ಈ ವಾರ ಕನ್ನಡದಲ್ಲಿ ಬಿಡುಗಡೆಯಾಗಿವೆ 12 ಸಿನಿಮಾಗಳು, ಇವುಗಳಲ್ಲಿ ನಿಮಗೆ ಯಾವ ಚಿತ್ರದ ಬಗ್ಗೆ ಗೊತ್ತು ?
ಕಲೆ ಮತ್ತು ಕಾಸು ಬೆರೆತ ಉದ್ಯಮ ಸಿನಿಮಾ. ಇಂತಹ ಪ್ರಪಂಚದಲ್ಲಿ ಹಲವಾರು ಜನ ತಮ್ಮ ಬದುಕು ಬದಲಾಗಬಹುದೆಂಬ ಆಶಯದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ತಾರೆ. ಕೆಲವರು ಗೆಲ್ತಾರೆ. ನಿರೀಕ್ಷೆಯನ್ನೂ ಮೀರಿ ಲಾಭ ಮಾಡುತ್ತಾರೆ. ಇನ್ನು ಕೆಲವರು ಹಣದಾಸೆಯಲ್ಲಿ ತಮ್ಮ ಕೈಯಲ್ಲಿದ್ದ ದುಡ್ಡೆಲ್ಲ ಚಿತ್ರಕ್ಕೆ ಹೂಡುತ್ತಾರೆ. ಇಂಥಾ ಪ್ರಪಂಚದಲ್ಲಿ ಕೇವಲ ಸಿನಿಮಾ ಮಾಡುವುದು ಮುಖ್ಯ ಅಲ್ಲ. ಆ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವುದು ಮುಖ್ಯ. ಅದಕ್ಕೆ ಬೇಕಾದಂತಹ ಪ್ರಚಾರವನ್ನು ಮಾಡುವುದು ಕೂಡ ಮುಖ್ಯ.
ಆದರೆ.. ಈಗೀಗ ಚಿತ್ರವನ್ನು ತೆರೆಗೆ ತರುವ ಹೊತ್ತಿಗೆ ನಿರ್ಮಾಪಕರ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ. ಹೀಗಾಗಿಯೇ ಹಲವು ಚಿತ್ರಗಳಿಗೆ ಇಲ್ಲಿ ಬೇಕಾದ ಪ್ರಚಾರ ಸಿಗುವುದೇ ಇಲ್ಲ. ಇಂಥಹದ್ದೊಂದು ಚಿತ್ರ ಬಿಡುಗಡೆಯಾಗುತ್ತಿದೆ ಎನ್ನುವ ವಿಚಾರವೇ ಪ್ರೇಕ್ಷಕರಿಗೆ ಗೊತ್ತಿರುವುದಿಲ್ಲ. ಇದಕ್ಕೆ ಕೈಗನ್ನಡಿಯೇ ಇಂದು ಬಿಡುಗಡೆಯಾದ ಚಿತ್ರಗಳು.

ಹೌದು, ಎಂದಿನಂತೆ ಈ ವಾರ ಕೂಡ ಕನ್ನಡದಲ್ಲಿ ಚಿತ್ರಮಂದಿರಗಳಿಗೆ ಸಿನಿ ಸುನಾಮಿ ಅಪ್ಪಳಿಸಿದೆ. ಒಂದಲ್ಲ.. ಎರಡಲ್ಲ.. ಬರೋಬ್ಬರಿ ಹನ್ನೆರಡು ಸಿನಿಮಾಗಳು ಬಿಡುಗಡೆಯಾಗಿವೆ. ಆದರೆ.. ಹೀಗೆ ಬಿಡುಗಡೆಯಾದ ಈ ಹನ್ನೆರಡು ಚಿತ್ರಗಳಲ್ಲಿ ಪ್ರೇಕ್ಷಕರಿಗೆ ಗೊತ್ತಿರುವ ಚಿತ್ರಗಳೆಷ್ಟು ಎನ್ನುವುದೇ ಸದ್ಯದ ಯಕ್ಷ ಪ್ರಶ್ನೆ. ಹಾಗಿದ್ದರೆ ಈ ವಾರ ಬಿಡುಗಡೆಯಾದ 12 ಚಿತ್ರಗಳು ಯಾವುವು.. ? ಎಂದು ತಿಳಿಯಲು ಮುಂದೆ ಓದಿ.
ಸನ್ ಆಫ್ ಮುತ್ತಣ್ಣ
ಪ್ರಜ್ವಲ್ ದೇವರಾಜ್ ಅವರ ಸಹೋದರ ಪ್ರಣಾಮ್ ದೇವರಾಜ್ ಮತ್ತು ದಿಯಾ ಖ್ಯಾತಿಯ ಖುಷಿ ರವಿ ಅಭಿನಯದ ಚಿತ್ರ ಇದು. ರಂಗಾಯಣ ರಘು ಕೂಡ ಚಿತ್ರದಲ್ಲಿದ್ಧಾರೆ. ಈ ಚಿತ್ರಕ್ಕೆ ಬೇಕಾದ ಪ್ರಚಾರವನ್ನು ಪುರಾತನ ಫಿಲಂಸ್ ನಿರ್ಮಾಣದ ಸಿನಿಮಾಗೆ ಎಸ್ ಆರ್ ಕೆ ಫಿಲ್ಮ್ಸ್ ಮಾಡಿವೆ. ಇನ್ನೂ ಚಿತ್ರದ ಟೀಸರ್ ಕೂಡ ಈ ಹಿಂದೆ ಎಲ್ಲರ ಗಮನ ಸೆಳೆದಿತ್ತು.
ಆದರೂ ಕೂಡ ಈ ಚಿತ್ರ ಇಂದು ಬಿಡುಗಡೆಯಾಗುತ್ತಿದೆ ಎನ್ನುವ ವಿಚಾರ ಹಲವರಿಗೆ ಗೊತ್ತಾ ? ಎನ್ನುವುದು ಸದ್ಯ ನಮಗೆ ಗೊತ್ತಿಲ್ಲ. ಆದರೆ ಮೊದಲ ದಿನ ಬುಕ್ ಮೈ ಶೋ ಇಣುಕಿ ನೋಡಿದರೆ ಅಲ್ಲಿ ಪ್ರೇಕ್ಷಕರ ಕೊರತೆಯಂತೂ ಕಂಡು ಬಂದಿದೆ. ವಿರೇಶ್ ಮತ್ತು ಬನ್ನೆರುಘಟ್ಟ ಬಳಿ ಇರುವ ಗೋಪಾಲನ್ ಸಿನಿಮಾದಲ್ಲಿ ಪ್ರೇಕ್ಷಕರ ದಂಡು ಕಾಣಿಸಿಕೊಂಡಿರುವುದು ಸಮಾಧಾನಕರ ವಿಚಾರ.
ಗ್ರೀನ್ ಗರ್ಲ್
ಈ ಹಿಂದೆ ಟ್ರೇಲರ್ ಮೂಲಕ ಸದ್ದು ಮಾಡಿದ್ದ ಚಿತ್ರ ''ಗ್ರೀನ್ ಗರ್ಲ್'' ಅಪಾರವಾದ ಭರವಸೆಯನ್ನು ಮೂಡಿಸಿದ್ದ ಈ ಚಿತ್ರವನ್ನು ನೋಡಲು ಹಲವರು ಕಾಯುತ್ತಿದ್ದರು. ಆದರೆ.. ಅಂತರ್ಧರ್ಮೀಯ ಪ್ರೀತಿ ಮತ್ತು ನೈತಿಕ ಪೊಲೀಸ್‌ಗಿರಿಯ ಸುತ್ತ ಸುತ್ತುವ ಈ ಚಿತ್ರ ಇಂದು ಬಿಡುಗಡೆಯಾದ ವಿಚಾರ ಬಹುತೇಕರಿಗೆ ಗೊತ್ತೇ ಇಲ್ಲ. ಚಿತ್ರಕ್ಕೆ ಹೆಚ್ಚಿನ ಚಿತ್ರಮಂದಿರಗಳಾಗಲಿ.. ಪ್ರದರ್ಶನಗಳಾಗಲಿ ಸಿಕ್ಕಿಲ್ಲ. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆ.ಆರ್.ಜಿ ಈ ಚಿತ್ರವನ್ನು ವಿತರಣೆ ಮಾಡಿದ್ದರು ಕೂಡ ''ಗ್ರೀನ್ ಗರ್ಲ್'' ಪ್ರೇಕ್ಷಕರನ್ನು ತಲುಪಲು ವಿಫಲವಾಗಿರುವುದು ಬುಕ್ ಮೈ ಶೋನಲ್ಲಿ ಸ್ಪಷ್ಟವಾಗಿ ಕಾಣಿಸುತ್ತೆ. ಕೆಲ ಕಡೆ ಪ್ರೀಮಿಯರ್ ಪ್ರದರ್ಶನಗಳನ್ನು ಮಾಡಲಾಗಿದೆಯಾದರೂ ಪ್ರೇಕ್ಷಕರನ್ನು ಸೆಳೆಯಲು ಈ ಪ್ರೀಮಿಯರ್ ಪ್ರದರ್ಶನಗಳಷ್ಟೇ ಸಾಕಾ..? ಎನ್ನುವ ಪ್ರಶ್ನೆ ಕೂಡ ಈಗ ಹಲವರಲ್ಲಿದೆ.

ಸೆಪ್ಟೆಂಬರ್ 10
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ನಿರ್ದೇಶನದ 105ನೇ ಚಿತ್ರ ಸೆಪ್ಟೆಂಬರ್ 10 ಚಿತ್ರ ಕೂಡ ಇಂದು ಬಿಡುಗಡೆಯಾಗಿದೆ. ರಮೇಶ್ ಭಟ್, ಶಶಿಕುಮಾರ್, ಶ್ರೀನಿವಾಸ್ ಮೂರ್ತಿ ಅವರಂತಹ ಹಿರಿಯ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಆದರೆ.. ಪ್ರಚಾರ ಮಾತ್ರ ಈ ಚಿತ್ರಕ್ಕಿಲ್ಲ. ಪ್ರೇಕ್ಷಕರಲ್ಲಿ ಈ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಹಲವು ಪತ್ರಿಕಾಗೋಷ್ಠಿಗಳನ್ನು ಈ ತಂಡ ಮಾಡಿದೆಯಾದರೂ ಬೆಂಗಳೂರಿನಲ್ಲಿ ಈ ಚಿತ್ರಕ್ಕೆ ನಾಲ್ಕಕ್ಕಿಂತ ಹೆಚ್ಚಿನ ಚಿತ್ರಮಂದಿರಗಳು ಸಿಕ್ಕಿಲ್ಲ.
ಕೇವಲ ಈ ಚಿತ್ರಗಳು ಮಾತ್ರವಲ್ಲ ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ಅಭಿನಯದ ''ಮಿಡ್ಲ್ ಕ್ಲಾಸ್ ರಾಮಾಯಣ''.. ''ನಿದ್ರಾದೇವಿ Next Door''.. ''ಮಾಯಾವಿ''.. ''ಜಂಬೂ ಸರ್ಕಸ್''.. ''ಗುರಿ''.. ''ರಾಮನಗರ''.. ''ರೂಮ್ ಬಾಯ್''.. ''ರಕ್ಷಕ''.. ''ರತ್ನಾಪುರ'' ಚಿತ್ರಗಳು ತೆರೆಗೆ ಬಂದಿವೆ. ಹೀಗೆ ತೆರೆಗೆ ಬಂದ ಈ ಚಿತ್ರಗಳಲ್ಲಿ ಮುಂದಿನ ವಾರ ಎಷ್ಟು ಚಿತ್ರಗಳು ಚಿತ್ರಮಂದಿರಗಳಲ್ಲಿ ಉಳಿಯುತ್ತವೆ ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











