'ಅಧೀರ'ನ ಯಶಸ್ಸನ್ನು ಪ್ರಶಾಂತ್ ನೀಲ್‌ಗೆ ಸಮರ್ಪಿಸಿದ ಸಂಜಯ್ ದತ್
'ಕೆಜಿಎಫ್ 2' ಸಿನಿಮಾ ದೊಡ್ಡ ಹಿಟ್ ಆಗಿದೆ. ಕೇವಲ ಸಿನಿಮಾ ಅಲ್ಲ ಸಿನಿಮಾದಲ್ಲಿನ ಪಾತ್ರಗಳು, ಪಾತ್ರಗಳಲ್ಲಿ ನಟಿಸಿದ ನಟರಿಗೂ ಬಹಳ ದೊಡ್ಡ ಜನಪ್ರಿಯತೆ ಧಕ್ಕಿದೆ.
'ಕೆಜಿಎಫ್ 2' ಸಿನಿಮಾದಲ್ಲಿ ರಾಕಿಭಾಯ್‌ಗೆ ಎದುರಾಳಿಯಾಗಿದ್ದ ಅಧೀರನ ಪಾತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ರಮಿಕಾ ಸೇನ್ ಪಾತ್ರವೂ ಮೆಚ್ಚುಗೆಗೆ ಪಾತ್ರವಾಗಿದೆ. ಅಧೀರನ ಪಾತ್ರಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಖುಷಿಯಾಗಿರುವ ಸಂಜಯ್ ದತ್, ತಮ್ಮ ಪಾತ್ರ ಹಾಗೂ ಪಾತ್ರದ ಜನನಕ್ಕೆ ಕಾರಣವಾದ ವ್ಯಕ್ತಿಗೆ ಧನ್ಯವಾದ ಹೇಳಿದ್ದಾರೆ.
ಈಗಾಗಲೇ ಹಲವು ಬಾರಿಗೆ 'ಕೆಜಿಎಫ್' ತಂಡವನ್ನು, ಸಿನಿಮಾವನ್ನು ಹೊಗಳಿರುವ ಸಂಜಯ್ ದತ್, ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್‌ರ ಪ್ರತಿಭೆಯನ್ನು ಕೊಂಡಾಡಿದ್ದಾರೆ.

ಸಂಜಯ್ ದತ್ ಬಹಿರಂಗ ಪತ್ರ
''ಯಾವುದೇ ನಟನಿಗಾದರು ಕೆಲವು ಸಿನಿಮಾಗಳಿರುತ್ತವೆ, ಅವು ಇತರೆ ಸಿನಿಮಾಗಳಿಗಿಂತಲೂ ಆ ನಟನಿಗೆ ವಿಶೇಷವಾಗಿರುತ್ತವೆ. ನನ್ನ ವೃತ್ತಿ ಜೀವನದಲ್ಲಿ ಕೆಲವು ವರ್ಷಗಳಿಗೊಮ್ಮೆ ನನಗೆ ಕೆಲವು ಪಾತ್ರಗಳು ಸಿಗುತ್ತವೆ, ಅವು ನನ್ನ ಸಾಮಾನ್ಯ ನಟನಾ ಪ್ರವೃತ್ತಿಯಿಂದ ಹೊರಗೆ ಬಂದು ನಟಿಸಲು ಅನುವು ಮಾಡಿಕೊಡುತ್ತವೆ. 'ಕೆಜಿಎಫ್ 2' ಸಿನಿಮಾ ಅಂಥಹುದೇ ಒಂದು ಸಿನಿಮಾ. 'ಕೆಜಿಎಫ್ 2' ನನಗೆ ನನ್ನ ಶಕ್ತಿಯನ್ನು ಮತ್ತೊಮ್ಮೆ ಪರಿಚಯಿಸಿದ ಸಿನಿಮಾ, ನಾನು ಬಹಳ ಎಂಜಾಯ್ ಮಾಡಿ ನಟಿಸಿದ ಸಿನಿಮಾ ಸಹ ಹೌದು'' ಎಂದಿದ್ದಾರೆ ಸಂಜಯ್ ದತ್.

ಪ್ರಶಾಂತ್ ನೀಲ್‌ಗೆ ಕ್ರೆಡಿಟ್ ನೀಡಿದ ಸಂಜಯ್
''ಏನಾದರೂ ಆಗಲಿ, ಏನೇ ಲೆಕ್ಕಾಚಾರಗಳಿರಲಿ, ಅಂತಿಮವಾಗಿ ಸಿನಿಮಾ, 'ಪ್ಯಾಷನ್'ನ ಉತ್ಪನ್ನ. ಪ್ಯಾಷನ್ ಇದ್ದರಷ್ಟೆ ಬಹಳ ಒಳ್ಳೆಯ ಸಿನಿಮಾ ಮಾಡಲು ಸಾಧ್ಯ. ನಿರ್ದೇಶಕ ಪ್ರಶಾಂತ್ ನೀಲ್, ವಿಧ್ವಂಸಕ 'ಅಧೀರ'ನ ಪಾತ್ರದ ಐಡಿಯಾವನ್ನು ನನಗೆ ನೀಡಿದರು. ನನ್ನ ಪಾತ್ರ ಅಷ್ಟು ಅದ್ಭುತವಾಗಿ ಮೂಡಿ ಬರಲು ಮುಖ್ಯ ಕಾರಣ ನಿರ್ದೇಶಕ ಪ್ರಶಾಂತ್ ನೀಲ್. 'ಕ್ಯಾಪ್ಟನ್ ಆಫ್ ದಿ ಶಿಪ್' ಪ್ರಶಾಂತ್ ನೀಲ್ ಕಂಡ ಕನಸನ್ನು ನಾವೆಲ್ಲರೂ ಸೇರೆ ತೆರೆಯ ಮೇಲೆ ತಂದಿದ್ದೇವೆ ಅಷ್ಟೆ'' ಎಂದು ಪ್ರಶಾಂತ್ ನೀಲ್ ಅನ್ನು ಹೊಗಳಿದ್ದಾರೆ ಸಂಜಯ್ ದತ್.

'ಕೆಜಿಎಫ್ 2' ಸಿನಿಮಾದ ಕಲಿಸಿದ ಪಾಠವೇನು?
''ಜೀವನ ಸದಾ ಸರ್ಪ್ರೈಸ್‌ಗಳನ್ನು ನಿಮ್ಮ ಮುಂದೆ ತಂದೊಡ್ಡಿದಾಗ ಅದನ್ನು ಪೂರ್ಣವಾಗಿ ಎಂಜಾಯ್ ಮಾಡಲು, ಅನುಭವಿಸಲು ಸಿದ್ಧರಾಗಿ, ಈ ಹಿಂದಿನದ್ದಕ್ಕಿಂತಲೂ ಹೆಚ್ಚಿನದನ್ನು ನೀವು ಅದಕ್ಕೆ ನೀಡಿ ಎಂಬುದನ್ನು 'ಕೆಜಿಎಫ್ 2' ಸಿನಿಮಾ ನನಗೆ ಕಲಿಸಿದೆ. ನನ್ನ ಅಭಿಮಾನಿಗಳಿಗೆ, ಹಿತೈಷಿಗಳಿಗೆ, ಕುಟುಂಬಕ್ಕೆ ನನ್ನ ಕಡೆಯಿಂದ ಅಪಾರ ಪ್ರೀತಿಗಳು. ಅವರೇ ನನ್ನ ಜೀವನದ ಆಧಾರದ ಸ್ಥಂಭ'' ಎಂದಿದ್ದಾರೆ ಸಂಜಯ್ ದತ್.

ಸೂಪರ್ ಹಿಟ್ ಆಗಿದೆ ಅಧೀರ ಪಾತ್ರ
ಸಂಜಯ್ ದತ್, 'ಕೆಜಿಎಫ್ 2' ಸಿನಿಮಾದಲ್ಲಿ ಅಧೀರನ ಪಾತ್ರದಲ್ಲಿ ನಟಿಸಿದ್ದಾರೆ. ಗರುಡನ ಸಹೋದರ ಅಧೀರ ರಾಕಿಭಾಯ್‌ನಿಂದ 'ಕೆಜಿಎಫ್ 2' ಅನ್ನು ಮರಳಿ ಪಡೆವ ಯತ್ನ ಮಾಡುತ್ತಾನೆ, ರಾಕಿಭಾಯ್‌ಗೆ ಪ್ರಬಲ ಎದುರಾಳಿಯಾಗಿ ನಿಲ್ಲುತ್ತಾನೆ, ಒಂದು ಹಂತದಲ್ಲಿ ರಾಕಿಭಾಯ್ ಮೇಲೆ ವಿಜಯವನ್ನೂ ಸಾಧಿಸಿರುತ್ತಾನೆ. ಆದರೆ ಅಂತಿಮ ವಿಜಯ ರಾಕಿಭಾಯ್‌ನದ್ದೇ. ಆದರೆ ಅಧೀರನ ಎಂಟ್ರಿ, ಅಧೀರನ ವೇಷ ಭೂಷಣ, ಡೈಲಾಗ್‌ಗಳು ಕನ್ನಡ ಪ್ರೇಕ್ಷಕರಿಗೆ ಬಹುಕಾಲ ನೆನಪಿನಲ್ಲಿ ಉಳಿಯಲಿದೆ.


Click it and Unblock the Notifications











