ಈ ವರ್ಷದ ಮೊದಲ 3 ತಿಂಗಳಲ್ಲೇ ಡಲ್ಲಾದ ಸ್ಯಾಂಡಲ್‌ವುಡ್; ಹಿಟ್, ಫ್ಲಾಪ್ ಲಿಸ್ಟ್ ಇಲ್ಲಿದೆ
ವರ್ಷದ 3 ತಿಂಗಳು ಕಳೆದೆ ಹೋಯ್ತು. ಸ್ಯಾಂಡಲ್‌ವುಡ್‌ನಲ್ಲಿ ಈ ವರ್ಷಾರಂಭ ಚೆನ್ನಾಗಿ ಇರಲಿಲ್ಲ. ಈ 13 ವಾರಗಳಲ್ಲಿ 70ಕ್ಕೂ ಅಧಿಕ ಕನ್ನಡ ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿವೆ. ಆದರೆ ಗೆದ್ದ ಸಿನಿಮಾಗಳ ಸಂಖ್ಯೆ ಕಮ್ಮಿಯಿದೆ
ಸ್ಟಾರ್ ನಟರ ದೊಡ್ಡ ಸಿನಿಮಾಗಳು ಈ ವರ್ಷ ತೆರೆಗೆ ಬರಲೇಯಿಲ್ಲ. ಸದ್ಯ ಐಪಿಎಲ್ ಫೀವರ್ ಜೋರಾಗಿದೆ. ಇನ್ನು 2 ತಿಂಗಳು ದೊಡ್ಡ ಸಿನಿಮಾಗಳು ಥಿಯೇಟರ್ ಕಡೆ ಮುಖ ಮಾಡುವುದು ಕಷ್ಟ ಎನ್ನುವಂತಾಗಿಬಿಟ್ಟಿದೆ. ಐಪಿಎಲ್ ದರ್ಬಾರ್ ನಡುವೆಯೂ ಕೆಲವರು ಸಿನಿಮಾಗಳನ್ನು ಬಿಡುಗಡೆ ಮಾಡುವ ಸಾಹಸ ಮಾಡುತ್ತಿದ್ದಾರೆ. ಅದರಲ್ಲಿ ಎಷ್ಟರಮಟ್ಟಿಗೆ ಯಶಸ್ಸು ಸಿಗುತ್ತದೆ ಕಾದು ನೋಡಬೇಕಿದೆ.

ಛೂ ಮಂತರ್
ಈ ವರ್ಷದ ಮೊದಲ ಹಿಟ್ ಕನ್ನಡ ಸಿನಿಮಾ 'ಛೂ ಮಂತರ್'. ಸಂಕ್ರಾಂತಿ ಸಂಭ್ರಮದಲ್ಲಿಜನವರಿ 10ಕ್ಕೆ ಈ ಹಾರರ್ ಕಾಮಿಡಿ ಸಿನಿಮಾ ತೆರೆಗೆ ಬಂದಿತ್ತು. ನವನೀತ್ ನಿರ್ದೇಶನದ ಚಿತ್ರವನ್ನ ತರುಣ್ ಶಿವಪ್ಪ ನಿರ್ಮಾಣ ಮಾಡಿದ್ದಾರೆ. ಯಶಸ್ವಿಯಾಗಿ 75 ದಿನ ಪೂರೈಸಿದ ಸಿನಿಮಾ ನಾಲ್ಕು ದಿನಗಳ ಹಿಂದೆ ಓಟಿಟಿಗೆ ಬಂದಿದೆ.
ಶರಣ್ ಹಾಗೂ ಚಿಕ್ಕಣ್ಣ 'ಛೂ ಮಂತರ್' ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಕಾಮಿಡಿ ಜೊತೆ ಜೊತೆಗೆ ಹಾರರ್ ಥ್ರಿಲ್ ಚಿತ್ರದಲ್ಲಿದೆ. ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್ ಕೂಡ ತಾರಾಗಣದಲ್ಲಿದ್ದಾರೆ. ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

ಸಂಜು ವೆಡ್ಸ್ ಗೀತಾ-2
ಈ ವರ್ಷ ಭಾರೀ ನಿರೀಕ್ಷೆ ಮೂಡಿಸಿ ಮುಗ್ಗರಿಸಿದ ಸಿನಿಮಾ 'ಸಂಜು ವೆಡ್ಸ್ ಗೀತಾ-2'. ನಾಗಶೇಖರ್ ನಿರ್ದೇಶನದ ಈ ರೊಮ್ಯಾಂಟಿಕ್ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜೊತೆ ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದರು. 14 ವರ್ಷಗಳ ಹಿಂದೆ ಬಂದಿದ್ದ 'ಸಂಜು ವೆಡ್ಸ್ ಗೀತಾ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಅದೇ ಗುಂಗಿನಲ್ಲಿ ಬಂದ ಹೊಸ ಸಿನಿಮಾ ಯಾಕೋ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ.
ಫಾರೆಸ್ಟ್
ಚಿಕ್ಕಣ್ಣ ಲೀಡ್ ರೋಲ್‌ನಲ್ಲಿ ನಟಿಸಿದ್ದ 'ಫಾರೆಸ್ಟ್' ಸಿನಿಮಾ ಕೂಡ ಪ್ರೇಕ್ಷಕರನ್ನು ತಕ್ಕ ಮಟ್ಟಿಗೆ ರಂಜಿಸಿತ್ತು. ಚಂದ್ರ ಮೋಹನ್ ನಿರ್ದೇಶನದ ಕಾಮಿಡಿ ಅಡ್ವೆಂಚರ್ಸ್ ಥ್ರಿಲ್ಲರ್ ಚಿತ್ರಕ್ಕೆ ಕಾಂತರಾಜ್ ಹಣ ಹೂಡಿದ್ದರು. ಚಿಕ್ಕಣ್ಣ ಜೊತೆಗೆ ಅನೀಶ್ ತೇಜೇಶ್ವರ್, ಗುರುನಂದನ್, ರಂಗಾಯಣ ರಘು, ಅರ್ಚನಾ ಕೊಟ್ಟಿಗೆ ಚಿತ್ರದ ತಾರಾಗಣದಲ್ಲಿದ್ದರು. ಜನವರಿ 24ಕ್ಕೆ ತೆರೆಗೆ ಬಂದಿದ್ದ ಸಿನಿಮಾ ಇತ್ತೀಚೆಗೆ ಸಿನಿಮಾ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆಗಿತ್ತು.
ರಾಯಲ್
ದಿನಕರ್ ತೂಗುದೀಪ ನಿರ್ದೇಶನದ 'ರಾಯಲ್' ಸಿನಿಮಾ ಕೂಡ ಹೀನಾಯವಾಗಿ ಸೋಲುಂಡಿತ್ತು. ವಿರಾಟ್ ಹಾಗೂ ಸಂಜನಾ ಆನಂದ್ ಈ ಚಿತ್ರದ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದರು. ಜಯಣ್ಣ-ಭೋಗೇಂದ್ರ ನಿರ್ದೇಶನದ ಸಿನಿಮಾ ಜನವರಿ 24ಕ್ಕೆ ತೆರೆಗೆ ಬಂದಿತ್ತು. ಆದರೆ ಸಿನಿಮಾ ಬಗ್ಗೆ ನೆಗೆಟಿವ್ ರಿವ್ಯೂಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. "ದರ್ಶನ್ ಮೇಲಿನ ಕೋಪವನ್ನು ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ" ಎಂದು ನಿರ್ದೇಶಕ ದಿನಕರ್ ಬೇಸರದಿಂದ ಹೇಳಿಕೊಂಡಿದ್ದರು.
ಸಿದ್ಲಿಂಗು-2
ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಯೋಗಿ ಹಾಗೂ ರಮ್ಯಾ ನಟನೆಯ 'ಸಿದ್ಲಿಂಗು' ಸಿನಿಮಾ ಹಿಟ್ ಆಗಿತ್ತು. ಅದೇ ಹಾದಿಯಲ್ಲಿ 'ಸಿದ್ಲಿಂಗು'-2 ಚಿತ್ರ ಮೂಡಿ ಬಂದಿತ್ತು. ಈ ಬಾರಿ ರಮ್ಯಾ ಬದಲು ಸೋನು ಗೌಡ ಚಿತ್ರದಲ್ಲಿ ನಟಿಸಿದ್ದರು. ಸಿನಿಮಾ ನೋಡಿದವರು ಒಪ್ಪಿಕೊಂಡರೂ ದೊಡ್ಡಮಟ್ಟದಲ್ಲಿ ಸಿನಿಮಾ ನೋಡಲು ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬರಲಿಲ್ಲ.
ವಿಷ್ಣುಪ್ರಿಯ
ಶ್ರೇಯಸ್ ಮಂಜು ಹಾಗೂ ಪ್ರಿಯಾ ವಾರಿಯರ್ ನಟನೆಯ 'ವಿಷ್ಣುಪ್ರಿಯ' ಸಿನಿಮಾ ಕೂಡ ನಿರೀಕ್ಷೆ ಹುಟ್ಟು ಹಾಕಿತ್ತು. ಬಹಳ ಹಿಂದೆ ಸೆಟ್ಟೇರಿದ್ದ ಸಿನಿಮಾ ಕೊಂಚ ತಡವಾಗಿ ಪ್ರೇಕ್ಷಕರ ಮುಂದೆ ಬಂದಿತ್ತು. ಮಲಯಾಳಂ ನಿರ್ದೇಶನ ವಿ. ಕೆ ಪ್ರಕಾಶ್ ಈ ರೊಮ್ಯಾಂಟಿಕ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಶ್ರೇಯಸ್ ತಂದೆ ಕೆ. ಮಂಜು ಹಣ ಹೂಡಿದ್ದರು. ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿತ್ತು. ಚಿತ್ರದಲ್ಲಿ 90ರ ದಶಕದ ಕಥೆ ಹೇಳಲಾಗಿತ್ತು. ಆದರೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು.
ಮನದ ಕಡಲು
ಮಾರ್ಚ್ ಕೊನೆ ವಾರದಲ್ಲಿ ಯೋಗರಾಜ್ ಭಟ್ ನಿರ್ದೇಶನದ 'ಮನದ ಕಡಲು' ತೆರೆಗೆ ಬಂದಿದೆ. ಚಿತ್ರದ ಬಗ್ಗೆ ಒಳ್ಳೆ ಮಾತುಗಳು ಕೇಳಿಬಂದಿದೆ. ಯುಗಾದಿ ವೀಕೆಂಡ್‌ನಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. 'ಮುಂಗಾರುಮಳೆ' ಚಿತ್ರ ನಿರ್ಮಿಸಿದ್ದ ಇ. ಕೃಷ್ಣಪ್ಪ ಈ ಚಿತ್ರಕ್ಕೂ ಹಣ ಹೂಡಿದ್ದಾರೆ. ಸುಮುಖ್, ರಶಿಕಾ ಶೆಟ್ಟಿ, ಅಂಜಲಿ ಚಿತ್ರದ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದಾರೆ. ಐಪಿಎಲ್ ಕಾವು ಶುರುವಾಗಿರುವ ಸಮಯದಲ್ಲಿ ಸಿನಿಮಾ ತೆರೆಗೆ ಬಂದಿದೆ. ಮುಂದೇನಾಗುತ್ತೋ ಕಾದು ನೋಡಬೇಕಿದೆ.
'ಅಪ್ಪು' ರೀ-ರಿಲೀಸ್
ಹೊಸ ಸಿನಿಮಾಗಳೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ವಿಫಲವಾಗುತ್ತಿವೆ. ಆದರೆ ಪುನೀತ್ ರಾಜ್‌ಕುಮಾರ್ ನಟನೆಯ 'ಅಪ್ಪು' ಸಿನಿಮಾ ರೀ-ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ಮಾರ್ಚ್ 14ರಂದು ಸಿನಿಮಾ ತೆರೆಗೆ ಬಂದಿತ್ತು. ಅಭಿಮಾನಿಗಳು ಹಬ್ಬದ ರೀತಿ ಚಿತ್ರವನ್ನು ಸ್ವಾಗತಿಸಿದ್ದರು. ಕೆಲ ಶೋಗಳು ಹೌಸ್‌ಫುಲ್ ಆಗಿ ಸದ್ದು ಮಾಡಿತ್ತು. 2 ಕೋಟಿ ರೂ.ವರೆಗೆ ಗ್ರಾಸ್ ಕಲೆಕ್ಷನ್ ಮಾಡಿದ ಅಂದಾಜಿದೆ.
ಈ ವರ್ಷ ಮೊದಲ 3 ತಿಂಗಳಲ್ಲಿ ಹೊರಬರ ಕಾರುಬಾರು ಜೋರಾಗಿತ್ತು. 'ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು', 'ಭುವನಂ ಗಗನಂ' ಸೇರಿ ಕೆಲ ಸಿನಿಮಾಗಳು ಗಮನ ಸೆಳೆಯುವ ಪ್ರಯತ್ನ ಮಾಡಿದ್ದವು. ಆದರೆ ದೊಡ್ಡಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ಸಿನಿಮಾ ನಿರ್ಮಿಸುವ, ನಟಿಸುವ, ನಿರ್ದೇಶಿಸುವ ಆಸೆಯಿಂದ ಸಾಕಷ್ಟು ಜನ ಚಿತ್ರರಂಗಕ್ಕೆ ಬರುತ್ತಲೇ ಇದ್ದಾರೆ. ಆದರೆ ಉತ್ತಮ ಸಿನಿಮಾಗಳು ಅಷ್ಟಾಗಿ ಮೂಡಿ ಬರುತ್ತಿಲ್ಲ.
ಕನ್ನಡ ಪ್ರೇಕ್ಷಕರು ಬಹಳ ನಿರೀಕ್ಷೆಯಿಂದ ಚಿತ್ರರಂಗಕ್ಕೆ ಬಂದಾಗ ಅದು ಹುಸಿಯಾಗಿದೆ. ಹಾಗಾಗಿ ಅಳೆದು ತೂಗಿ ಸಿನಿಮಾಗಳನ್ನು ನೋಡಲು ಮನಸ್ಸು ಮಾಡಿದ್ದಾರೆ. ದೊಡ್ಡ ಸಿನಿಮಾಗಳನ್ನು ಮಾತ್ರ ದೊಡ್ಡಪರದೆಯಲ್ಲಿ ನೋಡಲು ಮುಂದಾಗಿದ್ದಾರೆ. ಅದೇ ಕಾರಣಕ್ಕೆ ಕೆಲವೊಮ್ಮೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗುತ್ತಿವೆ. ಪ್ರಜ್ವಲ್ ದೇವರಾಜ್ ನಟನೆಯ 'ಗಣ' ಹಾಗೂ 'ರಾಕ್ಷಸ' ಸಿನಿಮಾ ಬಿಡುಗಡೆ ಆದರೂ ಸದ್ದು ಮಾಡಲಿಲ್ಲ.
ಒಂದೇ ವಾರಕ್ಕೆ ಏಳೆಂಟು ಕನ್ನಡ ಸಿನಿಮಾಗಳು ರಿಲೀಸ್ ಆಗಿ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿದೆ. ಆದರೆ ಪರಭಾಷೆಯ ಕೆಲ ಸಿನಿಮಾಗಳು ಕರ್ನಾಟಕದಲ್ಲಿ ಸದ್ದು ಮಾಡಿವೆ. ತೆಲುಗಿನ 'ಸಂಕ್ರಾಂತಿಕಿ ವಸ್ತುನ್ನಾಂ' 'ತಂಡೇಲ್' ರೀತಿಯ ಚಿತ್ರಗಳು ರಾಜ್ಯದಲ್ಲಿ ಸಖತ್ ಸದ್ದು ಮಾಡಿವೆ.
ಐಪಿಎಲ್ ಭೀತಿ ಕನ್ನಡ ಸಿನಿಮಾಗಳಿಗ ಮಾತ್ರವಲ್ಲ, ಪರಭಾಷಾ ಚಿತ್ರಗಳಿಗೂ ಆತಂಕ ತಂದಿದೆ. ಹಾಗಾಗಿ ದೊಡ್ಡ ಸಿನಿಮಾಗಳ ಬಿಡುಗಡೆಗೆ ಈಗ ಮೀನಾಮೇಷ ಎಣಿಸುವಂತಾಗಿದೆ. ಕರ್ನಾಟಕದಲ್ಲಿ ಇಷ್ಟು ದಿನ ತೆಲುಗು, ತಮಿಳು ಸಿನಿಮಾ ಆರ್ಭಟ ಜೋರಾಗಿ ಇರುತ್ತಿತ್ತ. ಆದರೆ ಈಗ ಮಲಯಾಳಂ ಸಿನಿಮಾ ಕೂಡ ಸದ್ದು ಮಾಡಲು ಆರಂಭಿಸಿದೆ. ಮೋಹನ್ ಲಾಲ್ ನಟನೆಯ 'L2: ಎಂಪುರಾನ್' ಸಿನಿಮಾ ರಾಜ್ಯದಲ್ಲಿ ದೊಡ್ಡಮಟ್ಟಿಗೆ ಬಿಡುಗಡೆ ಆಗಿದೆ. ಆದರೆ ಆರಂಭದಲ್ಲೇ ಚಿತ್ರಕ್ಕೆ ವಿಘ್ನ ಎದುರಾಗಿ ಸಂಕಷ್ಟ ಶುರುವಾಗಿದೆ.
ಕನ್ನಡದಲ್ಲಿ ಈ ವರ್ಷ 'KD', 'ಎಕ್ಕ', '45' ರೀತಿಯ ಇಂಟ್ರೆಸ್ಟಿಂಗ್ ಸಿನಿಮಾಗಳು ಮುಂದಿನ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿವೆ. ಅಕ್ಟೋಬರ್ ಮೊದಲ ವಾರದಲ್ಲಿ 'ಕಾಂತಾರ'-1 ಸಿನಿಮಾ ಬಿಡುಗಡೆ ಆಗಲಿದೆ. ಇದೇ ವರ್ಷ ದರ್ಶನ್ ನಟನೆಯ 'ಡೆವಿಲ್' ಸಿನಿಮಾ ತೆರೆಗೆ ಬಂದರೂ ಅಚ್ಚರಿ ಪಡಬೇಕಿಲ್ಲ.


Click it and Unblock the Notifications











