»   » ನಾನು ಪುಕ್ಕಟೆಯಾಗಿ ಡೈರೆಕ್ಟ್‌ ಮಾಡ್ತೀನಿ!

ನಾನು ಪುಕ್ಕಟೆಯಾಗಿ ಡೈರೆಕ್ಟ್‌ ಮಾಡ್ತೀನಿ!

Posted By: Staff
Subscribe to Filmibeat Kannada

ನೀತಿಯಿರಬೇಕು. ಮೌಲ್ಯಗಳಿರಬೇಕು. ಇಂಥಾ ಚಿತ್ರಗಳನ್ನು ತೆಗೀಬೇಕು. ಈ ರೀತಿಯ ಸಿನಿಮಾಗಳನ್ನು ನಿರ್ಮಿಸುವುದಾದರೆ, ಪುಕ್ಕಟೆಯಾಗಿ ನಿರ್ದೇಶಿಸಲು ನಾನು ರೆಡಿ ಅಂತ ನಗುನಗುತ್ತಾ ಹೇಳಿದರು ಬೆಂಗಳೂರು ಪೊಲೀಸ್‌ ಕಮಿಷನರ್‌ ಎಚ್‌.ಟಿ.ಸಾಂಗ್ಲಿಯಾನ !

ರಾತ್ರಿ 11ರ ನಂತರ ಸಿನಿಮಾ ಮಂದಿರಗಳಲ್ಲಿ ಯಾವುದೇ ಚಿತ್ರ ಪ್ರದರ್ಶನವಾಗಕೂಡದು ಅಂತ ಫರ್ಮಾನು ಹೊರಡಿಸಿರುವ ಸಾಂಗ್ಲಿಯಾನ ಅವರ ಮುಂದೆ ನಿರ್ಮಾಪಕರ ಸಂಘ ಅಹವಾಲು ಇಟ್ಟಿತು. ಇದರಿಂದ ಕಲೆಕ್ಷನ್‌ಗೆ ಹೊಡೆತ. ದಯವಿಟ್ಟು ನಿರ್ಧಾರ ಸಡಿಲಿಸಿ ಎಂಬ ಸಂಘದ ಮನವಿಗೆ ಸಾಂಗ್ಲಿಯಾನ ಜಗ್ಗಲಿಲ್ಲ. ಬದಲಿಗೆ ಸಂಘದ ಅಧ್ಯಕ್ಷ ಬಸಂತ್‌ ಕುಮಾರ್‌ ಪಾಟೀಲರಿಗೆ ಬುದ್ಧಿಮಾತುಗಳನ್ನು ಬೋಧಿಸಿದರು.

ಅವೇನೆಂದು ಸಾಂಗ್ಲಿಯಾನ ಮಾತುಗಳಲ್ಲೇ ಕೇಳಿ
ಬೆಂಗಳೂರು ಸುಂದರ ನಗರ. ಭಾರತದ ಸಿಲಿಕಾನ್‌ ವ್ಯಾಲಿ. ಕನ್ನಡಿಗರು ಸಹೃದಯರು. ಸಿನಿಮಾ ಪ್ರದರ್ಶನದ ವೇಳೆಗಳನ್ನು ಬದಲಿಸಿ, ಪರಿಸ್ಥಿತಿಯನ್ನ ಹಾಳು ಮಾಡಲು ನಾನು ಸುತಾರಾಂ ಸಿದ್ಧನಿಲ್ಲ. ಜನ ಕೂಡ ನನ್ನ ನಿರ್ಧಾರವನ್ನು ಸ್ವಾಗತಿಸುತ್ತಾರೆ ಅಂದುಕೊಂಡಿದ್ದೀನಿ. ಯಾಕೆಂದರೆ, ಬಹುತೇಕ ಬೆಂಗಳೂರಿಗರು ಮುಂಜಾನೆ ಎದ್ದು ಕೆಲಸಕ್ಕೆ ಹೋಗುವ ತರಾತುರಿಯಲ್ಲಿರುತ್ತಾರೆ. ಹೀಗಿರುವಾಗ , ಮಧ್ಯರಾತ್ರಿವರೆಗೆ ಥಿಯೇಟರ್‌ನಲ್ಲಿ ಕೂರಲು ಇಷ್ಟಪಡುತ್ತಾರಾ? ಬೆಳಗ್ಗೆ 10 ಗಂಟೆ, ಮಧ್ಯಾಹ್ನ 1.30, 4.30, ಸಂಜೆ 7.30 ಗಂಟೆ- ಪ್ರದರ್ಶನದ ಈ ಸಮಯಗಳು ಸರಿಯಾಗೇ ಇವೆ.

ಸಿನಿಮಾಗಳ ಪ್ರದರ್ಶನವನ್ನು ಪ್ರಮೋಟ್‌ ಮಾಡಲು ಬೇರೇನಾದರೂ ಸಹಾಯ ಮಾಡಬೇಕಾದರೆ, ಅದಕ್ಕೆ ನಾನು ಸಿದ್ಧ. ಪ್ರದರ್ಶನದ ವೇಳೆ ಬದಲಾವಣೆ ಆಗಬೇಕೆ ಬೇಡವೇ ಎಂಬ ವಿಷಯವನ್ನು ಜನರ ಮುಂದೆ ಚರ್ಚೆಗೆ ಇಟ್ಟು, ತೀರ್ಮಾನ ಕೈಗೊಳ್ಳಬೇಕು. ವೈಯಕ್ತಿಕವಾಗಿ ನನಗೆ ಮಧ್ಯರಾತ್ರಿವರೆಗೆ ಸಿನಿಮಾ ಪ್ರದರ್ಶನ ಇಷ್ಟವಿಲ್ಲ. ಇದರಿಂದ ಯಾರಿಗೂ ಒಳ್ಳೆಯದಲ್ಲ.

ನಿಮ್ಮ ಕಲೆಕ್ಷನ್‌ ಕಡಿಮೆ ಆಗಲು ಪ್ರದರ್ಶನದ ಸಮಯ ಖಂಡಿತ ಕಾರಣವಲ್ಲ. ಟಿವಿ ಚಾನೆಲ್‌ಗಳು ಜಾಸ್ತಿಯಾಗಿವೆ. ಟೀವಿಯಲ್ಲೇ ಸೆಕ್ಸ್‌ ಸಿನಿಮಾ ನೋಡಬಹುದು. ಹಿಂಸಾತ್ಮಕ ಮನರಂಜನೆಯೂ ಅಲ್ಲೇ ಸಿಗುತ್ತಿದೆ. ಸಿನಿಮಾಗಳಲ್ಲಿ ethics and values ಇರಬೇಕು. ಆಗ ಕಲೆಕ್ಷನ್‌ ಸರಿಹೋಗತ್ತೆ.

ನಾನು ಬೆಂಗಳೂರು ಕಮಿಷನರ್‌ ಆಗಿ ಅಧಿಕಾರ ವಹಿಸಿಕೊಂಡ ನಂತರ, ರಾತ್ರಿ 10 ರಿಂದ 4.30 ಗಂಟೆತನಕ ಪೊಲೀಸರ ಗಸ್ತು ನಡೆಯುತ್ತಿದೆ. ಆದರೆ ಈಗ ಒತ್ತಡದ ಸಮಯ ಬಿಟ್ಟು, ರಾತ್ರಿ 8ರಿಂದ 10ರ ಅವಧಿಯಲ್ಲೇ ಕಳ್ಳರು ಹುನ್ನಾರ ಹೂಡುತ್ತಿದ್ದಾರೆ. ಸಿ.ಡಿ. ಪೈರೆಸಿಯ ಬಗೆಗೂ ತೀವ್ರ ನಿಗಾ ಇಟ್ಟಿದ್ದೇವೆ. ನಾನು ನಡೆಸಿರುವ ನಾಲ್ಕು ರೈಡ್‌ಗಳಲ್ಲಿ ಪತ್ತೆಯಾಗಿರುವಂತೆ ನಕಲಿ ಸಿ.ಡಿ.ಗಳು ಮುಂಬಯಿಯಿಂದ ಬರುತ್ತಿವೆ.

ಸಿಂಗ್‌ ಬಾಬು ಮನವಿ : ಥಿಯೇಟರ್‌ಗಳಲ್ಲಿ ಒಂದೂವರೆ ರುಪಾಯಿ ಸರ್ವಿಸ್‌ ಚಾರ್ಜ್‌ ತಗೋತಾರೆ. ಆದರೆ ವ್ಯವಸ್ಥೆಯಂತೂ ಕೆಟ್ಟದಾಗಿರುತ್ತೆ. ಇದಕ್ಕೆ ತಕ್ಕ ಕ್ರಮ ಕೈಗೊಳ್ಳಬೇಕು ಎಂಬ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಮನವಿ ಅರ್ಜಿಗೆ ಪ್ರತಿಕ್ರಿಯಿಸಿದ ಸಾಂಗ್ಲಿಯಾನ, ಥಿಯೇಟರ್‌ಗಳಿಗೆ ಖುದ್ದು ಹೋಗಿ, ಪರಿಶೀಲಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ಕೊಟ್ಟರು.

English summary
No latenight movies: Sangliana sticks to his guns
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada