Lakshman Passes Away : ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಲಕ್ಷ್ಮಣ್ ನಿಧನ
ಹೃದಯಾಘಾತದಿಂದ ಕನ್ನಡ ಚಿತ್ರರಂಗದ ಹಿರಿಯ ನಟ ಲಕ್ಷ್ಮಣ್ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ. 300 ಕ್ಕೂ ಅಧಿಕ ಸಿನಿಮಾಗಳಲ್ಲಿ ಖಳನಟರಾಗಿ ಲಕ್ಷ್ಮಣ್ ನಟಿಸಿದ್ದರು. ಅಂಬರೀಶ್ ಸಿನಿಮಾಗಳಲ್ಲಿ ಖಾಯಂ ಪೋಷಕ ಕಲಾವಿದರಾಗಿದ್ದರು. 'ಅಂತ', 'ಮಲ್ಲ', 'ದಿಗ್ವಿಜಯ', 'ಒಲವಿನ ಉಡುಗೊರೆ', 'ಅಸಂಭವ', 'ಕರ್ಣ', 'ಚದುರಂಗ', 'ಸೂರ್ಯವಂಶ' ಸೇರಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು.
ನಿನ್ನೆ(ಜ.22) ರಾತ್ರಿ ಲಕ್ಷ್ಮಣ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಬೆಳಗಿನ ಜಾವ 3.30 ಸುಮಾರಿಗೆ ಅವರನ್ನು ನಾಗರಬಾವಿಯಲ್ಲಿರುವ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ನಂತರ ಇಸಿಜಿ ಮಾಡಿ ಅವರನ್ನು ಮನೆಗೆ ಕರೆದುಕೊಂಡು ಬರಲಾಯಿತು. ಆದರೆ ಮುಂಜಾನೆ ಅವರಿಗೆ ಹೃದಯಾಘಾತ ಸಂಭವಿಸಿದೆ. ಮೂಡಲಪಾಳ್ಯದ ನಿವಾಸದಲ್ಲೇ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಕನ್ನಡ ಚಿತ್ರರಂಗ ಕಲಾವಿದರು, ತಂತ್ರಜ್ಞರು ಲಕ್ಷ್ಮಣ್ ಅಗಲಿಕೆಗೆ ಸಂತಾಪ ಸೂಚಿಸುತ್ತಿದ್ದಾರೆ.
ತಂದೆ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು. ತಂದೆ ತಾಯಿಗೆ 8 ಜನ ಮಕ್ಕಳಾಗಿ ಒಬ್ಬರಾಗಿದ್ದ ಲಕ್ಷ್ಮಣ್ ಎಸ್‌ಎಸ್ಎಲ್‌ಸಿವರೆಗೂ ಓದಿದ ನಂತರ ಕೆಲಸ ಹುಡುಕಲು ಆರಂಭಿಸಿದರು. ಮೊದಲಿಗೆ ವಾರದಕ್ಕೆ 15 ರೂಪಾಯಿ ಸಂಬಂಳಕ್ಕೆ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. 'ಸತ್ಯ ಹರಿಶ್ಚಂದ್ರ' ಸಿನಿಮಾ ನೋಡಿ ಡಾ. ರಾಜ್‌ಕುಮಾರ್ ಅಭಿಮಾನಿಯಾಗಿದ್ದರು. ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಲು ಆಯ್ಕೆ ಆಗಿದ್ದರು. ಆದರೆ ಸೈನ್ಯಕ್ಕೆ ಸೇರಲು ತಾಯಿ ಒಪ್ಪದ ಕಾರಣ, ಬೆಂಗಳೂರಿನಲ್ಲೇ ಕೆಲಸ ಹುಡುಕಿಕೊಂಡಿದ್ದರು. 150 ರೂಪಾಯಿ ಸಂಬಳಕ್ಕೆ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ಕೆಲಸ ಮಾಡುವಾಗ ಜಿಮ್‌ನಲ್ಲಿ ಕರಸತ್ತು ಮಾಡುತ್ತಿದ್ದರು. ಕಾರ್ಖಾನೆಯಲ್ಲಿ ನಾಟಕಗಳಲ್ಲಿ ನಟಿಸಲು ಆರಂಭಿಸಿದರು. ಆ ನಾಟಕದ ಗೀಳು ಚಿತ್ರರಂಗಕ್ಕೆ ಕರೆದುಕೊಂಡು ಬಂದಿತ್ತು.

'ಉಷಾ ಸ್ವಯಂವರ' ಚಿತ್ರದ ಮೂವರು ನಾಯಕರಲ್ಲಿ ಒಬ್ಬರಾಗಿ ನಟಿಸುವ ಮೂಲಕ ಲಕ್ಷ್ಮಣ್ ಚಿತ್ರರಂಗ ಪ್ರವೇಶಿಸಿದರು. ಆದರೆ ಆ ಸಿನಿಮಾ ರಿಲೀಸ್ ತಡವಾಗಿತ್ತು. ಮುಂದೆ ದೇಹದಾರ್ಢ್ಯ ನೋಡಿ ವಿಲನ್ ಪಾತ್ರಗಳಿಗೆ ಸೀಮಿತ ಮಾಡಿಬಿಟ್ಟಿದ್ದರು. ಅಂಬರೀಶ್ ನಟನೆಯ 'ಅಂತ' ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಅಲ್ಲಿಂದ ಮುಂದೆ ಹಿಂತಿರುಗಿ ನೋಡಲಿಲ್ಲ. 'ಅಂತ' ಚಿತ್ರದ ಪೊಲೀಸ್ ಆಫೀಸರ್ ಕುಲವಂತ್ ಪಾತ್ರಕ್ಕೆ ಆಯ್ಕೆ ಆಗಿದ್ದರು. ಅಲ್ಲಿಂದ ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು.


Click it and Unblock the Notifications











