»   » ಸಿನಿಮಾ ಹಾಗೂ ಅಪರಾಧ : ಬುದ್ಧ ಮುಹೂರ್ತದಲ್ಲಿ ಸಾಂಗ್ಲಿಯಾನ

ಸಿನಿಮಾ ಹಾಗೂ ಅಪರಾಧ : ಬುದ್ಧ ಮುಹೂರ್ತದಲ್ಲಿ ಸಾಂಗ್ಲಿಯಾನ

Posted By: Staff
Subscribe to Filmibeat Kannada

ಸಿನಿಮಾ ಶೋಕಿ ಬಿಡದಿದ್ದರೆ ನಾನು ವೀರಪ್ಪನ್‌ಗಿಂತ ದೊಡ್ಡ ಚೋರನಾಗುತ್ತಿದ್ದೆ !
ಬೆಂಗಳೂರು ನಗರ ಪೊಲೀಸ್‌ ಕಮೀಷನರ್‌ ಎಚ್‌.ಟಿ.ಸಾಂಗ್ಲಿಯಾನ ತಮ್ಮ ಬಾಲ್ಯದ ಸಿನಿಮಾ ಸಾಂಗತ್ಯವನ್ನು ನೆನಪಿಸಿಕೊಂಡಿದ್ದು ಹೀಗೆ. ಅವರು ಶುಕ್ರವಾರ ಕಂಠೀರವ ಸ್ಟುಡಿಯೋದಲ್ಲಿ ನಡೆದ 'ಬುದ್ಧ" ಸಿನಿಮಾ ಮುಹೂರ್ತ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಕೇಡಿಗಳಿಗೆ ಅಪರಾಧಗಳನ್ನೆಸಗಲು ಐಡಿಯಾಗಳು ದೊರೆಯುವುದೇ ಸಿನಿಮಾದಿಂದ ಅನ್ನುವುದು ಸಾಂಗ್ಲಿಯಾನ ವಾದ. ಇತ್ತೀಚೆಗೆ ಕೊಲೆಯಾದ ಬಾಲಕಿ ದೀಪಿಕಾ ಹಂತಕರು ಕೂಡ ಸಿನಿಮಾ ಒಂದರಿಂದ ಸ್ಫೂರ್ತಿ ಪಡೆದದ್ದನ್ನು ಸಾಂಗ್ಲಿಯಾನ ನೆನಪಿಸಿಕೊಂಡರು.

ಶಾಲಾ ದಿನಗಳಲ್ಲಿ ನಾನೂ ಸಿನಿಮಾ ನೋಡುತ್ತಿದೆ. ಇದು ಹೆಡ್ಮಾಸ್ಟರ್‌ಗೆ ಗೊತ್ತಾಗಿ ಅಪ್ಪನಿಗೆ ದೂರು ನೀಡಿದರು. ಆಮೇಲೆ ಸಿನಿಮಾ ನೋಡುವುದನ್ನು ಬಿಟ್ಟು ಬಿಟ್ಟೆ. ಸಿನಿಮಾ ಶೋಕಿ ಮುಂದುವರಿದಿದ್ದರೆ ವೀರಪ್ಪನ್‌ಗಿಂತ ದೊಡ್ಡ ಚೋರನಾಗುತ್ತಿದ್ದೆನೇನೋ ಅಂದರು ಸಾಂಗ್ಲಿಯಾನ.

ಚಿತ್ರಮಂದಿರಗಳಲ್ಲಿ ಅಪರಾಧದ ಸ್ಕೆಚ್‌
ಸಾರ್ವಜನಿಕ ಸ್ಥಳಗಳಲ್ಲಿ ದುಷ್ಕರ್ಮಿಗಳು ಕೂರಲು ಪೊಲೀಸರು ಅವಕಾಶ ಮಾಡಿಕೊಡುತ್ತಿಲ್ಲ . ಆ ಕಾರಣದಿಂದಾಗಿ ಹೊಟೇಲ್‌, ಬಾರ್‌, ಪಬ್‌ ಹಾಗೂ ಸಿನಿಮಾ ಮಂದಿರಗಳನ್ನು ತಮ್ಮ ಅಪರಾಧಗಳ ನೀಲ ನಕ್ಷೆ ರೂಪಿಸುವ ಅಡ್ಡೆಗಳನ್ನಾಗಿ ಅಪರಾಧಿಗಳು ಮಾಡಿಕೊಂಡಿದ್ದಾರೆ ಎನ್ನುವ ಸಂಶೋಧನೆಯನ್ನು ಕಮೀಷನರ್‌ ಹೊರಗೆಡವಿದರು.

ಚಿತ್ರಮಂದಿರಗಳಲ್ಲಿ ರಾತ್ರಿ ವೇಳೆ ದುಷ್ಕರ್ಮಿಗಳು ಸಂಚು ರೂಪಿಸಿ, ಸಿನಿಮಾ ಪ್ರದರ್ಶನ ಮುಗಿದ ನಂತರ ಮನೆಗೆ ಕನ್ನ ಹಾಕುವ ವರದಿಗಳು ನಮಗೆ ಬಂದಿವೆ. ಆದ್ದರಿಂದ ರಾತ್ರಿ ಪ್ರದರ್ಶನಗಳನ್ನು ರದ್ದು ಪಡಿಸುವುದೇ ವಾಸಿ. ಮಧ್ಯರಾತ್ರಿಯ ತನಕ ಸಿನಿಮಾ ಪ್ರದರ್ಶನ ನಡೆಯುವುದರಿಂದ ಸಮಾಜಘಾತಕ ಶಕ್ತಿಗಳಿಗೆ ಅನುಕೂಲವಾಗುತ್ತದೆ ಎಂದು ಸಾಂಗ್ಲಿಯಾನ ಅಭಿಪ್ರಾಯಪಟ್ಟರು.

ಪೊಲೀಸರು ರೇಪು ಮಾಡಿದರೆ ತಪ್ಪೇನಿಲ್ಲ
ಸಿನಿಮಾಗಳಲ್ಲಿ ಪೊಲೀಸರು ರೇಪು ಮಾಡುವ ದೃಶ್ಯಗಳ ಬಗ್ಗೆ ಪ್ರತಿಕ್ರಿಯಿಸಿದ ಸಾಂಗ್ಲಿಯಾನ, ಮಾಡಲಿ ಬಿಡಿ ತಪ್ಪೇನಿಲ್ಲ ಎಂದು ನಗೆಯಾಡಿದರು. ಪೊಲೀಸರು ಮಾಡುವ ತಪ್ಪುಗಳನ್ನು ಸಿನಿಮಾದಲ್ಲಿ ತೋರಿಸಿದರೆ ತಪ್ಪಿಲ್ಲ . ಆದರೆ, ಅವರ ರಹಸ್ಯ ಕಾರ್ಯ ವೈಖರಿಯನ್ನು ತೋರಿಸುವುದು ತಪ್ಪು. ಆ ಕಾರಣದಿಂದಲೇ ಕಾರ್ಯ ವೈಖರಿಯನ್ನು ಗುಟ್ಟಾಗಿಡುವಂತೆ ಪೊಲೀಸರಿಗೆ ತಾಕೀತು ಮಾಡಿದ್ದೇನೆ ಎಂದರು.

ಅಶ್ಲೀಲ ಹಾಗೂ ಹಿಂಸಾತ್ಮಕ ಚಿತ್ರಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಾಂಗ್ಲಿಯಾನ ಅವರು ಸದಭಿರುಚಿ ಹಾಗೂ ಮೌಲ್ಯಾಧಾರಿತ ಚಿತ್ರಗಳನ್ನು ತಯಾರಿಸುವಂತೆ ಕನ್ನಡ ಚಿತ್ರ ನಿರ್ಮಾಪಕರಿಗೆ ಕರೆ ನೀಡಿದರು.

ಬಾಲಂಗೋಚಿ : ಅಪರಾಧಗಳಿಗೆ ಸಿನಿಮಾಗಳೇ ಕಾರಣವಾಗಿರುವುದರಿಂದ, ಸಿನಿಮಾಗಳನ್ನೇ ನಿಷೇಧಿಸುವ ಯೋಚನೆ ಪೊಲೀಸ್‌ ಪ್ರಭುಗಳಿಗೆ ಬಂದಿಲ್ಲದಿರುವುದಕ್ಕೆ ಸ್ಯಾಂಡಲ್‌ವುಡ್‌ ಸಮಾಧಾನದ ಉಸಿರು ಬಿಡುತ್ತಿದೆ.

English summary
Crimal ideas are created in cinema theatres H.T. Sangliana
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada