ಕಾಲಿವುಡ್ ಗೆ ಪದಾರ್ಪಣೆ ಮಾಡಿದ 'ಕಿರಿಕ್' ಹುಡುಗಿ ಸಂಯುಕ್ತ ಹೆಗ್ಡೆ
ಎಲ್ಲವೂ ಸಂಯುಕ್ತ ಹೆಗ್ಡೆ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟೊತ್ತಿಗಾಗಲೇ ಆಕೆ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರಬೇಕಿತ್ತು. ಆದ್ರೆ, ಅನಿವಾರ್ಯ ಕಾರಣಗಳಿಂದ ಸಂಯುಕ್ತ ಹೆಗ್ಡೆಯ ಕಾಲಿವುಡ್ ಡೆಬ್ಯೂ ಕೊಂಚ ಡಿಲೇ ಆಯ್ತು.
ಇದೀಗ ಮತ್ತೆ ತಮಿಳು ಚಿತ್ರರಂಗದಲ್ಲಿ ನಟಿ ಸಂಯುಕ್ತ ಹೆಗ್ಡೆ ಹೆಸರು ಕೇಳಿಬರುತ್ತಿದ್ದು, ಚಿತ್ರವೊಂದಕ್ಕೆ ನಾಯಕಿ ಆಗಿ ಆಕೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ನಟ್ಟು ದೇವ್ ನಿರ್ದೇಶನದ 'ಪಪ್ಪಿ' ಚಿತ್ರದಲ್ಲಿ ಸಂಯುಕ್ತ ಹೆಗ್ಡೆ ನಾಯಕಿ ಆಗಲಿದ್ದಾರೆ. ಸಂಯುಕ್ತ ಹೆಗ್ಡೆ ಜೊತೆ ನಾಯಕ ವರುಣ್ ಅಭಿನಯಿಸಲಿದ್ದಾರೆ. 'ಪಪ್ಪಿ' ಚಿತ್ರದ ಕಥೆ ಕೇಳಿ ಸಂಯುಕ್ತ ಕ್ಲೀನ್ ಬೌಲ್ಡ್ ಆಗಿದ್ದಾರೆ. ಹೀಗಾಗಿ ಹಿಂದೆ ಮುಂದೆ ನೋಡದೆ, ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

'ಪಪ್ಪಿ' ಚಿತ್ರದಲ್ಲಿ ಲವ್ ಸ್ಟೋರಿಗೆ ಎಷ್ಟು ಪ್ರಾಮುಖ್ಯತೆ ನೀಡಲಾಗಿದ್ಯೋ, ಶ್ವಾನ ಪ್ರೀತಿಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗಿದೆ. ಚಿತ್ರದಲ್ಲಿ ಶ್ವಾನವೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದೆ. ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಸಂಬಂಧವೇ ಚಿತ್ರದ ಹೂರಣ ಅಂತಾರೆ ನಿರ್ದೇಶಕ ನಟ್ಟು ದೇವ್.
ಹಾಗ್ನೋಡಿದ್ರೆ, ನಟ್ಟು ದೇವ್ ಗಿದು ಚೊಚ್ಚಲ ನಿರ್ದೇಶನದ ಚಿತ್ರ. ಇದಕ್ಕೂ ಮೊದಲು ನಟನಾಗಿ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದವರು. ಸಹಾಯಕ ನಿರ್ದೇಶಕನಾಗಿ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಶಾರ್ಟ್ ಫಿಲ್ಮ್ ಗಳಿಗೆ ನಿರ್ದೇಶನ ಮಾಡಿರುವ ನಟ್ಟು ದೇವ್ ಇದೀಗ 'ಪಪ್ಪಿ' ಮೂಲಕ ಕಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ 'ಕಿರಿಕ್ ಪಾರ್ಟಿ' ಮೂಲಕ ಜನಪ್ರಿಯತೆ ಪಡೆದಿದ್ದ ಸಂಯುಕ್ತ ಹೆಗ್ಡೆ ಇದೀಗ ಕಾಲಿವುಡ್ ಕಡೆ ಮುಖ ಮಾಡಿದ್ದಾರೆ. ತಮಿಳು ಚಿತ್ರರಂಗದಲ್ಲಿಯೂ ಸಂಯುಕ್ತ ಯಶಸ್ವಿ ಆಗುತ್ತಾರಾ.? ನೋಡಬೇಕು.


Click it and Unblock the Notifications











