Puneeth Birth Anniversary: ಸ್ಫೂರ್ತಿ ದಿನ; ಗಾಂಧಿನಗರದಿಂದ ಟೈಂಸ್ಕ್ವೇರ್‌ವರೆಗೆ ಸಂಭ್ರಮಾಚರಣೆ
ಅಭಿಮಾನಿಗಳ ಪ್ರೀತಿಯ ಅಪ್ಪು ಬಾರದಲೋಕಕ್ಕೆ ಪಯಣ ಬೆಳೆಸಿ ಎರಡೂವರೆ ವರ್ಷ ಕಳೆದಿದೆ. ಇಂದಿಗೂ ಪ್ರತಿದಿನ ಪ್ರತಿಕ್ಷಣ ಅಭಿಮಾನಿಗಳು ಪರಮಾತ್ಮನ ನೆನೆಯುತ್ತಲೇ ಇದ್ದಾರೆ. ರಾಜರತ್ನ ಇಂದು ಇದ್ದಿದ್ದರೆ 49ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುತ್ತಿದ್ದರು. ಸದಾಶಿವನಗರದ ನಿವಾಸದಲ್ಲಿ ಮಧ್ಯರಾತ್ರಿಯಿಂದಲೇ ಸಂಭ್ರಮಾಚರಣೆ ಮನೆ ಮಾಡುತ್ತಿತ್ತು.
ಪುನೀತ್ ರಾಜ್‌ಕುಮಾರ್ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ನಮನ ಸಲ್ಲಿಸಲಿದ್ದಾರೆ. ಕುಟುಂಬ ಸದಸ್ಯರು ಅಪ್ಪು ಸಮಾಧಿ ಪೂಜೆ ನೆರವೇರಿಸಲಿದ್ದಾರೆ. ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವು ಇನ್ನು ಕರಗಿಲ್ಲ. ಅವರ ಹೆಸರಿನಲ್ಲಿ ಅಭಿಮಾನಿಗಳು ಪುಣ್ಯ ಕೆಲಸಗಳನ್ನು ಮುಂದುವರೆಸಿದ್ದಾರೆ.

ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಅಪ್ಪು ಜನ್ಮದಿನದ ಹಿನ್ನೆಲೆ ಅಭಿಮಾನಿಗಳು ರಕ್ತದಾನ, ಅನ್ನದಾನದಂತಹ ಅರ್ಥಪೂರ್ಣ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ. ರಾತ್ರಿಯಿಂದಲೇ ರಾಜ್ಯದ ಮೂಲೆಮೂಲೆಗಳಿಂದ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಅಪ್ಪು ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ರಾತ್ರಿ 12 ಗಂಟೆಗೆ ಅಪ್ಪು ಸಮಾಧಿ ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವರಾಜ್ ಕುಮಾರ್ ಭೇಟಿ ನೀಡಿದ್ದರು.
ಕಂಠೀರವ ಸ್ಟುಡಿಯೋ ಬಳಿ ಬೆಳಗ್ಗೆ 10 ಗಂಟೆಯಿಂದ ಅಭಿಮಾನಿಗಳಿಗೆ ನಿರಂತರವಾಗಿ ಬಿರಿಯಾನಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಪುನೀತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮರು ಬಿಡುಗಡೆಯಾಗಿದ್ದ 'ಜಾಕಿ' ಸಿನಿಮಾ ಸಖತ್ ಸದ್ದು ಮಾಡ್ತಿದೆ. ಶುಕ್ರವಾರ ತೆರೆಕಂಡ ಸಿನಿಮಾ 1 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಶನಿವಾರವೂ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇಂದು(ಮಾರ್ಚ್ 17) ಅಪ್ಪು ಹುಟ್ಟುಹಬ್ಬ ಹಿನ್ನೆಲೆಯಲ್ಲಿ ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡುವ ನಿರೀಕ್ಷೆಯಿದೆ.
ಪಿಆರ್‌ಕೆ ಪ್ರೊಡಕ್ಷನ್ಸ್ ಜೊತೆ ಸೇರಿ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಚಿತ್ರವನ್ನು ತೆರೆಗೆ ತಂದಿದೆ. 'ಜಾಕಿ' ಮರುಬಿಡುಗಡೆಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. 175ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಅಪ್ಪಳಿಸಿದ್ದ ಚಿತ್ರಕ್ಕೆ ಮೊದಲ ದಿನವೇ ಹೌಸ್‌ಫುಲ್ ಪ್ರದರ್ಶನ ಕಂಡು ದಾಖಲೆ ಬರೆದಿದೆ. ಅಭಿಮಾನಿಗಳು ಥಿಯೇಟರ್‌ಗಳಲ್ಲಿ ಹಬ್ಬದ ರೀತಿ ಸಂಭ್ರಮಿಸಿದ್ದಾರೆ. 'ಜಾಕಿ' ಮರುಬಿಡುಗಡೆಗೆ ಸಿಕ್ಕ ರೆಸ್ಪಾನ್ಸ್ ನೋಡಿ ಕೆಆರ್‌ಜಿ ಸಂಸ್ಥೆ ಮುಂದಿನ ವರ್ಷ 'ಅಪ್ಪು' ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಅಭಿಮಾನಿಗಳು ಅಮೆರಿಕದ ನ್ಯೂಯಾರ್ಕ್‌ನ ಟೈಂಸ್ಕ್ವೇರ್‌ನಲ್ಲಿ ಇಬ್ಬರಿಗೂ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ವೈರಲ್ ಆಗುತ್ತಿದೆ. ಇನ್ನು ಪುನೀತ್ ರಾಜಕುಮಾರ್ ಹುಟ್ಟು ಹಬ್ಬವನ್ನು ಸ್ಫೂರ್ತಿ ದಿನ ಹೆಸರಿನಲ್ಲಿ ಆಚರಿಸುವುದಾಗಿ ಈಗಾಗಲೇ ಸರ್ಕಾರ ಘೋಷಣೆ ಮಾಡಿದೆ.
"ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ" ಎನ್ನುವ ಅಪ್ಪು ಹೇಳಿಕೆಯ ಸ್ಪೆಷಲ್ ಸಿಡಿಪಿ ಬಿಡುಗಡೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಡಿಪಿ ಸಖತ್ ವೈರಲ್ ಆಗುತ್ತಿದೆ. ಅಭಿಮಾನಿಗಳ ಫೇಸ್‌ಬುಕ್, ಇನ್‌ಸ್ಟಾ, ವಾಟ್ಸಪ್‌ನಲ್ಲಿ ರಾರಾಜಿಸುತ್ತಿದೆ. 1975 ಮಾರ್ಚ್ 17ರಂದು ಮದ್ರಾಸ್‌ನಲ್ಲಿ ಜನಿಸಿದ ಪುನೀತ್ ರಾಜ್‌ಕುಮಾರ್ ಚಿಕ್ಕಂದಿನಲ್ಲೇ ತಂದೆ ಜೊತೆಗೆ ಚಿತ್ರರಂಗ ಪ್ರವೇಶಿಸಿದರು.

ಬಾಲ್ಯದಲ್ಲಿ ತಮ್ಮ ನಟನೆ ಹಾಗೂ ಗಾಯನ ಮೂಲಕ ಮೋಡಿ ಮಾಡಿದ ಲೋಹಿತ್ ಹಲವು ಸಿನಿಮಾಗಳಲ್ಲಿ ಮಿಂಚಿದ್ದರು. ಬಳಿಕ 2002ರಲ್ಲಿ 'ಅಪ್ಪು' ಚಿತ್ರದಿಂದ ಹೀರೊ ಆಗಿ ಪ್ರೇಕ್ಷಕರನ್ನು ರಂಜಿಸಲು ಆರಂಭಿಸಿದರು. ಮುಂದೆ ಹಲವು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದರು. ತಮ್ಮ ಡ್ಯಾನ್ಸ್, ಫೈಟ್ಸ್, ಗಾಯನ, ನಟನೆಯಿಂದ ಸಿನಿರಸಿಕರ ಮನಗೆದ್ದರು. ನಟನೆ ಮಾತ್ರವಲ್ಲದೇ ತಮ್ಮ ಸಮಾಜಮುಖಿ ಕೆಲಸಗಳಿಂದಲೂ ಅಪ್ಪು ಅಭಿಮಾನಿಗಳಿಗೆ ಹತ್ತಿರವಾಗಿದ್ದರು.
ಅಕ್ಟೋಬರ್ 29, 2021 ರಂದು ಅಪ್ಪು ಹಠಾತ್ ಹೃದಯಾಘಾತದಿಂದ ನಿಧನರಾದರು. ತಮ್ಮ 46ನೇ ವಯಸ್ಸಿಗೆ ಇಹಲೋಕ ತ್ಯಜಿಸಿದರು. ಅಭಿಮಾನಿಗಳು ಈ ನೋವಿನಿಂದ ಇನ್ನು ಹೊರಬಂದಿಲ್ಲ.


Click it and Unblock the Notifications











