ಕಾವೇರಿ ತೀರ್ಪಿನ ಬಗ್ಗೆ ಸ್ಯಾಂಡಲ್ ವುಡ್ ತಾರೆಯರು ಸಂತಸ
ಕಾವೇರಿ ಜಲ ವಿವಾದದ ತೀರ್ಪು ಹೊರಬಿದ್ದಿದೆ. ಸುಪ್ರೀಂಕೋರ್ಟ್ ಅಂಗಳದಲ್ಲಿ ಸದಾ ಹಿನ್ನಡೆಯನ್ನೇ ಅನುಭವಿಸುತ್ತಿದ್ದ ಕರ್ನಾಟಕಕ್ಕೆ ಈ ತೀರ್ಪು ನಿರಾಳತೆ ನೀಡಿದೆ. ಈ ತೀರ್ಪಿನ ಬಗ್ಗೆ ಈಗಾಗಲೇ ರಾಜಕಾರಣಿಗಳು ಪ್ರತಿಕ್ರಿಯೆ ನೀಡಿದ್ದು, ನಿಟ್ಟಿಸಿರು ಬಿಟ್ಟಿದ್ದಾರೆ.
ಇನ್ನು ಕಾವೇರಿ ತೀರ್ಪಿನ ಬಗ್ಗೆ ಸಾಮಾನ್ಯ ಜನರಂತೆ ಸಿನಿಮಾ ತಾರೆಯರು ಕೂಡ ಸಂತಸಗೊಂಡಿದ್ದಾರೆ. ವರ್ಷಗಳ ಕಾಲ ಹೋರಾಟ ಮಾಡುತ್ತಿದ್ದ ರೈತರ ಜೊತೆ ಬೆಂಬಲವಾಗಿ ನಿಂತಿದ್ದ ಚಿತ್ರೋಧ್ಯಮ ಸುಪ್ರೀಂ ಆದೇಶಕ್ಕೆ ಸ್ವಾಗತ ಬಯಸಿದೆ.
ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ದುನಿಯಾ ವಿಜಯ್, ದನಂಜಯ್ ಸೇರಿದಂತೆ ಹಲವು ತಾರೆಯರು ಪ್ರತಿಕ್ರಿಯಿಸಿದ್ದಾರೆ. ಹಾಗಿದ್ರೆ, ಯಾರು ಏನಂದ್ರು? ಮುಂದೆ ಓದಿ.....

ಪುನೀತ್ ಫುಲ್ ಹ್ಯಾಪಿ
''ವರ್ಷಗಳಿಂದ ಕನ್ನಡಿಗರು ನಡೆಸುತ್ತಿದ್ದ ಹೋರಾಟಕ್ಕೆ ಈ ತೀರ್ಪು ಪರಿಹಾರ ನೀಡಿದೆ. ಹೋದ ಉಸಿರು ಮತ್ತೆ ಬಂದಂತಾಗಿದೆ. ಜತೆಗೆ ನ್ಯಾಯಾಲಯದ ಮೇಲಿದ್ದ ನಂಬಿಕೆ ಇನ್ನೂ ಹೆಚ್ಚಾಗಿದೆ. ಜತೆಗೆ ನೀರಾವರಿ ಜಮೀನನ್ನು ಹೆಚ್ಚು ಮಾಡಿಕೊಳ್ಳಲು ಕೋರ್ಟ್ ಅವಕಾಶ ನೀಡಿದ್ದು ರೈತರ ಪಾಲಿಗೆ ಖುಷಿಯ ವಿಚಾರ. ಇದು ಸಹ ನನಗೆ ತುಂಬಾ ಸಂತಸ ತಂದಿದೆ'' - ಪುನೀತ್ ರಾಜಕುಮಾರ್

ದುನಿಯಾ ವಿಜಿ ಸಂತಸ
''ಕಾವೇರಿ ವಿಚಾರದಲ್ಲಿ ಪ್ರತೀ ವರ್ಷ ಕಾವಷ್ಟೇ ಏರುತ್ತಿತ್ತು. ಕಾವೇರಿ ಮಾತ್ರ ಹರಿಯುತ್ತಿರಲಿಲ್ಲ. ಈ ತೀರ್ಪಿನಿಂದ ರೈತರಿಗೆ ಒಳ್ಳೆಯದಾಗುತ್ತದೆ. ಈ ಬಾರಿ ಕರ್ನಾಟಕ ಸಮರ್ಥವಾಗಿ ಕಾನೂನು ಹೋರಾಟ ನಡೆಸಿದೆ. ಇದಕ್ಕಾಗಿ ನಾನು ಕಾನೂನು ತಜ್ಞರ ತಂಡವನ್ನು ಅಭಿನಂದಿಸುತ್ತೇನೆ'' - ದುನಿಯಾ ವಿಜಯ್.
ಕಾವೇರಿ ತೀರ್ಪು: ರಜನಿಕಾಂತ್ ಟ್ವೀಟ್ ಗೆ ಕನ್ನಡಿಗರ ಆಕ್ರೋಶ

ಧನಂಜಯ್ ಆನಂದ
''ಕಾವೇರಿ ತೀರ್ಪು ಕೇಳಿ ನನಗೆ ನಿಜಕ್ಕೂ ಖುಷಿಯಾಯಿತು. ಇಷ್ಟು ದಿನಗಳಿಂದ ನಡೆದ ಹೋರಾಟಕ್ಕೆ ಗೆಲುವಾಗಿದೆ. ಇದೇ ರೀತಿ ದೇವರು ಕರುಣೆ ತೋರಿ ಸಮೃದ್ಧ ಮಳೆ ಬರುವಂತೆ ಮಾಡಲಿ. ಆಗ ರೈತ ಇನ್ನಷ್ಟು ಖುಷಿಯಾಗುತ್ತಾನೆ. ನಾನು ಒಬ್ಬ ರೈತನ ಮಗನಾಗಿ ಈ ತೀರ್ಪನ್ನು ಸ್ವಾಗತಿಸುತ್ತೇನೆ ಮತ್ತು ಖುಷಿಪಡುತ್ತೇನೆ'' - ನಟ ಧನಂಜಯ.

ದರ್ಶನ್ ಸಂತಸ
''ಕಾವೇರಿ ಗಲಾಟೆ ಸುಮಾರು ವರ್ಷದಿಂದ ನಡೆಯುತ್ತಲೇ ಇದೆ. ಕಾವೇರಿ ತೀರ್ಪು ಬಂತು ಅಂದ್ರೆ ಎಲ್ಲರಿಗೂ ಒಂಥರಾ ಭಯ ಶುರುವಾಗುತ್ತೆ. ಎಲ್ಲಿ ಬಂದ್ ಆಗುತ್ತೆ, ಎಲ್ಲಿ ಕರ್ಫ್ಯೂ ಹಾಕ್ತಾರೆ ಅಂತ. ಆದ್ರೆ, ಈ ದಿನ ಎಲ್ಲರ ಮನೆಯಲ್ಲೂ ಹಬ್ಬದ ವಾತಾವರಣವಿರುತ್ತೆ. ಯಾಕಂದ್ರೆ ಒಳ್ಳೆ ಸುದ್ದಿ ಸಿಕ್ಕಿದೆ. ಅದರಲ್ಲೂ ನನ್ನ ಹುಟ್ಟುಹಬ್ಬದ ದಿನ ಈ ಸುದ್ದಿ ಸಿಕ್ಕಿರೋದು ನನಗೆ ಖುಷಿ ಕೊಟ್ಟಿದೆ'' - ದರ್ಶನ್

ಸಾರಾ ಗೋವಿಂದು ಖುಷಿ
''14 ಟಿಎಂಸಿ ನೀರನ್ನು ನಮಗೆ ಉಳಿಸಿ ಈಗ 199 ಟಿಎಂಸಿ ಬದಲಿಗೆ 177 ಟಿಎಂಸಿ ನೀರು ಬಿಡಬೇಕು ಎಂದು ನ್ಯಾಯಾಲಯ ಹೇಳಿದೆ. ಆದರೆ ಮಳೆ ಬರದಿದ್ದರೆ ಹೇಗೆ ಬಿಡುವುದು? ಪ್ರತೀ ವರ್ಷ ಸಕಾಲಕ್ಕೆ ಮಳೆಯಾಗದಿದ್ದರೆ ಕಷ್ಟವಾಗುತ್ತದೆ. ಈ ಅಂಶವನ್ನು ಕಡೆಗಣಿಸಲಾಗಿದೆ. ಖುಷಿ ವಿಚಾರ ಏನೆಂದರೆ ಇಷ್ಟು ತೀರ್ಪುಗಳಲ್ಲಿ ಒಂದು ಆದೇಶವಾದರೂ ಕರ್ನಾಟಕದ ಪರವಾಗಿ ಬಂತಲ್ಲ'' -ಸಾರಾ ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

ಇದು ಕನ್ನಡಿಗರ ಗೆಲವು
ಕಾವೇರಿ ತೀರ್ಪಿನ ಬಗ್ಗೆ ಫೇಸ್ ಬುಕ್ ನಲ್ಲಿ ಸಂತಸ ವ್ಯಕ್ತಪಡಿಸಿರುವ ಬಿಗ್ ಬಾಸ್ ವಿನ್ನರ್ ಪ್ರಥಮ್ ''ಇದು ಕನ್ನಡಿಗರ ಗೆಲುವು'' ಎಂದಿದ್ದಾರೆ.


Click it and Unblock the Notifications











