ಅಗಲಿದ ಹಿರಿಯ ಮೇಕಪ್ ಆರ್ಟಿಸ್ಟ್ ಎಂ.ಎಸ್. ಕೇಶವಣ್ಣನಿಗೆ ಸ್ಯಾಂಡಲ್‍ವುಡ್ ಕಂಬನಿ
ಅಂದೊಂದು ಕಾಲವಿತ್ತು. ನಟರಿಗೂ ಮೇಕಪ್ ಆರ್ಟಿಸ್ಟ್‌ಗಳಿಗೂ ಉತ್ತಮ ಒಡನಾಟ. ಡಾ.ರಾಜ್ಕುಮಾರ್, ರಜನಿಕಾಂತ್, ಅಂಬರೀಶ್ ಅಂತಹ ಮೇರು ನಟರು ತಮಗೆ ಬಣ್ಣ ಹಚ್ಚಿದ ಮೇಕಪ್ ಮ್ಯಾನ್‌ಗಳ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ದಿಗ್ಗಜರಿಗೆ ಮೇಕಪ್ ಮಾಡಿದ ಹಿರಿಯ ಮೇಕಪ್ ಆರ್ಟಿಸ್ಟ್ ಅಂದರೆ ಎಂಎಸ್ ಕೇಶವಣ್ಣ.
ಸುಮಾರು 5 ದಶಕಗಳಿಂದ ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದ ಮೇಕಪ್ ಕಲಾವಿದ ನಿನ್ನೆ ( ಜುಲೈ 15) ನಿಧನರಾಗಿದ್ದಾರೆ. ಇವರು ಅಗಲಿದ ಸುದ್ದಿಯನನ್ಉ ಕೇಳಿ ಕನ್ನಡ ಚಿತ್ರರಂಗ ಸೆಲೆಬ್ರೆಟಿಗಳು ಕಂಬಿನಿ ಮಿಡಿದಿದ್ದಾರೆ.

ಅನಾರೋಗ್ಯದಿಂದ ಕೇಶವಣ್ಣ ನಿಧನ
ಸ್ಯಾಂಡಲ್‌ವುಡ್‌ನ ಹಿರಿಯ ಮೇಕಪ್ ಕಲಾವಿದ ಎಂ ಎಸ್ ಕೇಶವಣ್ಣ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ಎರಡು ದಿನಗಳಿಂದ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಕೇಶವಣ್ಣನಿಗೆ ನೀಡುತ್ತಿದ್ದ ಚಿಕಿತ್ಸೆ ಫಲಿಸದೆ ನಿನ್ನೆ (ಜುಲೈ 15) ರಂದು ಕೊನೆಯುಸಿರೆಳೆದಿದ್ದಾರೆ. ಮೈಸೂರಿನಲ್ಲಿ ಎಂ ಎಸ್ ಕೇಶವಣ್ಣನವರ ಅಂತ್ಯಕ್ರಿಯೆ ನೆರೆವೇರಿಸಲಾಗುತ್ತದೆ ಎಂದು ಅವರ ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದರು. ಸುಮಾರು 5 ದಶಕಗಳ ಕಾಲ ಕನ್ನಡ ಮೇರು ನಟರಿಗೆ ಬಣ್ಣ ಹಚ್ಚಿದ ಹೆಗ್ಗಳಿಕೆ ಇವರದ್ದು. ಡಾ.ರಾಜ್ಕುಮಾರ್, ರಜನಿಕಾಂತ್ ಸೇರಿದಂತೆ ಕನ್ನಡದ ದಿಗ್ಗಜರ ಸಿನಿಮಾಗಳಿಗೆ ಮೇಕಪ್ ಮಾಡಿದ್ದಾರೆ.

ಅಣ್ಣಾವ್ರ ಕಂಪನಿಯಲ್ಲಿ ಕೆಲಸ
ಎಂ ಎಸ್ ಕೇಶವಣ್ಣ ಡಾ. ರಾಜ್‌ಕುಮಾರ್ ಕಂಪನಿಯಲ್ಲಿ ತಯಾರಾಗುವ ಸಿನಿಮಾಗಳಿಗೆ ಖಾಯಂ ಮೇಕಪ್ ಮ್ಯಾನ್ ಆಗಿದ್ದರು. ಸುಮಾರು 30 ವರ್ಷಗಳ ಕಾಲ ಡಾ.ರಾಜ್‌ಕುಮಾರ್ ಕಂಪನಿಯಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದರು. ಡಾ.ರಾಜ್ಕುಮಾರ್, ರಜನಿಕಾಂತ್, ಅಂಬರೀಷ್, ಅನಂತ್ ನಾಗ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಹಲವಾರು ಸ್ಟಾರ್ ನಟರಿಗೆ ಎಂ ಎಸ್ ಕೇಶವಣ್ಣ ಮೇಕಪ್ ಮಾಡಿದ್ದಾರೆ. ವಿಶೇಷ ಅಂದರೆ ಕನ್ನಡದ ಹಾಸ್ಯ ದಿಗ್ಗಜ ನರಸಿಂಹರಾಜು ಅವರಿಗೆ ಮೊದಲ ಬಣ್ಣ ಹಚ್ಚಿದ್ದ ಕೇಶವಣ್ಣ, ಪೃಥ್ವಿ ರಾಜ್‌ಕಪೂರ್, ಬಾಲಕೃಷ್ಣ, ಉದಯ ಕುಮಾರ್, ವಜ್ರಮುನಿ ಸೇರಿದಂತೆ ಹಲವು ಕಲಾವಿದರಿಗೆ ಮೇಕಪ್ ಮಾಡಿದ್ದಾರೆ.

ದೆವ್ವದ ಮೇಕಪ್ ಫೇಮಸ್
ಅನಂತ್ ನಾಗ್ ವೃತ್ತಿ ಬದುಕಿನ ಟಾಪ್ ಸಿನಿಮಾಗಳಲ್ಲೊಂದು 'ನಾ ನಿನ್ನ ಬಿಡಲಾರೆ'. ಈ ಸಿನಿಮಾದಲ್ಲಿ ಅನಂತ್ ನಾಗ್ ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಪಾತ್ರಕ್ಕೆ ಮೇಕಪ್ ಮಾಡಿದ್ದು ಇದೇ ಕೇಶವಣ್ಣ. ಸ್ಪುರದ್ರೂಪಿ ನಟ ಅನಂತ್ ನಾಗ್ ಅವರನ್ನು ನೋಡಿ ಬೆಚ್ಚಿ ಬೀಳುವಂತೆ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

'ಕುರುಕ್ಷೇತ್ರ' ಕೊನೆಯ ಸಿನಿಮಾ
ಕೇಶವಣ್ಣ 5 ದಶಕಗಳಿಂದ ಮೇಕಪ್ ಮಾಡುತ್ತಿದ್ದರು. 'ಸಾಕ್ಷಾತ್ಕಾರ', 'ಹುಲಿಯ ಹಾಲಿನ ಮೇವು', 'ಮಯೂರ', 'ಶಾಂತಿ ಕ್ರಾಂತಿ', 'ಸಂಗೊಳ್ಳಿ ರಾಯಣ್ಣ' ಸರಿದಂತೆ ಸಾಮಾಜಿಕ ಹಾಗೂ ಪೌರಾಣಿಕ ಸಿನಿಮಾಗಳಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದಾರೆ. 'ಕುರುಕ್ಷೇತ್ರ' ಕೇಶವಣ್ಣ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ ಕೊನೆಯ ಸಿನಿಮಾ.


Click it and Unblock the Notifications











