ ನೀಡಿದ ಮರುದಿನವೇ ಒಂದು ವೀಡಿಯೋ ಮೂಲಕ ಎಲ್ಲರಿಗೂ ಕ್ಷಮೆ ಯಾಚಿಸಿದ್ದಾರೆ. ಆದರೆ ಪೊಲೀಸರ ಸಂಪರ್ಕಕ್ಕೆ ಇನ್ನು ಹಂಸಲೇಖ ಅವರು ಸಿಕ್ಕಿಲ್ಲ. ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಎರಡು ಬಾರಿ ನೋಟಿಸ್ ನೀಡಿದ್ದರು ಕೂಡ ವಿಚಾರಣೆಗೆ ಹಂಸಲೇಖ ಅವರು ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಪೋಲಿಸರು ಹಂಸಲೇಖ ಪತ್ನಿಗೆ ಈ ಬಗ್ಗೆ ಮಾಹಿತಿ ನೀಡಿ ಮನೆ ಗೋಡೆಗೆ ನೋಟಿಸ್ ಅಂಟಿಸಿ ಬಂದಿದ್ದಾರೆ. ಈ ನೋಟಿಸ್ ಪ್ರಕಾರ ನವೆಂಬರ್ 21ರಂದು ಹಂಸಲೇಖ ಅವರು ವಿಚಾರಣೆಗೆ ಹಾಜರಾಗಬೇಕಿದೆ.


Click it and Unblock the Notifications











