ವಿಷ್ಣುವರ್ಧನ್ ಸಮಾಧಿ ನೆಲಸಮ, ಹೇಳಿದ್ದೇನು ರಾಘವೇಂದ್ರ ರಾಜ್‌ಕುಮಾರ್ ?
ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಕರುನಾಡು ಎಂದೆಂದು ಮರೆಯದ ಸದಾ ಮಿನುಗುವ ಧ್ರುವತಾರೆಯರು. ಕನ್ನಡ ಚಿತ್ರರಂಗಕ್ಕೆ ಮತ್ತು ಈ ಮಣ್ಣಿಗೆ ಇಬ್ಬರ ಕೊಡುಗೆ ಅಪಾರ. ಬದುಕಿದ್ದಷ್ಟು ದಿನ ಇಬ್ಬರ ನಡುವೆ ಪರಸ್ಪರ ಗೌರವ ಇತ್ತು. ಒಬ್ಬರ ಮೇಲೆ ಒಬ್ಬರಿಗೆ ಪ್ರೀತಿ ಇತ್ತು. ಇಬ್ಬರ ಮಧ್ಯೆ ಯಾವುದೇ ಭೇದಭಾವ ಇರಲಿಲ್ಲ. ''ವೀಕೆಂಡ್ ವಿತ್ ರಮೇಶ್-3'' ರಲ್ಲಿ..
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಖುದ್ದು ಈ ಮಾತನ್ನು ಹೇಳಿದ್ದರು. ನಾನು ವಿಷ್ಣುವರ್ಧನ್ ಜೊತೆ 'ನೀನು ನಕ್ಕರೆ ಹಾಲು ಸಕ್ಕರೆ' ಒಂದೇ ಸಿನಿಮಾ ಮಾಡಿರುವುದು. ಆ ಶೂಟಿಂಗ್ ಟೈಮ್ ನಲ್ಲಿ, ''ಡಾ.ರಾಜ್ ಕುಮಾರ್ ರವರಿಗೂ ನಿಮಗೂ ಯಾವುದೇ ವ್ಯತ್ಯಾಸ ಇಲ್ಲ. ಅವರು ನಂಬರ್ ಒನ್ ಆದರೆ ನೀವೂ ನಂಬರ್ ಒನ್'' ಅಂತ ನಾನು ವಿಷ್ಣುವರ್ಧನ್ ಗೆ ಹೇಳಿದೆ. ಅದಕ್ಕೆ ಅವರು, ''ದಯವಿಟ್ಟು ಕ್ಷಮಿಸಿ, ಮಾತು ವಾಪಸ್ ತಗೊಳ್ಳಿ. ರಾಜ್ ಕುಮಾರ್ ನಂಬರ್ ಒನ್. ನಾನು ನಂಬರ್ ನೈನ್'' ಎಂದರು. ಇದು ರಾಜ್ ಕುಮಾರ್ ರವರಿಗೆ ವಿಷ್ಣು ಕೊಡುತ್ತಿದ್ದ ಗೌರವ ಎಂದು ಕನ್ನಡ ಚಿತ್ರರಂಗದ ದಿಗ್ಗಜರನ್ನು ಭಗವಾನ್ ನೆನಪು ಮಾಡಿಕೊಂಡಿದ್ದರು.

ಇದೇ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕನ್ನಡದ ಹಿರಿಯ ಪತ್ರಕರ್ತ ಬಿ.ಗಣಪತಿ ''ಯಜಮಾನ'' ಚಿತ್ರವನ್ನ ನೋಡಿದ ಡಾ.ರಾಜ್ ಕುಮಾರ್, ಕೂಡಲೇ ಡಾ.ವಿಷ್ಣುವರ್ಧನ್ ರವರಿಗೆ ಫೋನ್ ಮಾಡಿ ಈಗಲೇ ನಿಮ್ಮನ್ನ ನೋಡಿ ತಬ್ಬಿಕೊಳ್ಳಬೇಕು ಎಂದು ಹೇಳಿದ್ದನ್ನು ಮೆಲುಕು ಹಾಕಿದ್ದರು. ಡಾ.ರಾಜ್ ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ರವರ ಅಭಿಮಾನಿಗಳ ಮಧ್ಯೆ ವೈಷಮ್ಯ ಇಲ್ಲದೇ ಹೋಗಿದ್ರೆ, ''ಗಂಧದ ಗುಡಿ'' ತರಹದ ಇನ್ನೂ ಹತ್ತು ಸಿನಿಮಾ ಬರ್ತಿತ್ತು ಎಂದು ಕೂಡ ಹೇಳಿದ್ದರು.
ಆದರೆ ದುರಾದೃಷ್ಟವಶಾತ್ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಇವರ ಇಬ್ಬರ ನಡುವೆ ಇದ್ದ ಸಂಬಂಧ ಅವತ್ತು ಗೊತ್ತಾಗಲಿಲ್ಲ. ಇವತ್ತು ಕೂಡ ಗೊತ್ತಾಗಲೇ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ವಿಷ್ಣು ಸಮಾಧಿ ನೆಲ ಸಮವಾದ ಬೆನ್ನಲ್ಲೇ ಹಲವರು ದೊಡ್ಮನೆಯ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಶಿವಣ್ಣ ಆಗಲಿ ರಾಘಣ್ಣ ಆಗಲಿ ಯಾಕೆ ಈ ವಿಚಾರಕ್ಕೆ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಹೀಗಿರುವಾಗ ಇದೀಗ ರಾಘವೇಂದ್ರ ರಾಜ್ ಕುಮಾರ್ ಈ ವಿಚಾರದ ಕುರಿತು ಮಾತನಾಡಿದ್ದಾರೆ. ತಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ. ಈ ಕುರಿತು ತಮ್ಮ ಫೇಸ್ ಬುಕ್‌ನಲ್ಲಿ ವಿಷ್ಣುವರ್ಧನ್ ಮತ್ತು ರಾಜ್ ಕುಮಾರ್ ಜೊತೆಗಿರುವ ಫೋಟೊವನ್ನು ಹಂಚಿಕೊಂಡು ಬರೆದುಕೊಂಡಿರುವ ರಾಘವೇಂದ್ರ ರಾಜ್ ಕುಮಾರ್ ''ನಡೆದಿರುವ ಘಟನೆ ಕೇಳಿ ಮನಸ್ಸಿಗೆ ತುಂಬಾ ಬೇಸರವಾಗಿದೆ. ಡಾ ವಿಷ್ಣುವರ್ಧನ್ ಸರ್ ಅವರಿಗೆ ಸರಿಯಾದ ಗೌರವ ಸಿಗಲೇಬೇಕು''.. ಎಂದು ಹೇಳಿದ್ದಾರೆ.
ರಾಘವೇಂದ್ರ ರಾಜ್ ಕುಮಾರ್ ಅವರ ಈ ಫೋಸ್ಟ್‌ಗೆ ಪ್ರತಿಕ್ರಿಯೆಗಳು ಬರುತ್ತಿದ್ದು, ಡಾ.ರಾಜ್ ಕುಮಾರ್ ಅವರು ಇಂದು ಇದ್ದಿದ್ದರೆ ಈ ಘಟನೆಯನ್ನು ಮೊದಲು ಅವರೇ ಖಂಡಿಸುತ್ತಿದ್ದರು, ನ್ಯಾಯಕ್ಕಾಗಿ ಅವರೇ ಹೋರಾಡುತ್ತಿದ್ದರು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡಕ್ಕಾಗಿ ಇಷ್ಟು ವರ್ಷಗಳ ಕಾಲ ಸೇವೆ ಮಾಡಿದ ಗಣ್ಯರಿಗೆ ಸ್ಥಾನ ಮತ್ತು ಗೌರವ ನೀಡದೇ ಇದ್ದರೆ ಅವರಿಗೆ ಅನ್ಯಾಯ ಮಾಡಿದಂತೆ ಅಲ್ಲವೇ ರಾಘಣ್ಣ ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಅಭಿಮಾನ ಸ್ಟುಡಿಯೋದಲ್ಲಿರೋ ವಿಷ್ಣುವರ್ಧನ್ ಅವರ ಪುಣ್ಯಭೂಮಿ ಗೆ ನೀವು ನಿಮ್ಮ ಕುಟುಂಬದವರೆಲ್ಲರೂ ಕೈ ಜೋಡಿಸಿ ದಯವಿಟ್ಟು ಇದರ ಬಗ್ಗೆ ಸರ್ಕಾರದ ಗಮನಕ್ಕೆ ತನ್ನಿ ಎಂದು ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.


Click it and Unblock the Notifications











