6 ತಿಂಗಳು, ಬರೋಬ್ಬರಿ 125 ಕನ್ನಡ ಸಿನಿಮಾಗಳು ರಿಲೀಸ್, ಗೆದ್ದಿದ್ದೆಷ್ಟು? ಸೋತಿದ್ದೆಷ್ಟು?
ನೋಡನೋಡುತ್ತಲೇ ವರ್ಷ 6 ತಿಂಗಳು ಕಳೆದೇ ಹೋಗಿದೆ. ಸುಮಾರು 27 ವಾರಗಳಲ್ಲಿ ಕನ್ನಡದಲ್ಲಿ 100ಕ್ಕೂ ಅಧಿಕ ಸಿನಿಮಾಗಳು ತೆರೆಗಪ್ಪಳಿಸಿವೆ. ಈ ಪಟ್ಟಿಯಲ್ಲಿ ಗೆದ್ದಿದ್ದಕ್ಕಿಂತ ಸೋತ ಸಿನಿಮಾಗಳ ಸಂಖ್ಯೆಯೇ ಹೆಚ್ಚು. ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರಗಳ ಕಡೆ ಮುಖ ಮಾಡಲೇಯಿಲ್ಲ.
ಲೋಕಸಭೆ ಚುನಾವಣೆ ಹಾಗೂ ಐಪಿಎಲ್ ಸೀಸನ್ ಒಟ್ಟೊಟ್ಟಿಗೆ ಬಂದು ಈ ವರ್ಷ ಚಿತ್ರರಂಗಕ್ಕೆ ಹಿನ್ನಡೆಯಾಗಿದ್ದು ಸುಳ್ಳಲ್ಲ. ಈ ವರ್ಷ ಸ್ಯಾಂಡಲ್‌ವುಡ್ ಆರಂಭವೇ ಸಪ್ಪೆಯಾಗಿತ್ತು. ಇನ್ನು ಸಿನಿಮಾಗಳಿಗಿಂತ ಡಿವೋರ್ಸ್ ವಿಚಾರ ಹೆಚ್ಚು ಸದ್ದು ಮಾಡ್ತು. ಕಳೆದೊಂದು ತಿಂಗಳಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇದೆಲ್ಲದರ ನಡುವೆ ಕನ್ನಡ ಸಿನಿಮಾಗಳ ಹವಾ ಕಮ್ಮಿ ಆಗಿದ್ದು ಸುಳ್ಳಲ್ಲ.

ಕಳೆದ ವರ್ಷ ಕೊನೆಗೆ ಬಿಡುಗಡೆಯಾದ 'ಕಾಟೇರ' ಸಿನಿಮಾ ಹೊಸ ವರ್ಷದ ಆರಂಭದಲ್ಲೂ ಸದ್ದು ಮಾಡ್ತಾ ಬಂತು. ಬಳಿಕ ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಬರಲಿದೆ. 'ಚಿಕ್ಕಣ್ಣ' ಹೀರೊ ಆಗಿ ನಟಿಸಿದ 'ಉಪಾಧ್ಯಕ್ಷ' ಗೆಲುವಿನ ದಡ ಸೇರಿತು. ಈ ವರ್ಷದ ಮೊದಲ ಹಿಟ್ ಇದೇ. ಬಳಿಕ ವಿನಯ್ ರಾಜ್‌ಕುಮಾರ್ ನಟನೆಯ 'ಒಂದು ಸರಳಪ್ರೇಮಕಥೆ' ಡೀಸೆಂಟ್ ಹಿಟ್ ಎನಿಸಿಕೊಂಡಿತ್ತು.
ದೀಕ್ಷಿತ್ ಶೆಟ್ಟಿ ನಟನೆಯ 'ಬ್ಲಿಂಕ್' ಹಾಗೂ ರಂಗಾಯಣ ರಘು 'ಶಾಖಾಹಾರಿ' ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಚಿತ್ರಮಂದಿರಗಳಲ್ಲಿ ತಕ್ಕಮಟ್ಟಿಗೆ ಗೆಲ್ಲಲಿಲ್ಲ. ಓಟಿಟಿಗೆ ಬಂದು ಈ ಸಿನಿಮಾಗಳು ಹೆಚ್ಚು ಪ್ರೇಕ್ಷಕರನ್ನು ತಲುಪಿತ್ತು. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಜಾಕಿ' ಸಿನಿಮಾ ರೀ -ರಿಲೀಸ್ ಆಗಿ ಸದ್ದು ಮಾಡಿತ್ತು. ಸೂರಿ ನಿರ್ದೇಶನದ ಚಿತ್ರಕ್ಕೆ 12 ವರ್ಷಗಳ ಬಳಿಕವೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸಿದ್ದರು.

ಮಾರ್ಚ್ 28ಕ್ಕೆ ಯುವ ರಾಜ್‌ಕುಮಾರ್ ನಟನೆಯ 'ಯುವ' ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ರಾಘಣ್ಣನ ಕಿರಿ ಮಗನ ಚೊಚ್ಚಲ ಸಿನಿಮಾ ಇದು. ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಸಂತೋಷ್ ಆನಂದ್ ರಾಮ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. 'ಯುವ' ಡ್ಯಾನ್ಸ್, ಫೈಟ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಆದರೆ ಅದಾಗಲೇ ಐಪಿಎಲ್ ಸೀಸನ್ ಶುರುವಾಗಿ ಚಿತ್ರಕ್ಕೆ ದೊಡ್ಡಮಟ್ಟದ ಯಶಸ್ಸು ಸಿಗಲಿಲ್ಲ. ಕೇವಲ 20 ದಿನಕ್ಕೆ ಸಿನಿಮಾ ಓಟಿಟಿಗೆ ಬಂದುಬಿಟ್ಟಿತ್ತು.
ಇನ್ನು ಎಲೆಕ್ಷನ್, ಐಪಿಎಲ್ ಮುಗಿಯುವರೆಗೆ ಚಿತ್ರರಂಗ ಉಸಿರು ಬಿಗಿದುಕೊಂಡಿರುವಂತಾಯಿತು. ಏಪ್ರಿಲ್‌ನಲ್ಲಿ 'ಅವತಾರ ಪುರುಷ'-2 ಹಾಗೂ ಆಶಿಕಾ ರಂಗನಾಥ್ ನಟನೆಯ 'O2' ಸಿನಿಮಾಗಳು ಕೊಂಚಮಟ್ಟಿಗೆ ನಿರೀಕ್ಷೆ ಮೂಡಿಸಿದ್ದವು. ಸಿನಿಮಾ ನೋಡಿದವರು ಮೆಚ್ಚಿಕೊಂಡಿದ್ದರು. ಆದರೆ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಸಿನಿಮಾಗಳು ವಿಫಲವಾಗಿದ್ದವು. ಮೇ ತಿಂಗಳಲ್ಲಿ 'ರಾಮನ ಅವತಾರ' ಹಾಗೂ 'ಮೂರನೇ ಕೃಷ್ಣಪ್ಪ' ಸೇರಿದಂತೆ ಒಂದಷ್ಟು ಸಿನಿಮಾಗಳು ತೆರೆಗಪ್ಪಳಿಸಿದ್ದವು.
ಎಲೆಕ್ಷನ್ ಫಲಿತಾಂಶ ಬಂದು ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಯಿತು. ಅಲ್ಲಿಗೆ ನಿಟ್ಟುಸಿರುವ ಬಿಟ್ಟಿತ್ತು. ಜೂನ್ 14ಕ್ಕೆ 5 ಸಿನಿಮಾಗಳು ಒಟ್ಟೊಟ್ಟಿಗೆ ತೆರೆಗೆ ಬಂದವು. ಧನಂಜಯ್ ನಟನೆಯ 'ಕೋಟಿ' ಸಿನಿಮಾ ತಕ್ಕಮಟ್ಟಿಗೆ ಗಮನ ಸೆಳೆಯಿತು. ಆದರೂ ದೊಡ್ಡಮಟ್ಟದ ಪ್ರತಿಫಲ ಸಿಗಲಿಲ್ಲ. ಬಳಿಕ ಒಂದಷ್ಟು ಹೊಸಬರ ಸಿನಿಮಾಗಳು ಬಂದು ಹೋದವು.
ಒಟ್ಟಾರೆ ಈ ವರ್ಷದ ಮೊದಲ 6 ತಿಂಗಳಲ್ಲಿ ಕನ್ನಡದ 125 ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿವೆ. ಅದರಲ್ಲಿ ಗೆಲುವಿಗಿಂತ ಸೋಲಿನ ಪ್ರಮಾಣವೇ ದೊಡ್ಡದಾಗಿದೆ. ಮುಂದಿನ 6 ತಿಂಗಳಲ್ಲಿ 'ಭೀಮ', 'ಯುಐ', 'ಮ್ಯಾಕ್ಸ್', 'ಮಾರ್ಟಿನ್' ಹಾಗೂ 'ಕೆಡಿ' ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸಲಿದೆ. ವರ್ಷದ ಸೆಕೆಂಡ್ ಹಾಫ್‌ನಲ್ಲಿ ಚಿತ್ರರಂಗ ಗೆಲುವಿನ ನಗೆ ಬೀರುತ್ತಾ ಕಾದು ನೋಡಬೇಕಿದೆ.


Click it and Unblock the Notifications











