Spandana Death: ಸ್ಪಂದನಾ ಅಂತಿಮ ದರ್ಶನ ಪಡೆದು ಭಾವುಕರಾದ ನಟ ನಟಿಯರು ಮತ್ತು ರಾಜಕೀಯ ನಾಯಕರು
ಚಿನ್ನಾರಿಮುತ್ತ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಸ್ಯಾಂಡಲ್‌ವುಡ್ ತಾರೆಯರು, ರಾಜಕೀಯ ಮುಖಂಡರು ಸ್ಪಂದನಾ ವಿಜಯ್ ರಾಘವೇಂದ್ರ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಸ್ಪಂದನಾ ಅಂತಿಮ ಯಾತ್ರೆ ನಡೆಯುತ್ತಿದ್ದು, ಕೊನೆಯ ಬಾರಿ ಮುಖ ಕಣ್ತುಂಬಿಕೊಂಡ ನಟ, ನಟಿಯರು ಸ್ಪಂದನಾ ಹಾಗೂ ವಿಜಯ್ ಬಗ್ಗೆ, ತಮ್ಮ ಸ್ನೇಹ ಬಾಂಧವ್ಯದ ಕುರಿತು ಮಾತನಾಡುತ್ತಾ ಭಾವುಕರಾಗಿದ್ದಾರೆ.
ಹಿರಿಯ ನಟ ಶ್ರೀನಾಥ್
ಸ್ಪಂದನಾ ಅಂತಿಮ ದರ್ಶನ ಪಡೆದ ಹಿರಿಯ ನಟ ಶ್ರೀನಾಥ್ ಮಾತನಾಡಲು ತಡವರಿಸಿದ್ದಾರೆ. "ಮಗು ಸ್ಪಂದನಾ ಬಗ್ಗೆ ನಾನು ಏನು ಹೇಳಲಿ. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ. ರಾಘುಗೆ ದೇವರು ಶಕ್ತಿ ಕೊಡಲಿ, ಆ ದೇವರೆ ಕಾಪಾಡಬೇಕು ಅಷ್ಟೇ" ಎಂದಿದ್ದಾರೆ.

ಗಿರಿಜಾ ಲೋಕೇಶ್
ಕೊನೆಯ ಬಾರಿ ಮುಖ ನೋಡಿ ಭಾವುಕರಾದ ಹಿರಿಯ ನಟಿ ಗಿರಿಜಾ ಲೋಕೇಶ್, "ಸ್ಪಂದನಾ ಇನ್ನು ಬದುಕಿದ್ದಾಳೆ ಅನ್ನಿಸುತ್ತಿದೆ. ದೇವರು ದೊಡ್ಡ ಮೋಸ ಮಾಡಿಬಿಟ್ಟ. ಮಲಗಿದ್ದಲ್ಲೇ ನಮ್ಮಂತವರಿಗೆ ಸಾವು ಬರಬೇಕು. ಇಂತಾ ಮಗುವಿಗೆ ಈ ರೀತಿ ಮೋಸವಾಗಬಾರದು. ರಾಘುನ ಆ ದೇವರೇ ಕಾಪಾಡಬೇಕು. ದೇವರು ಈ ಸಂಸಾರವನ್ನು ಹಾಳು ಮಾಡಿದ" ಎಂದು ಕಣ್ಣೀರು ಹಾಕಿದ್ದಾರೆ.
ಸುಧಾರಾಣಿ
"ಸ್ಪಂದನಾ ತುಂಬಾ ಮೃದು ಸ್ವಭಾವದವರು. ಇದು ತುಂಬಾ ಬೇಜಾರಿನ ಸಂಗತಿ. ರಾಘುಗೆ ನೋವು ಭರಿಸೋ ಶಕ್ತಿ ಭಗವಂತನೇ ನೀಡಲಿ. ಒಂದು ತಿಂಗಳ ಹಿಂದೆಯಷ್ಟೇ ರಾಘುನ ಭೇಟಿ ಮಾಡಿದ್ದೇ. ಖುಷಿಯಿಂದ ಮಾತನಾಡಿದ್ದ. ಈಗಲೂ ಈ ಘಟನೆಯನ್ನ ನಂಬುವುದಕ್ಕೆ ಆಗ್ತಾಯಿಲ್ಲ" ಎಂದು ಸುಧಾರಾಣಿ ಹೇಳಿದ್ದಾರೆ.
ಮೇಘನಾ ರಾಜ್
ಅಂತಿಮ ದರ್ಶನ ಪಡೆದು ಮಾತನಾಡಿರುವ ಮೇಘನಾ ರಾಜ್, ಮಾಧ್ಯಮಗಳ ಮೇಲೆ ಕಿಡಿಕಾರಿದ್ದಾರೆ. ಸ್ಪಂದನಾ ಅವರ ಡಯಟ್, ತೂಕ ಸೇರಿದಮತೆ ಆರೋಗ್ಯದ ಬಗ್ಗೆ ಮಾತನಾಡುತ್ತಿರುವವರಿಗೆ ತೀಕ್ಷ ಪ್ರತಿಕ್ರಿಯೆ ನೀಡಿರುವ ಅವರು, ನೀವೇ ಏನೇನೋ ಊಹಿಸಿಕೊಳ್ಳಬೇಡಿ, ಆಕೆಗೆ ಮರ್ಯಾದೆ ಕೊಡಿ ಎಂದು ಮಾಧ್ಯಮದ ಮುಂದೆ ಮನವಿ ಮಾಡಿದ್ದಾರೆ.

ಕೋಡಿಶ್ರೀ
ಸ್ಪಂದನಾ ಅಂತಿಮ ದರ್ಶನಕ್ಕೆ ಬಂದಿದ್ದ ಕೋಡಿಶ್ರೀ ಸ್ಪಂದನಾ ಮತ್ತು ಅವರ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. "ಸ್ಪಂದನಾ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಭಗವಂತನಿಗೆ ಬೇಕಾದಾಗ ಇಂಥ ಹೂವುಗಳನ್ನು ಕರೆಸಿಕೊಳ್ಳುತ್ತಾನೆ. ಭಗವಂತ ಬುಗರಿ ತರಹ ಗೊಂಬೆಯನ್ನು ಆಡಿಸುತ್ತಾ ಇರುತ್ತಾನೆ. ಸ್ಪಂದನಾ ಚಿಕ್ಕಪ್ಪ ಬಿ.ಕೆ.ಹರಿಪ್ರಸಾದ್ ನನ್ನ ಕ್ಲಾಸ್ಮೆಂಟ್. ಸ್ಪಂದನಾ ಕುಟುಂಬಸ್ಥರು ನಮಗೆ ಅತ್ಯಂತ ಆತ್ಮೀಯರಾಗಿದ್ದರು" ಎಂದಿದ್ದಾರೆ.
ನಟ ಅರವಿಂದ್
"ವಿಧಿಯಾಟದ ಮುಂದೆ ಏನೂ ಇಲ್ಲ, ಎಲ್ಲವನ್ನು ನಾವು ಅನುಭವಿಸಬೇಕು. ವಂಶೋದ್ಧಾರಕ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ ಹೀರೋ. ನಾನು ಕರೆಯದೆ ಇದ್ದರೂ ಕೂಡ ಸ್ಪಂದನಾ ಅವರು ಬಂದು ಚಿತ್ರತಂಡಕ್ಕೆ ವಿಶ್ ಮಾಡಿದ್ದರು. ಚಿನ್ನೇಗೌಡ್ರ ಕುಟುಂಬ ನಿರ್ಮಾಣ ಮಾಡಿದ ಸಿನಿಮಾಗಳಲ್ಲಿ ನಾನು ನಟಿಸಿದ್ದೇನೆ. ಎಲ್ಲ ಕಿತ್ತುಕೊಳ್ಳುವವನು, ಕೊಡುವವನು ದೇವರೇ" ಎಂದು ತಿಳಿಸಿದ್ದಾರೆ.

ಸ್ಪಂದನಾ ಅಂತಿಮ ದರ್ಶನಕ್ಕೆ ನಟ ಯಶ್, ರಮೇಶ್ ಅರವಿಂದ್, ಮೇಘನಾ ರಾಜ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ನೆನಪಿರಲಿ ಪ್ರೇಮ್, ಅನಿರುದ್ಧ, ರಕ್ಷಿತಾ, ರಾಧಿಕಾ ಕುಮಾರಸ್ವಾಮಿ, ಧ್ರುವ ಸರ್ಜಾ, ಸಾಧುಕೋಕಿಲ, ಉಮಾಶ್ರೀ, ವಿನೋದ್ ರಾಜ್, ಪ್ರಿಯಾಂಕಾ ಉಪೇಂದ್ರ, ಜಯರಾಮ್ ಕಾರ್ತಿಕ್, ಪ್ರಣಮ್ ದೇವರಾಜ್, ಸುಂದರ್ ರಾಜ್, ಅಮೂಲ್ಯಾ, ಸೃಜನ್ ಲೋಕೇಶ್, ಧನ್ಯಾ ರಾಮ್‌ಕುಮಾರ್, ದೊಡ್ಡಣ್ಣ, ನಿರೂಪಕಿ ಅನುಶ್ರೀ ಸೇರಿದಂತೆ ಚಂದನವನದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಸೇರಿದ್ದರು.


Click it and Unblock the Notifications











