ಕನ್ನಡ ಚಿತ್ರರಂಗದ ನಿರ್ಮಾಪಕ, ವಿತರಕ ಕೆಸಿಎನ್ ಮೋಹನ್ ಇನ್ನಿಲ್ಲ
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆಸಿಎನ್ ಮೋಹನ್ ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕೆಸಿಎನ್ ಮೋಹನ್ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾತೆ. ಕನ್ನಡದಲ್ಲಿ ಹಲವು ಹಿಟ್ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು.
ಕಿಡ್ನಿ ಸಮಸ್ಯೆಯಿಂದ ಇತ್ತೀಚೆಗೆ ಚಿಕಿತ್ಸೆ ಪಡೆದು ಕೆಸಿಎನ್ ಮೋಹನ್ ಗುಣಮುಖರಾಗಿ ಮನಗೆ ವಾಪಸ್ ಆಗಿದ್ದರು. ಮೊನ್ನೆ ಮತ್ತೆ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮಧ್ಯಾಹ್ನ 12.30ರ ಸುಮಾರಿಗೆ ಕೆಸಿಎನ್ ಮೋಹನ್ ಕೊನೆಯುಸಿರೆಳಿದರು ಎನ್ನುವ ಮಾಹಿತಿ ಲಭ್ಯವಾಗಿದೆ. ಅವರು ಒಬ್ಬ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಖ್ಯಾತ ಸಿನಿಮಾ ನಿರ್ಮಾಪಕರಾದ ಕೆಸಿಎನ್ ಗೌಡರ ಪುತ್ರ ಕೆಸಿಎನ್ ಮೋಹನ್ ಸಿನಿಮಾ ವಿತರಕರಾಗಿಯೂ ಗುರ್ತಿಸಿಕೊಂಡಿದ್ದರು. 'ಭಲೇ ಚತುರ', 'ಜೂಲಿ', 'ರಾಮ ರಾಜ್ಯದಲ್ಲಿ ರಾಕ್ಷಸರು', 'ಧರ್ಮಯುದ್ಧ', 'ಜಯಸಿಂಹ' ಸೇರಿದಂತೆ ಹಲವು ಸಿನಿಮಾಗಳನ್ನು ಕೆಸಿಎನ್ ಮೋಹನ್ ನಿರ್ಮಾಣ ಮಾಡಿದ್ದರು. ಬರೀ ಸಿನಿಮಾ ನಿರ್ಮಾಣ ಮಾತ್ರವಲ್ಲದೇ ನವರಂಗ್ ಥಿಯೇಟರ್ ಮಾಲೀಕರು ಆಗಿದ್ದರು. ಮೋಹನ್ ಅವರ ಪತ್ನಿ ಪೂರ್ಣಿಮಾ ಮೋಹನ್ ನಿರ್ದೇಶಕಿಯಾಗಿ ಗುರ್ತಿಸಿಕೊಂಡಿದ್ದರು. ರಮ್ಯಾ ನಟನೆಯ 'ಜ್ಯೂಲಿ' ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. 2017ರಲ್ಲಿ ಅವರು ನಿಧನರಾಗಿದ್ದರು.
ಕೆಸಿಎನ್ ಮೂವೀಸ್ ಬ್ಯಾನರ್‌ನಲ್ಲಿ ಕೆಸಿಎನ್ ಗೌಡ್ರು ಸಾಕಷ್ಟು ಅದ್ಭುತ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ಜೊತೆ ಜೊತೆಗೆ ಮಕ್ಕಳಾದ ಕೆಸಿಎನ್ ಚಂದ್ರಶೇಖರ್ ಹಾಗೂ ಕೆಸಿಎನ್ ಮೋಹನ್ ಸಿನಿಮಾ ನಿರ್ಮಾಣದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. 300ಕ್ಕೂ ಅಧಿಕ ಸಿನಿಮಾಗಳನ್ನು ತಮ್ಮ ಸಂಸ್ಥೆಯಲ್ಲಿ ವಿತರಣೆ ಮಾಡಿದ್ದರು.
ಕೆಸಿಎನ್ ಮೂವೀಸ್ ಬ್ಯಾನರ್‌ನಲ್ಲಿ ಕಸ್ತೂರಿ ನಿವಾಸ ಸೇರಿದಂತೆ ಒಂದಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. 'ಬೆಳ್ಳಿಮೋಡ', 'ರಂಗನಾಯಕಿ', 'ಬಂಗಾರ ಮನುಷ್ಯ' ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ಈ ಸಂಸ್ಥೆಯಲ್ಲಿ ವಿತರಣೆ ಮಾಡಲಾಗಿತ್ತು. ಕೆಲ ವರ್ಷಗಳ ಹಿಂದೆ ಅಣ್ಣಾವ್ರ 'ಸತ್ಯ ಹರಿಹರಿಶ್ಚಂದ್ರ' ಹಾಗೂ 'ಕಸ್ತೂರಿ ನಿವಾಸ' ಸಿನಿಮಾಗಳನ್ನು ಬಣ್ಣದಲ್ಲಿ ರೀ ರಿಲೀಸ್ ಮಾಡಲು ಕೆಸಿಎನ್ ಮೋಹನ್ ಶ್ರಮಿಸಿದ್ದರು.


Click it and Unblock the Notifications











