ನೀರಿಗಾಗಿ ಎಂಥ ಹೋರಾಟಕ್ಕೂ ಸಿದ್ಧ ಎಂದ ಕನ್ನಡ ತಾರೆಯರು
ಮಹದಾಯಿ ನ್ಯಾಯಾಧೀಕರಣದ ಮಧ್ಯಂತರ ತೀರ್ಪು ವಿರೋಧಿಸಿ ಇಂದು ವಿವಿಧ ಕನ್ನಡ ಸಂಘಟನೆಗಳು ಕರೆ ನೀಡಿದ್ದ 'ಕರ್ನಾಟಕ ಬಂದ್'ಗೆ ಕನ್ನಡ ಚಿತ್ರರಂಗ ಸಾಥ್ ನೀಡಿದೆ.
ಕಾವೇರಿ ನೀರು ಹೋರಾಟ ಮತ್ತು ಗೋಕಾಕ್ ಚಳುವಳಿಯಲ್ಲಿ ಒಂದಾಗಿದ್ದ ಕನ್ನಡ ಚಿತ್ರರಂಗ ಇದೀಗ ಕಳಸಾ-ಬಂಡೂರಿ ಹಾಗೂ ಮಹದಾಯಿ ಯೋಜನೆಗೆ ಚಾಲನೆ ಸಿಗುವ ಸಲುವಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದೆ. [ಕರ್ನಾಟಕ ಬಂದ್: ಎಲ್ಲಾ ಚಿತ್ರಮಂದಿರಗಳಿಗೂ ಬಿದ್ದ ಬೀಗ.!]
ಇಂದು ಬೆಳಗ್ಗೆ ಸುಮಾರು 12 ಗಂಟೆಗೆ ಟೌನ್ ಹಾಲ್ ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಕನ್ನಡ ಚಿತ್ರರಂಗದ ತಾರೆಯರು ಮೈಸೂರು ಬ್ಯಾಂಕ್ ಮಾರ್ಗವಾಗಿ ಫ್ರೀಡಂ ಪಾರ್ಕ್ ತಲುಪಿದರು.
ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೆ ಸ್ಯಾಂಡಲ್ ವುಡ್ ಸ್ಟಾರ್ಸ್ ಪ್ರತಿಭಟನೆ ನಡೆಸಿದರು. ಮುಂದೆ ಓದಿ....

ಯಾರೆಲ್ಲಾ ಭಾಗವಹಿಸಿದ್ರು.?
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ಲವ್ಲಿ ಸ್ಟಾರ್ ಪ್ರೇಮ್, ಗೋಲ್ಡನ್ ಸ್ಟಾರ್ ಗಣೇಶ್, ನಟಿ ತಾರಾ, ಶ್ರುತಿ, ಜೈಜಗದೀಶ್, ಸಾರಾ ಗೋವಿಂದು, ಪ್ರಜ್ವಲ್ ದೇವರಾಜ್, ರಾಕ್ ಲೈನ್ ವೆಂಕಟೇಶ್, ರಂಗಾಯಣ ರಘು, ಮೇಘನಾ ರಾಜ್, ಮೈತ್ರಿಯಾ ಗೌಡ, ಮುನಿರತ್ನ, ಸಾಧು ಕೋಕಿಲ, ಶ್ರೀನಗರ ಕಿಟ್ಟಿ ಸೇರಿದಂತೆ ನಟ-ನಟಿಯರು ಭಾಗವಹಿಸಿದ್ದರು. [ಪ್ರತಿಭಟನೆಯಲ್ಲಿ ಸುದೀಪ್ ಭಾಗವಹಿಸಿಲ್ಲ.! ನಿಜವಾದ ಕಾರಣವೇನು.?]

ಜಿಟಿ ಜಿಟಿ ಮಳೆ ನಡುವೆ ಮಾತನಾಡಿದ ಶಿವಣ್ಣ
ಮಳೆ ಸುರಿಯುತ್ತಿದ್ದರೂ, ಅದನ್ನ ಲೆಕ್ಕಿಸದೆ ಶಿವರಾಜ್ ಕುಮಾರ್ ಭಾಷಣ ಮಾಡಿದ್ದು ಹೀಗೆ - ''ಮಹಾನದಿ ನದಿ ನೀರು ಸಿಗಲೇಬೇಕು. ಅದು ನಮ್ಮ ಹಕ್ಕು. ನಮ್ಮ ಹೋರಾಟ ಯಾವಾಗಲೂ ಅರ್ಥ ಪೂರ್ಣವಾಗಿರಬೇಕು. ನಾವು ಶಕ್ತಿ ಪ್ರದರ್ಶನಕ್ಕೆ ಬಂದಿಲ್ಲ. ಜನರಿಗಾಗಿ ಬಂದಿದ್ದೇವೆ. ಮಹದಾಯಿಗಾಗಿ ದೆಹಲಿಗೂ ಹೋಗಿ ಹೋರಾಟ ನಡೆಸುತ್ತೇವೆ.'' ['ನೋಡಿ ಮುಸಿಮುಸಿನಗಲು ನಾವೇನು ಜೋಕರ್ ಗಳಲ್ಲ']

ಸಾಧು ಕೋಕಿಲ
''ನಮ್ಮವರಿಗೆ ಕುಡಿಯೋಕೆ ನೀರು ಇಲ್ಲ. ಇದಕ್ಕಿಂತ ಅನ್ಯಾಯ ಬೇಕಾ.? ಹೋರಾಟಕ್ಕೆ ನಾವೆಲ್ಲಾ ಸದಾ ಸಿದ್ಧ'' ಅಂತ ಸಾಧು ಕೋಕಿಲ ಹೇಳಿದರು.

ಗಣೇಶ್
''ಮಧ್ಯಂತರ ತೀರ್ಪು ಬಂದಿರುವುದು ಬಹಳ ನೋವು ತಂದಿದೆ. ಇವತ್ತು ಚಲನಚಿತ್ರರಂಗದ ಎಲ್ಲಾ ಚಟುವಟಿಕೆಗಳನ್ನ ಸ್ಥಗಿತಗೊಳಿಸಿ ಬಂದ್ ಮಾಡುತ್ತಿದ್ದೇವೆ. ರೈತರಿಗೆ ನ್ಯಾಯ ಸಿಗಬೇಕು ಅಂತ ಹೋರಾಟ ಮಾಡುತ್ತಿದ್ದೇವೆ''

ಸಾರಾ ಗೋವಿಂದು
''ಅವೈಜ್ಞಾನಿಕ ತೀರ್ಪನ್ನ ವಿರೋಧಿಸಿ ಹೋರಾಟ ಮಾಡುತ್ತಿದ್ದೇವೆ. ಪ್ರಧಾನ ಮಂತ್ರಿ ರವರು ಕೂಡಲೆ ಮಧ್ಯ ಪ್ರವೇಶಿಸಿ, ಸಮಸ್ಯೆ ಪರಿಹಾರ ಮಾಡಬೇಕು''

ಸಂಚಾರಿ ವಿಜಯ್
''ಕಳಸಾ ಬಂಡೂರಿ ಯೋಜನೆ ಜಾರಿ ಆಗಲು ರೈತರು ಒಂದು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. ನಾವು ಕೂಡ ಎಲ್ಲರ ಪರವಾಗಿ ಹೋರಾಟ ಮಾಡಲು ತಯಾರಿದ್ದೇವೆ. ಹೋರಾಟದಲ್ಲಿ ಇವತ್ತು ಕನ್ನಡ ಚಿತ್ರರಂಗದ ಒಗ್ಗಟ್ಟು ಪ್ರದರ್ಶನ ಮಾಡ್ತಿದ್ದೇವೆ.''

ಶ್ರುತಿ
''ಒಂದು ವರ್ಷದಿಂದಲೂ ಹೋರಾಟ ನಡೆಯುತ್ತಲೇ ಇದೆ. ಆದ್ರೆ, ನೀರಿಗಾಗಿ ಹೋರಾಟ ಮಾಡುತ್ತಿರುವವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಅದರಲ್ಲೂ ಮಹಿಳೆಯರ ಮೇಲೆ, ಗರ್ಭಿಣಿಯರ ಮೇಲೆ ಹಲ್ಲೆ ಮಾಡಿರುವುದು ಬೇಸರ ಆಗಿದೆ''

ಶ್ರೀನಾಥ್
''ನಮ್ಮ ಜನರಿಗೆ ಸಮಸ್ಯೆ ಆಗುತ್ತಿದೆ ಎಂದಾಗ ಅವರ ಪರವಾಗಿ ನಾನು ಹೋರಾಟ ಮಾಡಲು ಬಂದಿದ್ದೇವೆ. ನೀರಿಗಾಗಿ ಹೋರಾಟ ಮಾಡುವ ಸ್ಥಿತಿ ಎದುರಾಗಿದೆ. ಪ್ರಧಾನ ಮಂತ್ರಿ ಸಮಸ್ಯೆ ಬಗೆಹರಿಸಬೇಕು ಎಂದು ಕೋರುತ್ತೇನೆ.''

ರೂಪಿಕಾ
''ಈ ಹೋರಾಟದಲ್ಲಿ ಭಾಗವಹಿಸುವ ಮನಸ್ಸಾಯ್ತು. ಹೀಗಾಗಿ ಬಂದಿದ್ದೇನೆ. ಎಲ್ಲರೂ ಹೋರಾಟದಲ್ಲಿ ಭಾಗವಹಿಸಿ, ಯಶಸ್ಸು ಮಾಡಬೇಕು ಅಂತ ಕೇಳಿಕೊಳ್ಳುತ್ತೇನೆ''


Click it and Unblock the Notifications











