ಕಮಲ್ ಹಾಸನ್ ಸಿನಿಮಾ ಬ್ಯಾನ್ ಮಾಡೋದು ಅತಿರೇಕ- ರಮ್ಯಾ ..!
ಕಮಲ್ ಹಾಸನ್ ಕನ್ನಡಿಗರನ್ನು ಕೆಣಕಿದ್ದಾರೆ. ಕೆರಳಿಸಿದ್ದಾರೆ. ಭಾಷಾ ಜ್ಞಾನದ ಕೊರತೆಯಿಂದ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರ ಸಮ್ಮುಖದಲ್ಲಿಯೇ ಕನ್ನಡದ ಜನ್ಮಕ್ಕೆ ತಮಿಳು ಭಾಷೆ ಕಾರಣವೆಂದಿದ್ದಾರೆ. ಕಮಲ್ ಅವರಾಡಿದ ಈ ಮಾತು ಇದೀಗ ಆಕ್ರೋಶದ ಜ್ವಾಲೆಯ ಸ್ವರೂಪ ಪಡೆದು ಧಗಧಗಿಸುತ್ತಿದೆ. ಕರುನಾಡಿನೆಲ್ಲೆಡೆ ಕಮಲ್ ಹಾಸನ್ ಅವರ ಚಿತ್ರಕ್ಕೆ ಬಿಡುಗಡೆಗೆ ಅವಕಾಶ ನೀಡಬಾರದು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇನ್ನು ಕಮಲ್ ಹಠಮಾರಿ. ಮಾಡಿದ ತಪ್ಪಿನ ಅರಿವಾದ ಮೇಲಾದರೂ ಕೂಡ ಕಮಲ್ ಹಾಸನ್ ಕ್ಷಮೆ ಕೇಳಬೇಕಿತ್ತು. ಆದರೆ, ಕಮಲ್ ಹಾಸನ್ ಕ್ಷಮೆ ಕೇಳುವ ಬದಲು ಇದು ನನ್ನ ಕ್ಷಮೆ ಅಲ್ಲ ಸ್ಪಷ್ಟನೆ ಎಂದು ಹೇಳಿದ್ದಾರೆ. ಕನ್ನಡ ಮತ್ತು ಕನ್ನಡಿಗರನ್ನು ಹೊಗಳುತ್ತಾ ಭಾಷೆಯ ಬಗ್ಗೆ ಮಾತನಾಡುವ ಅರ್ಹತೆ ಮತ್ತು ಯೋಗ್ಯತೆ ಎರಡು ನನಗೆ ಇಲ್ಲ ಎಂದು ಹೇಳಿದ್ದಾರೆ. ಪ್ರೀತಿ ಯಾವತ್ತು ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಉರಿಯುವ ಬೆಂಕಿಗೆ ಇನ್ನು ತುಪ್ಪ ಸುರಿದಿದ್ದಾರೆ.

ಇದರ ನಡುವೆ ಇದೀಗ ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕಮಲ್ ಹಾಸನ್ ಅವರ ಚಿತ್ರವನ್ನ ನಿಷೇಧಿಸುವುದು ಅತಿರೇಕ ಆಗಲಿಲ್ವಾ ? ಎಂದು ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಮ್ಯಾ ದ್ರಾವಿಡ ಭಾಷೆಯ ಅಡಿಯಲ್ಲಿಯೇ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳು ಬರುತ್ತವೆ. ನಮ್ಮ ಭಾಷೆಗಳಲ್ಲಿ ಸಾಮ್ಯತೆ ಇರಬಹುದು ಆದರೆ ಯಾವ ಭಾಷೆ ಕೂಡ ಇನ್ನೊಂದು ಭಾಷೆಗಿಂತ ಶ್ರೇಷ್ಠ ಎಂದಿಲ್ಲ. ನಮ್ಮಲ್ಲಿ ಹಲವರು ಸಂಸ್ಕ್ರತ ಎಲ್ಲ ಭಾಷೆಗಳ ತಾಯಿ ಎಂದು ಅಂದುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಅದು ಕೂಡ ತಪ್ಪು.
ಯಾಕೆಂದರೆ ಸಂಸ್ಕ್ರತ ಇಂಡೋ-ಆರ್ಯನ್ ಭಾಷೆ. ಇಂಡೋ ಆರ್ಯನ್ನರು ಇಲ್ಲಿ ವಲಸೆ ಬರುವುದಕ್ಕಿಂತ ಬಹಳ ವರ್ಷಗಳ ಮುಂಚೆಯಿಂದ ನಾವು ಇಲ್ಲಿ ಇದ್ದೇವೆ ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಗೆ ಪೂರಕವಾಗಿ ದ್ರಾವಿಡ ಭಾಷೆಗಳ ಉಗಮದ ಚಾರ್ಟ್‌ನ್ನು ಕೂಡ ರಮ್ಯಾ ಹಂಚಿಕೊಂಡಿದ್ದಾರೆ.
ಈ ಚಾರ್ಟ್‌ನಲ್ಲಿ ದ್ರಾವಿಡ ಭಾಷೆಯ ಮೂಲಕವೇ ಕನ್ನಡ, ತೆಲುಗು, ತಮಿಳು ,ಮಲಯಾಳಂ ಹಾಗೇ ಇತರೆ ಭಾಷೆಗಳು ಹುಟ್ಟಿಕೊಂಡಿವೆ ಎನ್ನುವುದನ್ನು ತೋರಿಸಲಾಗಿದೆ. ಇನ್ನು ಇದೇ ಸಮಯದಲ್ಲಿ ಕಮಲ್ ಹಾಸನ್ ಅವರ ಥಗ್ ಲೈಫ್ ಚಿತ್ರವನ್ನು ಬ್ಯಾನ್ ಮಾಡಬೇಕೆಂಬ ಕೂಗಿಗೆ ಕೂಡ ಉತ್ತರ ನೀಡಿರುವ ರಮ್ಯಾ, ಕಮಲ್ ಹಾಸನ್ ಅವರ ಹೇಳಿಕೆ ತಪ್ಪಿದೆ. ಹಾಗೆಂದ ಮಾತ್ರಕ್ಕೆ ಅವರ ಚಿತ್ರವನ್ನು ನಿಷೇಧ ಮಾಡಲು ಮುಂದಾಗಿದ್ದು ತುಸು ಅತಿರೇಕ ಅನಿಸುವುದಿಲ್ಲವೆ ಎಂದು ಪ್ರಶ್ನೆ ಮಾಡಿದ್ದಾರೆ. ನಾವೆಲ್ಲರು ಹಿಂದಿ ಹೇರಿಕೆ ವಿರುದ್ಧ ಹೋರಾಡಬೇಕು ಅದಕ್ಕಾಗಿ ಒಂದಾಗಬೇಕು ಆದರೆ ಅದಕ್ಕೂ ಮೊದಲು ಪರಸ್ಪರ ಗೌರವ ಕೊಡುವುದನ್ನು ನಾವು ಕಲಿಯಬೇಕು ಎಂದು ರಮ್ಯಾ ಹೇಳಿದ್ದಾರೆ.
ರಮ್ಯಾ ಅವರ ಈ ಮಾತುಗಳಿಗೆ ಸದ್ಯ ನಾನಾ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಬ್ಯಾನ್ ನಿರ್ಧಾರ ಸರಿ ಇದೆ ಎಂದಿದ್ದಾರೆ. ಇನ್ನು ಕೆಲವರು ರಮ್ಯಾ ಅವರ ಮಾತುಗಳಿಗೆ ಸಮ್ಮತಿಯನ್ನು ಸೂಚಿಸಿದ್ದಾರೆ.
ಇನ್ನುಳಿದಂತೆ ಸದ್ಯ ಕಮಲ್ ಹಾಸನ್ ವಿರುದ್ದ ಕನ್ನಡ ಚಿತ್ರರಂಗದಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ನಟ ಶ್ರೀನಾಥ್, ನಿರ್ದೇಶಕ ನಾಗ್ತಿಹಳ್ಳಿ ಚಂದ್ರಶೇಖರ್, ನಾದ ಬ್ರಹ್ಮ ಹಂಸಲೇಖಾ ಸೇರಿ ಅನೇಕರು ಕಮಲ್ ಹಾಸನ್ ವಿರುದ್ಧ ಕಿಡಿ ಕಾರಿದ್ದಾರೆ.ಇನ್ನು ಕ್ಷಮೆ ಕೇಳದೇ ಇದ್ದಲ್ಲಿ ಚಿತ್ರದ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದಿವೆ. ಮುಂದೆ ಚಿತ್ರ ಬಿಡುಗಡೆಯಾಗುತ್ತಾ ಇಲ್ವಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











