ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ: ನಿರ್ದೇಶಕ ಕಿರಣ್ ಗೋವಿ(50) ಹೃದಯಾಘಾತದಿಂದ ನಿಧನ
ಕನ್ನಡ ಚಿತ್ರರಂಗದ ಸಿನಿಮಾ ನಿರ್ದೇಶಕ ಕಿರಣ್ ಗೋವಿ(50) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮಧ್ಯಾಹ್ನ ಆಫೀಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಹೃದಯನ ನೋವು ಕಾಣಿಸಿಕೊಂಡಿದೆ. ಕೂಡಲೇ ಆಪ್ತರು ಕಿರಣ್ ಗೋವಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿರ್ದೇಶಕ ನಿಧನರಾಗಿದ್ದಾರೆ.
ಸದ್ಯ ಉಲ್ಲಾಳದ ನಿವಾಸದಲ್ಲಿ ನಿರ್ದೇಶಕ ಕಿರಣ್ ಗೋವಿ ಪಾರ್ಥೀವ ಶರೀರವನ್ನು ಇಡಲಾಗಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. 'ಪಯಣ', 'ಸಂಚಾರಿ', 'ಯಾರಿಗೆ ಯಾರುಂಟು', 'ಪಾರು w/o ದೇವದಾಸ್' ಸಿನಿಮಾಗಳನ್ನು ಕಿರಣ್ ಗೋವಿ ನಿರ್ದೇಶನ ಮಾಡಿದ್ದರು. ಕಿರಣ್ ಗೋವಿ ನಿಧನಕ್ಕೆ ಆಪ್ತರು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ಮೂಲತಃ ತುಮಕೂರಿನವರಾದ ಕಿರಣ್ ಗೋವಿ ಓದಿ ಬೆಳೆದಿದ್ದು ಬೆಂಗಳೂರಿನಲ್ಲಿ. ಶಿಕ್ಷಣದಲ್ಲಿ ಹಿಂದುಳಿದ ಕಾರಣ ಕಿರಣ್ ಆರ್ಕೇಸ್ಟ್ರಾ ಸೇರಿಕೊಂಡಿದ್ದರು. ಮುಂದೆ ಚಿತ್ರರಂಗಕ್ಕೆ ಬಂದಿದ್ದರು. ಕೆಲ ಧಾರಾವಾಹಿಗಳಲ್ಲೂ ಕಿರಣ್ ಗೋವಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಹೊಸ ಕಲಾವಿದರ ತಂಡ ಕಟ್ಟಿಕೊಂಡು ಸಿನಿಮಾ ನಿರ್ದೇಶಿಸಿ, ಸ್ನೇಹಿತರ ಜೊತೆ ಸಿನಿಮಾ ನಿರ್ಮಾಣ ಮಾಡಲು ಕಿರಣ್ ಪ್ರಯತ್ನಿಸುತ್ತಿದ್ದರು. ಒಟ್ನಲ್ಲಿ ಹೃದಯಾಘಾತದಿಂದ ಕಿರಣ್ ಹಠಾತ್ ನಿಧನ ಚಿತ್ರರಂಗಕ್ಕೆ ಆಘಾತ ತಂದಿದೆ.
ಕಿರಣ್ ಗೋವಿ ನಿರ್ದೇಶನದ 'ಪಯಣ' ಚಿತ್ರದಲ್ಲಿ ರವಿಶಂಕರ್ ಗೌಡ ನಾಯಕರಾಗಿ ನಟಿಸಿದ್ದರು. ಗೆಳೆಯನ ಅಗಲಿಕೆ ಬಗ್ಗೆ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. "ಆರ್ಕೆಸ್ಟ್ರಾದಲ್ಲಿ ನಾನು ಹಾಡುತ್ತಿದ್ದಾಗ ಕಿರಣ ನಿರೂಪಣೆ ಮಾಡುತ್ತಿದ್ದ ಅಂದಿನಿಂದಲೂ ಉತ್ತಮ ಗೆಳೆಯನಾಗಿದ್ದ ಕಿರಣ .
ನಾನು ನಾಯಕನಟನಾಗಿ ಅಭಿನಯಿಸಿದ ಮೊದಲ ಸಿನಿಮಾ 'ಪಯಣ'ದ ನಿರ್ದೇಶಕ , ಹಾಗೂ ಇತರೆ ಉತ್ತಮ ಚಿತ್ರಗಳನ್ನು ಕೂಡ ನಿರ್ದೇಶನ ಮಾಡಿದ್ದ ಕಿರಣ ನಿಜಕ್ಕೂ ಪ್ರತಿಭಾವಂತ. ಆದರೆ ಇಂದು ತನ್ನ ಬದುಕಿನ ಪಯಣ ಮುಗಿಸಿ ಬಾರದೂರಿಗೆ ತೆರಳಿದ್ದಾನೆ. ಅವನ ಆತ್ಮಕ್ಕೆ ಚಿರಶಾಂತಿ ನೀಡಲಿ" ಎಂದು ಪೋಸ್ಟ್ ಮಾಡಿದ್ದಾರೆ.


Click it and Unblock the Notifications











