1 ಬಿಎಚ್‌ಕೆ ಮನೆಯಲ್ಲಿ ಅಪ್ಪ,ಅಮ್ಮ,ಅಣ್ಣನ ಜೊತೆ ವಾಸ, ಸಂಯುಕ್ತಾ ಹೆಗ್ಡೆ ಬದುಕು ಬದಲಿಸಿದ್ಹೇಗೆ ಕಿರಿಕ್ ಪಾರ್ಟಿ..?
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಚಂದನವನಕ್ಕೆ ಬಂದವರು ಸಂಯುಕ್ತಾ ಹೆಗಡೆ. ಆದರೆ.. ಆ ನಂತರ ಇವರು ಸದ್ದು ಮಾಡಿದ್ದು ಸುದ್ದಿಯಾಗಿದ್ದು ಥರ ಥರದ ಕಿರಿಕ್ಕುಗಳಿಂದಲೇ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮೀರ್ ಆಚಾರ್ಯ ಕಪಾಳಕ್ಕೆ ಬಾರಿಸಿದ ಸಂಯುಕ್ತಾ ಕೆಲ ಕಾಲದವರೆಗೆ ಟ್ರೋಲ್ ಪೇಜ್‌ಗಳಿಗೆ ತಾಂಬೂಲವೂ ಆಗಿದ್ದರು. ಉಡುಗೆ ತೊಡುಗೆಯ ವಿಚಾರಕ್ಕೆ ಕೆಲವರ ಕೆಂಗಣ್ಣಿಗೆ ಕೂಡ ಗುರಿಯಾಗಿದ್ದರು.
ಇನ್ನು, ಮುಂದಿನ ವರ್ಷ ಬಂದರೆ ಚಿತ್ರರಂಗಕ್ಕೆ ಸಂಯಕ್ತಾ ಹೆಗ್ಡೆ ಬಂದು ಒಂದು ದಶಕ ಪೂರ್ಣವಾಗಲಿದೆ. ಈ 09 ವರ್ಷದಲ್ಲಿ ಕನ್ನಡದ ಆರು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸಂಯುಕ್ತಾ ಇದರ ನಡುವೆ ತೆಲುಗು ಮತ್ತು ತಮಿಳು ಚಿತ್ರರಂಗವನ್ನು ಕೂಡ ಒಂದು ಸುತ್ತು ಸುತ್ತಿಕೊಂಡು ಬಂದಿದ್ದಾರೆ. ಆದರೆ, ಕಿರಿಕ್ ಪಾರ್ಟಿಯಲ್ಲಿ ಇವರಿಗೆ ಸಿಕ್ಕ ಹೆಸರು ಬೇರೆ ಯಾವ ಚಿತ್ರದಲ್ಲಿ ಕೂಡ ಸಿಗಲಿಲ್ಲ.

ಇಂಥಾ ಸಂಯುಕ್ತಾ ಹೆಗ್ಡೆ ತಾವು ಚಿತ್ರರಂಗಕ್ಕೆ ಬರಲು ಪ್ರಮುಖ ಕಾರಣ ಹಣ ಮಾತ್ರ ಎಂದು ಹೇಳಿದ್ದಾರೆ. ಹೌದು, ತಮ್ಮ ಬದುಕಿನ ಪ್ರಮುಖವಾದ ಪುಟಗಳನ್ನು ರ್ಯಾಪಿಡ್ ರಶ್ಮಿ ಅವರ ಎದುರು ಕುಳಿತು ತಿರುವಿ ಹಾಕಿರುವ ಸಂಯಕ್ತಾ ಹೆಗ್ಡೆ ಕಿರಿಕ್ ಪಾರ್ಟಿ ಸಿಗುವ ಮುನ್ನ ತಮ್ಮ ಬದುಕು ಹೇಗಿತ್ತು ಆ ನಂತರ ಹೇಗೆ ಬದಲಾಯ್ತು ಎಂದು ಹೇಳಿದ್ಧಾರೆ.
ಈ ಕುರಿತು ಮಾತನಾಡಿರುವ ಸಂಯುಕ್ತಾ ನಾನು ಆಗರ್ಭ ಶ್ರೀಮಂತರ ಮನೆ ಮಗಳಲ್ಲ ಬದಲಿಗೆ ನಮ್ಮದು ಬಡ ಕುಟುಂಬ ಎಂದು ಹೇಳಿದ್ದಾರೆ. ಡ್ಯಾನ್ಸ್ ಮೇಲಿನ ವ್ಯಾಮೋಹದಿಂದ ನಾನು ನನ್ನ ಕಾಲೇಜ್ ದಿನಗಳಲ್ಲಿ ನೃತ್ಯ ತರಬೇತುದಾರಳಾಗಿ ಕೆಲಸ ಮಾಡಿದ್ದೇನೆ ಎಂದಿರುವ ಸಂಯುಕ್ತಾ ಮಕ್ಕಳಿಗೆ ಡ್ಯಾನ್ಸ್ ಹೇಳಿ ಕೊಡುವ ಮೂಲಕ ನಾನು ತಿಂಗಳಿಗೆ 1500 ರೂಪಾಯಿಯನ್ನು ಗಳಿಸುತ್ತಿದ್ದೆ ಎಂದು ಹೇಳಿದ್ದಾರೆ.
ಆಗ ಒಂದು ಬೆಡ್ ರೂಮ್ ಇರುವ ಮನೆಯಲ್ಲಿ ನಾವು ನಾಲ್ಕು ಜನ { ಅಪ್ಪ, ಅಮ್ಮ, ಅಣ್ಣ, ಮತ್ತು ನಾನು } ವಾಸ ಮಾಡುತ್ತಿದ್ದೇವು, ಒಂದೆ ರೂಮ್‌ನಲ್ಲಿ ಮಲಗುತ್ತಿದ್ದೇವು ಎಂದು ಹೇಳಿರುವ ಸಂಯುಕ್ತಾ ಇದೇ ಸಮಯದಲ್ಲಿ ನನಗೆ ಕಿರಿಕ್ ಪಾರ್ಟಿಯ ಅವಕಾಶ ಸಿಕ್ತು ಆಗ ಅವರು 25,000 ರೂಪಾಯಿ ಕೊಡಲು ಮುಂದಾಗಿದ್ದನ್ನು ನೋಡಿಯೇ ನಾನು ಆ ಚಿತ್ರವನ್ನು ಒಪ್ಪಿಕೊಂಡಿದ್ದು ಎಂದು ಹೇಳಿದ್ದಾರೆ.
ನನಗೆ ಆಕ್ಟಿಂಗ್ ಅಂದರೆ ಏನು ಎನ್ನುವುದೇ ಗೊತ್ತಿರಲಿಲ್ಲ, ನಾನು ಯಾವತ್ತೂ ಆಕ್ಟಿಂಗ್ ಕೂಡ ಮಾಡಿದವಳಲ್ಲ, ಮೊದಲಿಂದ ನಾನು ಡ್ಯಾನ್ಸ್ ಮಾಡುತ್ತಾ ಬೆಳೆದವಳೇ ಹೊರತು ಆಕ್ಟಿಂಗ್ ನನ್ನ ಶಾಲೆ ಮತ್ತು ಕಾಲೇಜ್‌ನಲ್ಲಿ ಕೂಡ ಮಾಡಿಲ್ಲ, ಆದರೂ ಕೂಡ ನಾನು ಕಿರಿಕ್ ಪಾರ್ಟಿಯನ್ನು ಒಪ್ಪಿಕೊಂಡೆ ಅದಕ್ಕೆ ಕಾರಣ ಕೇವಲ ದುಡ್ಡು ಮಾತ್ರ ಎಂದು ಪುನರುಚ್ಚಿಸಿದ್ದಾರೆ ಸಂಯುಕ್ತಾ.
ಇನ್ನು ಕಿರಿಕ್ ಪಾರ್ಟಿ ಒಪ್ಪಿಕೊಳ್ಳುವ ಮೊದಲು ನಾನು ಬೆಂಗಳೂರಿನಾಚೆ ಯಾವತ್ತೂ ಹೋಗಿರಲಿಲ್ಲ ಎಂದಿರುವ ಸಂಯುಕ್ತಾ ಒಮ್ಮೆ ಮಾತ್ರ ನನ್ನ 16ನೇ ವಯಸ್ಸಿನಲ್ಲಿ ಮನೆಯಲ್ಲಿ ಹೇಳದೇ ಕೇಳದೇ ಮುಂಬೈಗೆ ಓಡಿ ಹೋಗಿದ್ದೇ, 12ನೇ ಕ್ಲಾಸ್ ಮುಗಿಸು ಆಮೇಲೆ ನೋಡೋಣ ಎಂದು ಮನೆಯಲ್ಲಿ ಹೇಳಿದ್ದರೂ ಕೂಡ ನಾನು ಡ್ಯಾನ್ಸ್ ಹುಚ್ಚಿನಿಂದ ಮುಂಬೈಗೆ ಹೋಗಿ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಆಡಿಷನ್‌ನಲ್ಲಿ ಭಾಗವಹಿಸಿದ್ದೆ ಅದರಲ್ಲಿ ಆಯ್ಕೆ ಕೂಡ ಆಗಿದ್ದೆ ಎಂದು ಹೇಳಿರುವ ಸಂಯುಕ್ತಾ ಆಗ ನನಗೆ ಕೇವಲ 16 ವರ್ಷವಾದ ಕಾರಣ ಕಾಂಟ್ರ್ಯಾಕ್ಟ್‌ಗೆ ಅಪ್ಪ-ಅಮ್ಮ ಸಹಿ ಮಾಡಲೇಬೇಕು ಎಂದು ಹೇಳಿಬಿಟ್ಟರು ಆದರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು ವಾಪಸ್ ಬಾ ಎಂದು ಅಪ್ಪ ಹೇಳಿದರು ಹೀಗಾಗಿ ವಿಧಿ ಇಲ್ಲದೇ ನಾನು ಮರಳಿ ಬಂದೆ ಎಂದು ಹೇಳಿದ್ದಾರೆ.
ಹೀಗೆ ಮುಂಬೈಗೆ ಒಮ್ಮೆ ಹೋಗಿದ್ದು ಬಿಟ್ಟರೆ ಬೆಂಗಳೂರು ಗಡಿಯನ್ನು ಕೂಡ ನಾನು ಪಾರು ಮಾಡಿರಲಿಲ್ಲ ಎಂದು ಹೇಳಿದ್ದಾರೆ. ಇನ್ನು ನನಗೆ ಮೊದಲಿಂದ ಪ್ಯಾರಿಸ್ ಅಂದರೆ ಒಂದು ರೀತಿಯ ಸೆಳೆತ ಅಲ್ಲಿ ಒಮ್ಮೆಯಾದರೂ ಹೋಗಬೇಕೆನ್ನುವ ಆಸೆ ನನಗೆ ಇತ್ತು, ಸದಾ ನನ್ನ ಬುಕ್‌ನಲ್ಲಿ ನಾನು ಪ್ಯಾರಿಸ್ ಟವರ್ ಚಿತ್ರವನ್ನೇ ಬಿಡಿಸುತ್ತಿದ್ದೆ ಎಂದಿರುವ ಸಂಯುಕ್ತಾ ಕಿರಿಕ್ ಪಾರ್ಟಿ ನಂತರ ನನ್ನ ಬದುಕು ಸಂಪೂರ್ಣ ಬದಲಾಯ್ತು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಚಿತ್ರ ಗೆದ್ದ ನಂತರ ಪ್ಯಾರಿಸ್, ಅಮಸ್ಟರ್ ಡ್ಯಾಮ್, ಸ್ವಿಜರ್ ಲ್ಯಾಂಡ್, ಜರ್ಮನಿ ಮತ್ತು ಸ್ವಿಜರ್ ಲ್ಯಾಂಡ್‌ನಲ್ಲಿ ಸಿನಿಮಾ ಬಿಡುಗಡೆ ಆಯ್ತು ಈ ಸಂದರ್ಭದಲ್ಲಿ ಚಿತ್ರತಂಡ ನನ್ನನ್ನೂ ಕೂಡ ತಮ್ಮ ಕರೆದುಕೊಂಡು ಹೋಯಿತು ಎಂದು ಹೇಳಿದ್ದಾರೆ. ನನ್ನ ಎಲ್ಲ ಖರ್ಚು-ವೆಚ್ಚಗಳನ್ನು ಕೂಡ ರಕ್ಷಿತ್ ಶೆಟ್ಟಿ ಒಡೆತನದ ಪರಂವ್ಹಾ ನಿರ್ಮಾಣ ಸಂಸ್ಥೆಯೇ ನೋಡಿಕೊಂಡಿತು ಎಂದು ಹೇಳಿದ್ದಾರೆ. ಈ ಮೂಲಕ ಪ್ಯಾರಿಸ್‌ಗೆ ಹೋಗುವ ನನ್ನ ಕನಸು ನನಸಾಯ್ತು ಎಂದು ಹೇಳಿದ್ದಾರೆ.
ಕೇವಲ ಹೊರದೇಶಕ್ಕೆ ಕರೆದುಕೊಂಡು ಹೋಗುವುದಲ್ಲದೇ ಚಿತ್ರ ಗೆದ್ದ ನಂತರ ಮತ್ತೆ ನನಗೆ ಅವರು ದುಡ್ಡು ನೀಡಿದರು ಎಂದಿರುವ ಸಂಯುಕ್ತಾ ರಕ್ಷಿತ್-ರಿಷಬ್ ಅವರಂತಹ ತಂಡ ಎಲ್ಲಿಯೂ ಇಲ್ಲ ಕೆಲಸ ಮಾಡುವ ಪ್ರತಿಯೊಬ್ಬರಿಗೆ ಅವರು ನೀಡುವ ಗೌರವದಿಂದಲೇ ಅವರ ತಂಡ ಇಷ್ಟೊಂದು ಯಶಸ್ವಿ ಆಗಿದೆ ಎಂದು ಹೇಳಿದ್ದಾರೆ. ನಾನು ಇವತ್ತು ಈ ಸ್ಥಾನಕ್ಕೆ ಬರುವುದಕ್ಕೆ, ಬೆಳೆಯುವುದಕ್ಕೆ ಕಾರಣವಾದ ಕಿರಿಕ್ ಪಾರ್ಟಿ ಚಿತ್ರಕ್ಕೆ ಮತ್ತು ಆ ತಂಡಕ್ಕೆ ಸದಾ ನಾನು ಚಿರಋಣಿ ಎಂದು ಹೇಳಿದ್ದಾರೆ. ಸಂದರ್ಶನದಲ್ಲಿ ಹೀಗೆ ತಮ್ಮ ಆ ದಿನಗಳನ್ನು ನೆನೆಯುತ್ತಾ ಅಲ್ಲಲ್ಲಿ ಸಂಯುಕ್ತಾ ಹೆಗಡೆ ಭಾವುಕರಾಗಿದ್ಧಾರೆ.
ಇವತ್ತು ನನ್ನನ್ನೂ ನಂಬಿ 'ಕ್ರೀಮ್'ನಂತಹ ಮಹಿಳಾ ಪ್ರಧಾನ ಚಿತ್ರವನ್ನು ನಿರ್ಮಾಪಕರು ಮಾಡಿದ್ದಾರೆ ಅಂದರೆ ಅದಕ್ಕೆ ಕಾರಣ ಕಿರಿಕ್ ಪಾರ್ಟಿ ಎಂದು ಹೇಳಿದ್ದಾರೆ. ನಾನು ಇವತ್ತು ಹೇಳಬಹುದು ನನ್ನಲ್ಲಿ ಪ್ರತಿಭೆ ಇದೆ ಅದು ಇದು ಎಂದೆಲ್ಲ ನಾನು ಹೇಳಬಹುದು ಆದರೆ ಅವತ್ತು ಅವರು ಕಿರಿಕ್ ಪಾರ್ಟಿ ಚಿತ್ರಕ್ಕೆ ನನ್ನನ್ನೂ ಆಯ್ಕೆ ಮಾಡದಿದ್ದರೆ ನನ್ನ ಬದಲು ಬೇರೆಯವರ ಬದುಕು ಬದಲಾಗುತ್ತಿತ್ತು ಎಂದು ಹೇಳಿರುವ ಸಂಯುಕ್ತಾ ಹೆಗ್ಡೆ ಆ ನಂತರ ನಾನು ನನ್ನ ಬದುಕಿನಲ್ಲಿ ಏನು ಮಾಡಿದೆ ಎನ್ನುವುದು ನನಗೆ ಗೊತ್ತು ಮನಸು ಮಾಡಿದ್ದರೆ ಚಿತ್ರಗಳನ್ನು ಒಪ್ಪಿಕೊಳ್ಳಬಹುದಿತ್ತು ಆದರೆ ನಾನು ಪ್ರವಾಸ ಮಾಡುವ ತೀರ್ಮಾನವನ್ನು ಮಾಡಿದೆ ಎಂದು ಹೇಳಿದ್ದಾರೆ. ಕೆಲಸ,ಕೆಲಸ,ಕೆಲಸ ಎಂದು ರಶ್ಮಿಕಾ ಕೆಲಸದ ಕಡೆ ಗಮನ ವಹಿಸಿದರು ಅವರು ಎತ್ತೆರತ್ತರಕ್ಕೆ ಬೆಳೆದರು ನಾನು ದೇಶ-ವಿದೇಶ ಎಂದುಕೊಂಡು ಸುತ್ತಾಡಿದೆ ಹಣದ ಲೆಕ್ಕಾಚಾರವನ್ನೆಲ್ಲ ಹಾಕಿ ವಿಯೆಟ್ನಾಂ, ಥಾಯ್ಲೆಂಡ್, ಶ್ರೀಲಂಕಾ ಹೀಗೆ ಎಲ್ಲೆಲ್ಲಿ ಹೋಗಲು ಸಾಧ್ಯವೋ ಅಲ್ಲೆಲ್ಲ ಕಡೆ ತಿರುಗಾಡಿಕೊಂಡು ಬಂದೆ ಎಂದು ಹೇಳಿದ್ದಾರೆ. ಸದ್ಯ ಕೆಲಸದ ಕಡೆ ಗಮನ ಕೊಡಬೇಕೆನ್ನುವ ನಿರ್ಧಾರವನ್ನು ಮಾಡಿದ್ದೇನೆ ಎಂದು ಕೂಡ ಸಂಯುಕ್ತಾ ಹೇಳಿದ್ದಾರೆ.
ಹೀಗೆ ತಮ್ಮ ಬದುಕಿನ ಕುರಿತು ಹಲವಾರು ಆಸಕ್ತಿಕರ ವಿಚಾರಗಳನ್ನು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಸಂಯುಕ್ತಾ ಹೆಗ್ಡೆ ಹಂಚಿಕೊಂಡಿದ್ದು ಈ ಸಂದರ್ಶನಕ್ಕೆ ಹಲವರು ಮೆಚ್ಚುಗೆಯನ್ನು ಸೂಚಿಸುತ್ತಿದ್ಧಾರೆ. ಸಂಯುಕ್ತಾ ಹೆಗ್ಡೆ ಕುರಿತು ನಮ್ಮಲ್ಲಿದ್ದ ಅಭಿಪ್ರಾಯವನ್ನು ಈ ಸಂದರ್ಶನ ಬದಲಿಸಿತು ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.


Click it and Unblock the Notifications











