ಫಸ್ಟ್ ಹಾಫ್ ರಿಪೋರ್ಟ್: ಆರು ತಿಂಗಳಲ್ಲಿ ಮಕಾಡೆ ಮಲಗಿದ ಚಿತ್ರಗಳೇ ಹೆಚ್ಚು.!
Recommended Video

2018 ಈಗೀಗ ಶುರುವಾದಂತಿದೆ... ಅಷ್ಟು ಬೇಗ ಅರ್ಧ ವರ್ಷ ಮುಗಿದು ಹೋಗಿರೋದು ಗೊತ್ತಾಗುತ್ತಲೇ ಇಲ್ಲ... ಕಣ್ಮುಚ್ಚಿ ಕಣ್ತೆರೆಯುವುದರಲ್ಲಿ ಜೂನ್ ತಿಂಗಳು ಬಂದೇ ಬಿಟ್ಟಿದೆ.
ಒಂದ್ಕಡೆ ಕರ್ನಾಟಕ ವಿಧಾನಸಭೆ ಚುನಾವಣೆ 2018, ಇನ್ನೊಂದ್ಕಡೆ ಐ.ಪಿ.ಎಲ್ ಟೂರ್ನಿ, ಮತ್ತೊಂದೆಡೆ ಪರೀಕ್ಷೆಗಳು... ಈ ಎಲ್ಲದರ ನಡುವೆ ಫಸ್ಟ್ ಹಾಫ್ ಮುಕ್ತಾಯ ಆಗಿ ಇದೀಗ ಇಂಟರ್ವಲ್ ಸಮಯ.
ಹಾಗ್ನೋಡಿದ್ರೆ, ಫಸ್ಟ್ ಹಾಫ್ ನಲ್ಲಿ ರಾಜಕೀಯದ್ದೇ ಮೇಲುಗೈ. ನಮ್ಮ ಸ್ಯಾಂಡಲ್ ವುಡ್ ವಿಷಯಕ್ಕೆ ಬಂದ್ರೆ ಫಸ್ಟ್ ಹಾಫ್ ಬೋರೋ ಬೋರು.! ಕಳೆದ ಆರು ತಿಂಗಳಲ್ಲಿ 'ಟಗರು' ಬಿಟ್ಟರೆ ಬೇರೆ ಯಾವ ಚಿತ್ರವೂ ಹೇಳಿಕೊಳ್ಳುವಂಥ ಯಶಸ್ಸು ಕಾಣಲಿಲ್ಲ.
ಬಿಡುಗಡೆ ಆದ ಒಟ್ಟು 98 ಚಿತ್ರಗಳಲ್ಲಿ ಲಾಭ ಮಾಡಿದ ಚಲನಚಿತ್ರಗಳು ಕೇವಲ ಬೆರಳೆಣಿಕೆಯಷ್ಟು. ಹೌದಾ... ಎಂದು ಬಾಯಿ ಮೇಲೆ ಬೆರಳಿಡುವ ಮುನ್ನ ಫಸ್ಟ್ ಹಾಫ್ ರಿಪೋರ್ಟ್ ನೋಡಿಕೊಂಡು ಬನ್ನಿ....

23 ವಾರ, 98 ಸಿನಿಮಾಗಳು
ಈ ವರ್ಷದ ಜೂನ್ 15 ರವರೆಗೂ 23 ಶುಕ್ರವಾರಗಳು ಕಳೆದಿವೆ. ಪ್ರತಿ ವಾರ ನಾಲ್ಕು ಸಿನಿಮಾಗಳಂತೆ ಒಟ್ಟು 98 ಕನ್ನಡ ಸಿನಿಮಾಗಳು ಬಿಡುಗಡೆ ಆಗಿದೆ. ನಂದಕಿಶೋರ್ ನಿರ್ದೇಶನದ ಮನೋರಂಜನ್ ರವಿಚಂದ್ರನ್ ಅಭಿನಯದ 'ಬೃಹಸ್ಪತಿ' ಈ ವರ್ಷ ತೆರೆಕಂಡ ಪ್ರಪ್ರಥಮ ಚಿತ್ರ. 'ಬೃಹಸ್ಪತಿ' ಚಿತ್ರದಿಂದ ಹಿಡಿದು 'ಮೇಘ ಅಲಿಯಾಸ್ ಮ್ಯಾಗಿ'ವರೆಗೂ 'ಟಗರು' ಬಿಟ್ಟರೆ ಇನ್ಯಾವ ಚಿತ್ರವೂ ಭರ್ಜರಿ ಯಶಸ್ಸು ಕಂಡಿಲ್ಲ.

ಶತದಿನೋತ್ಸವ ಆಚರಿಸಿದ ಏಕೈಕ ಚಿತ್ರ 'ಟಗರು'
ಈ ವರ್ಷ ಶತದಿನೋತ್ಸವ ಆಚರಿಸಿದ ಏಕೈಕ ಚಿತ್ರ ಅಂದ್ರೆ ಅದು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಟಗರು'. ಹಂಡ್ರೆಡ್ ಡೇಸ್ ಓಡಿದ್ದೂ ಅಲ್ಲದೇ, ಬಾಕ್ ಆಫೀಸ್ ಲೂಟಿ ಮಾಡುವಲ್ಲಿ 'ಟಗರು' ಯಶಸ್ವಿ ಆಯ್ತು. ಈ ವರ್ಷ ನಿರ್ಮಾಪಕರ ಜೇಬು ತುಂಬಿಸಿದ ಚಿತ್ರಗಳ ಪೈಕಿ 'ಟಗರು' ಕೂಡ ಒಂದು.

ಲಾಭ ಮಾಡಿದ ಚಿತ್ರಗಳು ಯಾವುವು.?
'ಟಗರು' ಜೊತೆಗೆ ಶರಣ್ ಅಭಿನಯದ 'Rambo 2', 'ರಾಜು ಕನ್ನಡ ಮೀಡಿಯಂ', 'ಹಂಬಲ್ ಪೊಲಿಟಿಶಿಯನ್ ನಾಗರಾಜ್' ಹಾಗೂ 'ಗುಳ್ಟು' ಚಿತ್ರಗಳು ಲಾಭ ಮಾಡಿವೆ. ಬಿಡುಗಡೆಗೂ ಮುನ್ನವೇ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುವಲ್ಲಿಯೂ ಸಕ್ಸಸ್ ಆದ ಕಾರಣ ನಿರ್ಮಾಪಕರಿಗೆ ನಷ್ಟ ಆಗಲಿಲ್ಲ.

ಥಿಯೇಟರ್ ನಲ್ಲಿ ನೆಲೆಯೂರದ ಚಿತ್ರಗಳು
'ಬೃಹಸ್ಪತಿ', 'ಕನಕ', 'ಪ್ರೇಮ ಬರಹ', 'ಸಂಹಾರ', 'ರಾಜರಥ', 'ಜಾನಿ ಜಾನಿ ಎಸ್ ಪಪ್ಪಾ', 'ಸೀಝರ್', 'ಬಕಾಸುರ', 'ಹೆಬ್ಬೆಟ್ ರಾಮಕ್ಕ', 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ', 'ವೆನಿಲ್ಲಾ' ಚಿತ್ರಗಳು ಗಾಂಧಿನಗರದ ಮೂಲೆ ಮೂಲೆಯಲ್ಲಿ ಸೌಂಡ್ ಮಾಡಿದರೂ, ಹೆಚ್ಚು ದಿನ ಥಿಯೇಟರ್ ನಲ್ಲಿ ನಿಲ್ಲಲಿಲ್ಲ.

ಗಾಂಧಿನಗರಕ್ಕೆ ಅಂತಹ ಲಾಭ ಆಗಿಲ್ಲ.!
ಹೊಸ ನಿರೀಕ್ಷೆಯಿಂದ ಆರಂಭವಾದ ಈ ವರ್ಷದಲ್ಲಿ ಗಾಂಧಿನಗರಕ್ಕೆ ಅಂಥ ಲಾಭವೇನೂ ಆಗಿಲ್ಲ ಅನ್ನೋದು ಮಾತ್ರ ಕಟು ಸತ್ಯ.

ಸ್ಟಾರ್ ಗಳು ಇನ್ನೂ ಅಕೌಂಟ್ ಓಪನ್ ಮಾಡಿಲ್ಲ
ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ಇನ್ನೂ ಈ ವರ್ಷ ಅಕೌಂಟ್ ಓಪನ್ ಮಾಡಿಲ್ಲ. ಹೀಗಾಗಿ, ಫಸ್ಟ್ ಹಾಫ್ ಸ್ವಲ್ಪ ಡಲ್ ಆಗಿಯೇ ಇದೆ.

ಟೈಮ್ ಸರಿಯಿರಲಿಲ್ಲ.!
ಐ.ಪಿ.ಎಲ್ ಮತ್ತು ಎಕ್ಸಾಂಗಳ ಜೊತೆಗೆ ವಿಧಾನಸಭೆ ಚುನಾವಣೆ ಇದ್ದ ಕಾರಣ ಈ ವರ್ಷ ಥಿಯೇಟರ್ ಕಡೆ ಮುಖ ಮಾಡುವವರ ಸಂಖ್ಯೆ ಕಮ್ಮಿ ಇತ್ತು. ಹೀಗಾಗಿ, ಕೆಲವರು ಅಂದುಕೊಂಡ ದಿನದಂದು ಸಿನಿಮಾ ಬಿಡುಗಡೆ ಮಾಡಲೇ ಇಲ್ಲ. ಚಿತ್ರ ಬಿಡುಗಡೆ ಆದರೂ ನಿರೀಕ್ಷಿಸಿದ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲ.

ಪಿಕ್ಚರ್ ಇನ್ನೂ ಬಾಕಿ ಇದೆ
ಫಸ್ಟ್ ಹಾಫ್ ಅಷ್ಟಕಷ್ಟೆ ಅಂತಿದ್ದವರೆಲ್ಲ ಈಗ ಸೆಕೆಂಡ್ ಹಾಫ್ ಕಡೆ ಮುಖ ಮಾಡಿದ್ದಾರೆ. ಯಾಕಂದ್ರೆ, 'ಕುರುಕ್ಷೇತ್ರ', 'ಕೆಜಿಎಫ್', 'ಅಂಬಿ ನಿಂಗ್ ವಯಸ್ಸಾಯ್ತೋ', 'ನಟ ಸಾರ್ವಭೌಮ' ಚಿತ್ರಗಳು ಇದೇ ವರ್ಷ ರಿಲೀಸ್ ಆಗಲಿವೆ. ಮೊದಲಾರ್ಧದ ವಹಿವಾಟಿನ ಬಗ್ಗೆ ಬೆಟ್ಟು ಮಾಡಿ ತೋರಿಸಿದವರು ದ್ವಿತೀಯಾರ್ಧದಲ್ಲಿ ತೃಪ್ತಿ ಪಟ್ಟುಕೊಳ್ತಾರಾ, ನೋಡೋಣ.


Click it and Unblock the Notifications











