ಆ ಸಂಜಿತ್ ಹೆಗ್ಡೆ ಒಂದು ಕನ್ನಡ ಹಾಡು ಹಾಡೋಕೆ ಗಾಂಚಾಲಿ ಮಾಡ್ತಾನೆ- ಕೆ.ಮಂಜು ಗರಂ..!
ಕನ್ನಡ ಚಿತ್ರರಂಗದಲ್ಲಿ ಕಲೆಗೆ ಬೆಲೆ ಇಲ್ಲ ಎನ್ನುವ ಮಾತು ಇಂದು ನಿನ್ನೆಯದ್ದಲ್ಲ. ಅನೇಕ ದಿನಗಳಿಂದ ಈ ಮಾತನ್ನು ಅನೇಕರು ಹೇಳುತ್ತಾನೇ ಬಂದಿದ್ದಾರೆ. ಗೆದ್ದೆತ್ತಿನ ಬಾಲವನ್ನಷ್ಟೇ ಹಿಡಿಯುವ ನಮ್ಮಲ್ಲಿ ಸ್ಟಾರ್‌ಗಳನ್ನು ಮಾತ್ರ ತಲೆ ಮೇಲೆ ಹೊತ್ತು ಮೆರೆಸುತ್ತಾರೆ. ವಜ್ರಖಚಿತ ಸಿಂಹಾಸನದ ಮೇಲೆ ಅವರನ್ನು ಕೂರಿಸಿ ಅವರು ಕೇಳಿದರೂ, ಕೇಳದೇ ಇದ್ದರೂ ನಿರ್ಮಾಪಕರು ತಮ್ಮ ಸಕಲ ಅಷ್ಟೈಶ್ವರ್ಯವನ್ನು ಧಾರೆ ಎರೆಯುತ್ತಾರೆ.
ಆದರೆ ಅದೇ ಚಿತ್ರಕ್ಕೆ ಹಗಲಿರುಳು ಬೆವರು ಸುರಿಸುವ ತಂತ್ರಜ್ಞರ ಕೈಗೆ ನಾಲ್ಕಾಣೆಯನ್ನು ನೀಡಿ ಕೈ ತೊಳೆದುಕೊಳ್ಳುತ್ತಾರೆ. ಆ ತಂತ್ರಜ್ಞ ಎಷ್ಟೇ ಹೆಸರು ಮಾಡಿರಲಿ ನಿರ್ಮಾಪಕ ನೀಡುವ ಹಣವನ್ನಷ್ಟೇ ಆತ ಮರು ಮಾತನಾಡದೇ ತೆಗೆದುಕೊಳ್ಳಬೇಕು. ಅಪ್ಪಿ-ತಪ್ಪಿ ಒಂದು ಹತ್ತಿಪ್ಪತ್ತು ಸಾವಿರ ಹೆಚ್ಚಿನ ಹಣ ಕೇಳಿದರೂ ಸಾಕು ಅನೇಕ ನಿರ್ಮಾಪಕ ರಕ್ತ ಕೊತ ಕೊತ ಕುದಿಯುತ್ತೆ. ಉದಾಹರಣೆಗೆ ಕೆ.ಮಂಜು.

ಹೌದು, ಕೆ.ಮಂಜು.. ಕನ್ನಡದ ಗಂಡುಗಲಿ ನಿರ್ಮಾಪಕ ಅಂತಲೇ ಹೆಸರಾದವರು . ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸಿನಿಮಾ ಸೇರಿದಂತೆ ಸುದೀಪ್, ಯಶ್ ತನಕ ಕನ್ನಡದ ಬಹುತೇಕ ಸ್ಟಾರ್ ಹೀರೋಗಳ ಚಿತ್ರಗಳನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಇವರದ್ದು. ಇಂಥಾ ಕೆ.ಮಂಜು ಮೊನ್ನೆ ರುದ್ರ ಗರುಡ ಪುರಾಣ ಚಿತ್ರದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಚಿತ್ರದ ನಾಯಕ ರಿಶಿ ಅವರನ್ನು ಬಾಲಿವುಡ್‌ನ ಅಂದಕಾಲತ್ತಿಲ್ ಸ್ಟಾರ್ ಗೋವಿಂದ ಅವರಿಗೆ ಹೋಲಿಸಿದರು. ಚಿತ್ರತಂಡಕ್ಕೆ ಶುಭಾಶಯವನ್ನು ಕೋರಿದರು.
ಇದೇ ಸಮಯದಲ್ಲಿ ಕನ್ನಡದ ಸ್ಟಾರ್ ಸಿಂಗರ್ ಸಂಚಿತ್ ಹೆಗ್ಡೆ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಈ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಮಂಜು ಎಲ್ಲ ಇಲ್ಲಿಂದ ಬೆಳೆದವರು ತಗೊಂಡು ಹೋಗಿ ಹಿಂದಿಗೆ ಮಾರಿಕೊಂಡು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ಕನ್ನಡದ ಹಾಡು ಹಾಡಲು ಆತ ಎರಡೂವರೆ ಲಕ್ಷ ಕೇಳ್ತಾನೇ ಎಂದಿರುವ ಕೆ.ಮಂಜು ಇದೇ ಬಾಂಬೆಯಲ್ಲಿ ಸೋನು ನಿಗಂಗೆ ಹಿಂದಿ ಹಾಡು ಹಾಡೋಕೆ ನಲವತ್ತು ಐವತ್ತು ಸಾವಿರ ರೂಪಾಯಿಯನ್ನು ಕೊಡಲ್ಲ ಯಾಕೆಂದರೆ ಜಾಸ್ತಿ ಮಾತನಾಡಿದರೆ ಅವರೆಲ್ಲ ಓಡಿಸಿ ಬಿಡ್ತಾರೆ ಎಂದು ಹೇಳಿದ್ದಾರೆ.
ಆದರೆ ನಮ್ಮಲ್ಲಿ ಹಾಗಲ್ಲ ಕಷ್ಟಪಟ್ಟು ಇಲ್ಲಿ ಎಲ್ಲರನ್ನೂ ಬೆಳಸ್ತಾರೆ ಆದರೆ ಆ ನಂತರ ಅದೇ ಕನ್ನಡ ಚಿತ್ರಕ್ಕೆ ಎರಡೂವರೆ ಲಕ್ಷ ಕೇಳ್ತಾರೆ ಹಾಡು ಹಾಡಲ್ಲ ಅಂತಾರೆ ಎಂದು ಹೇಳಿರುವ ಕೆ.ಮಂಜು ನಮಗೆ ಮಾಡಬೇಡಿ ಚಿತ್ರರಂಗಕ್ಕೆ ಒಳ್ಳೆಯದು ಮಾಡಿ ನಿಮ್ಮನ್ನು ಬೆಳೆಸಿ ಉಳಿಸಿರುತ್ತಾರೆ, ಒಬ್ಬ ನಿರ್ಮಾಪಕ ಉಳ್ಕೊಂಡರೆ ಉದ್ಯಮ ಉಳಿಯುತ್ತೆ ಎಂದು ಹೇಳಿದ್ದಾರೆ. ಇಡೀ ಭಾರತೀಯ ಚಿತ್ರರಂಗ ಇವತ್ತು ಕನ್ನಡ ಚಿತ್ರರಂಗದತ್ತ ತಿರುಗಿ ನೋಡಬೇಕು ಈ ಕಾರಣಕ್ಕೆ ನಾವೆಲ್ಲ ಖುಷಿ ಪಡಬೇಕು ಚಿತ್ರರಂಗ ನಮ್ಮದು ಎಂದು ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.
ಕೆ.ಮಂಜು ಮಾತನಾಡಿದ ಈ ಮಾತು ಸಹಜವಾಗಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಅನೇಕರ ಆಕ್ರೋಶಕ್ಕೆ ಕೂಡ ಕೆ.ಮಂಜು ಅವರ ಮಾತು ಗುರಿಯಾಗಿದೆ. ಸಂಚಿತ್ ಹೆಗ್ದೆ ಒಂದಾದ ಮೇಲೊಂದು ಬ್ಲಾಕ್‌ಬಸ್ಟರ್ ಹಾಡುಗಳನ್ನು ಹಾಡಿದ್ದಾರೆ. ಅವರ ಸಂಭಾವನೆ ಅವರು ಕೇಳಿದ್ದಾರೆ ಅದರಲ್ಲಿ ತಪ್ಪೇನು ? ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ. ದಿಲ್ಜಿತ್ ದೊಸಾಂಜ್, ಅನಿರುದ್ಧ್ ರವಿಚಂದ್ರನ್ ಅವರಂತಹ ಗಾಯಕರು ನಮ್ಮಲ್ಲಿ ಇಲ್ಲದಿರುವುದಕ್ಕೆ ಇದೇ ಕಾರಣವೆಂದಿದ್ದಾರೆ.
ಗಾಯಕರಿಗೆ ರಾಯಲ್ಟಿ ಹಣವನ್ನು ಕೊಡಬೇಡಿ, ಸಂಭಾವನೆಯನ್ನು ಕೂಡ ಕೊಡಬೇಡಿ, ಫ್ರೀಯಾಗಿ ಹಾಡು ಹಾಡೋಕೆ ಹೇಳಿ ಎನ್ನುತ್ತಿದ್ದಾರೆ. ಇದರಲ್ಲಿ ತಪ್ಪೇನು ಪರಭಾಷೆಯವರನ್ನು ಮೆರೆಸುವುದಕ್ಕಿಂತ ನಮ್ಮವರೇ ಮೇಲಲ್ಲವೇ ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಸ್ಟಾರ್ಸ್‌ನ ಬೆಳಸಿದ್ದು ಕೂಡ ಕನ್ನಡಿಗರೇ ಅವರಿಗೆ ಕೋಟಿ ಕೋಟಿ ಹಣ ಕೊಡಲ್ವಾ, ಕಲೆಬೆ ಬೆಲೆ ಕೊಡದ ಇವರಿಂದ ನಮ್ಮಲ್ಲಿನ ಪ್ರತಿಭಾವಂತರು ಬೇರೆ ಭಾಷೆಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಸೋನು ನಿಗಂಗೆ ಹತ್ತು ಲಕ್ಷ ನೀಡಿ ಇಲ್ಲಿ ಕರೆತರುವುದಕ್ಕಿಂತ ಸಂಚಿತ್ ಹೆಗ್ಡೆ ಎರಡೂವರೆ ಲಕ್ಷ ನೀಡೋಕೆ ಆಗಲ್ವಾ ಸ್ವಾಮಿ, ಹಾಡೋದು ಅಂದರೆ ಸುಮ್ನೆನಾ ಒಂದು ಹಾಡು ಹೇಳಿ ಗೊತ್ತಾಗುತ್ತೆ ಎಂದು ಹೇಳಿದ್ದಾರೆ.


Click it and Unblock the Notifications











