ಹೆಚ್ಚು ಸಂಭಾವನೆಗೆ ಆಸೆ ಬಿದ್ದು ಕನ್ನಡ ಚಿತ್ರರಂಗಕ್ಕೆ ಕೈ ಕೊಟ್ರಾ ಸ್ಟಾರ್ಸ್ ?
ಸ್ಯಾಂಡಲ್‌ವುಡ್ ಸಂಕಷ್ಟಕ್ಕೆ ಸಿಲುಕಿದೆ. ಒಂದಿಲ್ಲೊಂದು ಸಮಸ್ಯೆಯಿಂದ ಕಂಗೆಟ್ಟಿದೆ. ಪ್ಯಾನ್ ಇಂಡಿಯಾ ಸಿನಿಮಾಗಳ ಹುಚ್ಚಿಗೆ ಬಿದ್ದು ಕನ್ನಡದ ನಟರು ಪದೇ ಪದೆ ತಪ್ಪು ಮಾಡುತ್ತಿದ್ದಾರೆ. ಎರಡ್ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡ್ತೀನಿ ಎಂದು ಪಟ್ಟು ಹಿಡಿದು ಕೂತಿದ್ದಾರೆ. ಇತ್ತ ಚಿತ್ರಮಂದಿರಗಳಲ್ಲಿ ದೊಡ್ಡ ಕನ್ನಡ ಸಿನಿಮಾಗಳು ಇಲ್ಲದೇ ಪರಭಾಷಾ ಸಿನಿಮಾ ಹಾವಳಿ ಹೆಚ್ಚಾಗುತ್ತಿದೆ.
ಬೆಂಗಳೂರಿನಲ್ಲಿ ನೇಪಾಳಿ, ಪಂಜಾಬಿ, ಒರಿಯಾ ಭಾಷೆಯ ಸಿನಿಮಾಗಳು ಪ್ರದರ್ಶನ ಕಾಣುವಂತಾಗಿದೆ. ಕನ್ನಡ ಸಿನಿಮಾಗಳಿಗೆ ಸಿಗದಷ್ಟು ಶೋಗಳು ಆ ಸಿನಿಮಾಗಳಿಗೆ ಸಿಗುತ್ತಿದೆ. ಇದನ್ನೆಲ್ಲಾ ನೋಡಿಯೂ ನೋಡದಂತೆ ನಮ್ಮ ಸ್ಟಾರ್ಸ್ ವರ್ತಿಸುತ್ತಿದ್ದಾರೆ. ಕನ್ನಡ ಸಿನಿಮಾ ನಿರ್ಮಾಪಕರು, ನಿರ್ದೇಶಕರಿಗೂ ಅವಕಾಶ ಕೊಡುತ್ತಿಲ್ಲ. ಹೆಚ್ಚು ಸಂಭಾವನೆ ಸಿಗುತ್ತದೆ ಎನ್ನುವ ಕಾರಣಕ್ಕೋ ಏನೋ ಪರಭಾಷಾ ಫಿಲ್ಮ್ ಮೇಕರ್ಸ್‌ಗೆ ಮಣೆ ಹಾಕುತ್ತಿದ್ದಾರೆ.

ಕನ್ನಡದ ಖ್ಯಾತ ಚಿತ್ರ ನಿರ್ಮಾಪಕರು ಈಗ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿಲ್ಲ. ಹೊಸಬರು ಬಂದು ಸಣ್ಣಪುಟ್ಟ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಮತ್ತೊಂದು ಕಡೆ ಸ್ಟಾರ್ ನಟರೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಉತ್ಸಾಹದಲ್ಲಿದ್ದಾರೆ. ಕನ್ನಡ ಪ್ರೇಕ್ಷಕರನ್ನು ರಂಜಿಸುವ, ಕರ್ನಾಟಕದ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಯಾರಿಗೂ ಇಲ್ಲ ಎನ್ನುವಂತಾಗಿದೆ.
ಶಿವಣ್ಣ ಮಾತ್ರ ಹೆಚ್ಚು ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನುಳಿದಂತೆ 'ರಿಚರ್ಡ್ ಆಂಟನಿ' ಸಿನಿಮಾ ಮಾಡೋಕೆ ರಕ್ಷಿತ್ ಶೆಟ್ಟಿ ಮೀನಾಮೇಷ ಎಣಿಸುತ್ತಿದ್ದಾರೆ. ಯಶ್ ಮುಂದಿನ ವರ್ಷ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಶ್ರೀಮುರಳಿ ಹೊಸ ಸಿನಿಮಾ ಖಬರ್ ಇಲ್ಲ. 'ಕೆಡಿ' ಸಿನಿಮಾ ತೆರೆಗೆ ತರಲು ಪ್ರೇಮ್ ಹಾಗೂ ಧ್ರುವಗೆ ಇನ್ನೆಷ್ಟು ವರ್ಷ ಬೇಕೋ ಗೊತ್ತಿಲ್ಲ. 'ಕಾಂತಾರ- 1' ಬಳಿಕ ರಿಷಬ್ ಶೆಟ್ಟಿ ಕನ್ನಡ ಸಿನಿಮಾ ಯಾವಾಗ ಮಾಡ್ತಾರೆ? ಎನ್ನುವ ಮಾಹಿತಿ ಯಾರಿಗೂ ಇಲ್ಲ. ಒಟ್ಟಾರೆ ಕನ್ನಡ ಸ್ಟಾರ್ಸ್ ಎಲ್ಲಾ ಕನ್ನಡ ಚಿತ್ರರಂಗದಿಂದ ದೂರಾಗಿ ಯೋಚಿಸುತ್ತಿದ್ದಾರೆ.

ಹೀಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಮೋಹಕ್ಕೆ ಬಿದ್ದ ಕನ್ನಡ ನಟರ ವಿರುದ್ಧ ಕನ್ನಡ ನಿರ್ಮಾಪಕರು ಬೇಸರಗೊಂಡಿದ್ದಾರೆ. ನಮಗೆ ಕಾಲ್‌ಶೀಟ್ ಕೊಡುತ್ತಿಲ್ಲ ಎಂದು ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಬಹಿರಂಗವಾಗಿಯೇ ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಶಿವಣ್ಣ, ಸುದೀಪ್ ಹಾಗೂ ಶ್ರೀಮುರಳಿ ಹೆಸರು ಹೇಳಿ ಗರಂ ಆಗಿ ಎಚ್ಚರಿಕೆ ಕೊಟ್ಟಿದ್ದಾರೆ. ಹಾಗಾದರೆ ಕನ್ನಡ ನಟರು ಈಗ ಪರಭಾಷಾ ಫಿಲ್ಮ್ ಮೇಕರ್ಸ್‌ಗೆ ಕಾಲ್‌ಶೀಟ್ ಕೊಡುತ್ತಿರುವುದು ನಿಜವೇ? ಯಾರು ಆ ರೀತಿ ಮಾಡ್ತಿದ್ದಾರೆ? ಕಾರಣ ಏನು? ಮುಂದೆ ಓದಿ.
ಕಿಚ್ಚ ಸುದೀಪ್
'ಮ್ಯಾಕ್ಸ್' ಸಿನಿಮಾ ಮಾಡಿ ಸುದೀಪ್ ಗೆದ್ದಿದ್ದಾರೆ. ಸದ್ಯ 'ಬಿಲ್ಲ ರಂಗ ಬಾಷ' ಹಾಗೂ 'K47' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಿಗ್‌ಬಾಸ್, ಕಾರ್ ರೇಸ್ ಎಲ್ಲದರ ನಡುವೆ ಆದಷ್ಟು ಬೇಗ 2 ಸಿನಿಮಾ ಮುಗಿಸುವ ಧಾವಂತದಲ್ಲಿದ್ದಾರೆ. ಆದರೆ ಈ ಎರಡೂ ಸಿನಿಮಾಗಳನ್ನು ಪರಭಾಷಾ ನಿರ್ಮಾಪಕರು ತಯಾರಿಸುತ್ತಿದ್ದಾರೆ. 'ಬಿಲ್ಲ ರಂಗ ಬಾಷ' ಚಿತ್ರಕ್ಕೆ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತೆಲುಗಿನ ಪ್ರೈಂಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರಂಜನ್ ರೆಡ್ಡಿ ಹಾಗೂ ಚೈತನ್ಯಾ ರೆಡ್ಡಿ ಎಂಬುವವರು ಹಣ ಹೂಡುತ್ತಿದ್ದಾರೆ.

ಇನ್ನು ಸುದೀಪ್ ನಟನೆಯ 'K47' ಚಿತ್ರವನ್ನು ತಮಿಳಿನ ಸತ್ಯಜ್ಯೋತಿ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. 'ಮ್ಯಾಕ್ಸ್' ಬಳಿಕ ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್, ಆರ್‌ಸಿ ಮೂವೀಸ್ ಬ್ಯಾನರ್‌ಗಳ ಅಡಿಯಲ್ಲಿ ಸುದೀಪ್ ಸಿನಿಮಾಗಳು ಘೋಷಣೆ ಆಗಿದೆ. ಅದನ್ನೆಲ್ಲಾ ಬಿಟ್ಟು ಮೊದಲು ಪರಭಾಷಾ ಫಿಲ್ಮ್ ಮೇಕರ್ಸ್‌ಗೆ ಕಿಚ್ಚ ಮಣೆ ಹಾಕಿದ್ದಾರೆ.
ಗಣೇಶ್
'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಮಾಡಿ ಗಣೇಶ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಸದ್ಯ 'ಪಿನಾಕ' ಎಂಬ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರವನ್ನು ತೆಲುಗಿನ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ನಿರ್ಮಾಣ ಮಾಡಲಿದೆ. ಡ್ಯಾನ್ಸ್ ಮಾಸ್ಟರ್ ಧನಂಜಯ್ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ.
ರಿಷಬ್ ಶೆಟ್ಟಿ
'ಕಾಂತಾರ- 1' ಬಳಿಕ ರಿಷಬ್ ಶೆಟ್ಟಿ ಶಿವಾಜಿ ಬಯೋಪಿಕ್ ಹಾಗೂ 'ಜೈ ಹನುಮಾನ್' ಎಂಬ ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಬಾಲಿವುಡ್ ನಿರ್ದೇಶಕ, ನಿರ್ಮಾಪಕ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರ ನಿರ್ಮಿಸಿ ನಿರ್ದೇಶಿಸುತ್ತಿದ್ದಾರೆ. ತೆಲುಗಿನ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ 'ಜೈ ಹನುಮಾನ್' ಚಿತ್ರ ನಿರ್ಮಿಸುತ್ತಿದೆ. ಟಾಲಿವುಡ್ ನಿರ್ದೇಶಕ ಪ್ರಶಾಂತ್ ವರ್ಮಾ ಆಕ್ಷನ್ ಕಟ್ ಹೇಳಲಿದ್ದಾರೆ. ತೆಲುಗಿನ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ರಿಷಬ್ ಶೆಟ್ಟಿ ಸಿನಿಮಾ ಮಾಡುವ ಬಗ್ಗೆಯೂ ಊಹಾಪೋಹ ಶುರುವಾಗಿದೆ.
ಕನ್ನಡ ಪ್ರತಿಭೆಗಳು ಈಗ ಪರಭಾಷೆಯ ಸಿನಿಮಾಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್, ಎ. ಹರ್ಷ ಟಾಲಿವುಡ್, ಬಾಲಿವುಡ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ ಸೇರಿದಂತೆ ಕೆಲ ನಟಿಯರು ಕೂಡ ಬೇರೆ ಇಂಡಸ್ಟ್ರಿಗಳಲ್ಲಿ ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಗಳು ಪರಭಾಷೆಯಲ್ಲಿ ನೂರಾರು ಕೋಟಿ ಸುರಿದು ದೊಡ್ಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿವೆ. ಇದೆನ್ನೆಲ್ಲಾ ನೋಡಿ ಖುಷಿಪಡಬೇಕೋ, ಕನ್ನಡ ಚಿತ್ರರಂಗ ಬಡವಾಗುತ್ತಿದೆ ಎಂದು ಬೇಸರಗೊಳ್ಳಬೇಕೋ ಗೊತ್ತಿಲ್ಲ. ಇದೆಲ್ಲದರ ನಡುವೆ ಕನ್ನಡ ನಟರು ಪರಭಾಷಾ ಫಿಲ್ಮ್ ಮೇಕರ್ಸ್‌ಗೆ ಅವಕಾಶ ಕೊಡುತ್ತಿರುವುದು ವಿಪರ್ಯಾಸ.
ಚಿತ್ರ ನಿರ್ಮಾಪಕರನ್ನು ಅನ್ನದಾತರು ಎಂದು ಡಾ. ರಾಜ್‌ಕುಮಾರ್ ಕರೆದಿದ್ದರು. ಆದರೆ ಈಗ ಕನ್ನಡ ಚಿತ್ರ ನಿರ್ಮಾಪಕರು, ನಿರ್ದೇಶಕರ ಬಗ್ಗೆ ಕನ್ನಡ ನಟರಿಗೆ ತಾತ್ಸಾರ ಶುರುವಾಗಿದೆ. ಪರಭಾಷೆಯ ದೊಡ್ಡ ಸಂಸ್ಥೆಗಳು ಹೆಚ್ಚು ಹಣ ಹೂಡಿ ಸಿನಿಮಾ ಮಾಡುತ್ತಾರೆ. ಭಾರೀ ಸಂಭಾವನೆ ಕೊಡುತ್ತಾರೆ ಎನ್ನುವ ಕಾರಣಕ್ಕೋ ಏನೋ ಸ್ಟಾರ್ಸ್ ಹೀಗೆ ಅತ್ತ ಮುಖ ಮಾಡಿದ್ದಾರೆ. ಕನ್ನಡ ಫಿಲ್ಮ್ ಮೇಕರ್ಸ್ ಹಾಗೂ ಇಂಡಸ್ಟ್ರಿ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದು ಹೀಗೆ ಮುಂದುವರೆದರೆ ಮುಂದೆ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ.
ಸ್ಟಾರ್ ನಟರು ಕನ್ನಡ ನಿರ್ಮಾಪಕರಿಗೆ ಕಾಲ್‌ಶೀಟ್ ಕೊಡಬೇಕು. ಕನ್ನಡ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು. ವರ್ಷಕ್ಕೆ 2 ಸಿನಿಮಾಗಳನ್ನು ಮಾಡಬೇಕು. ಆಗ ಮಾತ್ರ ಕನ್ನಡ ಸಿನಿಮಾಗಳು, ಚಿತ್ರರಂಗ ಉಳಿಯಲು ಸಾಧ್ಯ. ಇಲ್ಲದಿದ್ದರೆ ಸ್ಯಾಂಡಲ್‌ವುಡ್ ಬಾಗಿಲು ಮುಚ್ಚಿ ಬರೀ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಿಕೊಂಡಿರಬೇಕು. ಬೇರೆ ಭಾಷೆಯಲ್ಲಿ ನಿರ್ಮಾಣವಾಗುವ ಸಿನಿಮಾಗಳಲ್ಲಿ ಕನ್ನಡ ನಟರು ನಟಿಸಿ, ಅದನ್ನು ಕನ್ನಡದಲ್ಲಿ ಡಬ್ ಮಾಡಿಕೊಂಡು ಇಲ್ಲಿನ ಪ್ರೇಕ್ಷಕರು ನೋಡುತ್ತಾ ಕೂರಬೇಕು.
'ಕಾಟೇರ', 'ಮ್ಯಾಕ್ಸ್' ರೀತಿಯ ಸಿನಿಮಾಗಳು ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಭರ್ಜರಿ ಲಾಭ ತಂದುಕೊಟ್ಟಿತ್ತು. ಹಾಗಾಗಿ ಪ್ಯಾನ್ ಇಂಡಿಯಾ ಎನ್ನುವುದನ್ನು ಸ್ಟಾರ್ಸ್ ತಲೆಯಿಂದ ತೆಗೆದು ಹಾಕಬೇಕು. ಈ ಪ್ರವೃತ್ತಿ ಹೀಗೆ ಮುಂದುವರೆದರೆ ಕನ್ನಡ ಚಿತ್ರರಂಗವೇ ನಾಶವಾಗುತ್ತದೆ. ಇದನ್ನೇ ನಂಬಿಕೊಂಡಿರುವ ನೂರಾರು ಜನರ ಬದುಕು ಮೂರಾಬಟ್ಟೆಯಾಗುತ್ತದೆ. ಅವಕಾಶ, ಹಣ, ಹೆಸರು ಎಲ್ಲವನ್ನು ಕೊಟ್ಟ ಕನ್ನಡ ಚಿತ್ರರಂಗವನ್ನು ನಿಮ್ಮನ್ನು ಸ್ಟಾರ್‌ಗಳಾಗಿ ಮೆರೆಸಿದ ಕನ್ನಡ ಪ್ರೇಕ್ಷಕರನ್ನು ಮರೆಯಬಾರದು. ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕಿದೆ.
ಇದೇ ವಿಚಾರದ ಬಗ್ಗೆ ಕನ್ನಡ ನಿರ್ಮಾಪಕದ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯಿಸಿದ್ದಾರೆ. "ನಾವು ಯಾರಿಗೂ ಇಂತಹವರ ಜೊತೆ ಸಿನಿಮಾ ಮಾಡಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಕನ್ನಡ ನಟರು ಈ ಬಗ್ಗೆ ಗಮನ ಹರಿಸಬೇಕು. ಚಿತ್ರರಂಗದಲ್ಲಿ ಹೊಸ ತಲೆಮಾರಿನ ಕೆಲ ನಾಯಕ ನಟರು ಹುಟ್ಟಿಕೊಳ್ಳುವವರೆಗೂ ಸ್ಟಾರ್ ನಟರು ಚಿತ್ರರಂಗವನ್ನು ಬಿಡಬಾರದು. ಹೊಸ ಸ್ಟಾರ್ ನಟರು ಸಿಕ್ಕಿದ ಮೇಲೆ ಇವ್ರು ಎಲ್ಲಿಗೆ ಹೋದರೂ ಅಡ್ಡಿಯಿಲ್ಲ. ಒಟ್ಟಾರೆ ನೇಮು ಫೇಮು ಕೊಟ್ಟ ಕನ್ನಡ ಚಿತ್ರರಂಗವನ್ನು ಯಾರು ಮರೆಯಬಾರದು" ಎಂದಿದ್ದಾರೆ.


Click it and Unblock the Notifications











