ಕನ್ನಡದಲ್ಲೂ ಮಹಾಭಾರತ: ಯಶ್ ಕರ್ಣ, ಕಿಚ್ಚ ಕೃಷ್ಣ, ದ್ರೌಪದಿ ರಚಿತಾ.. ಶಿವಣ್ಣನ ಪಾತ್ರ ಏನು?
ಭಾರತೀಯ ಚಿತ್ರರಂಗದಲ್ಲೀಗ ಪೌರಾಣಿಕ, ಐತಿಹಾಸಿಕ ಸಿನಿಮಾಗಳ ಟ್ರೆಂಡ್ ನಡೀತಿದೆ. ಇತ್ತೀಚೆಗೆ 'ಆದಿಪುರುಷ್' ಚಿತ್ರದಲ್ಲೂ ಇಂತದ್ದೇ ಪ್ರಯತ್ನ ಮಾಡಲಾಗಿತ್ತು. ಇನ್ನು ರಾಜಮೌಳಿ ಹಾಗೂ ಆಮಿರ್ ಖಾನ್ ಕೂಡ ಮಹಾಭಾರತ ಕಾವ್ಯವನ್ನು ತೆರೆಗೆ ತರುವ ಕನಸು ಕಾಣುತ್ತಿದ್ದಾರೆ. ಒಂದು ವೇಳೆ ಕನ್ನಡ ಚಿತ್ರರಂಗದಲ್ಲಿ ಮಹಾಭಾರತ ಕಾವ್ಯ ಆಧರಿಸಿ ಸಿನಿಮಾ ನಿರ್ಮಾಣವಾದರೆ ಯಾವ ಪಾತ್ರ? ಯಾರಿಗೆ ಸೂಕ್ತ?
ಭಾರತದಲ್ಲಿ ಸಿನಿಮಾಗಳ ನಿರ್ಮಾಣ ಶುರುವಾದ ಆರಂಭದಲ್ಲಿ ಪೌರಾಣಿ, ಐತಿಹಾಸಿಕ ಸಿನಿಮಾಗಳು ಹೆಚ್ಚು ಹೆಚ್ಚು ಮೂಡಿಬಂದಿದ್ದವು. ಎನ್‌ಟಿಆರ್, ಡಾ. ರಾಜ್‌ಕುಮಾರ್‌ರಂತಹ ಕಲಾವಿದರು ಪೌರಾಣಿಕ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದರು. ಬಾಲಿವುಡ್ ಮಂದಿ ಕೂಡ ಮಹಾಭಾರತ ಮತ್ತು ರಾಮಾಯಣ ಕಾವ್ಯವನ್ನು ಸಿನಿಮಾ ಅಥವಾ ವೆಬ್‌ಸೀರಿಸ್ ರೂಪದಲ್ಲಿ ಪ್ರೇಕ್ಷಕರು ಮುಂದಿಡುವ ಲೆಕ್ಕಾಚಾರದಲ್ಲಿದ್ದಾರೆ. ಮಹೇಶ್ ಬಾಬು ನಟನೆಯ ಸಿನಿಮಾ ಬಳಿಕ ರಾಜಮೌಳಿ ಮಹಾಭಾರತ ಸಿನಿಮಾ ಮಾಡಲು ಸಿದ್ಧತೆ ನಡೆಸಿದ್ದಾರೆ.

ಆಗೊಮ್ಮೆ ಈಗೊಮ್ಮೆ ಕನ್ನಡ ಚಿತ್ರರಂಗದಲ್ಲೂ ಪೌರಾಣಿಕ ಸಿನಿಮಾಗಳನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಕೆಲ ವರ್ಷಗಳ ಹಿಂದೆ 'ಕುರುಕ್ಷೇತ್ರ' ಸಿನಿಮಾ ತೆರೆಗೆ ಬಂದು ಸಕ್ಸಸ್ ಕಂಡಿತ್ತು. ದುರ್ಯೋಧನನ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಬ್ಬರಿಸಿದ್ದರು. ತ್ರೀಡಿಯಲ್ಲಿ ಸಿನಿಮಾ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಿತ್ತು. ಆದರೆ ಇಡೀ ಮಹಾಭಾರತ ಕಾವ್ಯವನ್ನು ಸಿನಿಮಾ ಮಾಡುವ ಪ್ರಯತ್ನ ಮಾತ್ರ ಯಾರು ಮಾಡುತ್ತಿಲ್ಲ. ಮಹಾಭಾರತ ಕಾವ್ಯದಲ್ಲಿ ಒಂದೊಂದು ಪಾತ್ರವೂ ಅದ್ಭುತ. ಆ ಪಾತ್ರಗಳಿಗೆ ಹೊಂದಿಕೆ ಆಗುವಂತಹ ಕಲಾವಿದರು ಕನ್ನಡ ಚಿತ್ರರಂಗದಲ್ಲಿದ್ದಾರೆ.
ಸ್ಯಾಂಡಲ್‌ವುಡ್ ಮಹಾಭಾರತ AI ಪೋಸ್ಟರ್
ಸದ್ಯ ಕೃತಕ ಬುದ್ಧಿಮತ್ತೆ (Artificial Intelligence - AI) ಭಾರೀ ಸದ್ದು ಮಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಂತೂ ಹೊಸ ಟ್ರೆಂಡ್ ಸೃಷ್ಟಿಸಿದೆ. ವಿವಿಧ ಬಗೆಯ AI ಚಿತ್ರಗಳು ಜನರ ಗಮನ ಸೆಳೀತಿದೆ. ಇನ್ನು AI ಸಿನಿಮಾ ಪೋಸ್ಟರ್‌ಗಳಂತೂ ಸಿನಿರಸಿಕರ ಮನಗೆಲ್ಲುತ್ತಿವೆ. ಇತ್ತೀಚೆಗೆ ಯಶ್19 ಸಿನಿಮಾ AI ಪೋಸ್ಟರ್ ಸಖತ್ ವೈರಲ್ ಆಗಿತ್ತು. ಇದೀಗ ಕನ್ನಡ ಸಿನಿಮಾ ತೆರೆಯರ ಮಹಾಭಾರತ ಪಾತ್ರಗಳ AI ಪೋಸ್ಟರ್‌ಗಳ ಸರದಿ. ಒಂದಕ್ಕಿಂತ ಒಂದು ಪೋಸ್ಟರ್ ಇಂಟ್ರೆಸ್ಟಿಂಗ್ ಆಗಿದೆ.
ಪೋಸ್ಟರ್‌ಗಳು ಫುಲ್ ವೈರಲ್
ದೀಪೇಶ್ ಎಂಬ ಗ್ರಾಫಿಕ್ಸ್ ಡಿಸೈನರ್ ತಮ್ಮದೇ ಕನ್ನಡ ಸಿನಿಮಾ ತಾರೆಯರನ್ನು ಮಹಾಭಾರತದ ಪಾತ್ರಗಳಲ್ಲಿ ಕಲ್ಪಿಸಿಕೊಂಡಿದ್ದಾರೆ. ತಮ್ಮ ಕಲ್ಪನೆಗೆ AI ಪೋಸ್ಟರ್‌ಗಳ ಮೂಲಕ ಜೀವ ತುಂಬಿದ್ದಾರೆ. ಸದ್ಯ ಈ ಪೋಸ್ಟರ್‌ಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಿಜಕ್ಕೂ ಈ ರೀತಿ ಸ್ಯಾಂಡಲ್‌ವುಡ್ ಸ್ಟಾರ್ಸ್ ಮಹಾಭಾರತದ ಪಾತ್ರಗಳಲ್ಲಿ ತೆರೆಮೇಲೆ ಬಂದರೆ ಪ್ರೇಕ್ಷಕರಿಗೆ ಹಬ್ಬವೇ ಸರಿ. ಇನ್ನು ಒಬ್ಬರಿಗಿಂತ ಒಬ್ಬರ ಲುಕ್ ಅದ್ಭುತವಾಗಿದೆ.

ದರ್ಶನ್ ದುರ್ಯೋಧನ, ಯಶ್ ಕರ್ಣ
ಸದ್ಯ ವೈರಲ್ ಆಗುತ್ತಿರುವ ಪೋಸ್ಟರ್‌ಗಳಲ್ಲಿ ಶ್ರೀಕೃಷ್ಣನಾಗಿ ಸುದೀಪ್, ಕರ್ಣನಾಗಿ ಯಶ್, ದುರ್ಯೋಧನನಾಗಿ ದರ್ಶನ್, ಅರ್ಜುನನಾಗಿ ದಿವಂಗತ ನಟ ಪುನೀತ್ ರಾಜ್‌ಕುಮಾರ್, ಭೀಮನಾಗಿ ಧ್ರುವ ಸರ್ಜಾ ಫೋಟೊಗಳು ಕಣ್ಣು ಕುಕ್ಕುತ್ತಿವೆ. ಮಹಾಭಾರತದ ವೀರರ ಪಾತ್ರಗಳಲ್ಲಿ ಪ್ರತಿಯೊಬ್ಬರ ಲುಕ್, ಖದರ್ ಸಿಂಪ್ಲಿ ಸೂಪರ್. ಈ ಪೋಸ್ಟರ್‌ಗಳನ್ನು ನೋಡಿ ಸಿನಿರಸಿಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ದ್ರೋಣಚಾರ್ಯ ಶಿವಣ್ಣ, ದ್ರೌಪದಿ ರಚ್ಚು
ಇನ್ನು ಭೀಷ್ಮನಾಗಿ ರಿಷಬ್ ಶೆಟ್ಟಿ, ದ್ರೋಣಚಾರ್ಯರಾಗಿ ಶಿವಣ್ಣ, ಶಕುನಿಯಾಗಿ ರಾಜ್. ಬಿ ಶೆಟ್ಟಿ ಅವರ ಫೋಟೊಗಳು ಟ್ರೆಂಡ್ ಕ್ರಿಯೇಟ್ ಮಾಡಿವೆ. ನಿಜಕ್ಕೂ ನಮ್ಮ ಸಿನಿಮಾ ಹೀರೊಗಳು ಮಹಾಭಾರತದ ಹೀರೊಗಳಾಗಿ ತೆರೆಗೆ ಬಂದರೆ ಅದ್ಭುತ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಶ್ರೇಯಶ್ ಎಂಬುವವರು ಈ ಫೋಟೊಗಳನ್ನೆಲ್ಲಾ ಸೇರಿಸಿ ಸಣ್ಣ ವಿಡಿಯೋ ಮಾಡಿದ್ದಾರೆ. ಆ ಟೀಸರ್ ಝಲಕ್ ಕೂಡ ಸಖತ್ ಮಜವಾಗಿದೆ.


Click it and Unblock the Notifications











