ಕೃಷ್ಣ ಜನ್ಮಾಷ್ಟಮಿಯಂದೇ ಕೃಷ್ಣ ಅಜಯ್ ರಾವ್ ಬದುಕಿನಲ್ಲಿ ಬಿರುಗಾಳಿ, ದೂರು ದಾಖಲಿಸಿದ ಪತ್ನಿ
ಚಿತ್ರರಂಗದ ಧ್ರುವತಾರೆಯರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಮಾಮೂಲು. ಇಂದು ಜೊತೆ ಜೊತೆಯಲ್ಲಿ ಓಡಾಡಿ, ಮರು ದಿನವೇ ಇಲ್ಲಿ ಅನೇಕರು ಬ್ರೇಕಪ್ ಮಾಡಿಕೊಳ್ಳುತ್ತಾರೆ. ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಒಂದೆರಡಲ್ಲ ಹಲವಾರು ವರ್ಷ ಜೊತೆಯಾಗಿ ಒಂದೇ ಮನೆಯಲ್ಲಿ ಕೂಡಿ ಬಾಳಿದರೂ ಕೂಡ..
ಆ ನಂತರ ಏಕಾಏಕಿ ಸಂಬಂಧ ಕಡಿದುಕೊಳ್ಳುತ್ತಾರೆ. ಇದಕ್ಕೆ ಅಜಯ್ ರಾವ್ ಅವರ ವ್ಯೆಯಕ್ತಿಕ ಬದುಕು ಸದ್ಯದ ಉದಾಹರಣೆ. ಹೌದು.. ಕನ್ನಡ ಚಿತ್ರರಂಗದಲ್ಲಿ ಹಂತ ಹಂತವಾಗಿ ಮೇಲೆ ಬಂದು ನಾಯಕನಾಗಿ ನೆಲೆಯೂರಿ ನಿರ್ಮಾಪಕ ಕೂಡ ಆದ ಅಜಯ್ ರಾವ್ ತಮ್ಮ ಪತ್ನಿ ಸ್ವಪ್ನ ರಾವ್ ಅವರ ಜೊತೆಗಿನ ಹನ್ನೊಂದು ವರ್ಷಗಳ ದಾಂಪತ್ಯಕ್ಕೆ ಎಳ್ಳು ನೀರು ಬಿಡಲು ಮುಂದಾಗಿದ್ದಾರೆ ಎಂದು ಎನ್ನಲಾಗಿದ್ದು ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ವಿಚ್ಚೇದನಕ್ಕೆ ನಿಖರವಾದ ಕಾರಣವೇನು ಎನ್ನುವುದು ಇನ್ನೂ ಬಹಿರಂಗವಾಗದಿದ್ದರೂ ಕೂಡ ಸ್ಯಾಂಡಲ್‌ವುಡ್‌ನ ಕೃಷ್ಣ ಅಜಯ್ ರಾವ್ ಅವರ ವಿರುದ್ಧ ಅವರ ಪತ್ನಿ ಸಪ್ನಾ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.
ಅಂದ್ಹಾಗೇ ಅಜಯ್ ರಾವ್ ಅವರದ್ದು ಮನೆಯವರು ನೋಡಿ ಮಾಡಿದ ಮದುವೆಯಾಗಿರಲಿಲ್ಲ. ಬದಲಿಗೆ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಹೀಗೆ ಪರಿಚಯವಾಗಿ ಆ ಪರಿಚಯ ಸ್ನೇಹಕ್ಕೆ ತಿರುಗಿ ಆ ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. 2014 ಡಿಸೆಂಬರ್ 18ರಂದು ಹೊಸಪೇಟೆಯಲ್ಲಿ ಸ್ವಪ್ನಾ ಅವರನ್ನು ಅಜಯ್ ರಾವ್ ಮದುವೆಯಾಗಿದ್ದರು. ತಮ್ಮ ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಸಪ್ತಪದಿಯನ್ನು ತುಳಿದಿದ್ದರು. 2019ರಲ್ಲಿ ತಂದೆ ತಾಯಿಯಾಗಿ ಕೂಡ ಬಡ್ತಿ ಪಡೆದ ಇಬ್ಬರು ತಮ್ಮ ಮುದ್ದಿನ ಮಗಳಿಗೆ ಚರಿಷ್ಮಾ ಎಂದು ನಾಮಕರಣ ಮಾಡಿದ್ದರು.
ಇನ್ನೂ ಕಳೆದ ವರ್ಷ ಏಪ್ರಿಲ್ 14ರಂದು ಬೆಂಗಳೂರಿನ ಯಲಹಂಕ ಬಳಿಯ ಕೋಗಿಲು ಬಡಾವಣೆಯಲ್ಲಿ ಐಷಾರಾಮಿ ಮನೆಯೊಂದನ್ನು ಅಜಯ್ ರಾವ್ ಮತ್ತು ಸ್ವಪ್ನಾ ಖರೀದಿ ಮಾಡಿದ್ದರು. ತಮ್ಮ ಮನೆಗೆ ''ಕೃಷ್ಣ ಶಿಖರ'' ಎಂದು ಹೆಸರಿಟ್ಟಿದ್ದರು. ರಿಯಲ್ ಸ್ಟಾರ್ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಜಗ್ಗೇಶ್, ಮೇಘನಾ ರಾಜ್, ಸುಂದರ್ ರಾಜ್, ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ನಿರ್ದೇಶಕ ಶಶಾಂಕ್, ನಟಿ ಮಯೂರಿ ಮುಂತಾದವರು ಹೀಗೆ ಕನ್ನಡ ಚಿತ್ರರಂಗದ ಹಲವರು ಗೃಹ ಪ್ರವೇಶ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದರು.
ಹೀಗೆ ವರ್ಷದ ಹಿಂದೆ ಅನ್ಯೋನ್ಯವಾಗಿದ್ದ ಈ ಜೋಡಿ ಈಗ ದೂರವಾಗುತ್ತಿದ್ದಾರೆ ಎಂಬ ಸುದ್ದಿ ಈಗ ಏಕಾಏಕಿ ಹಬ್ಬಿದೆ. ಸಹಜವಾಗಿ ಇದರಿಂದ ಹಲವರಿಗೆ ಆಶ್ಚರ್ಯವಾಗಿದೆ. ಇವರ ಡಿವೋರ್ಸ್ ಕುರಿತು ಕೂಡ ಚರ್ಚೆ ಶುರುವಾಗಿದೆ.

ಇನ್ನುಳಿದಂತೆ ಈ ವರ್ಷ ತೆರೆಗೆ ಬಂದ ಅಜಯ್ ರಾವ್ ನಟಿಸಿ ನಿರ್ಮಾಣ ಮಾಡಿದ 'ಯುದ್ಧಕಾಂಡ' ಬಿಡುಗಡೆ ಸಮಯದಲ್ಲಿ ಅಜಯ್ ರಾವ್ ದಾಂಪತ್ಯದ ವಿಚಾರ ಮುನ್ನೆಲೆಗೆ ಬಂದಿತ್ತು. ಚಿತ್ರ ನಿರ್ಮಾಣಕ್ಕೆ ಅಜಯ್ ರಾವ್ ತುಂಬಾ ಸಾಲ ಮಾಡಿಕೊಂಡಿದ್ದಾರೆ. ಈ ಹಣಕಾಸಿನ ವಿಚಾರದಿಂದ ಸಂಸಾರದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕೇಳಿ ಬಂದಿತ್ತು. ಆಗ ತಮ್ಮ ಕುರಿತ ಸುದ್ದಿಗಳಲ್ಲಿ ಮಾಧ್ಯಮಗಳಲ್ಲಿ ಸ್ಪಷ್ಟೀಕರಣವನ್ನು ನೀಡಿದ್ದ ಅಜಯ್ ರಾವ್ ಅದೆಲ್ಲ ಸುಳ್ಳು ನಾವು ಇಬ್ಬರು ಚೆನ್ನಾಗಿಯೇ ಇದ್ದೇವೆ ಎಂದು ಹೇಳಿದ್ದರು.
ಸದ್ಯ ದಾಂಪತ್ಯ ಜೀವನದ ವಿಚಾರದಿಂದ ಸುದ್ದಿಯಲ್ಲಿರುವ ಅಜಯ್ ರಾವ್ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ಮೂಹೂರ್ತ ಸಮಾರಂಭ ಜೂನ್‌ನಲ್ಲಿ ನಡೆದಿತ್ತು.


Click it and Unblock the Notifications











