ಸಲಗ ಸುಂದರಿ ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಎರಡನೇ ಮದುವೆ...?
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಸುದ್ದಿಗಾಗಿ ಎಲ್ಲರು ಪತ್ರಿಕೆ ಮತ್ತು ಟಿವಿ ಮಾಧ್ಯಮಗಳ ಮೇಲೆ ಅವಲಂಬಿತರಾಗಿದ್ದರು. ಆದರೆ ಈಗ ಕಾಲ ಬದಲಾಗಿದೆ. ಹಿಟ್ಸ್, ವ್ಯೂವರ್ ಶಿಪ್‌ಗಳಿಗಾಗಿ ತಪ್ಪು ದಾರಿಗೆ ಎಳೆಯುವ ವಿಕೃತ ಮನಸ್ಥಿತಿಯುಳ್ಳ ಯೂಟ್ಯೂಬ್, ಇನ್‌ಸ್ಟಾಗ್ರಾಂ, ಇತ್ಯಾದಿ ಜಾಲತಾಣಗಳನ್ನು ಅನೇಕರು ನಂಬುತ್ತಾರೆ. ಇಷ್ಟೇ ಅಲ್ಲದೇ ಸುಳ್ಳು ಸುದ್ದಿಯನ್ನು ಹಬ್ಬಿಸುವರನ್ನೂ ಫಾಲೋ ಮಾಡುವ ಮೂಲಕ ಅವರನ್ನು ಹುರಿದಂಬಿಸುತ್ತಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿಯ ಮದುವೆ ಕುರಿತು ಕೆಲ ಕಿರಾತಕರು ಸುಳ್ಳು ಸುದ್ದಿಯನ್ನೂ ಹಬ್ಬಿಸಿದ್ದಾರೆ.
ಹೌದು, ಸಹಜ ಅಭಿನಯ ಮತ್ತು ಸರಳ ಸೌಂದರ್ಯದಿಂದಲೇ ಸ್ಯಾಂಡಲ್‌ವುಡ್‌ನ ಕ್ರಶ್ ಎನಿಸಿಕೊಂಡ ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿಯನ್ನೂ ಕೆಲವರು ತೇಲಿ ಬಿಟ್ಟಿದ್ದಾರೆ. ದುರಂತ ಅಂದರೆ ಹೀಗೆ ಹಬ್ಬಿಸಲಾದ ಈ ಸುಳ್ಳು ಸುದ್ದಿಯನ್ನೂ ಅನೇಕರು ನಿಜಾ ಎಂದುಕೊಂಡಿದ್ದಾರೆ. ನಿವೇದಿತಾ ಗೌಡ ಅವರಿಂದ ದೂರವಾದ ಚಂದನ್ ಶೆಟ್ಟಿ ಮತ್ತು ಕನ್ನಡ ಚಿತ್ರರಂಗದಲ್ಲಿ ನೆಲೆಯೂರುತ್ತಿರುವ ಸಂಜನಾ ಆನಂದ್‌ಗೆ ಶುಭಾಶಯವನ್ನೂ ಕೋರುತ್ತಿದ್ದಾರೆ.

ಹೀಗಾಗಿಯೇ ಕಾಡ್ಗಿಚ್ಚಿನಂತೆ ಹಬ್ಬಿರುವ ಈ ಸುದ್ದಿಯ ಕುರಿತು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಸ್ಪಷ್ಟನೆಯನ್ನು ನೀಡಿರುವ ಸಂಜನಾ ಆನಂದ್, ಚಂದನ್ ಶೆಟ್ಟಿ ಜೊತೆ ನಾನು ಮದುವೆಯಾಗುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದಿದ್ದಾರೆ. ಈ ತರಹದ ಸುಳ್ಳು ಸುದ್ದಿಗಳನ್ನೆಲ್ಲ ಹಬ್ಬಿಸಬೇಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದಾರೆ.
ಅಂದ್ಹಾಗೇ ನಿವೇದಿತಾ ಗೌಡ ಅವರಿಂದ ದೂರವಾಗಿರುವ ಚಂದನ್ ಶೆಟ್ಟಿ ಸೂತ್ರಧಾರಿ ಎಂಬ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಸಂಜನಾ ಆನಂದ್ ಕೂಡ ಇದ್ದಾರೆ. ಹಾಡೊಂದಕ್ಕೆ ಹೆಜ್ಜೆಯನ್ನೂ ಹಾಕಿದ್ದಾರೆ. ಚಂದನ್ ಮತ್ತು ಸಂಜನಾ ಆನಂದ್ ಅವರ ಈ ಹಾಡು ಒಂದು ವರ್ಷದ ಹಿಂದೆಯೇ ಯೂಟ್ಯೂಬ್‌ನಲ್ಲಿ ಬಿಡುಗಡೆಯೂ ಆಗಿದೆ. ಈ ಹಾಡಿನಲ್ಲಿ ಇವರ ಕೆಮೆಸ್ಟ್ರೀಯನ್ನೂ ನೋಡಿರುವ ಕೆಲವರು ಈಗ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿಯನ್ನೂ ಹಬ್ಬಿಸಿದ್ದಾರೆ ಎಂಬ ಶಂಕೆ ಗಾಂಧಿನಗರಕ್ಕೆ ಸದ್ಯ ಕಾಡುತ್ತಿದೆ.

ಉಳಿದಂತೆ ಸಂಜನಾ ಆನಂದ್ ರಾಯಲ್ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ದರ್ಶನ್ ಸಹೋದರ ದಿನಕರ್ ತೂಗುದೀಪ್ ನಿರ್ದೇಶನದ ಈ ಚಿತ್ರದಲ್ಲಿ ಎಪಿ ಅರ್ಜುನ್ ನಿರ್ದೇಶನದ ಕಿಸ್ ಚಿತ್ರದ ಹೀರೋ ವಿರಾಟ್ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ನಿನ್ನೆಯಷ್ಟೇ ಈ ಚಿತ್ರದ ಹಾಡೊಂದು ಸಾವಿರಾರು ವಿದ್ಯಾರ್ಥಿಳ ಎದುರು ತುಮಕೂರಿನಲ್ಲಿ ಬಿಡುಗಡೆಯಾಗಿದೆ. ಯೂಟ್ಯೂಬ್ ಸೇರಿ ಉಳಿದ ಸೋಶಿಯಲ್ ಮೀಡಿಯಾ ಫ್ಯಾಟ್‌ಫಾರ್ಮ್ ನಲ್ಲಿ ಈ ಹಾಡು ಟ್ರೆಂಡಿಂಗ್‌ನಲ್ಲಿಯೂ ಇದೆ. ದರ್ಶನ್ ಜೈಲು ಪಾಲಾಗಿರುವ ಹಿನ್ನೆಲೆ ಈ ಹಾಡಿನ ಸಾಹಿತ್ಯದ ಕುರಿತು ಚರ್ಚೆ ಕೂಡ ನಡೆಯುತ್ತಿದೆ.
ಇನ್ನೂ ನಿವೇದಿತಾ ಗೌಡ ಅವರಿಂದ ದೂರವಾದ ಚಂದನ್ ಶೆಟ್ಟಿ ಸದ್ಯಕ್ಕೆ ಬ್ಯಾಚುಲರ್ ಜೀವನವನ್ನೂ ಎಂಜಾಯ್ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶನ, ಹಾಡು, ಅಭಿನಯ ಎಂದು ಬ್ಯುಸಿಯಾಗಿದ್ದಾರೆ. ಮೊನ್ನೆ ಮೊನ್ನೆಯೆಲ್ಲ ವಿಚ್ಚೇದನದ ವಿಚಾರವನ್ನೂ ಮರೆತು ದುಬೈ ಸುತ್ತಾಡಿಕೊಂಡು ಬಂದಿದ್ದಾರೆ. ಸದ್ಯ ಸೂತ್ರಧಾರಿ ಸೇರಿ ಚಂದನ್ ಶೆಟ್ಟಿ ಅಭಿನಯದ ಕೆಲ ಚಿತ್ರಗಳು ತೆರೆಗೆ ಬರಬೇಕಿವೆ. ಆ ಪೈಕಿ ತಮ್ಮ ಮಾಜಿ ಪತ್ನಿ ನಿವೇದಿತಾ ಗೌಡ ಜೊತೆ ಮುದ್ದು ರಾಕ್ಷಸಿ ಎಂಬ ಚಿತ್ರದಲ್ಲಿ ಕೂಡ ಚಂದನ್ ಶೆಟ್ಟಿ ನಾಯಕನ ಪಾತ್ರವನ್ನು ನಿರ್ವಹಿಸಿರುವ ಹಿನ್ನೆಲೆ ಈ ಚಿತ್ರದ ಪ್ರಚಾರದಲ್ಲಿ ಚಂದನ್ ಮತ್ತು ನಿವೇದಿತಾ ಗೌಡ ಜೊತೆಯಾಗಿ ಭಾಗಿಯಾಗುತ್ತಾರಾ ಅನ್ನುವ ಅನುಮಾನ ಅನೇಕರನ್ನು ಕಾಡುತ್ತಿದೆ.


Click it and Unblock the Notifications











