ವಂಚನೆ ಪ್ರಕರಣದಲ್ಲಿ ಸಂಜನಾ ಗರ್ಲಾನಿಗೆ ನ್ಯಾಯ.. ಉದ್ಯಮಿ ರಾಹುಲ್ ತೊನ್ಸೆಗೆ ದಂಡ, ಶಿಕ್ಷೆ
ಆಪ್ತನಿಂದಲೇ ವಂಚನೆಗೆ ಒಳಗಾಗಿದ್ದ ನಟಿ ಸಂಜನಾ ಗರ್ಲಾನಿಗೆ ಪ್ರಕರಣದಲ್ಲಿ ಗೆಲುವು ಸಿಕ್ಕಿದೆ. ಹೂಡಿಕೆ ಮಾಡಿ ಹೆಚ್ಚಿನ ಲಾಭ ನೀಡುವುದಾಗಿ ಹೇಳಿ ಉದ್ಯಮಿ ರಾಹುಲ್ ಥೋನ್ಸೆ ಮೋಸ ಮಾಡಿರುವುದಾಗಿ 2019ರಲ್ಲಿ ಸಂಜನಾ ದೂರು ದಾಖಸಿದ್ದರು. ರಾಹುಲ್ ಥೋನ್ಸೆಗೆ 61.50 ಲಕ್ಷ ರೂ. ದಂಡ ಹಾಗೂ 6 ತಿಂಗಳ ಜೈಲು ಶಿಕ್ಷೆ ವಿಧಿಸಿ 33ನೇ ಎಸಿಜೆಎಂ ನ್ಯಾಯಾಲಯ ತೀರ್ಪು ನೀಡಿದೆ.
ತಮಗೆ ವಂಚನೆಯಾಗಿದೆ ಎಂದು ನಟಿ ಸಂಜನಾ ಗರ್ಲಾನಿ ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆದು ಅಂತಿಮ ತೀರ್ಪು ಹೊರ ಬಿದ್ದಿದೆ. ಸಂಜನಾ ಅವರಿಂದ ಉದ್ಯಮಿ ರಾಹುಲ್ ಥೋನ್ಸೆ 45 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ್ದ ಆರೋಪ ಎದುರಾಗಿತ್ತು. ಸಂಜನಾ ನೀಡಿದ ದೂರನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದರು.

"ನಾನು ಸಹೋದರನಂತೆ ನಂಬಿದ್ದ ರಾಹುಲ್ ಮತ್ತು ಅವರ ತಂದೆ-ತಾಯಿ ನನಗೆ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿ ನಂತರ ವಾಪಸ್ಸು ಕೂಡುವುದಾಗಿ ನಂಬಿಸಿದ್ದು. ಆತನ ವ್ಯವಹಾರಕ್ಕೆ ನಾನು ಕಷ್ಟ ಪಟ್ಟು ದುಡಿದ ಹಣವನ್ನ ಆತನ ತಂದೆ ತಾಯಿಗಳೇ ಕೇಳಿದರೆಂದೇ ಅವರ ಖಾತೆಗೇ ಕೊಟ್ಟಿದ್ದೆ. ಆತ ಹಣ ವಾಪಾಸು ಮಾಡದೇ ಹೋದಾಗ ನ್ಯಾಯಾಲಯದ ಮೊರೆ ಹೋದೆ" ಎಂದು ಅಕ್ಟೋಬರ್ 20, 2021ರಂದು ಸಂಜನಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಅಂದಹಾಗೆ ಸಂಜನಾ ಗರ್ಲಾನಿ ನೀಡಿದ ದೂರಿನ ಅನ್ವಯ ಉದ್ಯಮಿ ರಾಹುಲ್ ತೋನ್ಸೆ ಹಾಗೂ ಆತನ ತಂದೆ ರಾಮಕೃಷ್ಣ ಮತ್ತು ತಾಯಿ ರಾಜೇಶ್ವರಿ ವಿರುದ್ಧ ವಂಚನೆ (ಐಪಿಸಿ 420) ಅಪರಾಧ ಒಳ ಸಂಚು (120ಬಿ), ಅವಾಚ್ಯ ಶಬ್ಧಗಳಿಂದ ನಿಂದನೆ (406) ಹಾಗೂ ಜೀವ ಬೆದರಿಕೆ (506) ಆರೋಪದಡಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಬಳಿಕ ಪೊಲೀಸರು ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.
ಸದ್ಯ ಕೋರ್ಟ್ ರಾಹುಲ್ ತೋನ್ಸೆಗೆ 61.50 ಲಕ್ಷ ರೂ. ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. 10 ಸಾವಿರ ಕೋರ್ಟ್ ಶುಲ್ಕ ಬಿಟ್ಟು ಉಳಿದ ಹಣವನ್ನು ದೂರುದಾರೆ ನಟಿ ಸಂಜನಾ ಗರ್ಲಾನಿಗೆ ನೀಡಬೇಕಿದೆ. ಪ್ರಕರಣದಲ್ಲಿ ರಾಹುಲ್ ವಂಚನೆ ಮಾಡಿರುವುದು ಸಾಬೀತಾಗಿದೆ. ಹಾಗಾಗಿ ಶಿಕ್ಷೆ ಎದುರಿಸಬೇಕಿದೆ.
ನಿಗದಿತ ಸಮಯದಲ್ಲಿ ಸಂಜನಾ ಅವರಿಗೆ ರಾಹುಲ್ ದಂಡದ ಮೊತ್ತ 61.40 ಲಕ್ಷ ರೂ. ಪಾವತಿಸಬೇಕಿದೆ. ಆಗ ಮಾತ್ರ 6 ತಿಂಗಳ ಜೈಲು ಶಿಕ್ಷೆಯಿಂದ ಬಚಾವಾಗಬಹುದು. ಇಲ್ಲದೇ ಹೋದರೆ ದಂಡದ ಜೊತೆ ಜೈಲು ಶಿಕ್ಷೆಯನ್ನು ಅನುಭವಿಸಬೇಕು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.
ನಟಿ ಸಂಜನಾ ಗರ್ಲಾನಿ ಇತ್ತೀಚೆಗೆ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ಸಂಜನಾ ಬಳಿಕ ಜಾಮೀನು ಪಡೆದು ಬಿಡುಗಡೆ ಆಗಿದ್ದರು. ಬಳಿಕ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. 2022ರಲ್ಲಿ ಗಂಡು ಮಗುವಿಗೆ ಆಕೆ ಜನ್ಮ ನೀಡಿದ್ದರು. ಇದೀಗ ಮತ್ತೊಮ್ಮೆ ಗರ್ಭಿಣಿ ಆಗಿರುವುದಾಗಿ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
2006ರಲ್ಲಿ 'ಗಂಡ ಹೆಂಡತಿ' ಎಂಬ ಚಿತ್ರದ ಮೂಲಕ ಸಂಜನಾ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ ದೊಡ್ಡ ಬ್ರೇಕ್ ಸಿಗಲಿಲ್ಲ. ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಕೂಡ ಸಂಜನಾ ಬಣ್ಣ ಹಚ್ಚಿದ್ದಾರೆ. 2021ರಲ್ಲಿ ವೈದ್ಯ ಅಜೀಜ್ ಪಾಷಾ ಅವರನ್ನು ಸಂಜನಾ ಮದುವೆ ಆಗಿದ್ದರು.


Click it and Unblock the Notifications











