Darshan- Sudeep: ದರ್ಶನ್- ಸುದೀಪ್ ಒಟ್ಟಾಗಿ ಕಾಣಿಸಿಕೊಂಡಿರೋದಕ್ಕೆ ಸಿನಿಮಾ ಮಂದಿ ಹೇಳಿದ್ದೇನು?
ಚಂದನವನದಲ್ಲಿ ಕುಚುಕು ಗೆಳೆಯರಂತಿದ್ದ ನಟ ದರ್ಶನ್ ತೂಗುದೀಪ ಹಾಗೂ ಸುದೀಪ್ ಕಳೆದ 6 ವರ್ಷಗಳ ಹಿಂದೆ ಕೆಲವೊಂದು ಕಾರಣದಿಂದ ದೂರವಾಗಿದ್ದರು. ಇನ್ನೂ ನಟ ದರ್ಶನ್ "ನಾನು ಸುದೀಪ್ ಇನ್ನು ಮುಂದೆ ಸ್ನೇಹಿತರಲ್ಲ, ಒಂದು ಚಿತ್ರರಂಗದಲ್ಲಿ ಕೆಲಸಮಾಡುವ ಸಹೋದ್ಯೋಗಿಗಳು" ಎಂದು ಹೇಳಿದ್ದರು. ಅಂದಿನಿಂದ ಇಬ್ಬರ ನಡುವಿನ ಕಂದರ ಬೆಳೆಯುತ್ತಲೇ ಹೋಗಿತ್ತು.
ಆದರೆ, ನಟಿ, ಸಂಸದೆ ಸುಮಲತಾ ಅಂಬರೀಶ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆರು ವರ್ಷಗಳ ನಂತರ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮತ್ತು ಚಿತ್ರರಂಗ ಹಳೇ ಸ್ನೇಹಿತರಿಬ್ಬರೂ ಮತ್ತೆ ಒಂದಾಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೇಘನಾ ರಾಜ್
ನಟಿ ಮೇಘನಾ ರಾಜ್ ದರ್ಶನ್ - ಸುದೀಪ್ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. "ಕನ್ನಡ ಚಿತ್ರರಂಗ ಯಾವತ್ತಿಗೂ ಒಗ್ಗಟ್ಟಿನಲ್ಲಿ ನಡೆದಿದೆ. ಇವತ್ತಿಗೂ ಒಗ್ಗಟಾಗಿಯೇ ಇದೆ. ಮುಂದೆಯೂ ಒಟ್ಟಾಗಿಯೇ ಇರುತ್ತದೆ" ಎಂದಿದ್ದಾರೆ.
"ನಟ ನಟಿಯರಲ್ಲಿ ಬರುವ ಬಿರುಕುಗಳು, ಅವರ ಮಧ್ಯೆದಲ್ಲಿ ಇರುವುದಿಲ್ಲ. ಅವುಗಳನ್ನು ಹೊರಗಿನವರು ಸೃಷ್ಠಿ ಮಾಡಿರುತ್ತಾರೆ. ಅದರಲ್ಲೂ ನಮ್ಮ ಕನ್ನಡ ಸಿನಿರಂಗದಲ್ಲಿ ನಾವು ಯಾವತ್ತಿಗೂ ಒಟ್ಟಿಗೆ ಇರ್ತಿವಿ. ಇವತ್ತು ಅಂತ ಅಲ್ಲ, ಯಾವತ್ತಿಗೂ ನಾವು ಒಟ್ಟಿಗೆ ಇರುತ್ತೇವೆ. ನಮ್ಮ ನಡುವೆ ಮುನಿಸು ಬರಬಹುದು ಆದರೂ, ಒಟ್ಟಿಗೆ ಇರುತ್ತೇವೆ" ಎಂದು ನಟಿ ಮೇಘನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಧ್ರುವ ಸರ್ಜಾ
ನಟ ಧ್ರುವ ಸರ್ಜಾ ಕೂಡ ಹಳೇ ಸ್ನೇಹಿತರು ಒಂದಾಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ಎಲ್ಲದಕ್ಕೂ ಒಂದು ಟೈಂ ಬೇಕು. ಯಾರ ಯಾರ ದೃಷ್ಟಿಕೋನ ಹೇಗಿರುತ್ತದೆಯೋ? ಅಲ್ಲಿ ಏನೇನು ಆಗಿರುತ್ತದೆಯೋ ಯಾರಿಗೂ ಗೊತ್ತಿಲ್ಲ. ಹಾಗಾಗಿ ನಾವು ಯಾರನ್ನು ಡೀಪ್ ಆಗಿ ಕೆಣಕಲು ಹೋಗದೆ ಅದಕ್ಕೆ ಸಮಯ ಕೊಟ್ಟರೆ ತಾನಾಗಿಯೇ ಸರಿ ಹೋಗುತ್ತದೆ. ಎಲ್ಲರೂ ಒಂದಾಗಿರೋದು ಎಲ್ಲರಿಗೂ ಇಷ್ಟ" ಎಂದು ಟಿವಿ9 ಜೊತೆ ಮಾತಾಡುವಾಗ ಹೇಳಿದ್ದಾರೆ.
ಸುಮಲತಾ
ಈ ನಟರು ಒಂದು ವೇದಿಕೆಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಮುಖ್ಯ ಕಾರಣ ಸುಮಲತಾ. ಅವರು ಕೂಡ ಈ ಬಗ್ಗೆ ಮಾತನಾಡಿದ್ದು, "ಇದು ನಮ್ಮ ವೈಯಕ್ತಿಕ ಕಾರ್ಯಕ್ರಮವಾಗಿದೆ. ಫ್ಯಾಮಿಲಿ ಅಂದ ಮೇಲೆ ಎಲ್ಲರೂ ಒಂದೆ. ಇದು ತೀರಾ ಪರ್ಸನಲ್ ವಿಚಾರ. ಈ ಬಗ್ಗೆ ನಾನು ಹೆಚ್ಚು ಮಾತನಾಡೋಕೆ ಇಷ್ಟಪಡಲ್ಲ" ಎಂದು ಹೇಳಿದ್ದಾರೆ.

ಲಹರಿ ವೇಲು
ನಿರ್ಮಾಪಕ ಲಹರಿ ವೇಲು ನ್ಯೂಸ್ 18 ಕನ್ನಡ ಸುದ್ದಿವಾಹಿನಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. " ಇದು ಬಹಳ ಸಂತೋಷದ ದಿನ. 48 ವರ್ಷಗಳಿಂದ ನಾವು ಇಲ್ಲಿದ್ದೇವೆ. ಅಣ್ಣಾವ್ರು, ವಿಷ್ಣು ಸರ್ ಅವರನ್ನು ನೋಡಿದ್ದೇವೆ. ನಮ್ಮದು ನಮ್ಮ ಸಂಸಾರ ಆನಂದ ಸಾಗರ ಹಾಡಿನ ರೀತಿ ನಮ್ಮ ಚಲನಚಿತ್ರರಂಗ ಅವಿಭಕ್ತ ಕುಟುಂಬ. ಹೀಗೆ ಇರಬೇಕು. ಇಲ್ಲಿ ಯಾರು ದೊಡ್ಡವರಲ್ಲ ಯಾರು ಚಿಕ್ಕವರಲ್ಲ. ಇಗೋ ಅನ್ನೋದು ಇರಬಾರದು ಅಷ್ಟೇ. ಇದು ತುಂಬಾ ಸಂತೋಷದ ಸುದ್ದಿ. ಇದೇ ರೀತಿ ಎಲ್ಲಾ ಚಲನಚಿತ್ರ ನಟರು ಒಟ್ಟಿಗೆ ಇರಬೇಕು" ಎಂದು ಹೇಳಿದ್ದಾರೆ.
ನಟ ದರ್ಶನ್ ಹಾಗೂ ಸುದೀಪ್ ರೆಬಲ್ ಸ್ಟಾರ್ ಅಂಬರೀಶ್ ಕುಟುಂಬಕ್ಕೆ ಆಪ್ತರಾಗಿದ್ದರಿಂದ ಇಬ್ಬರಿಗೂ ಸುಮಲತಾ ಅಂಬರೀಶ್ ಹುಟ್ಟುಹಬ್ಬದ ಪಾರ್ಟಿಗೆ ಆಹ್ವಾನ ನೀಡಲಾಗಿತ್ತು. ಹೀಗಾಗಿ ದರ್ಶನ್ ಮತ್ತು ಸುದೀಪ್ ಪಾರ್ಟಿಗೆ ಹಾಜರಾಗಿದ್ದರು. ಇವರಿಬ್ಬರನ್ನು ಒಂದೆಡೆ ಸೇರಿಸಬೇಕೆಂದು ಸುಮಲತಾ ಹಾಗೂ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಪಟ್ಟು ಹಿಡಿದಂತೆ ಕಾಣುತ್ತಿತ್ತು. ಇಬ್ಬರ ಜೊತೆಗೆ ಸಂಧಾನ ನಡೆಸಲಾಗಿದೆ ಎಂಬ ವರದಿಗಳು ಇವೆ. ಆದರೆ, ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡರು ಇಬ್ಬರು ಮಾತನಾಡಿಲ್ಲ. ಆದಷ್ಟು ಬೇಗ ಮತ್ತೆ ಕುಚಿಕು ಗೆಳೆಯರು ಒಂದಾಗಲಿ ಎಂಬುದು ಚಿತ್ರರಂಗ ಮತ್ತು ನಟರಿಬ್ಬರ ಅಭಿಮಾನಿಗಳ ಆಶಯ.


Click it and Unblock the Notifications











