ಕೋಟಿ ಕೋಟಿ ಲೂಟಿ ಮಾಡ್ತಿವೆ ಕನ್ನಡ ಸಿನಿಮಾಗಳು
ಇನ್ನೊಂದೆರೆಡು ವರ್ಷ ಕಳೀರಿ ಕನ್ನಡ ಸಿನಿಮಾಗಳು ತೆಲುಗು, ತಮಿಳು ಸಿನಿಮಾಗಳಿಗೆ ಖಂಡಿತಾ ಸೆಡ್ಡು ಹೊಡೀತವೆ ಅನ್ನೋ ಅದೆಷ್ಟೋ ಸಿನಿಪಂಡಿತರ ವಾದಕ್ಕೆ ಜೀವ ಬಂದಿದೆ. ಕನ್ನಡ ಸಿನಿಮಾಗಳೂ ಕೂಡ ದಿನಕ್ಕೆ ಕೋಟಿ ಕೋಟಿ ಕೊಳ್ಳೆ ಹೊಡೆಯೋ ಕಾಲ ಬಂದಿದೆ.
ಕಳೆದ ಒಂದು ವರ್ಷದಿಂದೀಚೆಗೆ ಕನ್ನಡದ ಸ್ಟಾರ್ ನಟರ ಸಿನಿಮಾಗಳ ಕಲೆಕ್ಷನ್ ಲೆಕ್ಕ ಹಾಕಿ. ಮೊದಲ ದಿನವೇ ಕೋಟಿ ಗಳಿಸಿರೋ ಸಿನಿಮಾಗಳ ಲಿಸ್ಟೇ ಸಿಕ್ಕುತ್ತೆ. ದರ್ಶನ್, ಸುದೀಪ್, ಪುನೀತ್, ಉಪ್ಪಿ ಸಿನಿಮಾಗಳು ಮೊದಲ ದಿನವೇ ಕೋಟಿ ಕೊಳ್ಳೆ ಹೊಡೀತಿವೆ.
ತಮಿಳು ಸಿನಿಮಾ ಒಂದು ವಾರದಲ್ಲಿ 10 ಕೋಟಿ ಕಲೆಕ್ಷನ್ ಅಂತೆ ತೆಲುಗು ಸಿನಿಮಾ ಮೊದಲ ವಾರಾನೇ 15 ಕೋಟಿ ಗಳಿಸ್ತಂತೆ ಅನ್ನೋ ಲೆಕ್ಕಾಚಾರ ಕನ್ನಡದಲ್ಲೂ ಶುರುವಾಗಿದೆ. ನಮ್ಮ ಸಿನಿಮಾಗಳು ಯಾರಿಗೂ ಕಮ್ಮಿ ಇಲ್ಲ. ತೆಲುಗು, ತಮಿಳಲ್ಲೇ ಯಾಕೆ ಕನ್ನಡದಲ್ಲೂ ಒಂದು ಹಾಡಿಗೆ 70 ಲಕ್ಷ ಖರ್ಚು ಮಾಡ್ತಿದ್ದಾರೆ. [ಬಾಕ್ಸ್ ಆಫೀಸಲ್ಲಿ ಭರ್ಜರಿ ಬೆಳೆ ತೆಗೆದ ಕಿಚ್ಚ 'ಮಾಣಿಕ್ಯ']
ಒಂದೇ ಒಂದು ಫೈಟಿಂಗ್ ಸೀಸ್ ಎಂಟು ದಿನ ಮಾಡ್ತಿದ್ದಾರೆ. ಅಂದ್ರೆ ಕನ್ನಡದಲ್ಲೂ ಪರಭಾಷೆಗಳ ನಲವತ್ತು, ಐವತ್ತು ಕೋಟಿಗಳ ರಿಚ್ ಸಿನಿಮಾ ಬರೋಕೆ ರೆಡಿಯಾಗ್ತಿವೆ. ಹಾಗಾದ್ರೆ ಅಂತಹ ಕೋಟಿ ಕಲೆಕ್ಷನ್ ಮಾಡಿದ ಸಿನಿಮಾಗಳು ಯಾವುವು ಅನ್ನೋದ್ರ ಒಂದು ಲಿಸ್ಟ್ ಇಲ್ಲಿದೆ ನೋಡಿ.

ಮಾಣಿಕ್ಯ ಮೊದಲ ದಿನ ರು.3 ಕೋಟಿ
ಕಿಚ್ಚ ಸುದೀಪ್, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಮಾಣಿಕ್ಯ' ರಿಲೀಸಾದ ಮೊದಲ ದಿನ ಅಂದ್ರೆ ಮೇ 1 ಕ್ಕೆ ರಾಜ್ಯಾದ್ಯಂತ ರು.3 ಕೋಟಿ ಕಲೆಕ್ಷನ್ ಮಾಡಿದೆ. ಇದು ಹೆಚ್ಚೂ ಕಡಿಮೆ ತಮಿಳು, ತೆಲುಗು ಭಾಷೆಯ ಹೀರೋಗಳ ಸಿನಿಮಾದ ಕಲೆಕ್ಷನ್ ಗೆ ಸಮ.

ವಾರದಲ್ಲಿ ರು.10 ಕೋಟಿಯ ಮಾಣಿಕ್ಯ
ಮಾಣಿಕ್ಯ ಚಿತ್ರ ರಿಲೀಸ್ ಗೂ ಮೊದಲೇ ಚಿತ್ರತಂಡ ಚಿತ್ರವನ್ನ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಿ ವಾರದಲ್ಲಿ ರು.10 ಕೋಟಿ ಕಲೆಕ್ಷನ್ ಲೆಕ್ಕಚಾರದಲ್ಲಿತ್ತು. ಮೊದಲ ದಿನವೇ ಮೂರು ಕೋಟಿ ಅಂದ್ರೆ ಬರುವ ಶನಿವಾರ, ಭಾನುವಾರ ಸೇರಿ ಆರು ದಿನಗಳಲ್ಲಿ ಉಳಿದ ಏಳು ಕೋಟಿ ಕೊಳ್ಳೆ ಹೊಡೆಯೋದು ಅಸಾಧ್ಯವೇನಲ್ಲ.

ಬ್ರಹ್ಮ ಕೋಟಿ ಕಮಾಲ್ ಮಾಡಿತ್ತು
ರಿಯಲ್ ಸ್ಟಾರ್ ಉಪ್ಪಿ ಅಭಿನಯದ 'ಬ್ರಹ್ಮ' ಸಿನಿಮಾ ಮೊದಲ ಮೂರು ದಿನದಲ್ಲಿ ಹೆಚ್ಚೂ ಕಡಿಮೆ ಆರು ಕೋಟಿ ಗಳಿಸಿತ್ತು. ಇದನ್ನ ಡೈಲಿ ಕಲೆಕ್ಷನ್ ರಿಪೋರ್ಟ್ ಸಮೇತ ನ ನಿರ್ದೇಶಕ ಚಂದ್ರು ಪ್ರೂವ್ ಮಾಡಿದ್ರು.

ಕೋಟಿಗಳ ದರ್ಶನ 'ಬೃಂದಾವನ'
ಚಾಲೆಂಜಿಂಗ್ ಸ್ಟಾರ್ ಅಭಿನಯದ ಬಹುಕೋಟಿ ಬಜೆಟ್ 'ಬೃಂದಾವನ' ಚಿತ್ರ ಕೂಡ ಮೊದಲ ದಿನವೇ ಒಂದು ಕೋಟಿಗಿಂತಲೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಮೊದಲ ವಾರದಲ್ಲೇ ಚಿತ್ರದ ಕಲೆಕ್ಷನ್ ಬಜೆಟ್ ಗೆ ಹತ್ತಿರವಾಗಿತ್ತು.

ನಿನ್ನಿಂದಲೇ ಬಾಕ್ಸಾಫೀಸ್ ಗೆಲುವು
ಬೃಂದಾವನ ಚಿತ್ರದ ಹಾದಿಯಲ್ಲೇ ಸಾಗಿದ 'ನಿನ್ನಿಂದಲೇ' ಚಿತ್ರ. ಅದ್ಭುತ ಸಿನಿಮಾ ಅನ್ನಿಸಿಕೊಳ್ಳದಿದ್ರೂ ಭರ್ಜರಿ ಪ್ರಚಾರ ಪಡ್ಕೊಂಡಿದ್ದರಿಂದ ಮೊದಲ ದಿನ ಕೋಟಿ ಗಳಿಕೆ ಮಾಡಿ ನಿರ್ಮಾಪಕರು ಮತ್ತು ವಿತರಕರಿಗೆ ನೆಮ್ಮದಿ ತಂದಿತ್ತು.

ಭಜರಂಗಿಗೂ ಭರ್ಜರಿ ಓಪನಿಂಗ್
ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ ಅಭಿನಯದ 'ಭಜರಂಗಿ' ಕೂಡ ಮೊದಲ ವಾರದ ಕಲೆಕ್ಷನ್ ನಲ್ಲಿ ಹಿಂದೆ ಬೀಳಲಿಲ್ಲ. ಕೋಟಿಗಳನ್ನ ಕೊಳ್ಳೆ ಹೊಡೆದು ಯಂಗ್ ಸ್ಟಾರ್ ಗಳ ಸಿನಿಮಾ ಮುಂದೆ ಕಡಿಮೆಯೇನಿಲ್ಲ ಅನ್ನಿಸಿಕೊಳ್ತು.


Click it and Unblock the Notifications











