ಚಾಂದಿನಿ-ದಾಮಿನಿ ಏನಾದರು ? ಮಾನ್ಯ-ರೇಖಾ ಹೇಗಿದ್ದಾರೆ ? ಡೈಸಿ ಏನ್ಮಾಡ್ತಿದ್ದಾರೆ..?
ಈ ಬಣ್ಣದ ಪ್ರಪಂಚದಲ್ಲಿ ಯಾರಿಗೆ ಎಲ್ಲಿ, ಹೇಗೆ ಅದೃಷ್ಟದ ಬಾಗಿಲು ತೆರೆಯುತ್ತೆ ಎಂದು ಹೇಳಲು ಸಾಧ್ಯ ಇಲ್ಲ. ಅದರಲ್ಲಿಯೂ ಅಭಿನಯಿಸಿದ ಸಿನಿಮಾ ಒಂದು ಸಕ್ಸಸ್ ಆಗಿ ಬಿಟ್ಟರೆ ಸಾಕು ಅವಕಾಶಗಳು ಬೇಡವೆಂದರೂ ಬರುತ್ತಲೇ ಇರುತ್ತವೆ. ಹಾಗಂಥ ಅದೃಷ್ಟವನ್ನೇ ನೆಚ್ಚಿಕೊಂಡು ಇಲ್ಲಿ ಬಹುಕಾಲ ಉಳಿಯಲು ಸಾಧ್ಯ ಇಲ್ಲ. ಅದಕ್ಕೆ ತಕ್ಕ ಯೋಗ್ಯತೆ ಹಾಗೂ ಅರ್ಹತೆ ಕೂಡ ಇರಬೇಕು. ಆದರೆ ಕೆಲ ಒಮ್ಮೆ ಯೋಗ್ಯತೆ ಇದ್ದರೂ ಯೋಗ ಕೈ ಕೊಡುತ್ತೆ. ಈ ಕಾರಣಕ್ಕೆ ಬಣ್ಣದ ಲೋಕದಲ್ಲಿ ಇನ್ನೂ ಬಾನೆತ್ತರಕ್ಕೆ ಬೆಳಿಯಬೇಕಿದ್ದ ಅನೇಕರು ಕಾಲಚಕ್ರ ಉರುಳಿದಂತೆ ಇಲ್ಲಿ ಕಣ್ಮರೆಯಾಗಿದ್ದಾರೆ. ಆ ಪೈಕಿ ಕೆಲವರ ಸಂಕ್ಷಿಪ್ತ ಪರಿಚಯವನ್ನ ನಾವು ನಿಮಗೆ ಇಲ್ಲಿ ಮಾಡಿಕೊಡುವ ಪ್ರಯತ್ನವನ್ನ ಮಾಡ್ತಿದ್ದೇವೆ.

ದಾಮಿನಿ : ಉಪೇಂದ್ರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು ದಾಮಿನಿ. ಮೊದಲ ಸಿನಿಮಾದಲ್ಲಿಯೇ ಅಭೂತಪೂರ್ವ ಯಶಸ್ಸನ್ನ ಪಡೆದು, ಕನ್ನಡಿಗರ ಹೃದಯವನ್ನೂ ಗೆದ್ದ ದಾಮಿನಿ ಆ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಕೂಡ ನಟಿಸಿದರು. ಆದರೆ ಉಪೇಂದ್ರ ಚಿತ್ರದಂತೆ ಬೇರೆ ಯಾವ ಸಿನಿಮಾ ಕೂಡ ಇವರಿಗೆ ಜನಪ್ರಿಯತೆಯನ್ನ ತಂದು ಕೊಡಲಿಲ್ಲ. ಪ್ರಾಯಶ : ಚಿತ್ರಗಳ ಆಯ್ಕೆ ವಿಚಾರದಲ್ಲಿ ದಾಮಿನಿ ಎಡವಿದ್ರಾ ಗೊತ್ತಿಲ್ಲ. ಆದರೆ ಕಾಲಾನುಕ್ರಮೇಣ ದಾಮಿನಿಗೆ ಅವಕಾಶಗಳಿಂದ ವಂಚಿತರಾದರು. ತೆರೆ ಮರೆಗೆ ಸರಿದರು. ತಪ್ಪುಗಳನ್ನ ತಿದ್ದಿಕೊಂಡು ದಾಮಿನಿ ಇವತ್ತು ಚಿತ್ರರಂಗದಲ್ಲಿ ಸಕ್ರೀಯರಾಗಿದ್ದರೆ, ಅವಕಾಶದ ಬಾಗಿಲು ಮತ್ತೆ ದಾಮಿನಿಗೆ ತೆರೆಯುತ್ತಿತ್ತಾ ಗೊತ್ತಿಲ್ಲ. ಆದರೆ ದಾಮಿನಿ ಮಾತ್ರ ಕಾಣೆಯಾಗಿದ್ದು ಸತ್ಯ

ಚಾಂದಿನಿ : ದಾಮಿನಿಕ್ಕಿಂತ ಮೊದಲು, ಉಪೇಂದ್ರ ಜೊತೆ ಚಿತ್ರರಂಗಕ್ಕೆ ಕಾಲಿಟ್ಟವರು ಚಾಂದಿನಿ. ನ್ಯೂಯಾರ್ಕ್‌ನಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಾಂದನಿ ಅವರಿಗೆ 'ಮಿಸ್ ಫೋಟೋಜೆನಿಕ್' ಎಂಬ ಟೈಟಲ್ ಸಿಕ್ಕಿತ್ತು. ಈ ಟೈಟಲ್ ಮಾತ್ರ ಸಿಕ್ಕಿದ್ದಕ್ಕೆ ಚಾಂದಿನಿ ಅವರು ನಿಜ ಜೀವನದಲ್ಲಿ ತಾನು ಚೆನ್ನಾಗಿ ಕಾಣಿಸೋದಿಲ್ಲ ಎಂದು ಭಾವಿಸಿದ್ದರು. ಆದರೆ ಆ ಸ್ಪರ್ಧೆಯ ಜ್ಯೂರಿಯಾಗಿದ್ದ ಬಾಲಿವುಡ್ ನಟ ದೇವ್ ಆನಂದ್ ಅವರು ತೆರೆ ಮೇಲೆ ಕೂಡ ಚೆನ್ನಾಗಿ ಕಾಣಿಸುತ್ತೀಯಾ ಎಂದು ಚಾಂದನಿಗೆ ಹೇಳಿದ್ದರು. ಅಲ್ಲಿನ ಚಾಂದಿನಿ ಫೋಟೋಗಳು ಹೇಗೋ ಉಪೇಂದ್ರ ಅವರ ಮ್ಯಾನೇಜರ್‌ಗೆ ತಲುಪಿತ್ತು. ಆ ನಂತರ ಆಗಿದ್ದು ಇತಿಹಾಸ.
ಎ ಚಿತ್ರದ ನಂತರ ಡಾ.ಶಿವರಾಜ್ ಕುಮಾರ್ ಅವರ ಜೊತೆ ಎ.ಕೆ.47 ಚಿತ್ರದಲ್ಲಿಯೂ ನಟಿಸಿದ ಚಾಂದಿನಿ, ಕರುನಾಡೆನೆಲ್ಲೆಡೆ ಮನೆ ಮಾತಾದರು. ಆ ನಂತರ ಡಾ ವಿಷ್ಣುವರ್ಧನ್ 'ಅಭಿನಯದ ದೀಪಾವಳಿ' ಸಿನಿಮಾದಲ್ಲಿಯೂ ಚಾಂದಿನಿ ಬಣ್ಣ ಹಚ್ಚಿದರು.ಆದರೆ ಇದೇ ಸಮಯದಲ್ಲಿ ಚಿತ್ರರಂಗಕ್ಕಿಂತ ಶಿಕ್ಷಣ ಮುಖ್ಯವೆಂದು ಚಾಂದಿನಿಗೆ ಅನಿಸತೊಡಗಿತು. ಈ ಕಾರಣಕ್ಕೆ ಮತ್ತೆ ನ್ಯೂಯಾರ್ಕ್ ಗೆ ಮರಳಿದ ಚಾಂದಿನಿ ಆ ನಂತರ ಆಹಾರ ಹಾಗೂ ಕೃಷಿ ಮಾರ್ಕೆಟಿಂಗ್ ವಿಷಯಲ್ಲಿ ಕೊನೆಗೂ ಚಾಂದನಿ ಮಾಸ್ಟರ್ ಡಿಗ್ರಿ ಮಾಡಿದರು. ಪಿಎಚ್‌ಡಿ ಪದವಿಯನ್ನೂ ಕೂಡ ಪಡೆದರು.
ಚಾಂದಿನಿ ಕೊನೆಯದಾಗಿ ಕಾಣಿಸಿಕೊಂಡಿದ್ದು ಗುರುದತ್ ನಿರ್ದೇಶನದ 'ಖೈದಿ' ಚಿತ್ರದಲ್ಲಿ. ಅದಾದ ನಂತರ ಮತ್ತೆ ಕಣ್ಮರೆಯಾದ ಚಾಂದಿನಿ, ಸದ್ಯಕ್ಕೆ ಚೆನೈನಲ್ಲಿ ವಾಸ ಇದ್ದಾರೆ ಅನ್ನುವ ಮಾತಿದೆ.

ಡೈಸಿ ಬೋಪಣ್ಣ : ಗಾಳಿ ಪಟ, ರಾಮ ಶ್ಯಾಮ ಭಾಮ, ಭಗವಾನ್ , ಐಶ್ವರ್ಯ, ಸತ್ಯವಾನ್ ಸಾವಿತ್ರಿ, ಹೀಗೆ ಅನೇಕ ಸಿನಿಮಾಗಳ ಮೂಲಕ ಗುರುತಿಸಿಕೊಂಡವರು ಡೈಸಿ ಬೋಪಣ್ಣ. ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ ಆ ಕಾಲದಲ್ಲಿಯೇ ಹಿಂದಿಯಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡು, ಅಕ್ಷಯ್ ಕುಮಾರ್ ಜೊತೆ ಗರಂ ಮಸಾಲಾ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದ ಡೈಸಿ ಬೋಪಣ್ಣ ಖ್ಯಾತಿಯ ತುತ್ತ ತುದಿಯಲ್ಲಿ ಇದ್ದಾಗ್ಲೇ ಅಮಿತ್ ಜಯು ಜೊತೆ ಸಪ್ತಪದಿಯನ್ನ ತುಳಿದರು. 2012ರ ನಂತರ ಕನ್ನಡ ಚಿತ್ರರಂಗದಿಂದ ಕಣ್ಮರೆಯಾದರು.
ಆಗಾಗ ವಿದೇಶಗಳಿಗೆ ಟ್ರಿಪ್‌ಗೆ ಹೋಗುವ ಡೈಸಿ ಬೋಪಣ್ಣ ಸದ್ಯಕ್ಕೆ ಪತಿ ಜೊತೆ ದುಬೈನಲ್ಲಿದ್ದಾರೆ. ಸಂಸಾರದ ಜವಾಬ್ಧಾರಿಯನ್ನ ನಿರ್ವಹಿಸುತ್ತಿದ್ದಾರೆ. ಗೊತ್ತಿಲ್ಲ ಇಂದಲ್ಲ.. ನಾಳೆ.. ಡೈಸಿ ಬೋಪಣ್ಣ ಮತ್ತೆ ಚಿತ್ರರಂಗಕ್ಕೆ ಮರಳಿ ಬರಬಹುದು. ಆ ಸಾಧ್ಯತೆಯನ್ನ ತಳ್ಳಿ ಹಾಕುವಂತೆ ಇಲ್ಲ. ಡೈಸಿ ಬೋಪಣ್ಣ ಗ್ಲ್ಯಾಮರ್ ಇವತ್ತು ಕೂಡ ಕಡಿಮೆಯಾಗಿಲ್ಲ.

ರೇಖಾ : ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದು ಗೆದ್ದವರು ರೇಖಾ ವೇದವ್ಯಾಸ್. ಹುಚ್ಚ, ಚಿತ್ರ, ತುಂಟಾಟ, ಮೋನಾಲಿಸಾ, ಹುಡುಗಾಟ, ಚೆಲ್ಲಾಟ, ಹೀಗೆ ಹತ್ತು ಹಲವು ಚಿತ್ರ ಹಾಗೂ ವೈವಿಧ್ಯಮಯ ಪಾತ್ರಗಳಿಂದ, ಕನ್ನಡಿಗರ ಹೃದಯ ಗೆದ್ದ ರೇಖಾ, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಕೂಡ ಹೆಸರು ಮಾಡಿದರು. ದಕ್ಷಿಣ ಭಾರತದಾಂದ್ಯತ ಅಭಿಮಾನಿ ಬಳಗವನ್ನೂ ಸಂಪಾದಿಸಿದರು. ಆದರೆ. ಅದ್ಯಾರ ಮಸಣಿ ಕಣ್ಣು ಬಿತ್ತೋ ಗೊತ್ತಿಲ್ಲ. 2014ರಿಂದ ರೇಖಾ ಚಿತ್ರರಂಗದಿಂದ ಅಂತರವನ್ನ ಕಾಪಾಡಿಕೊಂಡರು. ಕಳೆದ ವರ್ಷ ತೆಲುಗು ಶೋ ಒಂದರಲ್ಲಿ ಏಕಾಏಕಿ ಪ್ರತ್ಯಕ್ಷ ಕೂಡ ಆದರು. ಆದರೆ, ಈ ಕಾರ್ಯಕ್ರಮಕ್ಕೆ ರೇಖಾ ಬಂದಾಗ ಅನೇಕರಿಗೆ ಆಶ್ಚರ್ಯವಾಗಿತ್ತು. ಗುರುತು ಹಿಡಿಯಲಾಗದಷ್ಟು ರೂಪ ಬದಲಾಗಿತ್ತು

ಆರೋಗ್ಯ ಸಮಸ್ಯೆ ಇದೆ ಎಂದಿದ್ದ ರೇಖಾ..!
ನಾನು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಅಚಾನಕ್ ಆಗಿ ಆಯಿತು. ಒಂದು ನಾನು ಹೇಳಲು ಇಷ್ಟಪಡುತ್ತೀನಿ. ಸಾಕಷ್ಟು ಜನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದು ಸಣ್ಣ ತಲೆನೋವು ಇರಬಹುದು, ಅಥವಾ ದೊಡ್ಡ ಸಮಸ್ಯೆಯೇ ಆಗಿರಬಹುದು. ಯಾವುದಕ್ಕೂ ಹೆಚ್ಚು ಒತ್ತಡ ತೆಗೆದುಕೊಳ್ಳಬಾರದು ಒತ್ತಡದಿಂದ ಆರೋಗ್ಯ ಸಮಸ್ಯೆ ಗಂಭೀರವಾಗುತ್ತದೆ. ಎಲ್ಲಕ್ಕಿಂತ ದೇವರಲ್ಲಿ ಹೆಚ್ಚಿನ ನಂಬಿಕೆ ಇಡಬೇಕು. ಯಾವುದೇ ದೇವರು ಆಗಿರಲಿ. ಅದಕ್ಕಿಂತ ಹೆಚ್ಚು ಜೀವನದಲ್ಲಿ ಏನು ಇಲ್ಲ. ನಿಮ್ಮ ಮೆಡಿಸಿನ್ ಕೆಲಸ ಮಾಡಿದ್ದಿದ್ದರೂ ನಿಮ್ಮ ನಂಬಿಕೆ ಕೆಲಸ ಮಾಡುತ್ತದೆ. ನನ್ನನ್ನು ಚೆನ್ನಾಗಿ ನಗಿಸಿ, ನಾನು ಬೇಗ ಚೇತರಿಸಿಕೊಳ್ತೀನಿ ಎಂದು ಹೇಳಿದ್ದರು ರೇಖಾ

ಮಾನ್ಯ : ಇಂಗ್ಲೆಂಡ್ ನಲ್ಲಿ ಹುಟ್ಟಿ ಬೆಳೆದ ಮಾನ್ಯ, ಅತ್ಯಲ್ಪ ಅವಧಿಯಲ್ಲಿಯೇ ಖ್ಯಾತಿಯ ಶಿಖರವನ್ನೇರಿದ್ದರು. ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ತೆರೆ ಹಂಚಿಕೊಂಡಿದ್ದರು. ಸಾಹಸಸಿಂಹ ಡಾ.ವಿಷ್ಣುವರ್ಧನ್ ಜೊತೆ ತೆರೆಯನ್ನ ಹಂಚಿಕೊಂಡಿದ್ದರು. ಆದರೆ, ಕನ್ನಡ ಚಿತ್ರರಂಗದಲ್ಲಿ ನೆಲೆಯೂರುವ ಸಮಯದಲ್ಲಿ 2008ರಲ್ಲಿ ಸತ್ಯ ಅವರನ್ನ ಮದುವೆಯಾದ ಮಾನ್ಯ ಆ ನಂತರ ಚಿತ್ರರಂಗದಿಂದ ದೂರವಾದರು. ಆದರೆ ವಿಪರ್ಯಾಸ ಸತ್ಯ ಅವರ ಜೊತೆ ಮಾನ್ಯ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. 2013ರಲ್ಲಿ ಸತ್ಯ ಅವರಿಂದ ದೂರವಾದ ಮಾನ್ಯ, ಅದೇ ವರ್ಷ ವಿಕಾಸ್ ಬಾಜಪೈ ಅವರ ಜೊತೆ ಸಪ್ತಪದಿ ತುಳಿದರು.
03 ವರ್ಷದ ಹಿಂದೆ ಪಾರ್ಶ್ವವಾಯುಗೆ ಗುರಿಯಾಗಿದ್ದ ಮಾನ್ಯ..!
2021ರಲ್ಲಿ ಇದೇ ಸಮಯದಲ್ಲಿ ಮಾನ್ಯ ಪಾರ್ಶ್ವವಾಯುಗೆ ಗುರಿಯಾಗಿದ್ದರು. ಆಗ ತಮ್ಮ ಅನಾರೋಗ್ಯದ ಬಗ್ಗೆ ಭಾವುಕವಾಗಿ ಪತ್ರವನ್ನ ಹಂಚಿಕೊಂಡಿದ್ದ ಮಾನ್ಯ ಮೂರು ವಾರಗಳ ಹಿಂದೆ ನಾನು ಗಾಯಗೊಂಡಿದ್ದೆ. ಬಳಿಕ ನನ್ನ ಎಡಭಾಗ ಪಾರ್ಶ್ವವಾಯುಗೆ ಸುತ್ತಾಯಿತು. ನನ್ನ ಎಡಗಾಲು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ನಾನು ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯಬೇಕಾಯಿತು ಎಂದಿದ್ದರು. ಇನ್ನೂ ನನ್ನ ಬೆನ್ನಿಗೆ ಸ್ಟೀರಾಯ್ಡ್ ಚುಚ್ಚುಮದ್ದು ನೀಡಲಾಗಿದೆ. ಕೋವಿಡ್ ಕಾರಣದಿಂದ ಯಾರಿಗೂ ಪ್ರವೇಶ ನೀಡುತ್ತಿಲ್ಲ. ನಾನು ಒಬ್ಬೊಂಟಿಯಾಗಿದ್ದೀನಿ. ನಾನು ಬೇಗನೆ ಗುಣಮುಖಳಾಗುತ್ತೇನೆ ಎಂದು ಭಾವಿಸುದ್ದೇನೆ. ಮೂರು ವಾರಗಳಿಂದ ನನಗೆ ಕುಳಿತುಕೊಳ್ಳಲು, ನಡೆಯಲು, ಮಲಗಲು ಆಗುತ್ತಿಲ್ಲ. ಆದರೆ ಮತ್ತೆ ನಾನು ಮೊದಲಿನ ಸ್ಥಿತಿಗೆ ಬರಲು ಪ್ರಯತ್ನಿಸುತ್ತಿದೀನಿ ಎಂದಿದ್ದರು ಮಾನ್ಯ.

'ನಾನು ಮತ್ತೆ ಡಾನ್ಸ್ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ. ಆದರೆ ವೈದ್ಯರು ನಿಧಾನವಾಗಿ ಚೇತರಿಸಿಕೊಂಡ ಬಳಿಕ ಮತ್ತೆ ಡಾನ್ಸ್ ಮಾಡಬಹುದು ಎಂದು ಹೇಳಿದ್ದಾರೆ. ನಾನು ನಿಧಾನವಾಗಿ ಗುಣಮುಖಳಾಗುತ್ತಿದ್ದೀನಿ ಇದಕ್ಕೆ ದೇವರಿಗೆ ಧನ್ಯವಾದ ತಿಳಿಸುತ್ತೇನೆ' ಎಂದು ದೀರ್ಘವಾಗಿ ಬರೆದುಕೊಂಡಿದ್ದರು. ಇನ್ನೂ ನಿಮ್ಮನ್ನು ನೀವು ಯಾವತ್ತು ಬಿಟ್ಟುಕೊಡಬೇಡಿ. ಪ್ರತಿಯೊಂದು ಚಿಕ್ಕ ವಿಚಾರಕ್ಕೂ ಹೋರಾಟ ಮಾಡಿ. ನಿಮ್ಮನ್ನು ಬಲಪಡಿಸುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಆ ಸಮಯದಲ್ಲಿ ನಾನು ತುಂಬಾ ನೊಂದಿದ್ದೆ. ತುಂಬಾ ಅತ್ತಿದ್ದೇನೆ. ಆದರೆ ಗೆದ್ದು ಬರುತ್ತೇನೆ. ಮತ್ತೆ ನಾನು ಡಾನ್ಸ್ ಮಾಡುತ್ತೇನೆ' ಎಂದು ಆತ್ಮವಿಶ್ವಾಸವನ್ನೂ ಮಾನ್ಯ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ಪಾರ್ಶ್ವವಾಯುನಿಂದ ಚೇತರಿಸಿಕೊಂಡಿರುವ ಮಾನ್ಯ ನ್ಯೂಯಾರ್ಕ್ ನಲ್ಲಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸವನ್ನ ಮಾಡ್ತಿದ್ದಾರೆ.
ಇವರೆಲ್ಲರಿಗೂ ಕನ್ನಡ ಚಿತ್ರರಂಗದಲ್ಲಿ ಬೆಳೆಯುವ ಅವಕಾಶ ಇತ್ತು. ಆರಂಭದಲ್ಲಿ ಅವಕಾಶದ ಹೆಬ್ಬಾಗಿಲೇ ಇವರೆಲ್ಲರಿಗೂ ತೆರೆದಿತ್ತು. ಆದರೆ, ಆ ನಂತರ ಬೇರೆ ಬೇರೆ ಕಾರಣಗಳಿಂದ, ಚಿತ್ರರಂಗದಿಂದ ಇವರೆಲ್ಲ ದೂರವಾದರು. ಕಾಲ ಇನ್ನೂ ಮಿಂಚಿಲ್ಲ. ಕನ್ನಡ ಚಿತ್ರರಂಗಕ್ಕೆ ಈ ನಟಿಯರೆಲ್ಲ ಮರಳಲಿ ಅನ್ನುವುದೇ ಅನೇಕ ಚಿತ್ರಪ್ರೇಮಿಗಳ ಆಶಯ


Click it and Unblock the Notifications











