ಚಂದನವನದ ಈ ಎಲ್ಲಾ ಸ್ಟಾರ್‌ಗಳಿಗೂ ಆ ಒಂದು ದಿನಾಂಕದ್ದೇ ಚಿಂತೆ; ಆ ಡೇಟ್ ನಿಮಗೂ ಗೊತ್ತಾಯ್ತಾ?
ನಿನ್ನೆ ( ಜೂನ್ 27 ) ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಂದನವನದ ನಟರು, ನಟಿಯರು ಹಾಗೂ ನಿರ್ದೇಶಕರು ಈ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದಾರೆ.
ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ಈ ವಿಡಿಯೋದಲ್ಲಿ ಮೊದಲು ಕಾಣಿಸಿಕೊಂಡಿದ್ದು, ಬಳಿಕ ಡಾರ್ಲಿಂಗ್ ಕೃಷ್ಣ, ಗುಲ್ಟೂ ಖ್ಯಾತಿಯ ನವೀನ್ ಶಂಕರ್, ಸಪ್ತಮಿ ಗೌಡ, ವಾಸುಕಿ ವೈಭವ್, ಅಮೃತಾ ಅಯ್ಯಂಗಾರ್, ನಿರ್ದೇಶಕ ಅನೂಪ್ ಭಂಡಾರಿ, ವಿನಯ್ ರಾಜ್ ಕುಮಾರ್, ಡಾಲಿ ಧನಂಜಯ್ ವಿಡಿಯೊದಲ್ಲಿ ಮಾತನಾಡಿದ್ದಾರೆ.

ಈ ಎಲ್ಲರೂ ಸಹ ತಾವು ಕೆಲಸದಲ್ಲಿ ನಿರತರಿದ್ದ ಸ್ಥಳದಿಂದಲೇ ಈ ವಿಡಿಯೊಗಳನ್ನು ಮಾಡಿ ಕಳುಹಿಸಿದ್ದು, ಪ್ರತಿಯೊಬ್ಬರೂ ಸಹ ದಿನಾಂಕವೊಂದರ ಬಗ್ಗೆ ಮಾತನಾಡಿ 'ಡೇಟ್ ಗೊತ್ತಾಯ್ತಾ?' ಎಂಬ ಪ್ರಶ್ನೆಯನ್ನು ಈ ವಿಡಿಯೊದಲ್ಲಿ ಕೇಳಿದ್ದಾರೆ.
ಹೌದು, ಈ ಎಲ್ಲಾ ಕಲಾವಿದರು ಮಾತನಾಡಿರುವುದು ಕಿಚ್ಚ ಸುದೀಪ್ ನಟನೆಯ 46ನೇ ಚಿತ್ರ ಬಗ್ಗೆ. ಸುದೀಪ್ ಕೈಗೆತ್ತಿಕೊಂಡಿರುವ ಈ ಚಿತ್ರವನ್ನು ಕಳೆದ ತಿಂಗಳು ತಮಿಳಿನ ಕಲೈಪ್ಪುಲಿ ಎಸ್ ಧನು ಎಂಬ ನಿರ್ಮಾಪಕರು ನಿರ್ಮಿಸುವುದಾಗಿ ವಿಶೇಷ ಟೀಸರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ತಿಳಿಸಿದ್ದರು. ಆದರೆ ಈ ಚಿತ್ರಕ್ಕೆ ಯಾರು ಆಕ್ಷನ್ ಕಟ್ ಹೇಳಲಿದ್ದಾರೆ ಹಾಗೂ ನಾಯಕಿಯಾಗಿ ಯಾವ ನಟಿ ನಟಿಸಲಿದ್ದಾರೆ ಎಂಬ ಎಂಬ ಮಾಹಿತಿಯನ್ನು ಹಂಚಿಕೊಂಡರಲಿಲ್ಲ.
ಹೀಗೆ ಈ ಅಪ್‌ಡೇಟ್ ಹಂಚಿಕೊಂಡು ತಿಂಗಳು ಕಳೆದರೂ ಸಹ ಚಿತ್ರದ ಕುರಿತು ಹೆಚ್ಚುವರಿ ಮಾಹಿತಿ ಹೊರಬೀಳದ ಕಾರಣ ಕಿಚ್ಚನ ಅನುಯಾಯಿಗಳು ತುಸು ಬೇಸರವನ್ನೂ ಸಹ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಾಗೂ ಆಫ್‌ಲೈನ್‌ನಲ್ಲಿ ಕಿಚ್ಚ 46 ಚಿತ್ರದ ನಿರ್ದೇಶಕರು ಯಾರು ಎಂಬ ಪ್ರಶ್ನೆಯನ್ನು ಹೆಚ್ಚಾಗಿ ಕೇಳಲಾಗಿತ್ತು.
ಹೀಗೆ ಹೆಚ್ಚಾಗಿ ಕೇಳಿ ಬರುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡಲು ಕಿಚ್ಚ 46 ಚಿತ್ರದ ನಿರ್ಮಾಪಕರು ಮುಂದಾಗಿದ್ದು, ಚಿತ್ರದ ಕುರಿತಾದ ಅಪ್‌ಡೇಟ್ ಯಾವಾಗ ಹೊರ ಬೀಳಲಿದೆ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಹೌದು, ಕಲೈಪ್ಪುಲಿ ಎಸ್ ಧನು ಇಂದು ( ಜೂನ್ 27 ) ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಒಂದನ್ನು ಹಂಚಿಕೊಂಡಿದ್ದು, ಕಿಚ್ಚ 46 ಚಿತ್ರದ ಗ್ಲಿಂಪ್ಸ್ ಅನ್ನು ಜುಲೈ 2ರಂದು ಬೆಳಗ್ಗೆ 11.46ಕ್ಕೆ ಬಿಡುಗಡೆಗೊಳಿಸಲಾಗುತ್ತದೆ ಎಂದು ಘೋಷಿಸಿದ್ದಾರೆ.


Click it and Unblock the Notifications











