ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು ; ಐಸಿಯುನಲ್ಲಿ ಚಿಕಿತ್ಸೆ
ಆರೋಗ್ಯವೇ ಭಾಗ್ಯ ಎನ್ನುವ ನಾಣ್ಣುಡಿ ಇದೆ. ಆರೋಗ್ಯ ಒಂದಿದ್ದರೆ ಆಗ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು. ಆದರೆ ಅನಾರೋಗ್ಯ ದೇಹವನ್ನು ಕಾಡುತ್ತಿದ್ದರೆ ಆಗ ಯಾವ ಕೆಲಸ ಮಾಡಲು ಕೂಡ ಮನಸು ಬರುವುದಿಲ್ಲ. ಹೀಗಾಗಿ ಆರೋಗ್ಯಕ್ಕೆ ಮೊದಲ ಆದ್ಯತೆಯನ್ನು ನೀಡಬೇಕೆನ್ನುವ ಮಾತುಗಳನ್ನು ಹಿರಿಯರು ಆಗಾಗ ಹೇಳುತ್ತಲೇ ಇರುತ್ತಾರೆ.
ಆದರೆ, ಬದಲಾದ ಈ ಕಾಲದಲ್ಲಿ ಮನುಷ್ಯ ದುಡ್ಡಿನ ಹಿಂದೆ ಓಡುತ್ತಾ ಓಡುತ್ತಾ ತನಗೇನು ಬೇಕೆನ್ನುವುದನ್ನೇ ಮರೆಯುತ್ತಿದ್ದಾನೆ. ಹಣ ಇದ್ದರೆ ನೆಮ್ಮದಿ ಇಲ್ಲ, ನೆಮ್ಮದಿ ಇದ್ದರೆ ಹಣ ಇಲ್ಲ ಎಂಬಂತಾಗಿದೆ. ಇದರ ನಡುವೆ ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯದ ಕಡೆ ಕೂಡ ಅನೇಕರು ಗಮನ ನೀಡುತ್ತಿಲ್ಲ. ಇದಕ್ಕೆ ಮತ್ತೊಂದು ಉದಾಹರಣೆ ಎನ್ನುವಂತೆ ಕನ್ನಡ ಚಿತ್ರರಂಗದ ಮರಿ ಟೈಗರ್ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ಏರುಪೇರಾಗಿದೆ. ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೌದು, ಪಾತ್ರ ಯಾವುದೇ ಇದ್ದರೂ ಕೂಡ ಸಂಪೂರ್ಣ ತಯಾರಿ ಮಾಡಿಕೊಂಡೇ ಅಖಾಡಕ್ಕಿಳಿಯುವ ಕೆಲವೇ ಕೆಲ ಕನ್ನಡದ ಸ್ಟಾರ್ ಗಳಲ್ಲಿ ವಿನೋದ್ ಪ್ರಭಾಕರ್ ಕೂಡ ಒಬ್ಬರು. ಸಾಮಾನ್ಯವಾಗಿ ಕನ್ನಡದಲ್ಲಿ ಸಿಕ್ಸ್ ಪ್ಯಾಕ್ ಹೀರೋಗಳೇ ಕಡಿಮೆ. ಅಂಥಾದ್ದರಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ವಿನೋದ್ ಎಯ್ಟ್ ಪ್ಯಾಕ್ ಮಾಡಿಕೊಂಡು ಹಿಂದೊಮ್ಮೆ ಎಲ್ಲರ ಹುಬ್ಬೇರಿಸಿದ್ದರು.
ಆರಂಭದಿಂದಲೇ ನಾನಾ ಸವಾಲುಗಳಿಗೆ, ಹೊಸಾ ಕಲಿಕೆಗೆ ಒಡ್ಡಿಕೊಂಡೇ ಚಿತ್ರಗಳನ್ನು ಮಾಡಿಕೊಂಡು ಬಂದಿರುವ ವಿನೋದ್ ಪ್ರಭಾಕರ್ ಸದ್ಯ ''ಬಲರಾಮನ ದಿನಗಳು'' ಎಂಬ ಚಿತ್ರವೊಂದನ್ನು ಮಾಡಿದ್ಧಾರೆ. ಅಂದಕಾಲತ್ತಿಲ್‌ನ ಭೂಗತ ಲೋಕವನ್ನು ನೆನಪಿಸುವ, ಕೆ.ಎಂ.ಚೈತನ್ಯ ನಿರ್ದೇಶನದ ಈ ಚಿತ್ರ ಇದೇ ಜೂನ್ 26ರಂದು ತೆರೆಗೆ ಬರುತ್ತಿದೆ.
ಈ ಹಿನ್ನೆಲೆ ಕಾಲಿಗೆ ಚಕ್ರ ಕಟ್ಟಿಕೊಂಡು ತಮ್ಮ ಈ ಚಿತ್ರದ ಪ್ರಚಾರವನ್ನು ವಿನೋದ್ ಪ್ರಭಾಕರ್ ಮಾಡುತ್ತಿದ್ದಾರೆ. ಇನ್ನು ಹಲವರಿಗೆ ಗೊತ್ತಿರುವಂತೆ ಬದಲಾದ ಈ ಕಾಲದಲ್ಲಿ ಚಿತ್ರವೊಂದರ ಪ್ರಚಾರ ಮಾಡುವುದು ಸುಲಭದ ಮಾತಲ್ಲ. ಬೆಳಗ್ಗೆಯಿಂದ ರಾತ್ರಿಯವರೆಗೆ ಪ್ರಯಾಣ.. ಒಂದಾದ ಮೇಲೊಂದರಂತೆ ಸಂದರ್ಶನ.. ಮುಖದಲ್ಲಿ ಎಲ್ಲಿಯೂ ಸುಸ್ತು ಕಾಣಿಸದಂತೆ ದಿನ ಇಡೀ ನಗುತ್ತಲೇ ಇರಬೇಕು. ಮಾತನಾಡುತ್ತಲೇ ಇರಬೇಕು.
ಇವರ ಈ ರೆಸ್ಟ್‌ಲೆಸ್ ಕೆಲಸ ಮತ್ತು ನಿರಂತರ ಓಡಾಟ ಇವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆಯಾ..? ಗೊತ್ತಿಲ್ಲ. ಆದರೆ, ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ವಿನೋದ್ ಪ್ರಭಾಕರ್ ಅವರನ್ನು ಬೆಂಗಳೂರಿನ ನಾಗರಬಾವಿಯ ಖಾಸಗಿ ಆಸ್ಪತ್ರೆಗೆ ಇಂದು (ಜೂನ್ 20) ದಾಖಲಿಸಲಾಗಿದೆ ಎಂದು ''ಸುವರ್ಣ ನ್ಯೂಸ್''.. ''ರಿಪಬ್ಲಿಕ್ ಕನ್ನಡ'' ಸೇರಿ ಕನ್ನಡದ ಮಾಧ್ಯಮಗಳು ವರದಿ ಮಾಡಿವೆ.
ಮಾಧ್ಯಮಗಳ ವರದಿಯ ಪ್ರಕಾರ ಮನೆಯಲ್ಲಿ ಇದ್ದ ವೇಳೆ ವಿನೋದ್ ಪ್ರಭಾಕರ್ ಅವರಿಗೆ ರಕ್ತದೊತ್ತಡ (ಬಿಪಿ) ಸಂಬಂಧಿತ ಸಮಸ್ಯೆ ಕಾಣಿಸಿಕೊಂಡಿದ್ದು, ಆರೋಗ್ಯದಲ್ಲಿ ಬದಲಾವಣೆ ಕಂಡು ಬಂದಿದೆ. ಈ ಹಿನ್ನೆಲೆ ತಕ್ಷಣ ಅಲರ್ಟ್ ಆದ ಕುಟುಂಬಸ್ಥರು ತಡಮಾಡದೆ ಅವರನ್ನು ನಾಗರಬಾವಿಯ ಆಸ್ಪತ್ರೆಗೆ ಕರೆ ತಂದಿದ್ದಾರೆ.
ಸದ್ಯ ನಾಗರಭಾವಿಯ ಖಾಸಗಿ ಆಸ್ಪತ್ರೆಯ ಕಾರ್ಡಿಯಾ ಕೇರ್ ವಿಭಾಗದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬೆಳಗ್ಗೆಯಿಂದಲೇ ವೈದ್ಯರು ತೀವೃ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಮುಂದುವರೆಸಿದ್ಧಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಇನ್ನು ವಿನೋದ್ ಪ್ರಭಾಕರ್ ಆಸ್ಪತ್ರೆಗೆ ದಾಖಲಾದ ವಿಚಾರ ಹೊರ ಬರುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ವಿನೋದ್ ಪ್ರಭಾಕರ್ ಅವರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದ್ದು ಶೀಘ್ರದಲ್ಲಿಯೇ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.


Click it and Unblock the Notifications