ವಿಷ್ಣುವರ್ಧನ್ ಹುಟ್ಟುಹಬ್ಬ: ಅಭಿಮಾನ್ ಸ್ಟುಡಿಯೋದಲ್ಲಿ ಭರ್ಜರಿ ಕಟೌಟ್ ಮೇಳ
ಇಂದು (ಸೆಪ್ಟೆಂಬರ್ 18) ಕನ್ನಡ ಚಿತ್ರರಂಗದ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ 72ನೇ ಹುಟ್ಟುಹಬ್ಬ. ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವರಾಗಿರುವ ವಿಷ್ಣುವರ್ಧನ್ ಅವರು ಚಿತ್ರರಂಗದದಲ್ಲಿ ಎಂದೂ ಮಾಸದ ವಜ್ರ. ತಮ್ಮ ಮನೋಜ್ಞ ನಟನೆ, ಮಗುವಿನಂತಹ ನಗು, ಗೌರವಯುತವಾದ ವ್ಯಕ್ತಿತ್ವದಿಂದಲೇ ವಿಷ್ಣುವರ್ಧನ್ ಕರ್ನಾಟಕದ ಹೃದಯವಂತ ಎನಿಸಿಕೊಂಡರು.
ಕನ್ನಡ ಚಿತ್ರರಂಗದ ಹೃದಯವಂತ, ಅಭಿನಯ ಭಾರ್ಗವ, ಸಾಹಸ ಸಿಂಹ, ದಾದ ಹೀಗೆ ಅಭಿಮಾನಿಗಳಿಂದ ಬಿರುದು ಪಡೆದಿರುವ ವಿಷ್ಣುವರ್ಧನ್ ಅವರು 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಕೇವಲ ಕನ್ನಡವಷ್ಟೇ ಅಲ್ಲ ಇತರ ಭಾಷೆಗಳಲ್ಲೂ ನಟಿಸಿ ಜನ ಮನ್ನಣೆ ಪಡೆದಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ ಭಾರತಿ ಅವರನ್ನು ವಿವಾಹವಾಗಿ ತುಂಬು ಜೀವನ ನಡೆಸಿದ್ದ ವಿಷ್ಣುವರ್ಧನ್ ಅವರು ಸ್ಯಾಂಡಲ್ವುಡ್ನ ರೆಬಲ್ ಸ್ಟಾರ್ ಅವರ ಆಪ್ತಮಿತ್ರ.
ಸಂಪತ್ ಕುಮಾರ್ ಇವರ ಮೂಲ ಹೆಸರು. 1955ರಲ್ಲಿ ತೆರೆಕಂಡ 'ಶಿವಶರಣ ನಂಬೆಯಕ್ಕ' ಎನ್ನುವ ಚಿತ್ರದಲ್ಲಿ ಬಾಲನಟನಾಗಿ ನಟಿಸುವ ಮೂಲ ವಿಷ್ಣುವರ್ಧನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಕೆಲ ವರ್ಷಗಳ ಅಂತರದ ನಂತರ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರ ಹಾವು' ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾದರು. ಸಂಪತ್ ಕುಮಾರ್ ಹೆಸರನ್ನು ಬದಲಿಸಿದ ನಿರ್ದೇಶಕ ಪುಟ್ಟಣ್ಣ ಕಣಗಾಲ್, ವಿಷ್ಣುವರ್ಧನ್ ಎನ್ನುವ ಹೆಸರಿಟ್ಟರು. ಈ ಹೆಸರು ಇಂದು ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಅಮರವಾಗಿದೆ.

'ನಾಗರಹಾವು' ಚಿತ್ರದ ರಾಮಾಚಾರಿ ಪಾತ್ರದ ಮೂಲಕ ನಾಯಕ ನಟನಾಗಿ ವೃತ್ತಿ ಜೀವನ ಆರಂಭಿಸಿದ ವಿಷ್ಣು ದಾದಾ 2010ರಲ್ಲಿ ತೆರೆಕಂಡ 'ಆಪ್ತರಕ್ಷಕ' ಚಿತ್ರದಲ್ಲಿ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡರು. ತಮ್ಮ ಕೊನೆಯ ದಿನಗಳವರೆಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸಾಹಸ ಸಿಂಹ 2009 ಡಿಸೆಂಬರ್ 30ರಂದು ಸ್ವರ್ಗಸ್ತರಾದರು. ಅವರು ಅಗಲಿ ಹದಿಮೂರು ವರ್ಷಗಳು ಆಗಿದ್ದರೂ ಕೂಡ ಇಂದಿಗೂ ಕರ್ನಾಟಕದಲ್ಲಿ ಅವರ ಮೇಲಿನ ಅಭಿಮಾನ ಕಿಂಚಿತ್ತೂ ಕಡಿಮೆಯಾಗಿಲ್ಲ.
ಇಂದು ವಿಷ್ಣುವರ್ಧನ್ ಅವರ 72ನೇ ಹುಟ್ಟುಹಬ್ಬವಾಗಿದ್ದು, ಅಭಿಮಾನಿಗಳು ಬಹಳ ವಿಶೇಷವಾಗಿ ಆಚರಿಸುತ್ತಿದ್ದಾರೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಕೋಟಿಗೊಬ್ಬನ ಪ್ರಮುಖ ಹಿಟ್ ಚಿತ್ರಗಳ 40 ಅಡಿ ಎತ್ತರದ 50 ಕಟೌಟ್ಗಳನ್ನು ಹಾಕಲಾಗಿದೆ. ಅಲ್ಲದೇ ನೂರಾರು ಅಭಿಮಾನಿಗಳು ಇಂದು ಅಭಿಮಾನ್ ಸ್ಟುಡಿಯೋಗೆ ಭೇಟಿ ನೀಡುತ್ತಿದ್ದು, ಕರ್ನಾಟಕದ ಹೃದಯವಂತನ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ.


Click it and Unblock the Notifications











