ದರ್ಶನ್- ಪವಿತ್ರಾ ಜಸ್ಟ್ ಫ್ರೆಂಡ್ಸ್, ಅವರಿಬ್ಬರ ರಿಲೇಷನ್‌ಶಿಪ್ ಬಗ್ಗೆ ನಂಗೆ ಗೊತ್ತಿಲ್ಲ"; ಸಂಜಯ್ ಸಿಂಗ್
ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದು ನಟಿ ಪವಿತ್ರಾ ಗೌಡ ಜೈಲಿನಿಂದ ಬಿಡುಗಡೆ ಆಗಿದೆ. ಜೈಲಿನಿಂದ ಹೊರಬಂದು ವಜ್ರಮುನೇಶ್ವರ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಮತ್ತೊಂದು ಕಡೆ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಮ್ಮೆ ತಮ್ಮ ಹಾಗೂ ಪವಿತ್ರಾ ಪ್ರೀತಿ, ಮದುವೆ ಬಗ್ಗೆ ಮಾತನಾಡಿದ್ದಾರೆ.
"ದರ್ಶನ್ ಹಾಗೂ ಪವಿತ್ರಾ ಗೌಡ ನನ್ನ ಪ್ರಕಾರ ಬಹಳ ಆತ್ಮೀಯ ಸ್ನೇಹಿತರು. ಒಬ್ಬರ ಬಗ್ಗೆ ಮತ್ತೊಬ್ಬರು ಬಹಳ ಕೇರ್ ತೆಗೆದುಕೊಳ್ಳುತ್ತಾರೆ. ಅದು ಬಿಟ್ಟರೆ ನನಗೆ ಬೇರೇನು ಗೊತ್ತಿಲ್ಲ. ಆತ್ಮೀಯ ಸ್ನೇಹಿತರಿಗೆ ತೊಂದರೆ ಕೊಟ್ಟರೆ ಜೊತೆ ನಿಲ್ಲುತ್ತೇವೆ. ಅದೇ ರೀತಿ ಪವಿತ್ರಾ ಗೌಡಗೆ ನೋವಾದಾಗ ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ ಅಷ್ಟೇ. ಆದರೆ ರೇಣುಕಾಸ್ವಾಮಿ ವಿಚಾರದಲ್ಲಿ ಅದು ಒಂದು ಹೆಜ್ಜೆ ಮುಂದೆ ಹೋಗಿದೆ" ಎಂದು ಅವನಿಯಾನ ಯೂಟ್ಯೂಬ್ ಸಂದರ್ಶನದಲ್ಲಿ ಸಂಜಯ್ ಸಿಂಗ್ ಹೇಳಿದ್ದಾರೆ.

ಪವಿತ್ರಾ ಗೌಡ ಜೊತೆಗಿನ ದರ್ಶನ್ ಆತ್ಮೀಯ ಫೋಟೊಗಳು ಹಾಗೂ ವಿಜಯಲಕ್ಷ್ಮಿ ಪೋಸ್ಟ್‌ಗೆ ಪವಿತ್ರಾ ಗೌಡ ಪ್ರತಿಕ್ರಿಯೆ ನೀಡಿದ್ದ ಪೋಸ್ಟ್ ಬಗ್ಗೆಯೂ ಸಂಜಯ್ ಸಿಂಗ್ ಮಾತನಾಡಿದ್ದಾರೆ. "ಅವರಿಬ್ಬರು ಕಲಾವಿದರು. ಇಬ್ಬರು ಕಲಾವಿದರ ಫೋಟೊ ತೋರಿಸಿದರೆ ನಿಮಗೆ ಸಿನಿಮಾ ಎನಿಸುತ್ತಾ? ಆತ್ಮೀಯತೆ ಎನ್ನುತ್ತೀರಾ?" ಎಂದು ಪವಿತ್ರಾ ಗೌಡ ಮಾಜಿ ಪತಿ ಪ್ರಶ್ನಿಸಿದ್ದಾರೆ.
"ದರ್ಶನ್ ಜೊತೆಗಿನ ಲಿವ್ ಇನ್ ರಿಲೇಷನ್‌ಶಿಪ್ ಬಗ್ಗೆ ಪವಿತ್ರಾ ಗೌಡ ಪೋಸ್ಟ್ ಮಾಡಿ ಸ್ಪಷ್ಟನೆ ಕೊಟ್ಟ ವಿಚಾರ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಮಾತನಾಡಲ್ಲ. ಆಕೆ ತನ್ನ ಫೀಲಿಂಗ್ಸ್ ಶೇರ್ ಮಾಡಿಕೊಂಡಿರಬಹುದು. ಖುಷಿ ನನ್ನ ಮಗಳು ಎಂದು ಪವಿತ್ರಾ ಹೇಳಿದ್ದು ನನಗೆ ಖುಷಿ ತಂದಿದೆ. ಪವಿತ್ರಾ ಎಲ್ಲದೇ ಇದ್ದರೂ ಖುಷಿಯಾಗಿರಲಿ, ಆಕೆ ವಾಪಸ್ ಬರುವ ವಿಶ್ವಾಸ ಇಲ್ಲ, ಆದರೆ ನನ್ನ ಜೀವನ ಆಕೆಗಾಗಿಯೇ " ಎಂದು ತಿಳಿಸಿದ್ದಾರೆ.
ಪವಿತ್ರಾ ಗೌಡ ರೆಡ್ ಕಾರ್ಪೆಟ್ ಸ್ಟುಡಿಯೋ 777 ಹೆಸರಿನ ಫ್ಯಾಷನ್ ಬುಟಿಕ್ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಕೈ ಮೇಲೆ '777' ಟ್ಯಾಟೂ ಹಾಕಿಸಿಕೊಂಡಿದ್ದು ವೈರಲ್ ಆಗಿತ್ತು. '777' ಸೀಕ್ರೆಟ್ ಏನು ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ನಾನು ಹುಟ್ಟಿದ ದಿನ, ಪವಿತ್ರಾ ಹುಟ್ಟಿದ ದಿನ ಹಾಗೂ ಮಗಳು ಹುಟ್ಟಿದ ದಿನಕ್ಕೆ ನಂಬರ್ 7ಕ್ಕೂ ಲಿಂಕ್ ಇದೆ ಎಂದಿದ್ದಾರೆ.
"ನನ್ನ ಪ್ರಕಾರ ಪವಿತ್ರಾ ಗೌಡ ಟ್ಯಾಟೂ ಬಗ್ಗೆ ಹೇಳುವುದಾದರೆ, ನಾನು ಹುಟ್ಟಿದ್ದು ಜುಲೈ 16. ಅದರಲ್ಲಿ 7 ಇದೆ. ಪವಿತ್ರಾ ಗೌಡ ಹುಟ್ಟಿರುವುದು ಜನವರಿ 7ರಂದು. ಇನ್ನು ನಮ್ಮ ಮಗಳು ಹುಟ್ಟಿರುವುದು ನವೆಂಬರ್ 7ರಂದು. ಹಾಗಾಗಿ ಇದೆಲ್ಲಾ ಸೇರಿದರೆ '777' ಆಗುತ್ತದೆ. ನನ್ನ ಪ್ರಕಾರ ಇದೇ ಕಾರಣ ಇರಬಹುದು ಎಂದಿದ್ದಾರೆ. ನಮ್ಮ ಮದುವೆ ಸಹ 7ನೇ ತಿಂಗಳಲ್ಲಿ ಆಗಿತ್ತು. ಹಾಗಾಗಿ ನಾವಿಬ್ಬರು ನಂಬರ್ 7 ಅನ್ನು ಅದೃಷ್ಟ ಎಂದು ಭಾವಿಸಿದ್ದೆವು" ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಸದ್ಯ ಸಂಜಯ್ ಸಿಂಗ್ ಮಾತನಾಡಿರುವ ವೀಡಿಯೋ ವೈರಲ್ ಆಗುತ್ತಿದೆ. ನೆಟ್ಟಿಗರೊಬ್ಬರು ದರ್ಶನ್ ಹುಟ್ಟಿದ್ದು ಫೆಬ್ರವರಿ 16ರಂದು. ಆ ಅಂಕೆ ಕೂಡಿದರೆ 7 ಆಗುತ್ತದೆ. ಹಾಗಾಗಿ ಇದು ಯಾಕೆ ಕಾರಣ ಆಗಿರಬಾರದು ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಹೇಳಿಕೆ ವೈರಲ್ ಆಗುತ್ತಿದೆ. ಇದೇ ಸಂದರ್ಶನದಲ್ಲಿ ತಮ್ಮಿಬ್ಬರ ಮದುವೆ, ಡಿವೋರ್ಸ್ ಬಗ್ಗೆಯೂ ಮಾತನಾಡಿದ್ದಾರೆ.


Click it and Unblock the Notifications











